‘ಸಂಪದ’ ನಗೆ ಬುಗ್ಗೆ - ಭಾಗ ೫೪
ಅಚ್ಚರಿಯ ಉಡುಗೊರೆ !
ಗಾಂಪ ಮತ್ತು ಶ್ರೀಮತಿಯ ವಿವಾಹ ವಾರ್ಷಿಕೋತ್ಸವ ಅಂದು. ಇಬ್ಬರೂ ಬೆಳಿಗ್ಗೆ ಎದ್ದ ಕೂಡಲೇ ಏನಾದರೂ ವಿಶೇಷವಾಗಿಯೇ ಈ ದಿನವನ್ನು ಆಚರಿಸಬೇಕು ಎಂದುಕೊಂಡು ನಿರ್ಧಾರ ಮಾಡಿದರು. ಆದರೆ, ಬೆಳಗಾಗಿ ಮನೆಯ ಹೊರಬಂದ ಅವರಿಗೆ ಅಚ್ಚರಿ ಕಾದಿತ್ತು. ಬೆಳ್ಳಂಬೆಳಗ್ಗೆ ಮನೆಯ ಬಾಗಿಲ ಮುಂದೆ ಒಂದು ಹೂವಿನ ಬುಕೆ ಹಾಗೂ ಒಂದು ಕವರ್ ಇತ್ತು. ಕವರ್ ತೆರೆದು ನೋಡಿದರೆ ಅದರಲ್ಲಿ ಬರೆದಿತ್ತು ‘ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಈ ಕವರ್ ನಲ್ಲಿ ಎರಡು ವಂಡರ್ ಲಾ ಟಿಕೆಟ್ ಗಳು, ಎರಡು ಉಚಿತ ಮೆಕ್ ಡೊನಾಲ್ಡ್ ಮೀಲ್ ಕೂಪನ್ ಗಳು, ಎರಡು ಪಿವಿಆರ್ ಸಿನೆಮಾ ಟಿಕೇಟ್ ಗಳು ಇವೆ. ಇಡೀ ದಿನ ಎಂಜಾಯ್ ಮಾಡಿ' ಅದನ್ನು ಓದಿದ ಮೇಲೆ ಇದನ್ಯಾರು ಕಳಿಸಿದರು ಎಂಬುದೇ ಇಬ್ಬರಿಗೂ ಗೊಂದಲ ಆಯ್ತು. ಯಾರೋ ಸ್ನೇಹಿತರೇ ಇರಬೇಕು ಎಂದುಕೊಂಡರೂ ಯಾರು ಅಂತ ಮಾತ್ರ ಗೊತ್ತಾಗಲಿಲ್ಲ. ಯೋಚನೆ ಮಾಡಿದ್ದು ಸಾಕು. ಸುಮ್ಮನೆ ಮಾತಾಡಿ ಸಮಯ ಹಾಳು ಮಾಡುವುದು ಬೇಡ ಎಂದುಕೊಂಡು ಇಬ್ಬರೂ ಆ ಕವರ್ ತೆಗೆದುಕೊಂಡು ಮನೆಯಿಂದ ಹೊರಟರು. ಬೆಳಿಗ್ಗೆ ವಂಡರ್ ಲಾ, ಸಂಜೆ ಮೆಕ್ ಡೊನಾಲ್ಡ್, ರಾತ್ರಿ ಸಿನೆಮಾ ನೋಡಿ ಖುಷಿಯಾಗಿ ಅಂತೂ ನಮ್ಮ ಮದುವೆ ದಿನ ಸೂಪರ್ ಆಗಿತ್ತು ಎಂದುಕೊಂಡು ಮನೆಗೆ ಬಂದರು. ಮನೆಯ ಬಾಗಿಲು ತೆರೆದು ನೋಡಿದರೆ ಮನೆ ಪೂರ್ತಿ ಖಾಲಿ. ಯಾರೋ ಕಳ್ಳರು ಮನೆ ಪೂರ್ತಿ ದೋಚಿಕೊಂಡು ಹೋಗಿದ್ದರು. ಕಂಗಾಲಾದ ಗಾಂಪ ದಂಪತಿಗಳ ಕಣ್ಣಿಗೆ ಅಲ್ಲೊಂದು ಕಾಗದ ಕಣ್ಣಿಗೆ ಬಿತ್ತು. ಅದನ್ನು ತೆರೆದು ನೋಡಿದರೆ ಅದರಲ್ಲಿ ಬರೆದಿತ್ತು “ಇಡೀ ದಿನ ಹೊರಗೆ ಕಳೆದು ನಮಗೆ ನೆಮ್ಮದಿಯಾಗಿ ನಮ್ಮ ಕೆಲಸ ಮಾಡಲು ಅನುವು ಮಾಡಿಕೊಟ್ಟದ್ದಕ್ಕೆ ಥ್ಯಾಂಕ್ಸ್" ಆಗ ಬೆಳಿಗ್ಗೆ ಕವರ್ ನಲ್ಲಿ ಟಿಕೇಟ್, ಕೂಪನ್ ಗಳನ್ನು ಕಳುಹಿಸಿದವರು ಯಾರು ಎಂದು ಗಾಂಪ ದಂಪತಿಗಳಿಗೆ ಗೊತ್ತಾಯ್ತು.
***
ಅವರವರ ಪಾಪ ಕರ್ಮ
ಶ್ರೀಮತಿ: ರೀ, ನಿಮಗೆ ಒಂದ್ ವಿಷಯ ಗೊತ್ತಾಯ್ತಾ?
ಗಾಂಪ: ಏನು?
ಶ್ರೀಮತಿ: ನಮ್ಮಿಬ್ರು ಮದ್ವೆ ಮಾಡ್ಸಿದ್ರಲ್ಲ ಆ ಬ್ರೋಕರ್ ಶಿವಯ್ಯ ಇವತ್ತು ಸತ್ತು ಹೋದ್ರಂತೆ ಕಣ್ರೀ.
ಗಾಂಪ: ಮಾಡಿದ್ದುಣ್ಣೋ ಮಾರಾಯ ಅಂತ ಅವರವರ ಪಾಪ ಕರ್ಮ ಅವ್ರು ಯಾವತ್ತಾದರೂ ಅನುಭವಿಸಬೇಕು ಬಿಡೆ.
***
ಆರೇ ಜನ !
ಗಾಂಪ: ಅಜ್ಜಿ ನೀನು ನಿದ್ದೆ ಮಾಡಿಯಲ್ಲಾ. ನಾನು ಟಿವಿ ನೋಡ್ಲಾ?
ಅಜ್ಜಿ: ನನ್ ಜೊತೆ ಮಾತ್ನಾಡು ಪುಟ್ಟ!
ಗಾಂಪ: ಅಜ್ಜಿ ನಮ್ ಮನೇಲಿ ಯಾವಾಗ್ಲೂ ಆರೇ ಜನ ಇರೋದು. ನಾನು, ನೀನು, ಅಮ್ಮ, ಅಪ್ಪ, ತಂಗಿ ಮತ್ತೆ ಈ ಬೆಕ್ಕು. ಯಾಕಜ್ಜಿ?
ಅಜ್ಜಿ: ಇಲ್ಲ ಪುಟ್ಟ, ನಾಳೆ ಮನೆಗೆ ನಾಯಿ ಬರ್ತಿದೆ. ಆಗ ಏಳು ಜನ ಆಗ್ತೀವಿ
ಗಾಂಪ: ಆದ್ರೆ ಅಜ್ಜಿ ಅ ನಾಯಿ ಬಂದ್ರೆ ಬೆಕ್ಕನ್ನು ತಿಂದುಬಿಡುತ್ತಲ್ಲ. ಆಗ ಮತ್ತೆ ಆರೇ ಆಗುತ್ತೆ
ಅಜ್ಜಿ: ಇಲ್ಲ ಮಗು ನೀನು ದೊಡ್ಡವನಾದ ಮೇಲೆ ಮದುವೆ ಆಗ್ತೀಯಲ್ಲ ಅಗ ಏಳು ಆಗುತ್ತೆ.
ಗಂಪ: ಅಯ್ಯೋ ಅಜ್ಜಿ, ತಂಗಿ ಮದ್ವೆಯಾಗಿ ಮನೆಯಿಂದ ಹೋಗಿ ಬಿಡ್ತಾಳಲ್ಲ. ಮತ್ತೆ ಆರೇ ಆಗೋದು.
ಅಜ್ಜಿ: ನಿಂಗೆ ಮಗು ಅಗುತ್ತಲ್ಲ, ಆಗ ಮತ್ತೆ ಏಳು ಆಗುತ್ತೆ.
ಗಾಂಪ: ಅಷ್ಟೊತ್ತಿಗೆ ನೀನೇ ಇರಲ್ವಲ್ಲ. ಮತ್ತೆ ಆರೇ ಆಗುತ್ತೆ.
ಅಜ್ಜಿಗೆ ಪಿತ್ತ ನೆತ್ತಿಗೇರಿ, "ಸಾಕು, ಹೋಗು ಟಿವಿ ನೋಡ್ ಹೋಗು" ಅಂತ ರೇಗುತ್ತಾರೆ.
***
ನೀರಿಗಿಳಿದ ಎಮ್ಮೆ
ಗಾಂಪ: ನೀನು ನನ್ನ ಸಿನಿಮಾದಲ್ಲಿ ಕೆಲಸ ಮಾಡ್ತೀಯಾ?
ಶ್ರೀಮತಿ: ಹೂಂ, ಆದ್ರೆ ನಾನೇನು ಮಾಡ್ಲಿ?
ಗಾಂಪ: ನೀರಿನೊಳಗೆ ನಿಧಾನವಾಗಿ ನಡೆದು ಹೋಗಬೇಕು ಅಷ್ಟೇ.
ಶ್ರೀಮತಿ. ಸರಿ. ಆದ್ರೆ ನಿಮ್ ಸಿನಿಮಾಗೆ ಟೈಟಲ್ ಏನು?
ಗಾಂಪ: 'ನೀರಿಗಿಳಿದ ಎಮ್ಮೆ'
ಗಂಡ ಮತ್ತು ಹೆಂಡತಿ ಶುರುವಾದ ಫೈಟ್ ರಾತ್ರಿ ಮಲಗೋವರೆಗೂ ನಡೆದೇ ಇತ್ತು.
***
ಗಾಂಪನ ಉಪವಾಸ
ಗಾಂಪ ಉಪವಾಸ ಮಾಡ್ತಿದ್ದ. ಹೊಟ್ಟೆ ಹಸೀತಾ ಇತ್ತು. ಸೂರ್ಯಾಸ್ತ ಆಗೋವರೆಗೂ ತಿನ್ನೋ ಹಾಗಿಲ್ಲ. ಹಸಿವು ತಡಕೊಳ್ಳೋಕೆ ಆಗ್ತಿಲ್ಲ ಗಾಂಪನಿಗೆ.
ಗಾಂಪ: ಸೂರ್ಯಾಸ್ತ ಆಯ್ತಾ ನೋಡು ಪುಟ್ಟ
ಪುಟ್ಟ: ಇನ್ನೂ ಇಲ್ಲ
ಸ್ವಲ್ಪ ಹೊತ್ತು ಬಿಟ್ಟು ಗಾಂಪ ಮತ್ತೆ ಅದೇ ಪ್ರಶ್ನೆ ಕೇಳ್ತಾನೆ
ಗಾಂಪ: ಇನ್ನೂ ಯಾಕೆ ಸೂರ್ಯ ಹೋಗಿಲ್ಲ ನೋಡು
ಪುಟ್ಟ: ಇನ್ನೂ ಹೋಗಿಲ್ಲ.
ಗಾಂಪ: ಹೂಂ, ನೋಡ್ತಿದ್ರೆ ಇದು ನನ್ನನ್ನೂ ಜೊತೆಗೆ ಕರ್ಕೊಂಡು ಮುಳುಗೋ ಥರ ಇದೆ.
***
ಮಳೆ ಕಿತಾಪತಿ
ಗಾಂಪ ತನ್ನ ಬಟ್ಟೆಗಳನ್ನ ಒಗೆದು ಬಹಳ ಕಾಲವಾಗಿ ಹೋಗಿತ್ತು. ಬಟ್ಟೆ ಒಗೆಯಲು ಕೂತಾಗೆಲ್ಲಾ ಮಳೆ ಬರ್ತಾ ಇತ್ತು. ಬಟ್ಟೆ ಒಗೆಯೋದು ಸರಿ, ಅದನ್ನು ಒಣಗಿಸಬೇಕಲ್ಲ, ಅದಕ್ಕೆ ಬಿಸಿಲು ಬರಬೇಕಲ್ಲ..!
ಒಂದು ದಿನ ಬಿಸಿಲು ಬರುತ್ತೆ. ಗಾಂಪ ಇರೋ ಬರೋ ಕೆಲಸ ಎಲ್ಲಾ ಬಿಟ್ಟು ಬಟ್ಟೆ ಒಗೆಯೊ ಪೌಡರ್ ಕೊಳ್ಳಲು ಅಂಗಡಿಗೆ ಓಡ್ತಾನೆ. ಅಷ್ಟರಲ್ಲಿ ಮತ್ತೆ ಮಳೆ ಶುರುವಾಗ್ತದೆ.
ಗಾಂಪ ಕಂಗಾಲು. ಆಕಾಶದ ಮೇಲೆ ಮುಖ ಮಾಡುತ್ತಾ ಗಾಂಪ, "ಅಯ್ಯೋ ರಾಮ, ನಾನು ಬಿಸ್ಕತ್ ತಗೊಳ್ಳೋಕೆ ಬಂದಿದ್ದು ಅಷ್ಟೇ" ಅಂತಾನೆ.
***
ಮುಖ ನೋಡ್ಲಾ...!
ಮದುವೆ ಮನೆಯ ಹಸೆಮಣೆ ಏರಿದ್ದಾರೆ ವಧು ವರರು. ತನ್ನ ಕೈಹಿಡಿಯಲಿರೋ ಹುಡುಗಿಯ ಮುಖ ನೋಡುವ ಆಸೆಯಾಗುತ್ತೆ ವರನಿಗೆ.
ವರ: ಈಗ್ಲಾದ್ರೂ ನಿನ್ನ ಸೆರಗು ತೆಗೆದು ಮುಖ ನೋಡ್ಲಾ?
ವಧು: ನೋಡಿ... ಆದ್ರೆ ಆಮೇಲೆ ಅದನ್ನು ಡಿಲೀಟ್ ಮಾಡ್ಬೇಕು.
***
ಪುಟ್ಟನ ಕಣ್ಣೀರು
ಪುಟ್ಟ ಎಕ್ಸಾಂ ಹಾಲ್ನಲ್ಲಿ ಪಾಪ ಸುಮ್ಮನೆ ಕೂತಿರ್ತಾನೆ.
ಟೀಚರ್: ಯಾಕೆ ಏನೂ ಬರೀತಿಲ್ಲ?
ಪುಟ್ಟ: ಏನೂ ಗೊತ್ತಾಗ್ತಿಲ್ಲ ಮಿಸ್.
ಟೀಚರ್: ಏನಾದ್ರೂ ಬಂದಿದ್ದು ಬರೀ.
ಪುಟ್ಟ: ಹೌದು ಬರ್ತಿದೆ..
ಟೀಚರ್: ಏನು ಬರ್ತಿದೆ?
ಪುಟ್ಟ: ಅಳು ಬರ್ತಿದೆ ಮಿಸ್.
(ಸಂಗ್ರಹ) ಚಿತ್ರ ಕೃಪೆ: ಅಂತರ್ಜಾಲ ತಾಣ