‘ಸಂಪದ’ ನಗೆ ಬುಗ್ಗೆ - ಭಾಗ ೮೨

ಕದನ ವಿರಾಮದಲ್ಲಿ…
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದಮ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ ಆಗುತ್ತಿಲ್ಲವಾದರೂ ಆಗಾಗ ಸಮಯ ಸಿಕ್ಕರೆ ಕದನ ವಿರಾಮದ ನಡುವೆ ಅವಕಾಶ ಸಿಕ್ಕಾಗಲೆಲ್ಲಾ ಗುಂಡಿನ ಚಕಮಕಿ ಆಗುತ್ತಲೇ ಇತ್ತು. ಭಾರತೀಯ ಸೇನೆಯ ಮುಖ್ಯಸ್ಥ ಗಾಂಪ ತನ್ನ ಸೈನಿಕರೊಂದಿಗೆ ಗಡಿಭಾಗದಲ್ಲಿ ಸಣ್ಣ ಅಡಗುತಾಣದ ಹಿಂದೆ ಕೂತಿದ್ದ. ಆ ಕಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್ ಕೂಡ ಅದೇ ರೀತಿ ಭಾರತೀಯ ಸೇನೆಗೆ ಕಾಣದಂತೆ ತನ್ನ ಸಂಗಡಿಗರೊಂದಿಗೆ ಕೂತಿದ್ದ. ಬಹಳ ಹೊತ್ತು ಎರಡೂ ಕಡೆ ಸದ್ದೇ ಇರಲಿಲ್ಲ. ಎರಡೂ ತಂಡಗಳಿಗೂ ಆ ಕಡೆ ಇರುವವರ ಬಗ್ಗೆ ಮಾಹಿತಿ ಇತ್ತು. ಮಧ್ಯರಾತ್ರಿಯ ಹೊತ್ತಲ್ಲಿ ಗಾಂಪ ಇದ್ದಕ್ಕಿದ್ದಂತೆ ‘ಮನ್ಸೂರ್ ಖಾನ್' ಎಂದು ಕೂಗಿದ. ಈ ದನಿ ಕೇಳಿ ಆ ಕಡೆಯಿಂದ ಮನ್ಸೂರ್ ಖಾನ್ ಎದ್ದು ನಿಂತು ‘ಏನು?’ ಎಂದು ಕೇಳಿದ. ಗಾಂಪ ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದು ಹಾಕಿದ. ಸ್ವಲ್ಪ ಹೊತ್ತು ನಿಶ್ಯಬ್ಧದ ನಂತರ ಗಾಂಪ ಮತ್ತೆ ‘ಅಬ್ದುಲ್ ಮಜೀದ್' ಎಂದು ಕೂಗಿದ. ಆ ಕಡೆಯಿಂದ ಮಜೀದ್ ಎದ್ದು ನಿಂತು ‘ಏನು?’ ಎಂದು ಕೇಳಿದ. ಮತ್ತೆ ಗಾಂಪ ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದು ಬಿಟ್ಟ.
ಆ ಕಡೆ ಸೇನಾ ಮುಖ್ಯಸ್ಥ “ ಏನ್ರೀ, ನಿಮಗೇನು ತಲೆ ಕೆಟ್ಟಿದೆಯಾ? ಆತ ಹಾಜರಿ ಕರಿಯೋ ತರಹ ನಿಮ್ಮ ಹೆಸರು ಕರೆದ್ರೆ ನೀವು ವಿದ್ಯಾರ್ಥಿಗಳ ತರಹ ಎದ್ದು ನಿಲ್ತೀರಲ್ಲಾ?’ ಅಂತ ಬೈದ. ಆಗ ಅವರಲ್ಲೊಬ್ಬ ಸೈನಿಕ ‘ಸರ್, ನಾವೂ ಅದೇ ಟೆಕ್ನಿಕ್ ಬಳಸಿ ನೋಡುವ' ಎಂದ. ಸರಿ ಅಂತ ಆ ಕಡೆ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್, ‘ಗಾಂಪ' ಎಂದು ಜೋರಾಗಿ ಕರೆದ. ಈ ಕಡೆ ಗಾಂಪ ಏನೂ ಉತ್ತರಿಸಿದೇ ಸುಮ್ಮನೇ ಕುಳಿತಿದ್ದ. ಐದು ನಿಮಿಷಗಳ ಆಯಿತು. ತಮ್ಮ ಉಪಾಯ ನಡೆಯಲಿಲ್ಲ ಅಂತ ಅಫ್ಜಲ್ ಖಾನ್ ಬಹಳ ಕೋಪದಿಂದ ಕುದಿಯುತ್ತಿದ್ದ. ಆಗ ಗಾಂಪ ಎದ್ದು ನಿಂತು ‘ಯಾರಪ್ಪಾ ಅದು ನನ್ನ ಹೆಸರು ಕೂಗಿದ್ದು" ಅಂತ ಕೇಳಿದ. ಆಗ ಅಫ್ಜಲ್ ಖಾನ್ ಎದ್ದು ನಿಂತು ‘ನಾನೇ ನಾನೇ’ ಎಂದ. ಗಾಂಪ ನೇರ ಅವನ ತಲೆಗೆ ಗುಂಡು ಹಾರಿಸಿ ಕೂತ್ಕೊಂಡ!
***
ಯಾರು ಮಾತಾಡೋದು?
ಫೋನ್ ರಿಂಗಣಿಸಿದಾಗ…
ಹಲೋ, ಯಾರು ಮಾತಾಡೋದು?
ಆ ಕಡೆ: ನಾನು ಪ್ರೀತಿ ಮಾತಾಡೋದು.
ಈ ಕಡೆ: ನಾನೇನು ದ್ವೇಷಾನ ಮಾತಾಡೋದು, ವಿಷಯಕ್ಕೆ ಬಾಮ್ಮ !
***
ಸಿಹಿ !
ಗಾಂಪ: ನೀವು ಕಹಿಯಾದ ಔಷಧಿಯನ್ನು ಕೊಟ್ಟರೂ ಸಹ, ಅದು ನನಗೆ ಸಿಹಿಯಾಗೇ ಇರುವುದು ಸಿಸ್ಟರ್,
ನರ್ಸ್: ಅಯ್ಯೋ ಕರ್ಮ...ಕರ್ಮ, ನಾನು ನಿಮಗೆ ಸ್ವೀಟೇ ಕೊಟ್ಟಿದ್ದು ಈಗ, ಯಾಕೆಂದರೆ, ಇವತ್ತು ನನ್ನ ಹುಟ್ಟಿದ ಹಬ್ಬ ಅದಕ್ಕೆ... ಅಂತೇಳಿ ಹಣೆ ಚಚ್ಚಿಕೊಂಡಳು...!
***
ಅಲ್ಲೂ ಕ್ಯೂ
ವಿಸ್ಕಿ ಖರೀದಿಸಲು ಹೋಗಿ ತಾಸುಗಟ್ಟಲೆ ಕಾದು ಬರಿಗೈಯಲ್ಲಿ ಬಂದ ಕುಡುಕ ಗಾಂಪ ಮಿತ್ರ ಸೂರಿಯೊಂದಿಗೆ “ಕ್ಯೂ ಕ್ಯೂ ಕ್ಯೂ ! ವೈನ್ ಶಾಪ್ ಮುಂದೆ ಬಹಳ ಉದ್ದದ ಕ್ಯೂ ಇದೆ. ಈ ಕೆಟ್ಟ ಸ್ಥಿತಿಗೆ ನಮ್ಮ ಅಬಕಾರಿ ಅಧಿಕಾರಿಯೇ ಕಾರಣ. ಆತ ಅಧಿಕಾರದಲ್ಲಿರಬಾರದು. ಆತನನ್ನು ಕೊಂದು ಬರುತ್ತೇನೆ” ಎಂದು ಹೇಳಿ ಪಿಸ್ತೂಲಿನೊಂದಿಗೆ ಹೊರಟು ಹೋದ.
ಎಷ್ಟೋ ಹೊತ್ತಿನ ಮೇಲೆ ಗಾಂಪ ಮರಳಿ ಬಂದ. ಸೂರಿ “ಮುಗಿಸಿ ಬಂದಿಯಾ?’ ಕೇಳಿದ.
“ಹೇಗೆ ಮುಗಿಸೋದು? ವೈನ್ ಶಾಪ್ ಮುಂದೆ ಇದ್ದುದರ ಹತ್ತು ಪಟ್ಟು ಉದ್ದದ ಕ್ಯೂ ಆ ಅಧಿಕಾರಿಯ ಮನೆಯ ಮುಂದೆಯೇ ಇದೆ. ಎಲ್ಲರ ಕೈಯಲ್ಲೂ ಪಿಸ್ತೂಲು ಇದೆ" ಎಂದ ಕುಡುಕ ಗಾಂಪ.
***
ಒಂಟೆಯೋ, ಮೊಲವೋ?
ಸ್ಟಾಲಿನ್ ಆಡಳಿತ ಕಾಲದಲ್ಲಿ ಎರಡು ಮೊಲಗಳು ರಸ್ತೆಯಲ್ಲಿ ಎದುರಾದವು. ಒಂದು ಮೊಲ ಇನ್ನೊಂದರ ಬಳಿ, ‘ತುಂಬ ಅವಸರದಿಂದ ಹೊರಟಿರುವಂತಿದೆ. ಯಾವ ಕಡೆಗೋ?’ ಕೇಳಿತು. ‘ನಿನಗಿನ್ನೂ ಸುದ್ದಿ ಬಂದಿಲ್ಲವೇ? ಎಲ್ಲ ಒಂಟೆಗಳನ್ನೂ ಕತ್ತರಿಸಿ ಹಾಕಬೇಕೆಂದು ಸ್ಟಾಲಿನ್ ಆಜ್ಞೆ ಮಾಡಿದ್ದಾನಂತೆ ! ಅದಕ್ಕೆ ದೇಶ ಬಿಟ್ಟು ಹೊರಟಿದ್ದೇನೆ' ಎಂದಿತು ಎರಡನೆಯ ಮೊಲ.
ಮೊದಲನೆಯ ಮೊಲ ಸುಸ್ತಾಗುವಷ್ಟು ನಕ್ಕಿತು. ‘ಮಂಕೇ, ಬುದ್ದಿ ಇದೆಯಾ ನಿನಗೆ? ಅವರು ಆಜ್ಞೆ ಮಾಡಿದ್ದು ಒಂಟೆಗಳನ್ನು ಕತ್ತರಿಸಲು ಅಲ್ಲವೇ? ‘ ಕೇಳಿತು. ‘ನಿಜ, ಒಂಟೆಯೋ, ಮೊಲವೋ ಎಂಬುದು ಕಮ್ಯೂನಿಷ್ಟರಿಗೆ ನಿಜ ತಿಳಿಯುವುದು ಕತ್ತರಿಸಿದ ಮೇಲೆ ಅಲ್ಲವೇ?’ ಎಂದಿತು ಎರಡನೇ ಮೊಲ.
***
ಬಂಧನ
ಗಾಂಪ: ‘ಪೊಲೀಸರು ನಿನ್ನನ್ನು ಹೇಗೆ ಬಂಧಿಸಿದರು?’
ಸೂರಿ: ಬ್ಯಾಂಕೊಂದನ್ನು ಲೂಟಿ ಮಾಡಿ ಅಲ್ಲಿ ಸಿಕ್ಕಿದ ಹಣವನ್ನು ಅಲ್ಲಿಯೇ ಕೂತು ಎಣಿಸುತ್ತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರು ನನ್ನನ್ನು ಬಂಧಿಸಿದರು.
ಗಾಂಪ: ಲೂಟಿ ಮಾಡಿದ ಬಳಿಕ ಅಲ್ಲಿಂದ ಹೋಗದೇ ಅಲ್ಲೇ ಕೂತು ಏಕೆ ಹಣ ಎಣಿಸುತ್ತಿದ್ದೆ?
ಸೂರಿ: ಕೌಂಟರ್ ಬಿಡುವ ಮೊದಲೇ ನಿಮ್ಮ ಹಣವನ್ನು ಎಣಿಸಿಕೊಳ್ಳಿ ಎಂದು ಬರೆದಿದ್ದ ಬೋರ್ಡ್ ಅಲ್ಲಿ ಹಾಕಲಾಗಿತ್ತು, ಅದಕ್ಕೆ…
***
ಇಷ್ಟದ ಪ್ರಾಣಿ
ಟೀಚರ್: ಗಾಂಪ, ನಿನಗೆ ಯಾವ ಪ್ರಾಣಿ ಅಂದರೆ ತುಂಬಾ ಇಷ್ಟ?
ಗಾಂಪ: ಬೆಕ್ಕು ಟೀಚರ್
ಟೀಚರ್: ಯಾವ ಕಾರಣಕ್ಕೆ ನಿನಗೆ ಬೆಕ್ಕು ಇಷ್ಟ?
ಗಾಂಪ: ಏಕೆಂದರೆ ಅದು ಅಡ್ದ ಬಂದ್ರೆ ನಮ್ಮ ಅಜ್ಜಿ ನನ್ನ ಶಾಲೆಗೆ ಕಳುಹಿಸಲ್ಲ. ವಾಪಾಸ್ ಮನೆಗೆ ಕರೆದುಕೊಂಡು ಹೋಗುತ್ತಾರೆ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ