‘ಸಂಪದ' ನಗೆ ಬುಗ್ಗೆ - ಭಾಗ ೧೪

ಅಪಘಾತ
ನ್ಯಾಷನಲ್ ಹೈವೇನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ದ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಗಾಂಪ ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಗಾಂಪನದ್ದೇನೂ ತಪ್ಪಿರಲಿಲ್ಲ. ಆಕೆಯೇ ಫಾಸ್ಟ್ ಆಗಿ ರಾಂಗ್ ಸೈಡ್ ನಲ್ಲಿ ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಗಾಂಪ ಅವಳ ಬಳಿ ಎಲ್ಲದರ ಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ಆದರೆ ಹುಡುಗಿಯನ್ನು ನೋಡಿ ಒಂದು ಕ್ಷಣ ಮೈಮರೆತ. ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತನಾಡಿದಳು. “ಇಲ್ನೋಡಿ, ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು?” ಅಂತ ಕೇಳಿದಳು. “ಏನು?” ಅಂದ ಗಾಂಪ. “ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ. ಅವನ ಮನಸ್ಸಿನಲ್ಲಿ ನಾವಿಬ್ಬರೂ ಜೊತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನಿಸುತ್ತೆ. ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿದ್ದಾನೆ.” ಅಂತ ರೋಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಕೇಳಿ ಗಾಂಪ ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು “ಅಲ್ನೋಡಿ, ನನ್ನ ಕಾರು ಅಷ್ಟೊಂದು ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಉಳಿದಿದೆ. ಇದರ ಅರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಘಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇದ್ದಾನೆ.”. ಗಾಂಪ ಹೌದು ಅಂತ ತಲೆ ಆಡಿಸಿದ. ತಕ್ಷಣ, ಗಾಂಪನಿಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಗಾಂಪನಿಗೆ ಗ್ಲಾಸ್ ಖಾಲಿ ಆದದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. “ಅದನ್ನೂ ಹೀರುತ್ತಾ ಗಾಂಪ, “ಅರೇ, ಬರೀ ನನಗೇ ಕುಡಿಸುತ್ತಿದ್ದೀಯಾ, ನೀನು ಕುಡಿಯಲ್ವಾ?” ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು “ಇಲ್ಲ, ನಾನು ಪೋಲೀಸರು ಬರ್ಲಿ ಅಂತ ಕಾಯ್ತಾ ಇದ್ದೀನಿ".
***
ಅದೇ ಹಸು !
ಅಧ್ಯಾಪಕ: ಲೋ ಗಾಂಪ, ನೀನು ಬರೆದಿರುವ ‘ಹಸು’ ಮೇಲಿನ ಪ್ರಬಂಧ, ನಿನ್ನ ಮುಂದಿನ ಬೆಂಚಿನ ಸೂರಿ ಬರೆದ ಹಾಗೇ ಇದೆಯಲ್ಲಾ?
ಗಾಂಪ: ಹೌದು ಸರ್! ನಾವಿಬ್ಬರೂ ಒಂದೇ ಹಸು ಮೇಲೆ ಪ್ರಬಂಧ ಬರೆದದ್ದು…
***
ಜಿರಾಫೆಯ ಕತ್ತು
ಕಾಡು ಪ್ರಾಣಿಗಳ ಬಗ್ಗೆ, ಅವುಗಳ ವಿಕಾಸದ ಬಗ್ಗೆ ಪಾಠ ಮಾಡಿದ ಬಳಿಕ ಉಪಾಧ್ಯಾಯರು ಗಾಂಪನ ಬಳಿ ಪ್ರಶ್ನೆ ಕೇಳಿದರು : ಗಾಂಪ, ಜಿರಾಫೆಗೆ ಉದ್ದವಾದ ಕುತ್ತಿಗೆ ಇರಲು ಕಾರಣವೇನು?
ಗಾಂಪ: ದೇಹದಿಂದ ಬಹಳ ದೂರದಲ್ಲಿರುವ ಅದರ ತಲೆಯನ್ನು ದೇಹಕ್ಕೆ ಜೋಡಿಸಲು ಸರ್ !
***
ರಾಮಾಯಣ
ಶಾಲಾ ಇನ್ಸ್ ಪೆಕ್ಟರ್: ರಾಮಾಯಣ ನಡೆದು ಎಷ್ಟು ವರ್ಷಗಳಾದುವು?
ಚತುರ ಗಾಂಪ: ೫೦೦೦ ವರ್ಷ, ೬ ತಿಂಗಳು.
ಇನ್ಸ್ ಪೆಕ್ಟರ್: ಅದೇನು, ಅಷ್ಟು ಕರಾರುವಕ್ಕಾಗಿ ಹೇಳುತ್ತೀಯಾ?
ಗಾಂಪ: ೬ ತಿಂಗಳ ಹಿಂದೆ ನಮ್ಮ ಉಪಾಧ್ಯಾಯರು ರಾಮಾಯಣ ನಡೆದು ೫೦೦೦ ವರ್ಷಗಳಾದವು ಎಂದು ಹೇಳಿದ್ದರು. ನಾನು ಅದಕ್ಕೆ ನಂತರದ ೬ ತಿಂಗಳು ಸೇರಿಸಿದೆ. ಅಷ್ಟೇ ಸರ್!
***
ಪಟ್ ಪಟ್
ಅಧ್ಯಾಪಕರು: ವಿದ್ಯಾರ್ಥಿಗಳೇ, ನಾಳೆ ಬರುವಾಗ ಇತಿಹಾಸವನ್ನು ಚೆನ್ನಾಗಿ ಓದಿಕೊಂಡು ಬರಬೇಕು. ಏನೇ ಪ್ರಶ್ನೆ ಕೇಳಿದರೂ ‘ಪಟ್ ಪಟ್ ‘ ಎಂದು ಉತ್ತರ ಕೊಡಬೇಕು. ತಿಳಿಯಿತೇ?
(ಮರುದಿನ) ಅಧ್ಯಾಪಕರು: ಲೋ ಗಾಂಪ, ಕರ್ನಾಟಕದ ರಾಜಧಾನಿ ಯಾವುದು ಹೇಳು?
ಗಾಂಪ: ಪಟ್ ಪಟ್ ಸರ್!
***
(ಕೃಪೆ: ವಿಶ್ವವಾಣಿ ಪತ್ರಿಕೆ ಮತ್ತು ಶಾಲಾ ಕಾಲೇಜುಗಳಲ್ಲಿ ಜೋಕುಗಳು ಪುಸ್ತಕ)
ಚಿತ್ರ ಕೃಪೆ: ಅಂತರ್ಜಾಲ ತಾಣ