‘ಸಂಪದ’ ನಗೆ ಬುಗ್ಗೆ - ಭಾಗ ೪

‘ಸಂಪದ’ ನಗೆ ಬುಗ್ಗೆ - ಭಾಗ ೪

ಯಾರಿಗೆ ಎಷ್ಟೆಷ್ಟು?

ಹೆರಿಗೆಗಾಗಿ ಗಾಂಪ ತನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಿದ್ದ. ತವರು ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆದುದರಿಂದ ಗಾಂಪ ಪ್ರತೀ ತಿಂಗಳು ಹೆಂಡತಿಗೆ ಹಣವನ್ನು ಕಳುಹಿಸುತ್ತಿದ್ದ. ಈ ಹಣವನ್ನು ಆಕೆ ಹಾಲಿಗೆ, ತರಕಾರಿಗೆ, ದಿನಸಿ ಅಂಗಡಿಯವರಿಗೆ ಕೊಟ್ಟು ಹೇಗೋ ನಿಭಾಯಿಸುತ್ತಿದ್ದಳು.

ಒಂದು ತಿಂಗಳು ಗಾಂಪನಿಗೆ ಹಣ ಕಳುಹಿಸಲು ಆಗಲಿಲ್ಲ. ಬದಲಿಗೆ ಅವನು ಒಂದು ಪತ್ರವನ್ನು ಬರೆದ. ಅದರಲ್ಲಿ ಹೆಂಡತಿಗೆ “ಪ್ರೀತಿಯ…., ಅನಿವಾರ್ಯ ಕಾರಣಗಳಿಂದ ಈ ತಿಂಗಳ ಹಣವನ್ನು ಕಳುಹಿಸಲಾಗುತ್ತಿಲ್ಲ. ಆದರೆ ಇದರೊಂದಿಗೆ ಪ್ರೀತಿಯಿಂದ ಮುನ್ನೂರು ಮುತ್ತುಗಳನ್ನು ಕಳುಹಿಸುತ್ತಿದ್ದೇನೆ. ತೆಗೆದುಕೊಳ್ಳುವುದು" ಎಂದು ಬರೆದ.

ಮರು ಟಪಾಲಿಗೆ ಗಾಂಪನ ಪತ್ನಿಯ ಪತ್ರ ಬಂತು. ಅದರಲ್ಲಿ ಆಕೆ ಬರೆದಿದ್ದಳು “ನೀವು ಕಳುಹಿಸಿದ ಮುನ್ನೂರು ಮುತ್ತುಗಳು ತಲುಪಿವೆ. ಇದರಲ್ಲಿ ಹಾಲಿನವರಿಗೆ ಎಷ್ಟು, ದಿನಸಿ ಅಂಗಡಿಯವರಿಗೆ ಎಷ್ಟು, ತರಕಾರಿಯವನಿಗೆ ಎಷ್ಟು ಕೊಡಲಿ ಎಂಬುದನ್ನು ಕೂಡಲೇ ತಿಳಿಸುವುದು."

ಪಾಪ, ಗಾಬರಿ ಬಿದ್ದ ಗಾಂಪ ಮರುಕ್ಷಣವೇ ಹಣ ತೆಗೆದುಕೊಂಡು ಹೆಂಡತಿಯ ಮನೆಗೆ ಹೊರಟ.

***

ಕೆಳಗೆ ಬೀಳುವುದಿಲ್ಲ

ಗಾಂಪ ಒಮ್ಮೆ ದೊಡ್ಡ ಪಟ್ಟಣಕ್ಕೆ ಬಂದ. ಅಲ್ಲಿ ಬಹು ಮಹಡಿ ಕಟ್ಟಡದ ಹೋಟೇಲಿನಲ್ಲಿ ಉಳಿದುಕೊಂಡ. ಇಂತಹ ಒಂದು ಸಂದರ್ಭದಲ್ಲಿ ನಡೆದ ಘಟನೆ ಇದು.

ಐದನೇ ಮಹಡಿ ಮೇಲೆ ನಿಂತು ಗಾಂಪ ಏನನ್ನೋ ನೋಡುತ್ತ ತನ್ನ ಕೈಗಡಿಯಾರಕ್ಕೆ ಕೀ ಕೊಡುತ್ತಿದ್ದ. ಅಕಸ್ಮಾತ್ತಾಗಿ ಗಡಿಯಾರ ಕೈ ತಪ್ಪಿ ಕೆಳಗೆ ಬಿತ್ತು. ಗಾಂಪ ಧಡಧಡನೆ ಹೋಟೇಲಿನಿಂದ ಕೆಳಗಿಳಿದು ನೆಲ ಅಂತಸ್ತು ತಲುಪಿ ತಾನು ನಿಂತಿದ್ದ ನೇರಕ್ಕೆ ಮೇಲೆ ಕೈ ಚಾಚಿ ನಿಂತ.

ಇದನ್ನು ಕಂಡ ಪರಿಚಿತರೊಬ್ಬರು “ಇದೇನು ಗಾಂಪ, ಮೇಲಕ್ಕೆ ಕೈಚಾಚಿ ನಿಂತಿದ್ದೀಯಲ್ಲ. ಏನು ವಿಶೇಷ? ಎಂದು ಕೇಳಿದರು. ಗಾಂಪ “ನಾನು ಮೇಲೆ ಐದನೇ ಮಹಡಿಯಲ್ಲಿ ನಿಂತು ವಾಚ್ ಗೆ ಕೀ ಕೊಡುತ್ತಿರುವಾಗ ಕೈ ತಪ್ಪಿ ವಾಚು ಕೆಳಗೆ ಬಿತ್ತು. ಅದು ಇನ್ನೇನು ಇಲ್ಲಿಗೆ ಬರುತ್ತದೆ. ಅದನ್ನು ಹಿಡಿಯಲು ನಿಂತಿರುವೆ.” ಎಂದ.

ಪರಿಚಿತರು “ ಅಯ್ಯೋ, ನೀನು ಕೆಳಗೆ ಬರುವಷ್ಟರಲ್ಲಿ ಅದೂ ಕೂಡಾ ಬಿದ್ದು ಬಿಡುತ್ತದೆಯಲ್ಲಾ." ಎಂದು ಕೇಳಿದರು.

ಗಾಂಪ “ ಅದು ಹೇಗೆ ಸಾಧ್ಯ? ನನ್ನ ವಾಚು ಐದು ನಿಮಿಷ ನಿಧಾನವಾಗಿ ಚಲಿಸುತ್ತದೆ. ನಾನು ಎರಡೇ ನಿಮಿಷದಲ್ಲಿ ಕೆಳಗೆ ಬಂದಿದ್ದೇನೆ.” ಎಂದ !

***

ಇನ್ನೂ ದೂರವಿದೆ

ಲಾಟರಿಯಲ್ಲಿ ಗಾಂಪನಿಗೆ ಹತ್ತು ಲಕ್ಷ ರೂಪಾಯಿ ಬಹುಮಾನ ಬಂತು. ಹಣವನ್ನು ಮಜಾ ಉಡಾಯಿಸಬೇಕೆಂದು ಬೆಂಗಳೂರಿಗೆ ಹೊರಟ. ಒಂದು ಭವ್ಯವಾದ ಲಾಡ್ಜ್ ನಲ್ಲಿ ತಂಗಿದ. ಸಂಜೆಯಾಗುತ್ತಲೇ ಗುಂಡು ಹಾಕುವ ನಿರ್ಧಾರದಿಂದ ರಿಕ್ಷಾವೊಂದನ್ನು ಕರೆದ. ಒಳ್ಳೆಯ ಬಾರ್ ಗೆ ಕರೆದೊಯ್ಯಲು ಡ್ರೈವರ್ ಗೆ ಹೇಳಿದ. ಇವನನ್ನು ನೋಡಿದ ಡ್ರೈವರ್ ಗೆ ಇವನೊಬ್ಬ ಹಳ್ಳಿ ಗುಗ್ಗು ಎಂದು ತಿಳಿಯಿತು. ಅವನು ಸುಮ್ ಸುಮ್ನೇ ಬೆಂಗಳೂರಿನ ಗಲ್ಲಿಗಳನ್ನೆಲ್ಲ ಸುತ್ತಾಡಿಸಿ ಕೊನೆಗೆ ಒಂದು ಬಾರಿನ ಮುಂದೆ ತಂದು ನಿಲ್ಲಿಸಿದ. ಇನ್ನೂರ ಐವತ್ತು ರೂಪಾಯಿ ಬಾಡಿಗೆಯನ್ನೂ ತೆಗೆದುಕೊಂಡ.

ಸರಿಯಾಗಿ ಗುಂಡು ಏರಿಸಿದ ಗಾಂಪ ತೂರಾಡುತ್ತಾ ಮತ್ತೊಂದು ರಿಕ್ಷಾ ಹಿಡಿದು ಲಾಡ್ಜ್ ನತ್ತ ಹೋಗಲು ಹೇಳಿದ. ಸನಿಹದಲ್ಲೇ ಇರುವ ಲಾಡ್ಜಿಂಗ್ ಗೆ ಕೇವಲ ಐದು ನಿಮಿಷದಲ್ಲಿ ತಂದು ಬಿಟ್ಟ ರಿಕ್ಷಾದವನು ಮೂವತ್ತು ರೂಪಾಯಿ ಬಾಡಿಗೆ ಕೇಳಿದ. 

ಗಾಂಪ “ಏ...ಏ...ಏನಯ್ಯಾ ನಾನು ಕುಡಿದಿದ್ದೇನೆ ಅಂತ ತಿಳಿದು ನನಗೆ ಮೋಸ ಮಾಡ್ತೀಯ. ನಾನು ಉಳಿದುಕೊಂಡ ಲಾಡ್ಜ್ ಎಷ್ಟು ದೂರ ಇದೆ ಅಂತ ನನಗೆ ಗೊತ್ತು. ನಡಿ ಮುಂದೆ.” ಎಂದು ದಬಾಯಿಸಿದ.

ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ರಿಕ್ಷಾದವನು ರಿಕ್ಷಾ ಸ್ಟಾರ್ಟ್ ಮಾಡಿ ಸುಮ್ಮನೇ ಬುರ್ರೋ ಬುರ್ರೋ ಅಂತ ಆಕ್ಸಿಲೇಟರ್ ತಿರುವುತ್ತಾ ಅಲ್ಲಿಯೇ ನಿಂತ. ಐದು ನಿಮಿಷ ಆದ ನಂತರ ಹೇಳಿದ. ‘ಸಾರಿ ಸರ್ ಈಗ ನೋಡಿ ನಿಮ್ಮ ಹೋಟೆಲ್ ಬಂತು. ಇಳಿಯಿರಿ"

ಗಾಂಪ “ನೋಡು ಮತ್ತೆ ಈಗ ಸರಿಯಾಗಿದೆ.” ಎಂದು ಹೇಳಿದವನೇ ಇನ್ನೂರ ಐವತ್ತು ರೂಪಾಯಿ ಬಾಡಿಗೆ ಕೊಟ್ಟು ತೂರಾಡುತ್ತಾ ಲಾಡ್ಜಿಂಗ್ ನತ್ತ ಹೊರಟ.

***

ಅಲ್ಲಿಯವರೆಗೆ…

ಯಾವಾಗಲೂ ಏನಾದರೊಂದು ತರಲೆ ಕೆಲಸವನ್ನು ಮಾಡುವ ಹೇಮಂತ ಒಂದು ದಿನ ತನ್ನ ತಂದೆ ಗಾಂಪಾನ ಪೆನ್ನನ್ನೇ ನುಂಗಿಬಿಟ್ಟ, ಈ ವಿಷಯವನ್ನು ಗಾಂಪನಿಗೆ ಯಾರೋ ಹೇಳಿದರು. ಗಾಂಪ ಕೂಡಲೇ ವೈದ್ಯರಿಗೆ ಫೋನ್ ಮಾಡಿದ “ಡಾಕ್ಟರೇ, ನನ್ನ ಮಗ ಹೇಮಂತ ಪೆನ್ನು ನುಂಗಿ ಬಿಟ್ಟಿದ್ದಾನೆ. ನಾನು ಈಗ ಏನು ಮಾಡಲಿ, ಬೇಗ ಹೇಳಿ?”

ಡಾಕ್ಟರ್ ಕೂಲಾಗಿ ಹೇಳಿದರು “ ಸದ್ಯಕ್ಕೆ ಪೆನ್ಸಿಲ್ ನಲ್ಲಿ ಬರೆಯುತ್ತಿರಿ. ಅಷ್ಟರಲ್ಲಿ ನಾನು ಅಲ್ಲಿಗೆ ಬಂದು ಬಿಡುತ್ತೇನೆ"

***

(ಕೃಪೆ: ಬಾಯಿ ತುಂಬಾ ನಕ್ಕು ಬಿಡಿ)

ಚಿತ್ರ ಕೃಪೆ: ಅಂತರ್ಜಾಲ ತಾಣ