‘ಸಂಪದ' ನಗೆಬುಗ್ಗೆ - ಭಾಗ ೭೪

‘ಸಂಪದ' ನಗೆಬುಗ್ಗೆ - ಭಾಗ ೭೪

ವೃದ್ಧಾಪ್ಯದ ಸಮಸ್ಯೆ

ಅರವತ್ತೈದು ದಾಟಿದ ಶ್ರೀಮತಿ ಮತ್ತು ತಾರಾ ಉದ್ಯಾನವನದ ಕಲ್ಲುಬೆಂಚಿನಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದರು. “ಅಂದ ಹಾಗೆ ನಿನ್ನ ಕನ್ನಡಕ ಬಹಳ ಚೆನ್ನಾಗಿದೆ ಕಣೆ ತಾರಾ” ಅಂದಳು ಶ್ರೀಮತಿ ಮೆಚ್ಚುಗೆ ಸೂಚಿಸುತ್ತಾ.

“ಇದು ನನ್ನ ಮೂರನೇ ಕನ್ನಡಕ. ಒಂದು ವಾರದ ಹಿಂದೆಯಷ್ಟೇ ಖರೀದಿಸಿ ತಂದೆ" ಎಂದಳು ತಾರಾ.

“ಮೂರನೆಯದ್ದಾ? ಅದ್ಯಾಕೆ ಅಷ್ಟೋಂದು ಕನ್ನಡಕಗಳನ್ನು ಕೊಳ್ಳುತ್ತೀಯಾ?” ಎಂದು ವಿಚಾರಿಸಿದಳು ಶ್ರೀಮತಿ.

“ಏನು ಮಾಡಲಿ ? ನನಗೆ ದೂರದ ವಸ್ತುಗಳು ಕಾಣೋಲ್ಲ. ಆಗ ಮೊದಲ ಕನ್ನಡಕ ಹಾಕ್ತೇನೆ. ಹತ್ತಿರದ ವಸ್ತುಗಳೂ ಕಾಣೋಲ್ಲ. ಅವುಗಳನ್ನು ನೋಡಬೇಕಾದರೆ ಎರಡನೆ ಕನ್ನಡಕ ಹಾಕ್ತೇನೆ. ಇವೆರಡೂ ಕಳೆದುಹೋಗಿ ಹುಡುಕಬೇಕು ಅಂದಾಗ ಈ ಮೂರನೇ ಕನ್ನಡಕ ಹಾಕಬೇಕಾಗುತ್ತದೆ" ಎಂದು ವಿವರಿಸಿದಳು ತಾರಾ.

***

ಕುರುಡನ ಕಷ್ಟ

ಗಾಂಪ ಹುಟ್ಟು ಕುರುಡನಾಗಿದ್ದ. ಒಮ್ಮೆ ಗಾಂಪ ಅಮೇರಿಕಾಕ್ಕೆ ಹೋಗಿದ್ದ. ಅಲ್ಲಿನ ದೊಡ್ದ ರೆಸಾರ್ಟ್ ಒಂದರಲ್ಲಿ ಉಳಿದುಕೊಳ್ಳಲು ಹೋದ. ಅವನ ಸಹಾಯಕ್ಕೆ ಅಂತ ಅಲ್ಲಿ ಒಬ್ಬ ಸರ್ವಿಸ್ ಬಾಯ್ ಅನ್ನು ನೇಮಿಸಿದರು. ಸರ್ವಿಸ್ ಬಾಯ್ ಗಾಂಪನಿಗೆ ಕಾಟೇಜ್ ತೋರಿಸಲು ಕರೆದುಕೊಂಡು ಹೋದ. ರೂಮಿನ ಒಳಗೆ ಹೋದ ಗಾಂಪ ಅಲ್ಲಿದ್ದ ಬೆಡ್ ಅನ್ನು ಮುಟ್ಟಿ ನೋಡಿ ಓಹ್, ಬೆಡ್ ತುಂಬಾ ದೊಡ್ಡದಿದೆ ಅಂದ. ಅದಕ್ಕೆ ಸರ್ವಿಸ್ ಬಾಯ್ ಹೇಳಿದ ಅಮೇರಿಕಾದಲ್ಲಿ ಎಲ್ಲಾನೂ ದೊಡ್ಡದೇ. ಸರಿ ಗಾಂಪ ಫ್ರೆಶ್ ಆಗಿ ಬಂದು ನನ್ನನ್ನ ಬಾರ್ ಸೆಕ್ಷನ್ ಗೆ ಕರೆದುಕೊಂಡು ಹೋಗು ಅಂದ. ಇಬ್ಬರೂ ಬಾರ್ ಗೆ ಹೋದರು. ಅಲ್ಲಿ ಗಾಂಪ ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಆ ವಿಸ್ಕಿ ಗ್ಲಾಸ್ ಮುಟ್ಟಿ ನೋಡಿದ ಗಾಂಪ “ಓಹ್ ಎಷ್ಟು ದೊಡ್ಡ ಗ್ಲಾಸ್" ಅಂದ. ಅದಕ್ಕೆ ಸರ್ವಿಸ್ ಬಾಯ್ ಹೇಳಿದ “ಅಮೇರಿಕಾದಲ್ಲಿ ಎಲ್ಲವೂ ದೊಡ್ಡದೇ”. ಸರಿ ಒಂದೆರಡು ಪೆಗ್ ಆಯಿತು. ಗಾಂಪ ಸ್ವಲ್ಪ ಟೈಟ್ ಆದ. ನಂತರ ಗಾಂಪನಿಗೆ ಟಾಯ್ಲೆಟ್ ಗೆ ಹೋಗಬೇಕು ಅನ್ನಿಸಿತು. ಪಕ್ಕದಲ್ಲೇ ಇದ್ದ ಸರ್ವಿಸ್ ಬಾಯ್ ಅನ್ನು ಟಾಯ್ಲೆಟ್ ಗೆ ಕರ್ಕೊಂಡು ಹೋಗು ಅಂದ. ಅವನೂ ಒಂದೆರಡು ಪೆಗ್ ಏರಿಸಿದ್ದ. ಹಾಗಾಗಿ ಎದ್ದು ಹೋಗಲಾರದೆ, ಹೀಗೆ ನೇರ ಹೋಗಿ, ಲೆಫ್ಟ್ ನಲ್ಲಿ ಎರಡನೇ ಡೋರ್ ಅಂತ ಹೇಳಿದ. ಕುರುಡ ಗಾಂಪ ನಶೆಯಲ್ಲಿ ನಡೆದುಕೊಂಡು ಹೋಗಿ, ಎರಡನೇ ಡೋರ್ ಬದಲು ಮೂರನೇ ಡೋರ್ ನಲ್ಲಿ ಎಂಟ್ರಿ ಆದ. ಅದು ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ದಾರಿಯಾಗಿತ್ತು. ಸೀದಾ ಹೋದವನೇ ಗಾಂಪ ಪೂಲ್ ಒಳಗೆ ಬಿದ್ದು ಬಿಟ್ಟ. ತಕ್ಷಣ ಗಾಬರಿಯಾದ ಗಾಂಪ ಕಿರುಚಿಕೊಳ್ಳತೊಡಗಿದ. “ಅಯ್ಯೋ ಅಮೇರಿಕಾದಲ್ಲಿ ಎಲ್ಲಾನೂ ದೊಡ್ಡದೇ. ಯಾರೂ ಫ್ಲಷ್ ಮಾಡಬೇಡ್ರಪ್ಪ ಪ್ಲೀಸ್"

***

ದೇವರ ಸಹಾಯ

ಗಾಂಪ ಬೆಂಗಳೂರು ನಗರದಲ್ಲಿ ಡ್ರೈವ್ ಮಾಡುತ್ತಿದ್ದ. ಅವನು ಹೋಗಬೇಕಾಗಿದ್ದ ಕಾರ್ಯಕ್ರಮಕ್ಕೆ ಮೊದಲೇ ತಡವಾಗಿದ್ದುದರಿಂದ ಬೇಗನೇ ಪಾರ್ಕ್ ಮಾಡಿ ಹೋಗುವ ಆತುರದಲ್ಲಿದ್ದ. ಪಾರ್ಕಿಂಗ್ ಯಾರ್ಡ್ ನಲ್ಲಿ ಎರಡು ಸುತ್ತು ಹಾಕಿದರೂ ಎಲ್ಲೂ ಜಾಗ ಖಾಲಿಯಿರಲಿಲ್ಲ. ಎಲ್ಲಿ ನೋಡಿದರೂ ವಾಹನಗಳೇ ಕಾಣಿಸುತ್ತಿದ್ದವು. ಹುಡುಕಿ ಹುಡುಕಿ ಸುಸ್ತಾದಾಗ ಗಾಂಪನಿಗೆ ದೇವರಿಗೆ ಮೊರೆಯಿಡುವುದಲ್ಲದೆ ಬೇರೆ ಆಯ್ಕೆಯೇ ಉಳಿಯಲಿಲ್ಲ. 

“ಓ ದೇವರೇ! ನನಗೇನಾದರೂ ನೀನು ಈಗಿಂದೀಗ ಕಾರು ಪಾರ್ಕ್ ಮಾಡಲು ಜಾಗ ಕೊಟ್ಟದ್ದೇ ಆದರೆ ನಾನು ಮಾಂಸ ತಿನ್ನುವುದನ್ನು ಬಿಟ್ಟು ಪ್ರತೀ ದಿನ ದೇವಸ್ಥಾನಕ್ಕೆ ಹೋಗುತ್ತೇನೆ” ಎಂದು ಮೊರೆಯಿಟ್ಟ. ಆತನ ಮಾತು ಮುಗಿದಿತ್ತೋ ಇಲ್ಲವೋ, ಆತನ ಕಾರಿನ ಎದುರಲ್ಲಿ ಇದ್ದಕ್ಕಿದ್ದಂತೆ ಖಾಲಿ ಜಾಗ ಕಾಣಿಸಿಕೊಂಡಿತು. ಗಾಂಪ ಮತ್ತೆ ಮುಖವೆತ್ತಿ ಹೇಳಿದ “ದೇವರೇ, ಪರವಾಗಿಲ್ಲ ಬಿಡು. ಸಹಾಯ ಮಾಡುವ ಕಷ್ಟ ತಗೋ ಬೇಡ. ನನಗೆ ಈಗಷ್ಟೇ ಒಂದು ಪಾರ್ಕಿಂಗ್ ಸ್ಥಳ ಸಿಕ್ಕಿತು !”

***

ಡಾಕ್ಟರ್ ಸರ್ಟಿಫಿಕೇಟ್!

ಗಾಂಪನ ಆರೋಗ್ಯ ಸರಿಯಿರಲಿಲ್ಲ ಎಂದು ಹತ್ತು ದಿನ ಶಾಲೆಗೆ ರಜೆ ಹಾಕಿದ್ದ. ಹತ್ತನೇ ತರಗತಿಯ ಕೊನೆಯ ದಿನಗಳಾದುದರಿಂದ ಶಾಲೆಯಲ್ಲಿ ಕಟ್ಟುನಿಟ್ಟಿನ ತರಬೇತಿ ನಡೆದಿತ್ತು. ಸಕಾರಣವಿಲ್ಲದೆ ಯಾರೂ ರಜೆ ಹಾಕುವಂತಿರಲಿಲ್ಲ. ಹೀಗಾಗಿ, ಅಷ್ಟು ದಿನ ರಜೆ ಹಾಕಿದ್ದಕ್ಕೆ ಡಾಕ್ಟರ್ ಸರ್ಟಿಫಿಕೇಟ್ ತರಲೇಬೇಕೆಂದು ಟೀಚರ್ ಹೇಳಿದರು. ಮಾರನೇ ದಿನ ಗಾಂಪ ಖಾಲಿ ಕೈಯಲ್ಲಿ ಶಾಲೆಗೆ ಬಂದ. “ಬರುವಾಗ ಡಾಕ್ಟರ್ ಸರ್ಟಿಫಿಕೇಟ್ ತರಬೇಕು ಅಂತ ಹೇಳಿದ್ದೆ ಅಲ್ವಾ?” ಎಂದರು ಟೀಚರ್. ಗಾಂಪ “ನಾನು ಎಷ್ಟು ಕೇಳಿದರೂ ಅವರು ಕೊಡ್ಲಿಲ್ಲ ಮೇಡಂ. ಅದು ಅವ್ರು ಕಷ್ಟಪಟ್ಟು ಓದಿ ತೆಗೆದುಕೊಂಡಿರುವುದಂತೆ. ಕೊಡೊಲ್ಲ ಹೋಗೋ ಅಂದ್ರು!” ಎಂದ.

***

ಗೋಡಂಬಿ ರೇಟು

“ನಿಮ್ಮ ಅಂಗಡಿಯಲ್ಲಿ ಗೋಡಂಬಿ ಒಂದು ಕೆಜಿಗೆ ಎಷ್ಟು? ಎಂದು ಕೇಳಿದ ಗಾಂಪ. ಅಂಗಡಿಯ ಶೆಟ್ಟರು “ಏಳು ನೂರು ರೂಪಾಯಿ ಕಣಪ್ಪ ಕೆಜಿಗೆ" ಎಂದರು. ಗಾಂಪ “ಅಲ್ರೀ, ಹಿಂದಿನ ಸಾಲಿನ ಸೂರಿ ಅಂಗಡಿಯಲ್ಲಿ ಐನೂರು ರೂಪಾಯಿಗೆ ಕೆಜಿ ಅಂದ್ರಲ್ಲಾ, ನಿಮ್ಮಲ್ಲಿ ಯಾಕೆ ಅಷ್ಟು ಜಾಸ್ತಿ ಬೆಲೆ?” ಎಂದಾಗ ಶೆಟ್ಟರು ಸಿಟ್ಟಾಗಿ “ಅಲ್ಲೇ ತಗೊಳ್ಳೋದಲ್ಲಾ? ಮತ್ಯಾಕೆ ಇಲ್ಲಿಗೆ ಬಂದೆ?” ಎಂದರು. 

ಗಾಂಪ “ಅವರಲ್ಲಿ ಈಗ ಗೋಡಂಬಿ ಸ್ಟಾಕ್ ಇಲ್ಲವಂತೆ.” ಎಂದ. ಶೆಟ್ಟರು “ಓಹೋ ಹೌದಾ? ನಮ್ಮಲ್ಲೂ ಗೋಡಂಬಿ ಸ್ಟಾಕ್ ಇಲ್ಲದಿದ್ದಾಗ ಬೆಲೆ ಕೇವಲ ನಾನೂರು ರೂಪಾಯಿ ಅಷ್ಟೇ ಇರುತ್ತೆ...ಸ್ಟಾಕ್ ಇದ್ದಾಗ ಮಾತ್ರ ಏಳುನೂರು!” ಎಂದರು.

***

ಜಾಹೀರಾತು

(ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ತನ್ನ ಹೆಂಡತಿ ಶ್ರೀಮತಿಗೆ)

ಗಾಂಪ: ಶ್ರೀಮತಿ, ಅಕಸ್ಮಾತ್ ಈ ಬೆಂಗಳೂರಿನಲ್ಲಿ ನಾನು ಕಳೆದು ಹೋದರೆ ಏನ್ ಮಾಡ್ತೀಯಾ?

ಶ್ರೀಮತಿ: ಅಯ್ಯೋ ಅಷ್ಟು ಗೊತ್ತಾಗೋದಿಲ್ವಾ ನಂಗೆ, ತಕ್ಷಣ ಪೇಪರ್ ನಲ್ಲಿ ಜಾಹೀರಾತು ಹಾಕಿಸ್ತೀನಿ.

ಗಾಂಪ: ಭಲೇ ಶ್ರೀಮತಿ, ಏನಂತಾ ಜಾಹೀರಾತು ಹಾಕಿಸ್ತೀಯಾ?

ಶ್ರೀಮತಿ: ತಕ್ಷಣ ಗಂಡ ಬೇಕಾಗಿದ್ದಾನೆ ಅಂತ.!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ