‘ಸಂಪದ' ನಗೆ ಬುಗ್ಗೆ - ಭಾಗ ೧೦
ಡೆಡ್ಲಿ ಗಿಣಿ
ಗಾಂಪಾನಿಗೆ ಯಾವಾಗ್ಲೂ ಇನ್ನೊಬ್ಬರನ್ನು ಹೀಯಾಳಿಸಿ ಮಾತಾಡೋದು ಅಭ್ಯಾಸ ಆಗಿತ್ತು. ಮನೆಯಲ್ಲಿ ಹೆಂಡತಿ ಏನೇ ಹೇಳಿದ್ರೂ ಅವಳ ಮಾತಿಗೆ ಮರ್ಯಾದೆ ಕೊಡದೇ “ಮೈ ಫುಟ್" ಅಂತಿದ್ದ. ಆಫೀಸಿನಲ್ಲೂ, ಯಾರು ಏನ್ ಒಳ್ಳೆ ಕೆಲಸ ಮಾಡಿದ್ರೂ ಅದನ್ನು ಇನ್ನೊಬ್ಬರು ಯಾರಾದ್ರೂ ಹೊಗಳಿದ್ರೆ ಸಾಕು, ಅಯ್ಯೋ, ಅದೇನು ಮಹಾ, “ಮೈ ಫುಟ್" ಅಂತಲೇ ಮಾತು ಶುರು ಮಾಡ್ತಾ ಇದ್ದ. ಹಾಗಾಗಿ ಗಾಂಪಾನ ಕಂಡ್ರೆ ಆಫೀಸಿನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಆದರೆ ಅವನ ಬಾಯಿ ಮುಚ್ಚಿಸೋಕಾಗದೆ ಒಳಗೊಳಗೇ ಬಯ್ಕೊಂಡು ಸುಮ್ನೆ ಇರ್ತಿದ್ರು. ಒಂದು ದಿನ ಆಫೀಸಿನಲ್ಲಿ ಗಾಂಪಾ ಸಹೋದ್ಯೋಗಿಯಾಗಿದ್ದ ಸೂರಿ ಬೆಳಗ್ಗೆನೇ ಬಂದವನು ಎಲ್ಲರಿಗೂ ಇಲ್ಲಿ ನೋಡಿ ಅಂತ ಒಂದು ಗಿಳಿ ತೋರಿಸುತ್ತಿದ್ದ. ಎಲ್ಲರೂ ಏನು ಈ ಗಿಳಿ ವಿಶೇಷ? ಅಂತ ಕೇಳಿದ್ರು. ಅದಕ್ಕೆ ಸೂರಿ ಇದು ಡೆಡ್ಲಿ ಗಿಣಿ, ಇದರ ಕರಾಮತ್ತು, ನೀವೇ ನೋಡಿ ಅಂತ ಗಿಣಿಯನ್ನು ಟೇಬಲ್ ಮೇಲಿಟ್ಟು ಅದರ ಕಡೆ ನೋಡಿ “ಡೆಡ್ಲಿ ಗಿಣಿ, ಟೇಬಲ್" ಅಂದ. ಏನಾಶ್ಚರ್ಯ, ಗಿಣಿ ತನ್ನ ಕೊಕ್ಕಿನಿಂದ ಆ ಇಡೀ ಟೇಬಲ್ ಅನ್ನು ಕುಕ್ಕಿ ಕುಕ್ಕಿ ಎರಡೇ ನಿಮಿಷದಲ್ಲಿ ಪುಡಿ ಮಾಡಿಬಿಡ್ತು. ಎಲ್ಲರೂ ದಂಗು ಬಡಿದು ಹೋದರು. ಆಫೀಸಿನ ಜವಾನ “ಡೆಡ್ಲಿ ಗಿಣಿ, ವಿಂಡೋ” ಅಂದ. ಗಿಣಿ ಒಂದೇ ನಿಮಿಷದಲ್ಲಿ ಇಡೀ ಕಿಟಕಿಯನ್ನು ಕುಕ್ಕಿ ಕುಕ್ಕಿ ಪುಡಿ ಮಾಡಿ ಬಿಟ್ಟಿತು. ಅಷ್ಟರಲ್ಲಿ ಗಾಂಪ ಆಫೀಸಿಗೆ ಬಂದ. ಎಲ್ಲರೂ ಸುತ್ತುವರೆದು ನಿಂತಿರೋದು ನೋಡಿ, “ಏನು ನಡೀತಾ ಇದೆ ಇಲ್ಲಿ?” ಅಂತ ಕೇಳಿದ. ಅದಕ್ಕೆ ಒಬ್ಬ ಸಹೋದ್ಯೋಗಿ, “ಸರ್, ಇದು ಡೆಡ್ಲಿ ಗಿಣಿ” ಅಂದ. ಅದನ್ನು ಕೇಳಿದವನೇ ಗಾಂಪ ಎಂದಿನಂತೆ ಹೇಳಿದ “ಡೆಡ್ಲಿ ಗಿಣಿ, ಮೈ ಫುಟ್"...
***
ನಿಜ ಸಂಗತಿ
“ಒಬ್ಬ ಕೆಲಸದವಳು ಒಂದು ಕೊಠಡಿಯನ್ನು ಒಂದು ಗಂಟೆಯಲ್ಲಿ ಸ್ವಚ್ಛ ಮಾಡಿದರೆ, ಇಬ್ಬರು ಕೆಲಸದಾಳುಗಳು ಅದೇ ಕೊಠಡಿಯನ್ನು ಎಷ್ಟು ವೇಳೆಯಲ್ಲಿ ಸ್ವಚ್ಛ ಮಾಡುತ್ತಾರೆ?” ಗಣಿತ ಶಾಸ್ತ್ರದ ಅಧ್ಯಾಪಕಿ ತುಂಟಿ ಕಮಲೆಯನ್ನು ಕೇಳಿದರು.
ಕಮಲೆ: “ನಾಲ್ಕು ಗಂಟೆಗಳಲ್ಲಿ ಮೇಡಂ” ಎಂದುತ್ತರಿಸಿದಳು.
“ಏನು? ನಾಲ್ಕು ಗಂಟೆಗಳೇ? ಏಕೆ?” ಕೋಪದಿಂದ ಅಧ್ಯಾಪಕಿ ಪ್ರಶ್ನಿಸಿದಳು.
“ಮಿಸ್, ಅವರಿಬ್ಬರೂ ತಮ್ಮ ಹರಟೆಯಲ್ಲಿ ಆ ಕೆಲಸ ಮಾಡಿ ಮುಗಿಸೋದಕ್ಕೆ ಅಷ್ಟು ಹೊತ್ತು ತಗೋತಾರೆ" ಎಂದು ನಗುತ್ತಾ ಕಮಲೆ ಹೇಳಿದಳು.
***
ಹೊಡೀರಿ, ಸ್ವಾಮಿ ಹೊಡೀರಿ !
ಹಳ್ಳಿಯ ಒಂದು ಚಿಕ್ಕ ಶಾಲೆ. ಹುಡುಗ ಗಾಂಪ ಅಪರೂಪಕ್ಕೆ ಶಾಲೆಗೆ ಬರುತ್ತಿದ್ದ. ಒಂದು ದಿನ ಶಾಲೆಗೆ ಬಂದ ಗಾಂಪನನ್ನು ಬಹಳ ದಿನಗಳು ಗೈರು ಹಾಜರಾದುದಕ್ಕೆ ಮಾಸ್ತರು ಹೊಡೆಯುತ್ತಿದ್ದರು. ಅದೇ ಸಮಯಕ್ಕೆ ಸರಿಯಾಗಿ ಗಾಂಪನ ತಂದೆ ಆ ಕಡೆಗೆ ಬಂದರು. ಮಾಸ್ತರು ಗಾಂಪನಿಗೆ ಹೊಡೆಯುತ್ತಿದ್ದುದನ್ನು ನೋಡಿ ಹೇಳಿದರು:
“ಹೊಡೀರಿ, ಸ್ವಾಮಿ ಹೊಡೀರಿ ! ಊಟ ತಕೊಂಡು ಹೊಲಕ್ಕೆ ಹೋಗು ಅಂದ್ರೆ ಶಾಲೆಗೆ ಬಂದಿದ್ದಾನೆ ಈ ಕಪಿ!”
***
ಪ್ರಯೋಗ !
ಹುಡುಗು ಬುದ್ದಿಯ ಗಾಂಪಾನ ತುಂಟತನಕ್ಕೆ ಬೇಸತ್ತ ಟೀಚರ್ ಅವನ ತಾಯಿಗೆ ಈ ರೀತಿ ಚೀಟಿ ಬರೆದು ಕಳಿಸಿದರು: “ ನಿಮ್ಮ ಮಗ ಬಹಳ ತುಂಟನಾಗಿದ್ದಾನೆ. ಅವನು ಸದಾ ಹುಡುಗಿಯರ ಜೊತೆ ಇರುತ್ತಾನೆ. ಬೀಡಿ ಸಿಗರೇಟು ಸೇದುತ್ತಾನೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಅದಕ್ಕಾಗಿ ನಾನು ಅವನ ಮೇಲೊಂದು ಪ್ರಯೋಗ ಮಾಡಬೇಕೆಂದಿದ್ದೇನೆ. ಒಂದು ವೇಳೆ ಅದು ಸಫಲವಾದರೆ ಇದರಿಂದ ನಿಮ್ಮ ಮಗ ಮತ್ತೊಮ್ಮೆ ಹುಡುಗಿಯರ ಸಂಗ, ಧೂಮಪಾನ ಮೊದಲಾದುವುಗಳನ್ನು ಮಾಡುವುದಿಲ್ಲ ಎಂದು ನಂಬುತ್ತೇನೆ.”
ಮಾರನೇ ದಿನವೇ ಗಾಂಪಾ ಒಂದು ಚೀಟಿ ತಂದು ಟೀಚರ್ ಕೈಗೆ ಕೊಟ್ಟ. ಅದು ಅವನ ತಾಯಿಯದ್ದಾಗಿತ್ತು. ಅವಳು ಈ ರೀತಿ ಬರೆದಿದ್ದಳು: “ ನೀವು ನನ್ನ ಮಗನ ಮೇಲೆ ಪ್ರಯೋಗ ಮಾಡಲು ನನ್ನದೇನೂ ಅಭ್ಯಂತರವಿರುವುದಿಲ್ಲ. ಆದರೆ ಪ್ರಯೋಗ ಸಫಲವಾದರೆ ಆ ಪ್ರಯೋಗದ ಬಗ್ಗೆ ನನಗೂ ತಿಳಿಸಬೇಕು. ಏಕೆಂದರೆ ಅದನ್ನು ನಾನು ಅವನ ಅಪ್ಪನ ಮೇಲೆ ಪ್ರಯೋಗಿಸಬೇಕಾಗಿದೆ.”
ಟೀಚರ್ ಸ್ಥಂಭೀಭೂತಳಾದಳು. !
***
ವ್ಯಾಪಾರ
ಟೀಚರ್: ಹತ್ತು ರೂಪಾಯಿಗೆ ಹತ್ತು ಸೇಬುಗಳನ್ನು ಕೊಂಡರೆ ಒಂದೊಂದು ಸೇಬಿಗೆ ಏನಾಗುತ್ತದೆ?
ಗಾಂಪ: ಒಂದೊಂದು ಕೊಳೆತಿರುತ್ತದೆ.
ಟೀಚರ್: ಯಾಕೆ ಹಾಗಂತಿ?
ಗಾಂಪ: ಮತ್ತೆ ಹತ್ತು ರೂಪಾಯಿಗೆ ಹತ್ತು ಸೇಬು ಈ ಕಾಲದಲ್ಲಿ ಯಾರು ಕೊಡ್ತಾರೆ?!
***
(ಕೃಪೆ: ವಿಶ್ವವಾಣಿ ಮತ್ತು ಶಾಲಾ ಕಾಲೇಜುಗಳಲ್ಲಿ ಜೋಕುಗಳು)
ಚಿತ್ರ ಕೃಪೆ: ಅಂತರ್ಜಾಲ ತಾಣ