‘ಸಂಪದ' ನಗೆ ಬುಗ್ಗೆ - ಭಾಗ ೧೧

‘ಸಂಪದ' ನಗೆ ಬುಗ್ಗೆ - ಭಾಗ ೧೧

ಬಸ್ ಡ್ರೈವರ್ ಆಗ್ತೇನೆ!

ಗಾಂಪ: ಅಪ್ಪಾ, ನನಗೆ ಓದಿದ್ದು ತಲೆ ಹತ್ತುತ್ತಿಲ್ಲ, ನಾ ಇನ್ನು ಓದಲ್ಲ..

ಅಪ್ಪ : ಓದೋದಿಲ್ಲ ಅಂದರೆ ಏನು ಮಾಡ್ತೀಯಾ?

ಗಾಂಪ: ಬಸ್ ಓಡಿಸ್ತೀನಿ. ಆಮೇಲೆ ನಾನು ನನ್ನದೇ ಹೊಸ ಬಸ್ ತಗೋಳ್ತೀನಿ, ನನ್ನ ಹೆಂಡ್ತೀನ ಓದಿಸಿ ಡಿಸಿ ಮಾಡ್ತೀನಿ !

ಅಪ್ಪ: ಆಮೇಲೆ ಏನು ಮಾಡ್ತೀಯಾ?

ಗಾಂಪ: ಆಮೇಲೆ ನಿಮ್ಮ ಹೆಸರಿನಲ್ಲಿ ಒಂದು ಆಸ್ಪತ್ರೆ ಕಟ್ಟಿಸ್ತೀನಿ ಅಪ್ಪಾ..

ಅಪ್ಪ: (ಗಾಂಪನಿಗೆ ಹೊಡೆಯುತ್ತಾ) ಎಷ್ಟು ಸಲಾ ಹೇಳಿದ್ದೇನೆ, ಮತ್ತೆ ಮತ್ತೆ ಸೂರ್ಯವಂಶ ಫಿಲ್ಮ್ ನೋಡಬೇಡಾಂತ !

***

ಪ್ಲಾಸ್ಟಿಕ್ ಸರ್ಜರಿ

ಗಾಂಪ: ಡಾಕ್ಟ್ರೇ, ಪ್ಲಾಸ್ಟಿಕ್ ಸರ್ಜರಿಗೆ ಎಷ್ಟಾಗುತ್ತೆ?

ಡಾಕ್ಟರ್: ಐದು ಲಕ್ಷ ಆಗಬಹುದು.

ಗಾಂಪ: ಪ್ಲಾಸ್ಟಿಕ್ ನಾವೇ ತಂದುಕೊಟ್ಟರೆ ಸರ್ಜರಿ ಮಾಡ್ತೀರಾ? ಎಷ್ಟು ವೆಚ್ಚ ಆಗಬಹುದು?

ಡಾಕ್ಟರ್: ಆಗ ಸರ್ಜರಿ ನಾನು ಮಾಡಲ್ಲ, ನಿನ್ನ ಮನೆಯವರು, ಬಂಧು ಮಿತ್ರರು ಭರ್ಜರಿ ಹೂಹಾರ, ಊದುಬತ್ತಿ ಹಾಕಿ ನಿನ್ನ ಮೆರವಣಿಗೆ ಮಾಡಿಸುತ್ತಾರೆ

***

ಹರಿಯದ ಚರ್ಮ

“ಮನುಷ್ಯನ ದೇಹ ಬದಲಾದ ಪರಿಸ್ಥಿತಿಗೆ ತಕ್ಕಂತೆ ತಾನಾಗಿಯೇ ಹೊಂದಿಕೊಳ್ಳುತ್ತದೆ" ಎಂದು ವಿವರಿಸಿದ ಪ್ರೊಫೆಸರ್ ಅದಕ್ಕೆ ಒಂದು ಉದಾಹರಣೆ ಕೊಡುವಂತೆ ತಮ್ಮ ವಿದ್ಯಾರ್ಥಿಗಳತ್ತ ಕೇಳಿದರು.

ಆಗ ಗಾಂಪ “ನಮ್ಮತ್ತೆಯ ತೂಕ ವರ್ಷದಲ್ಲಿ ಇಪ್ಪತ್ತೈದು ಕೆಜಿಯಷ್ಟು ಹೆಚ್ಚಿದೆ. ಆದರೆ ಅವರ ಚರ್ಮ ಎಲ್ಲಿಯೂ ಹರಿದಿಲ್ಲ ಸಾರ್" ಎಂದು ಉತ್ತರಿಸಿದ.

***

ಅಯೋಗ್ಯರು

ಯಾವುದೇ ಪ್ರಶ್ನೆಗಳಿಗೆ ಸರಿಯುತ್ತರ ಬಾರದಿದ್ದುದರಿಂದ ಬೇಸರಗೊಂಡ ಅಧ್ಯಾಪಕರು, “ಅಯೋಗ್ಯರೆಲ್ಲಾ ಎದ್ದು ನಿಲ್ಲಿ" ಎಂದು ವಿದ್ಯಾರ್ಥಿಗಳನ್ನು ಗದರಿಸಿದರು. 

ಕೆಲಹೊತ್ತಿನ ನಂತರ ಒಬ್ಬನೇ ಒಬ್ಬ ವಿದ್ಯಾರ್ಥಿ ಎದ್ದು ನಿಂತ.

“ನೀನೊಬ್ಬನಾದರೂ ಅಯೋಗ್ಯ ಅಂತ ಒಪ್ಪಿದೆಯಾ? ಗುಡುಗಿದರು ಅಧ್ಯಾಪಕರು.

“ಹಾಗಲ್ಲ ಸರ್, ನೀವೊಬ್ಬರೇ ನಿಂತಿರುವುದನ್ನು ನೋಡಲಾರದೆ ನಾನೂ ನಿಂತೆ !” ಎಂದು ವಿದ್ಯಾರ್ಥಿ ಗಾಂಪ ಉತ್ತರಿಸಿದ.

***

ಸ್ವರ್ಗ-ನರಕ

ಶಿಕ್ಷಕರು ಪಾಠ ಮಾಡುತ್ತಾ, “ಕೆಟ್ಟದ್ದನ್ನು ಮಾಡುವವರು ನರಕಕ್ಕೆ, ಒಳ್ಳೆಯದನ್ನು ಮಾಡುವವರು ಸ್ವರ್ಗಕ್ಕೆ ಹೋಗ್ತಾರೆ" ಎಂದು ಹೇಳಿ, “ ನೀವು ಸ್ವರ್ಗಕ್ಕೆ ಹೋಗ್ತೀರೋ ಅಥವಾ ನರಕಕ್ಕೋ” ಎಂದು ಕೇಳಿದರು. 

ಎಲ್ಲಾ ವಿದ್ಯಾರ್ಥಿಗಳು ಸ್ವರ್ಗಕ್ಕೆ ಎಂದರು. ಶಿಕ್ಷಕರು ಹಿಂದಿನ ಬೆಂಚಿನಲ್ಲಿ ಉತ್ತರಿಸದೇ ಕುಳಿತಿದ್ದ ಗಾಂಪನ ಬಳಿ ಕಾರಣ ಕೇಳಿದರು. ಆಗ ಗಾಂಪ “ ಸರ್, ನಾನು ಸ್ವರ್ಗಕ್ಕೂ ಹೋಗಲ್ಲ, ನರಕಕ್ಕೂ ಹೋಗಲ್ಲ, ಶಾಲೆ ಬಿಟ್ಟ ಕೂಡಲೇ ಮನೆಗೆ ಬಾ ಎಂದು ಅಮ್ಮ ಹೇಳಿದ್ದಾಳೆ" ಎಂದ. 

***

ಪ್ರಬಂಧ

ಅಧ್ಯಾಪಕರು ವಿದ್ಯಾರ್ಥಿಗಳಿಗೆ “ನಾನು ಒಂದು ಕಂಪೆನಿಗೆ ಅಧ್ಯಕ್ಷನಾದರೆ.."ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಲು ಸೂಚಿಸಿದರು.

ಎಲ್ಲಾ ವಿದ್ಯಾರ್ಥಿಗಳು ಕೂಡಲೇ ಪ್ರಬಂಧ ಬರೆಯಲು ಪ್ರಾರಂಭಿಸಿದರು. ಆದರೆ ಗಾಂಪ ಮಾತ್ರ ಸುಮ್ಮನೇ ಕುಳಿತಿದ್ದ. 

“ನೀನ್ಯಾಕೆ ಸುಮ್ಮನೇ ಕುಳಿತಿದ್ದೀಯಾ? ಪ್ರಬಂಧ ಬರೆಯೋಲ್ವಾ ಗಾಂಪಾ?” ಎಂದು ಅಧ್ಯಾಪಕರು ಪ್ರಶ್ನಿಸಿದರು.

“ನಾನು ನನ್ನ ಸೆಕ್ರೆಟರಿಗಾಗಿ ಕಾಯುತ್ತಿದ್ದೇನೆ ಸರ್!” ಅಂದ ಗಾಂಪ.

***

(ಕೃಪೆ: ‘ಶಾಲಾ ಕಾಲೇಜುಗಳಲ್ಲಿ ಜೋಕುಗಳು’ ಪುಸ್ತಕ) 

ಚಿತ್ರ ಕೃಪೆ: ಅಂತರ್ಜಾಲ ತಾಣ