‘ಸಂಪದ’ ನಗೆ ಬುಗ್ಗೆ - ಭಾಗ ೮೧

ಅಜ್ಜಿ ಏಕಾದಶಿ !
ಅಕ್ಕನ ಮೊಮ್ಮಗಳು ಆರು ವರ್ಷದ ತಾರಾ, ಶ್ರೀಮತಿ ಮನೆಗೆ ಬಂದಿದ್ದಳು. ಶ್ರೀಮತಿ ಜೊತೆ ಪಾತ್ರೆ ತೊಳೆಯುವುದು, ಬಟ್ಟೆ ಮಡಚುವುದು, ಕಸ ಗುಡಿಸುವುದು, ದೇವರ ಪೂಜೆ... ಹೀಗೆ ನಾನು ಏನೇ ಕೆಲಸ ಮಾಡಿದರೂ ಜೊತೆಗೆ ಅವಳೂ ಸೇರಿಕೊಳ್ಳುತ್ತಿದ್ದಳು. ಅಂದು ಏಕಾದಶಿ ಇತ್ತು. ಅವಳಿಗೆ ದೋಸೆ ಮಾಡಿಕೊಟ್ಟೆ. ಅವಳು “ಅಜ್ಜೀ, ನೀವೇಕೆ ದೋಸೆ ತಿನ್ನಲಿಲ್ಲ?” ಎಂದು ಕೇಳಿದಳು. “ಇವತ್ತು ನನಗೆ ಏಕಾದಶಿ ಪುಟ್ಟೀ, ನಾನು ಆಮೇಲೆ ತಿನ್ನುತ್ತೇನೆ" ಎಂದಳು ಶ್ರೀಮತಿ.
ಮಧ್ಯಾಹ್ನ ಫೋನ್ ನಲ್ಲಿ ಅವರಮ್ಮನ ಜೊತೆ ಮಾತನಾಡುತ್ತಾ, "ಇವತ್ತು ಶ್ರೀಮತಿ ಅಜ್ಜಿ ಏಕಾದಶಿ ಮಾಡಿಕೊಂಡು ತಿಂದ್ರು ನನಗೆ ಕೊಡಲಿಲ್ಲ" ಅಂದಳು. ಅವರಮ್ಮ ತಮಾಷೆಗೆ “ಅಜ್ಜಿ ಹತ್ರ ನೀನೂ ಏಕಾದಶಿ ಮಾಡಿಸಿಕೊಂಡು ತಿನ್ನು" ಎಂದಳು. ಇವಳು ಫೋನ್ ಇಟ್ಟದ್ದೇ ತಡ ಶ್ರೀಮತಿಯ ಹತ್ತಿರ ಬಂದು “ಅಜ್ಜಿ, ಈಗ ನನಗೂ ಏಕಾದಶಿ ಮಾಡಿಕೊಡು" ಎಂದು ಒಂದೇ ಸಮನೆ ಹಠ ಹಿಡಿದಳು. ಅವಳನ್ನು ಸಮಾಧಾನ ಮಾಡುವಷ್ಟರಲ್ಲಿ ಶ್ರೀಮತಿಗೆ ಸಾಕೋ ಸಾಕಾಯಿತು. ಅಕ್ಕನ ಮಗಳು ಈಗಲೂ ಶ್ರೀಮತಿಗೆ ಫೋನ್ ಮಾಡುವಾಗ “ಎಷ್ಟು ಏಕಾದಶಿ ತಿಂದೆ?” ಎಂದು ಚುಡಾಯಿಸುತ್ತಾಳೆ.
***
ಮೂರ್ಖ
ಗಾಂಪ: (ಜಗಳದ ನಡುವೆ) ನಾನೆಂಥಾ ಮೂರ್ಖ ! ಆದರೂ ನಿನ್ನನ್ನು ಮದುವೆಯಾಗಿದ್ದೇನೆ, ಈಗ ಅನುಭವಿಸುತ್ತಿದ್ದೇನೆ.
ಶ್ರೀಮತಿ: ನಿಜ, ನೀವು ಅದೇ ರೀತಿ ಅಂತ ನನಗೆ ಗೊತ್ತಿತ್ತು. ಆದರೆ, ಲವ್ ಮಾಡುವಾಗ ನೀವು ಇಂಥಾ ಮೂರ್ಖ ಅಂತ ಗೊತ್ತೇ ಆಗಲಿಲ್ಲ.
***
ತಪ್ಪು ಅಭಿಪ್ರಾಯ
ಶ್ರೀಮತಿ: ರೀ, ನಾನು ಯಾವಾಗಾದ್ರೂ ಹಾಡನ್ನು ಜೋರಾಗಿ ಹಾಡಿಕೊಳ್ಳುವಾಗ, ನೀವ್ಯಾಕೆ ನಾಲ್ಕಾರು ಸಲ ಮನೆಯಿಂದ ಹೊರಗೆ ಹೋಗಿ ಬರುತ್ತೀರಿ?
ಗಾಂಪ: ಅಕ್ಕಪಕ್ಕದ ಮನೆಯವರಿಗೆ ತಪ್ಪು ಅಭಿಪ್ರಾಯ ಅಕಸ್ಮಾತ್ ಬಂದರೆ, ಅದನ್ನು ಹೋಗಲಾಡಿಸಲು.
ಶ್ರೀಮತಿ: ಏಕೆ ತಪ್ಪು ಅಭಿಪ್ರಾಯ?
ಗಾಂಪ: ನಾನು ನಿನಗೆ ಹೊಡೆದು, ನೀನು ಕೂಗಿ ಕೊಳ್ತಾ ಇಲ್ಲ. ಬದಲಿಗೆ ನಿಜವಾಗಿಯೂ ನೀನೇ ಹಾಡ್ತಾ ಇದೀಯಾ ಎಂದು ಎಲ್ಲರಿಗೂ ಗೊತ್ತಾಗಲಿ ಎಂದು ಮನೆ ಮುಂದೆ ಒಂದೆರಡು ಸಲ ಓಡಾಡ್ತೇನೆ.
***
ಉಚಿತ ಶರ್ಟು
ಶ್ರೀಮತಿ: ಇವತ್ತು ನಿಮಗೆ ನಾನು ಒಂದು ಶರ್ಟು ತಂದೆ. ಚೆನ್ನಾಗಿದೆ ತಾನೇ?
ಗಾಂಪ: ಚೆನ್ನಾಗಿದೆ. ಈ ಕಲರ್ ಅಂದರೆ ನನಗೆ ತುಂಬಾ ಇಷ್ಟ ಎಂದು ನಿನಗೆ ಹೇಗೆ ಗೊತ್ತಾಯ್ತೇ?
ಶ್ರೀಮತಿ: ಅದೊಂದು ಕಥೆ. ಅಂಗಡೀಲಿ ಈ ಶರ್ಟ್ ನೋಡಿದ ಕೂಡಲೇ ನಿಮಗೆ ಅಂತ ಸೆಲೆಕ್ಟ್ ಮಾಡಿದೆ. ಆದರೆ ೯,೯೯೯.೦೦ ರೂಪಾಯಿ ಕೊಟ್ಟು ಒಂದು ಸೀರೆ ಕೊಂಡರೆ ಮಾತ್ರ ಆ ಶರ್ಟ್ ನ್ನು ಉಚಿತವಾಗಿ ಕೊಡ್ತಾರಂತೆ. ಅದಕ್ಕೇ ಆ ಸೀರೇನಾ ಖರೀದಿಸಲೇ ಬೇಕಾಯ್ತು. ಇರಲಿ, ಶರ್ಟ್ ನಿಮಗೆ ತುಂಬಾ ಇಷ್ಟವಾಯಿತಲ್ಲಾ ಅದೇ ನನಗೆ ಸಂತೋಷ.
ಗಾಂಪ: ಆಂ!
***
ಪಾನಿಪೂರಿ ಅಂಗಡಿ
ಗಾಂಪ: ಮಚ್ಚಾ, ನನ್ನ ಹುಡುಗಿಗಾಗಿ ನಾನು ನನ್ನ ಹೃದಯದಲ್ಲಿ ದೇವಸ್ಥಾನ ಕಟ್ಟಿದೆ. ಆದರೂ ನನ್ನ ಬಿಟ್ಟು ಹೋದಳು.
ಸೂರಿ: ಇತ್ತೀಚೆಗೆ ಹುಡುಗಿಯರು ದೇವಸ್ಥಾನದಲ್ಲಿ ಎಲ್ಲಿರುತ್ತಾರೆ ಹೇಳು? ನೀನು ದೇವಸ್ಥಾನದ ಬದಲು ಪಾನಿಪೂರಿ ಅಂಗಡಿ ಕಟ್ಟಬೇಕಿತ್ತು. ಕನಿಷ್ಟ ದಿನಾ ಸಂಜೆಯಾದ್ರೂ ಬರ್ತಾ ಇದ್ದಳು !
***
ನೆನಪು
ಶ್ರೀಮತಿ: ಇವತ್ತು ಚಹಾ ಮಾಡುವಾಗ ನಿಮ್ಮ ನೆನಪು ತುಂಬಾ ಆಯ್ತು.
ಗಾಂಪ: (ಪ್ರೀತಿಯಿಂದ) ಓಹ್ ಹೌದಾ?
ಶ್ರೀಮತಿ: ಹೌದು ರೀ...ತುಂಬಾ ನೆನಪಾಗುತ್ತಿತ್ತು.
ಗಾಂಪ: ಆವಾಗ ಏನು ಮಾಡಿದೆ?
ಶ್ರೀಮತಿ: ಶುಂಠಿಯನ್ನು ತಗೊಂಡು ಚೆನ್ನಾಗಿ ಕುಟ್ಟಿ ಕುಟ್ಟಿ ಹುಡಿ ಮಾಡಿದೆ.
***
ಒಂದು ಒಳ್ಳೇ ಮಾತು !
ಶ್ರೀಮತಿ: (ಕನ್ನಡಿಯಲ್ಲಿ ತನ್ನ ಮುಖ ನೋಡುತ್ತಾ...) ಛೇ, ನೋಡೋಕೆ ನಾನು ಎಷ್ಟು ಅಸಹ್ಯವಾಗಿದ್ದೇನಲ್ಲಾ? ರೀ ಏನಾದ್ರೂ ನನ್ನ ಬಗ್ಗೆ ಒಳ್ಳೇ ಮಾತಾಡ್ರೀ…
ಗಾಂಪ: ನಿನ್ನ ಕಣ್ಣಿನ ದೃಷ್ಟಿ ಬಹಳ ಚೆನ್ನಾಗಿದೆ. !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ