‘ಸಂಪದ’ ನಗೆ ಬುಗ್ಗೆ - ಭಾಗ ೭೧

‘ಸಂಪದ’ ನಗೆ ಬುಗ್ಗೆ - ಭಾಗ ೭೧

ಯುದ್ಧ ನೀತಿ

ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತು ಹೋಗಿದ್ದ. ಅವನು ತನ್ನ ಕಮಾಂಡರ್ ಬಳಿ ಬಂದು, “ಸಾರ್, ನನಗೆ ಎರಡು ವಾರಗಳ ರಜೆ ಬೇಕು" ಎಂಬ ಬೇಡಿಕೆ ಇಟ್ಟ.

“ಏನು ಎರಡು ವಾರವೇ? ಸರಿ, ಆ ಬೆಟ್ಟಗಳು ಕಾಣಿಸ್ತಿವೆಯಲ್ಲಾ ಅಲ್ಲಿ ಅದರಾಚೆಗೆ ಈಜಿಪ್ಟ್ ನ ಸೇನೆ ಇದೆ. ಆ ಕಡೆಯಿಂದ ಒಂದು ತಾಸಿನ ಒಳಗಾಗಿ ವೈರಿಗಳ ಒಂದು ಯುದ್ಧ ಟ್ಯಾಂಕ್ ಅನ್ನು ತಂದುಕೊಂಡು. ನಿನಗೆ ಆ ಕ್ಷಣದಲ್ಲೇ ಎರಡು ವಾರಗಳ ರಜೆ ಮಂಜೂರು ಮಾಡ್ತೇನೆ" ಎಂದ ಕಮಾಂಡರ್. ಯುವಕ ಮರಳಿ ಹೋದ.

ಆದರೆ, ಸರಿಯಾಗಿ ಒಂದು ತಾಸಾಗುವಷ್ಟರಲ್ಲಿ ಅದೇ ಯುವಕ ಒಂದು ಈಜಿಪ್ಟ್ ಯುದ್ಧ ಟ್ಯಾಂಕ್ ಜೊತೆಗೆ ಕಮಾಂಡರ್ ಎದುರಲ್ಲಿ ಹಾಜರಾದ! ಕಮಾಂಡರ್ ತನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. “ಏನು ! ನೀನು ನಿಜಕ್ಕೂ ಒಂದು ಈಜಿಪ್ಟ್ ಟ್ಯಾಂಕ್ ಅನ್ನು ವಶಪಡಿಸಿಕೊಂಡು ಬಂದಿದ್ದೀಯಾ? ಹೇಗೆ ಸಾಧ್ಯವಾಯಿತು. ಇದು" ಎಂದು ಕೇಳಿದನಾತ.

“ಸರ್, ಅಷ್ಟೇನೂ ದೊಡ್ದ ಸಂಗತಿಯಲ್ಲ. ನಾನು ನನ್ನ ಟ್ಯಾಂಕ್ ನಲ್ಲಿ ಕೂತು ಬೆಟ್ಟದ ಆಚೆ ಬದಿಗೆ ಹೋದೆ. ಅಲ್ಲಿ ಈಜಿಪ್ಟ್ ನ ಸೈನಿಕರಲ್ಲಿ ಯಾರಿಗೆ ಎರಡು ವಾರಗಳ ರಜೆ ಬೇಕಾಗಿದೆ? ಎಂದು ಕೇಳಿದೆ. ಒಬ್ಬ ಸೈನಿಕನಿಗೆ ಬೇಕಾಗಿತ್ತು. ನಾವಿಬ್ಬರೂ ನಮ್ಮ ನಮ್ಮ ಟ್ಯಾಂಕ್ ಗಳನ್ನು ವಿನಿಮಯ ಮಾಡಿಕೊಂಡೆವು"ಎಂದ ಯುವಕ.

***

ಮ್ಯಾನೇಜ್ ಮೆಂಟ್ ಕಥೆ

ನೂರು ಜನ ಸಾಮರ್ಥ್ಯವಿರುವ ಹಾಸ್ಟೆಲ್ ಒಂದರಲ್ಲಿ ಪ್ರತಿ ದಿನ ಬೆಳಿಗ್ಗೆ ಉಪಾಹಾರದಲ್ಲಿ ಉಪ್ಪಿಟ್ಟನ್ನೇ ಬಡಿಸುತ್ತಿದ್ದರು. ನೂರು ಜನರಲ್ಲಿ ಎಂಬತ್ತು ಜನರಿಗೆ ಉಪ್ಪಿಟ್ಟೆಂದರೆ ಅಲರ್ಜಿ. ಅವರು ತಮಗೆ ದಿನಕ್ಕೊಂದು ಬಗೆಯ ತಿಂಡಿ ಬಡಿಸಲೇಬೇಕೆಂದು ಪ್ರತಿ ದಿನ ದೂರುತ್ತಿದ್ದರು. ಆದರೆ ಉಳಿದ ಇಪ್ಪತ್ತು ಜನರು ಉಪ್ಪಿಟ್ಟನ್ನು ಪ್ರೀತಿಯಿಂದ ಆಸ್ವಾದಿಸುತ್ತಿದ್ದರು.

ಪ್ರತಿದಿನದ ಈ ಗೊಂದಲ, ಗಲಾಟೆಯ ಪರಿಸ್ಥಿತಿಯನ್ನು ಹತೋಟಿಗೆ ತರಲು ವಾರ್ಡನ್ ಮತದಾನ ಪದ್ಧತಿ ಅನುಸರಿಸಿದರು. ಅದರ ಪ್ರಕಾರ ಯಾವ ತಿಂಡಿಗೆ ಅಧಿಕ ಮತಗಳು ಲಭಿಸುವವೋ ಅದನ್ನೇ ಮಾಡುವುದು ಎಂದು ನಿರ್ಣಯಿಸಲಾಯಿತು.

ಉಪ್ಪಿಟ್ಟು ಪ್ರಿಯರಾದ ಇಪ್ಪತ್ತು ಜನರು ತಮ್ಮ ಮತವನ್ನು ಉಪ್ಪಿಟ್ಟಿಗೇ ನೀಡಿದರು.

ಉಳಿದ ಎಂಬತ್ತು ಜನರು ಈ ರೀತಿಯಾಗಿ ಮತ ಹಾಕಿದರು.

ಮಸಾಲೆ ದೋಸೆ - ೧೮ ಜನರು

ಆಲೂ ಪರೋಟ, ಮೊಸರು - ೧೬ ಜನರು

ಚಪಾತಿ/ಪೂರಿ ಬಾಜಿ - ೧೪ ಜನರು

ಬ್ರೆಡ್, ಬಟರ್ - ೧೨ ಜನರು

ಇಡ್ಲಿ ಸಾಂಬಾರ್ - ೧೦ ಜನರು

ವಡೆ ಸಾಂಬಾರ್ - ೧೦ ಜನರು

ಹೀಗೆ ಅತ್ಯಧಿಕ ಮತಗಳು ಉಪ್ಪಿಟ್ಟಿಗೇ ಬಿದ್ದವು. ಆದುದರಿಂದ ಪುನಃ ಉಪ್ಪಿಟ್ಟನ್ನೇ ಬೆಳಿಗ್ಗಿನ ಉಪಾಹಾರವಾಗಿ ಸ್ವೀಕರಿಸಲಾಯಿತು. ಇದೇ ಮ್ಯಾನೇಜ್ ಮೆಂಟ್ ಕಥೆ!

***

ಮೂತ್ರೀ ಮನೆ

ಮುಸ್ಸಂಜೆ ಸಮಯ. ಅಜ್ಜ, ಅಜ್ಜಿ ತಮ್ಮ ಎರಡು ವರ್ಷದ ಮೊಮ್ಮಗನೊಂದಿಗೆ ಮನೆಯ ಜಗುಲಿ ಮೇಲೆ ಕುಳಿತಿದ್ದರು. ಆಗ ಪಕ್ಕದ ಮನೆಯಲ್ಲಿದ್ದ ಮತ್ತೊಂದು ಅಜ್ಜಿ, ಈ ಅಜ್ಜಿಯನ್ನು ಕರೆದರು. ಮೊಮ್ಮಗನಿಗೆ ‘ಪುಟ್ಟಾ, ಇಲ್ಲೇ ಅಜ್ಜನ ಜೊತೆ ಆಟ ಆಡ್ತಿರು. ಐದು ನಿಮಿಷದಲ್ಲಿ ಬಂದು ಬಿಡ್ತೇನೆ" ಎಂದು ಹೇಳಿ ಅಜ್ಜಿ ಎದ್ದು ಹೋದರು. ಐದು ನಿಮಿಷದಲ್ಲೇ ವಾಪಾಸಾದರು. ಆಗ ಜಗುಲಿ ಮೇಲೆ ಮೊಮ್ಮಗ ಒಬ್ಬನೇ ಇದ್ದ. ಅಜ್ಜಾ ಎಲ್ಲೆಂದು ಕೇಳಿದಾಗ ಆತ, “ಮೂತ್ರೀ ಮನೆಗೆ" ಎಂದು ಹೇಳಿದ. ತುಂಬಾ ಹೊತ್ತಾದರೂ ಅಜ್ಜ ಬರಲಿಲ್ಲ. ಅಜ್ಜಿ, ಮನೆ ಒಳಗಿನ ಮೂತ್ರೀ ಮನೆ (ಟಾಯ್ಲೆಟ್) ಬಳಿ ಬಂದು ಎರಡು ಮೂರು ಬಾರಿ ಕೂಗಿದರೂ ಒಳಗಿನಿಂದ ಉತ್ತರ ಬರಲಿಲ್ಲ. ಅಜ್ಜಿ ಗಾಬರಿಯಿಂದ ಮನೆಯ ಉಳಿದ ಕೋಣೆಗಳನ್ನು ನೋಡಲು ಮುಂದಾದಾಗ ಹೊರಗಡೆ ಗೇಟು ತೆಗೆದು ಬರುತ್ತಿದ್ದ ಅಜ್ಜನನ್ನು ಕಂಡು “ಎಲ್ಲಿ ಹೋಗಿದ್ರೀ?’ ಎಂದು ಹೇಳಿದರು. ಅದಕ್ಕೆ ಅಜ್ಜ, ಇಲ್ಲೇ ಮೂರ್ತಿ ಮನೆಗೆ ಹೋಗಿದ್ದೆ' ಎಂದರು.

***

ಬಾವಿಯ ನೀರು

ಜಾಣ ಮಾರ್ವಾಡಿ ಚಾಣಾಕ್ಷ ಗಾಂಪನಿಗೆ ತನ್ನ ಬಾಯಿಯನ್ನು ಮಾರಿದ. ನೋಂದಾವಣೆ ಎಲ್ಲಾ ಮುಗಿದ ಬಳಿಕ ಮಾರ್ವಾಡಿ ಗಾಂಪನಿಗೆ ಹೀಗೆಂದ-

“ನಾನು ನಿಮಗೆ ಬಾವಿಯನ್ನು ಮಾತ್ರ ಮಾರಿದ್ದೇನೆ. ಅದರೊಳಗಿನ ನೀರನ್ನಲ್ಲ. ನೀರು ನನ್ನದೇ. ನಿನಗೆ ನೀರು ಬೇಕಾದರೆ ದುಡ್ಡುಕೊಡಬೇಕು" ಅಂದ.

ಗಾಂಪ ನಗುತ್ತಾ “ನಾನೂ ಅದನ್ನೇ ಹೇಳಾಕ ಹೊರಟಿದ್ದೆ. ನನ್ನ ಬಾವಿಯೊಳಗಿನ ನೀರನ್ನು ಆದಷ್ಟು ಬೇಗ ತೆಗೆದುಕೊಂಡು ಹೋಗು. ಇಲ್ಲದಿದ್ರೆ ನಿನ್ನ ನೀರನ್ನು ನನ್ನ ಬಾವಿಯೊಳಗೆ ಇರಿಸಿದ್ದಕ್ಕೆ ನನಗೆ ಬಾಡಿಗೆ ಕೊಡಬೇಕಾಗುತ್ತೆ, ನೋಡು" ಅಂದ. ಮಾರ್ವಾಡಿ ಸುಸ್ತೋ ಸುಸ್ತು.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ