‘ಸಂಪದ' ನಗೆ ಬುಗ್ಗೆ - ಭಾಗ ೧೨

‘ಸಂಪದ' ನಗೆ ಬುಗ್ಗೆ - ಭಾಗ ೧೨

ಆಫೀಸ್ ಬ್ರೀಫ್ ಕೇಸ್

ಗರ್ಲ್ ಫ್ರೆಂಡ್ ಜೊತೆ ಗಾಂಪ ಜಾಲಿ ಟ್ರಿಪ್ ಹೋಗಬೇಕು ಅಂತ ಡಿಸೈಡ್ ಮಾಡಿದ. ಆದರೆ ಹೆಂಡತಿಗೆ ಏನು ಸುಳ್ಳು ಹೇಳೋದು ಅಂತ ಯೋಚನೆ ಮಾಡಿದ. ಸರಿ ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬಿಸಿನೆಸ್ ಟೂರ್ ಇದೆ ಅಂತ ಹೆಂಡತಿ ಶ್ರೀಮತಿಗೆ ಸುಳ್ಳು ಹೇಳಿದ. ಬೆಳಿಗ್ಗೆ ಬೇಗನೇ ಹೋಗಬೇಕು ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು. ಬೆಳಿಗ್ಗೆ ಲೇಟ್ ಆಗುತ್ತೆ ಅಂತ ಹೇಳಿದ. ಆಫೀಸ್ ಬ್ರೀಫ್ ಕೇಸ್ ನಲ್ಲಿ ಈ ಎಲ್ಲಾ ಫೈಲ್ ಗಳನ್ನೂ, ಡಾಕ್ಯುಮೆಂಟ್ ಅನ್ನು ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್ ಕೇಸ್ ನಲ್ಲಿಡು. ಅಂದ ಹಾಗೆ ನನ್ನ ಆ ಬ್ಲೂ ಕಲರ್ ನೈಟ್ ಡ್ರೆಸ್ ಇಡೋದನ್ನು ಮಾತ್ರ ಮರೀಬೇಡ ಅಂತ ಹೆಂಡತಿಗೆ ಹೇಳಿ ಬಾತ್ ರೂಮ್ ಹೋದ ಗಾಂಪ. ಸರಿ ಶ್ರೀಮತಿ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಿಗ್ಗೆ ಬೇಗ ಎದ್ದವನೇ ಗಾಂಪ ಟೂರ್ ಹೊರಟ. ಆ ಮೂರು ದಿನಗಳಲ್ಲಿ ಶ್ರೀಮತಿ ಗಾಂಪನಿಗೆ ಎಷ್ಟು ಸಲ ಕಾಲ್ ಮಾಡಿದರೂ ರಿಸೀವ್ ಮಾಡಲಿಲ್ಲ. ನಾನು ಮೀಟಿಂಗ್ ನಲ್ಲಿದ್ದೇನೆ. ಬಿಸಿ ಇದ್ದೇನೆ ಅಂತ ಅಂತರ ಮೆಸೇಜ್ ಮಾಡುತ್ತಿದ್ದ.

ಸರಿ ಮೂರು ದಿನ ಕಳೆಯಿತು. ಗಾಂಪ ವಾಪಾಸ್ ಬಂದ. ಏನು ಬಿಸಿನೆಸ್ ಟೂರ್ ತುಂಬಾ ಬಿಸಿಯಾಗಿದ್ರಿ ಅನ್ಸುತ್ತೆ. ತುಂಬಾ ಸುಸ್ತಾಗಿದ್ದೀರ ಅಂದಳು ಶ್ರೀಮತಿ. ‘ಅಯ್ಯೋ, ಅದ್ಯಾಕ್ ಕೇಳ್ತೀಯಾ ಸಿಕ್ಕಾ ಪಟ್ಟೆ ಕೆಲಸ ಅಂದ ಗಾಂಪ, ಅದ್ಸರಿ, ನನ್ನ ಬ್ಲೂಕಲರ್ ನೈಟ್ ಡ್ರೆಸ್ ಪ್ಯಾಕ್ ಮಾಡು ಅಂತ ಹೇಳಿದ್ದೆ ಅಲ್ವಾ, ಅದನ್ನ ನೀನು ಮರೆತೇ ಬಿಟ್ಟಿದ್ದೀಯಾ’ ಅಂದ. ಅದಕ್ಕೆ ಶ್ರೀಮತಿ ಹೇಳಿದಳು ‘ಮರೆತಿರಲಿಲ್ಲ, ನಿಮ್ಮ ಪರ್ಸನಲ್ ಬ್ಯಾಗ್ ನಲ್ಲಿ ಜಾಗ ಇರಲಿಲ್ಲ ಅದಕ್ಕೇ, ಅದನ್ನ ಆಫೀಸ್ ಬ್ರೀಫ್ ಕೇಸ್ ನಲ್ಲಿ ಇಟ್ಟಿದ್ದೆ.’

***

ತಿರುಗುಬಾಣ

ಶಾಲಾ ಇನ್ಸ್ ಪೆಕ್ಟರ್ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಪರೀಕ್ಷಿಸಲು ಹಲವಾರು ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೋತ್ತರಗಳು ಮುಗಿದ ಬಳಿಕ ಗಾಂಪ ಎದ್ದು ನಿಂತು, “ನಾನೊಂದು ಪ್ರಶ್ನೆ ನಿಮ್ಮನ್ನು ಕೇಳಲೇ ಸರ್?” ಎಂದನು.ಇನ್ಸ್ ಪೆಕ್ಟರ್ ಒಪ್ಪಿದರು. ಆಗ ಗಾಂಪ “ಸರ್, ಒಂದು ಕತ್ತೆಯ ಬೆನ್ನಿನ ಮೇಲೆ ಅಕ್ಕಿ ತುಂಬಿದ ಒಂದು ಗೋಣಿ ಚೀಲ ಇದೆ. ಇನ್ನೊಂದು ಕತ್ತೆಯ ಬೆನ್ನಿನ ಮೇಲೆ ಎರಡು ಚೀಲಗಳಿವೆ. ಯಾವ ಕತ್ತೆಗೆ ಭಾರ ಜಾಸ್ತಿ?” ಎಂದನು.

ಇನ್ಸ್ ಪೆಕ್ಟರ್ ಕೂಡಲೇ “ಎರಡನೇ ಕತ್ತೆಗೆ ಅಲ್ಲವೇ?”ಎನ್ನಲು ಗಾಂಪ ಹೇಳಿದ “ ತಪ್ಪು ಸರ್, ಎರಡನೆಯ ಕತ್ತೆಯ ಮೇಲೆ ಇರೋದು ಬರೀ ಖಾಲಿ ಚೀಲಗಳು" ಎಂದಾಗ ಇನ್ಸ್ ಪೆಕ್ಟರ್ ತಬ್ಬಿಬ್ಬಾದರು.

***

ಗಂಡಭೇರುಂಡ

ಉಪಾಧ್ಯಾಯರು ಪಾಠ ಮಾಡುತ್ತಾ ನಡುವೆ “ಗಂಡಭೇರುಂಡ ಎಂದರೇನು? ಅದರ ಅರ್ಥ ಯಾರು ಹೇಳ್ತೀರಿ?” ಎಂದು ಕೇಳಿದಾಗ ಅಧಿಕ ಪ್ರಸಂಗಿ ಗಾಂಪ ಅತ್ಯಂತ ಉತ್ಸಾಹದಿಂದ “ನಾನು ಹೇಳುತ್ತೇನೆ ಸರ್" ಎಂದ.

“ಸರಿ, ಹೇಳು" ಎಂದರು ಉಪಾಧ್ಯಾಯರು.

“ಗಂಡ ಹೆಂಡತಿಯನ್ನು ಬಿಟ್ಟು ಬೇರೆಯಾಗಿ ಕುಳಿತು ಉಂಡ ಎಂದದರ ಅರ್ಥ !” ಎಂದ ಅಧಿಕ ಪ್ರಸಂಗಿ ಗಾಂಪ.

***

ಪ್ರಾಣತ್ಯಾಗಿ

ಒಬ್ಬ ಉಪಾಧ್ಯಾಯರು ವಿದ್ಯಾರ್ಥಿಗಳನ್ನುದ್ದೇಶಿಸಿ ಆದರ್ಶ ವ್ಯಕ್ತಿಯ ಬಗ್ಗೆ ಪಾಠ ಮಾಡಬೇಕಿತ್ತು. ಆಗ ಅವರು “ ನೋಡಿ ಮಕ್ಕಳೇ, ಯಾವ ವ್ಯಕ್ತಿ ತನ್ನ ಗುರಿಯ ಮೇಲೆ ಗಮನವಿಟ್ಟು ಯಾವ ಅಡೆತಡೆ ಬಂದರೂ ಲೆಕ್ಕಿಸದೆ ಧಾವಿಸುತ್ತಾನೋ, ಯಾವ ವ್ಯಕ್ತಿ ತನ್ನ ಗುರಿ ತಲುಪಲು ಪ್ರಾಣಬೇಕಾದರೂ ಕೊಡಲು ಮತ್ತು ತೆಗೆಯಲು ಸಿದ್ಧನಿರುತ್ತಾನೋ, ಅಂಥ ವ್ಯಕ್ತಿಗೆ ನೀವು ಏನನ್ನುತ್ತೀರಿ? ಎಂದು ವಿದ್ಯಾರ್ಥಿಗಳಿಗೆ ಕೇಳಿದರು.

ತಕ್ಷಣ ಗಾಂಪ ಅಂದ “ಎಕ್ಸ್ ಪ್ರೆಸ್ ಬಸ್ ಡ್ರೈವರ್ ಸರ್!”

 ***

ಕಾಗೆ ಪ್ರಬಂಧ !

ಪರೀಕ್ಷೆಯ ತಯಾರಿ ಜೋರಾಗಿ ನಡೆದಿತ್ತು. ಯಾರೋ ಹೇಳಿದರು ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಅದರಲ್ಲಿ ಕಾಗೆಯ ಬಗ್ಗೆ ಪ್ರಬಂಧ ಬರೆಯಿರಿ ಅನ್ನೋದು ಇದೆ ಅಂತ. ಗಾಂಪ ಸೇರಿ ಎಲ್ಲರೂ ಕಾಗೆಯ ಬಗ್ಗೆ ಪ್ರಬಂಧ ಬರೆಯಲು ತಯಾರಿ ನಡೆಸಿದರು. ಆದರೆ ಪರೀಕ್ಷೆಯ ದಿನ ಮಾತ್ರ ಎಲ್ಲಾ ಉಲ್ಟಾ ಆಗಿತ್ತು. ಪ್ರಬಂಧದ ವಿಷಯ ‘ಕ್ರಿಕೆಟ್ ಪಂದ್ಯಾಟ' ಎಂದಾಗಿತ್ತು. ಆದರೂ ಗಾಂಪ ಬಿಡುತ್ತಾನೆಯೇ? ಅವನು ಬಹಳ ಯೋಚಿಸಿ ಬರೆದ ಪ್ರಬಂಧ ಹೀಗಿತ್ತು.

“ಎರಡೂ ಶಾಲೆಗಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟವು ಏರ್ಪಾಡಾಗಿತ್ತು. ಪಂದ್ಯಾಟವು ಊರಿನ ಹೊರಗಿನ ಮೈದಾನದಲ್ಲಿ ಏರ್ಪಾಡಾದ ಕಾರಣ ಅಲ್ಲಿ ಹಲವಾರು ಮರಗಳಿದ್ದವು. ಮೊದಲು ಆಡಲು ಬಂದ ದಾಂಡಿಗ ಬಾಲ್ ಅನ್ನು ಜೋರಾಗಿ ಹೊಡೆದಾಗ ಅದು ಮರವೊಂದರಲ್ಲಿ ಕುಳಿತ ಕಾಗೆಗಳ ಗುಂಪಿನ ಒಂದು ಕಾಗೆಗೆ ಬಡಿಯಿತು. ಉಳಿದೆಲ್ಲಾ ಕಾಗೆಗಳು ಹಾರಿ ಹೋದರೂ ಆ ಒಂದು ಕಾಗೆಯು ಮಾತ್ರ ಉಳಿಯಿತು. ಆ ಕಾಗೆಯು..." ಎಂದು ಉತ್ಸಾಹದಿಂದ ಮತ್ತೆ ಮುಂದುವರೆದ ಪ್ರಬಂಧವೆಲ್ಲವೂ ಕಾಗೆಯ ಕುರಿತಾಗಿಯೇ ಇತ್ತು. !

***

ಕಾಣಲೇ ಇಲ್ಲ

ಶಿಕ್ಷಕ: ಗಾಂಪ, ನಿನ್ನೆ ಶಾಲೆಗೆ ಏಕೆ ಬರಲಿಲ್ಲ?

ಗಾಂಪ: ನಮ್ಮಪ್ಪ ಕಾಡು ತೋರಿಸಲು ನನ್ನನ್ನು ಕರೆದುಕೊಂಡು ಹೋಗಿದ್ದರು ಸರ್,

ಶಿಕ್ಷಕ: ಕಾಡು ಹೇಗಿತ್ತು?

ಗಾಂಪ: ಗಿಡ ಮರಗಳ ಗೊಂದಲದಲ್ಲಿ ನನಗೆ ಕಾಡೇ ಕಾಣಿಸಲಿಲ್ಲ ಸರ್!

(ವಿಶ್ವವಾಣಿ ಪತ್ರಿಕೆ ಮತ್ತು ಶಾಲಾ ಕಾಲೇಜುಗಳಲ್ಲಿ ಜೋಕುಗಳು ಪುಸ್ತಕದಿಂದ ಸಂಗ್ರಹಿತ)

ಸಾಂದರ್ಭಿಕ ಚಿತ್ರ ಕೃಪೆ: ಅಂತರ್ಜಾಲ ತಾಣ