‘ಸಂಪದ' ನಗೆ ಬುಗ್ಗೆ - ಭಾಗ ೧೨

‘ಸಂಪದ' ನಗೆ ಬುಗ್ಗೆ - ಭಾಗ ೧೨

ರಮ್ ತಗೊಂಡು ಬಾ…

ಗಾಂಪ ಯಾವಾಗಲೂ ಸಿಕ್ಕಾಪಟ್ಟೆ ಕುಡೀತಿದ್ದ. ಅವನು ಕುಡಿದರೆ ಅವನಿಗೆ ಮೈ ಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಗಾಂಪ ಮನೆಯಲ್ಲೇ ಕುಡಿಯುತ್ತಿದ್ದುದರಿಂದ ಅವನ ಶ್ರೀಮತಿಗೆ ಇದರ ಅನುಭವ ಹಲವಾರು ಬಾರಿ ಆಗಿತ್ತು. ಇದರಿಂದ ಬೇಸತ್ತು ಹೋಗಿತ್ತು. ಆದರೆ ಗಾಂಪ ಅದನ್ನು ನಂಬಲು ತಯಾರಿರಲಿಲ್ಲ. ನಾನು ಎಷ್ಟೇ ಕುಡಿದರೂ ಅಲರ್ಟ್ ಆಗಿಯೇ ಇರುತ್ತೇನೆ, ನಂಗೆಲ್ಲಾ ಗೊತ್ತಾಗುತ್ತೆ, ಅಂತಾನೇ ವಾದ ಮಾಡ್ತಾ ಇದ್ದ. ಒಂದು ದಿನ ಇವತ್ತು ತನ್ನ ಗಂಡನಿಗೆ ಅವನು ಕುಡಿದ ಮೇಲೆ ಮೈಮೇಲೆ ಜ್ಞಾನ ಇರಲ್ಲ ಅನ್ನೋದನ್ನ ಪ್ರೂವ್ ಮಾಡೇ ಮಾಡ್ತೀನಿ ಅಂತ ಚಾಲೆಂಜ್ ಮಾಡಿದಳು. ಸರಿ ಗಾಂಪ ಕೂಡಾ ಈ ಚಾಲೆಂಜಿಗೆ ಒಪ್ಪಿಕೊಂಡ. ಸರಿ ಒಂದು ದಿನ ಗಾಂಪ ೩ ಲಾರ್ಜ್ ವಿಸ್ಕಿ ಕುಡಿದು ಟೈಟಾದ. ಮನೆಯಲ್ಲೇ ಎಣ್ಣೆ ಸ್ಟಾಕ್ ಇಟ್ಟಿರುತ್ತಿದ್ದುದರಿಂದ ಶ್ರೀಮತಿಗೆ ‘ಇನ್ನೊಂದು ಲಾರ್ಜ್ ವಿಸ್ಕಿ ತಕೊಂಡು ಬಾ’ ಎಂದ. ತಗೊಂಡು ಬಂದು ಕೊಟ್ಟಳು ಶ್ರೀಮತಿ. ಅದನ್ನು ಕುಡಿದ ನಂತರ ಮೊದಲೇ ಪ್ಲ್ಯಾನ್ ಮಾಡಿದ್ದಂತೆ ಗಾಂಪನನ್ನು ಹಿಗ್ಗಾಮುಗ್ಗಾ ಬಾರಿಸತೊಡಗಿದಳು ಶ್ರೀಮತಿ. ಗಾಂಪ ನೆಲದ ಮೇಲೆಲ್ಲಾ ಬಿದ್ದು ಹೊರಳಾಡಿದ ನಂತರ ಎದ್ದು ಶ್ರೀಮತಿ ಮುಖ ನೋಡಿ, ‘ಮತ್ತೆ, ಇನ್ನೊಂದು ಲಾರ್ಜ್ ವಿಸ್ಕಿ ತಗೊಂಡ್ ಬಾ’ ಅಂದ. ವಿಸ್ಕಿ ರಿಪೀಟ್ ಆದಂತೆ ಅದನ್ನು ಕುಡಿದ ನಂತರ ಶ್ರೀಮತಿ ಒದೆ ಕೂಡ ರಿಪೀಟ್ ಆಯ್ತು. ಒದೆ ತಿಂದು ಬಿದ್ದು, ಮತ್ತೆ ಎದ್ದು ಹೆಂಡತಿ ಮುಖವನ್ನು ಗುರಾಯಿಸಿದ ಗಾಂಪ, ಮತ್ತೆ ಹೇಳಿದ ‘ಇನ್ನೊಂದು ಲಾರ್ಜ್ ವಿಸ್ಕಿ ತಗೊಂಡು ಬಾ’. ‘ಓ, ಈಗ ನನ್ನ ಗಂಡನಿಗೆ ಎಷ್ಟು ಕುಡಿದರೂ ತನ್ನ ಸುತ್ತ ಮುತ್ತ ಏನಾಗ್ತಾ ಇದೆ ಅಂತ ಗೊತ್ತಾಗ್ತಿದೆಯಲ್ಲ ಸಾಕು' ಅಂತ ಶ್ರೀಮತಿ ಖುಷಿಯಾಗಿ ಇನ್ನೊಂದು ತಗೊಂಡ್ ಬಂದ್ ಕೊಟ್ಲು. ಮತ್ತೆ ಏಟನ್ನೂ ಕೊಟ್ಟಳು. ಈ ಸಲ ಒದೆ ತಿಂದು ಕೆಳಗೆ ಬಿದ್ದು, ಹೆಂಡ್ತಿಯನ್ನು ಗುರಾಯಿಸಿದ ಗಾಂಪ ಹೇಳಿದ ‘ ಇನ್ನೊಂದು ಲಾರ್ಜ್ ರಮ್ ತಗೊಂಡು ಬಾ’ ಅದಕ್ಕೆ ಶ್ರೀಮತಿ ‘ಅಲ್ಲಾರೀ, ನೀವು ಆವಾಗದಿಂದ ವಿಸ್ಕಿ ಅಲ್ವಾ ಕುಡಿತಾ ಇರೋದು? ಅಂದ್ಳು. ಅದಕ್ಕೆ ಗಾಂಪ ಹೇಳಿದ. ‘ವಿಸ್ಕಿ ಕುಡಿತಾ ಇದ್ದೀನಿ ಅಂತ ನಂಗೊತ್ತು. ನಾನು ಅಲರ್ಟ್ ಆಗೇ ಇದ್ದೀನಿ. ಆದ್ರೆ, ವಿಸ್ಕಿ ಕುಡಿದ್ರೆ ಯಾಕೋ ಆವಾಗಿಂದ ಸಿಕ್ಕಾಪಟ್ಟೆ ಮೈಕೈ ನೋವಾಗ್ತಿದೆ. ಅದಕ್ಕೆ ಈ ಸಲ ರಮ್ ತಗೊಂಡ್ ಬಾ.'

***

ಆಲಸ್ಯ

ಉಪಾಧ್ಯಾಯರು ವಿದ್ಯಾರ್ಥಿಗಳಿಗೆ “ಆಲಸ್ಯ ಎಂದರೇನು?” ಎಂಬ ವಿಷಯದ ಕುರಿತು ಒಂದು ಲೇಖನ ಬರೆಯಲು ತಿಳಿಸಿದರು.

ವಿದ್ಯಾರ್ಥಿಗಳೆಲ್ಲರೂ ಲೇಖನ ಬರೆದು ಉಪಾಧ್ಯಾಯರಿಗೆ ಕೊಟ್ಟರು. ಗಾಂಪನ ಉತ್ತರ ಪತ್ರಿಕೆಯಲ್ಲಿ ಯಾವುದೇ ಉತ್ತರವನ್ನು ಬರೆದಿರಲಿಲ್ಲ. ಆದರೆ ಪುಟದ ಕೊನೆಯಲ್ಲಿ ಹೀಗೆ ಬರೆಯಲಾಗಿತ್ತು. - “ಇದೇ ಆಲಸ್ಯ"

***

ಸಹಾಯ

“ಗಾಂಪ, ಈ ಚಿತ್ರವನ್ನು ಬಿಡಿಸಲು ನಿನಗೆ ಯಾರು ಸಹಾಯ ಮಾಡಿದರು?” ಅಧ್ಯಾಪಕರ ಪ್ರಶ್ನೆ.

“ಯಾರೂ ಇಲ್ಲ ಸರ್" ಗಾಂಪನ ಉತ್ತರ.

“ ಸುಳ್ಳು ಹೇಳ್ತೀಯಾ? ನಿಜ ಹೇಳು ... ನಿನ್ನ ಅಣ್ಣ ನಿನಗೆ ಸಹಾಯ ಮಾಡಲಿಲ್ಲವೇ?”

“ಇಲ್ಲ ಸರ್, ಅವನು ಸಹಾಯ ಮಾಡಲಿಲ್ಲ. ಪೂರ್ತಿ ಚಿತ್ರ ಅವನೇ ಮಾಡಿ ಕೊಟ್ಟದ್ದು.” ಎಂದು ಸತ್ಯ ಒಪ್ಪಿಕೊಂಡ ಗಾಂಪ.

***

ಅಪಾಯ

ಗಣಿತದ ಉಪನ್ಯಾಸಕರೇ ಎನ್.ಸಿ.ಸಿ. ತರಭೇತಿಯನ್ನೂ ನೀಡುತ್ತಿದ್ದರು. ಒಂದು ದಿನ ಪರೇಡ್ ನಲ್ಲಿ ಪ್ರಥಮ ಚಿಕಿತ್ಸೆಯ ತರಭೇತಿಯನ್ನು ನಡೆಸಿಕೊಡುತ್ತಿದ್ದರು. ಆಗವರು ‘ಕೆಡೆಟ್ಸ್, ನೀವೆಲ್ಲಿಯಾದರೂ ಅಪಾಯದ ಸನ್ನಿವೇಶದಲ್ಲಿ ಸಿಕ್ಕಿಕೊಂಡಾಗ, “ಸಹಾಯ, ಸಹಾಯ" ಎಂದು ಜೋರಾಗಿ ಕಿರುಚಿಕೊಳ್ಳಬೇಕು' ಎಂದರು.

ಮರುದಿನ ಗಣಿತದ ತರಭೇತಿಯಲ್ಲಿ ಉಪನ್ಯಾಸಕರು “ಗಾಂಪ, ಬಾರೋ ಇಲ್ಲಿ, ಈ ಲೆಕ್ಕವನ್ನು ಬೋರ್ಡ್ ಮೇಲೆ ಮಾಡು ಎಂದರು. ಗಾಂಪನಿಗೆ ಎಷ್ಟು ತಲೆ ಕೆಡಿಸಿದರೂ ಆ ಲೆಕ್ಕವನ್ನು ಬಿಡಿಸಲಾಗಲಿಲ್ಲ. ಕಡೆಗೆ ಇದನ್ನೇ ಅಪಾಯದ ಸನ್ನಿವೇಶವೆಂದು ಅಂದುಕೊಂಡು “ಸಹಾಯ, ಸಹಾಯ" ಎಂದು ಕೂಗಿಯೇ ಬಿಟ್ಟ.!”

***

ಆಲ್ಕೋಹಾಲ್ ಪರಿಣಾಮ

ಆಲ್ಕೋಹಾಲ್ ನಿಂದಾಗುವ ದುಷ್ಪರಿಣಾಮಗಳನ್ನು ಪ್ರೊಫೆಸರ್ ವಿದ್ಯಾರ್ಥಿಗಳಿಗೆ ವಿವರಿಸುತ್ತಿದ್ದರು. ಅದು ಅಪಾಯಕಾರಿ ಎಂಬುದಕ್ಕೆ ಉದಾಹರಣೆ ಕೊಟ್ಟರು. ಅನಂತರ ಆ ಬಗ್ಗೆ ಪ್ರಯೋಗವನ್ನು ಪ್ರಾರಂಭಿಸಿದರು.

ಅವರು ಮೊದಲು ನೀರು ತುಂಬಿದ ಗಾಜಿನ ಪಾತ್ರೆಯನ್ನು ತೆಗೆದುಕೊಂಡರು. ಈಗ ಎಲ್ಲರೂ ನೋಡಿ ಎನ್ನುತ್ತಾ ಪಾತ್ರೆಯೊಳಗೆ ಒಂದು ಹುಳವನ್ನು ಹಾಕಿದರು. ಹುಳು ಬಹಳ ಕಷ್ಟಪಟ್ಟು ಸ್ವಲ್ಪ ಹೊತ್ತಿನ ನಂತರ ಹೊರಕ್ಕೆ ಬಂತು. ಆನಂತರ ಪ್ರೊಫೆಸರ್ ಅದೇ ಹುಳುವನ್ನು ಆಲ್ಕೋಹಾಲ್ ತುಂಬಿದ್ದ ಗಾಜಿನ ಪಾತ್ರೆಯೊಳಗೆ ಹಾಕಿದರು. ಹುಳು ಸತ್ತು ಹೋಯಿತು.

ಆಗ ಅವರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು: “ಎರಡು ಪ್ರಯೋಗಗಳನ್ನು ನೋಡಿದ್ದೀರಿ. ಇದರಿಂದ ನೀವು ತಿಳಿದುಕೊಳ್ಳುವ ಪಾಠ ಏನು?”

ತಕ್ಷಣ ಎದ್ದು ನಿಂತ ಗಾಂಪ ಉತ್ತರಿಸಿದ: “ನಾವು ಆಲ್ಕೋಹಾಲ್ ಕುಡಿದರೆ ಹುಳುವಿನ ಬಾಧೆಯೂ ಇರುವುದಿಲ್ಲ. ಹೊಟ್ಟೆಯೊಳಗೆ ಇರುವ ಹುಳಗಳೂ ಸತ್ತು ಹೋಗುತ್ತವೆ. ಇದೇ ಪಾಠ !” ಪ್ರೊಫೆಸರ್ ಅವಕ್ಕಾದರು.

***

(ಸಂಗ್ರಹ: ವಿಶ್ವವಾಣಿ ಮತ್ತು ‘ಶಾಲಾ ಕಾಲೇಜುಗಳಲ್ಲಿ ಜೋಕುಗಳು’ ಪುಸ್ತಕದ ಕೃಪೆಯಿಂದ) 

ಚಿತ್ರ ಕೃಪೆ: ಅಂತರ್ಜಾಲ ತಾಣ