‘ಸಂಪದ' ನಗೆ ಬುಗ್ಗೆ - ಭಾಗ ೧೫

‘ಸಂಪದ' ನಗೆ ಬುಗ್ಗೆ - ಭಾಗ ೧೫

ಕಮೀಷನ್

ಐದಾರು ವರುಷಗಳ ಹಿಂದೆ, ಕೇರಳದ ಶಾಸಕರೊಬ್ಬರು ಚಂಡೀಘಡಕ್ಕೆ ಹೋಗಿದ್ದರು. ಅವರನ್ನು ಪಂಜಾಬಿನ ಸಚಿವರೊಬ್ಬರು ಅವರ ಮನೆಗೆ ಊಟಕ್ಕೆ ಕರೆದರು. ಆ ಸಚಿವರ ಮನೆಯನ್ನು ನೋಡಿದ ಕೇರಳದ ಶಾಸಕರು ಹೌಹಾರಿ, ಇಷ್ಟೊಂದು ಸಂಪತ್ತು ಹೇಗೆ ಬಂತು?' ಎಂದು ಕೇಳಿದರು. ಸಚಿವರು 'ನಾಳೆ ಹೇಳುತ್ತೇನೆ' ಅಂದರು.

ಮಾರನೇ ದಿನ ಸಚಿವರು ಕೇರಳದ ಶಾಸಕರನ್ನು ತನ್ನ ಹೊಂಡಾ ಕಾರಿನಲ್ಲಿ ಕರೆದುಕೊಂಡು ಪ್ರಯಾಣ ಹೊರಟರು. ಹಲವಾರು ಮೈಲಿ ಸಾಗಿದ ನಂತರ ಒಂದು ಕಣಿವೆಯ ಬಳಿ ಕಾರು ನಿಲ್ಲಿಸಿದರು. ಇಬ್ಬರೂ ಇಳಿದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಿರಬೇಕಾದರೆ, ಪಂಜಾಬಿ ಸಚಿವರು ಕೇಳಿದರು: 'ಅಲ್ಲಿ ಆ ಕಣಿವೆಗೆ ಅಡ್ಡಲಾಗಿರುವ ಸೇತುವೆ ಕಾಣಿಸುತ್ತಿದೆಯೇ?'

ಕೇರಳ ಶಾಸಕ 'ಹೂಂ ಕಾಣುತ್ತಿದೆ' ಅಂದರು.  

'ಆ ಸೇತುವೆಯ ಅರ್ಧ ದುಡ್ಡು ನನ್ನ ಜೇಬಿಗೆ ಬಂತು' ಅಂದರು ಪಂಜಾಬಿ ಸಚಿವರು.

ಅದಾಗಿ ಕೆಲವು ವರುಷಗಳ ನಂತರ ಪಂಜಾಬಿನ ಸಚಿವರು ತಿರುವನಂತಪುರಕ್ಕೆ ಬಂದರು. ಅಷ್ಟು ಹೊತ್ತಿಗಾಗಲೇ ಕೇರಳದ ಶಾಸಕರು ಸಚಿವರಾಗಿದ್ದರು. ಅವರ ಮನೆ ನೋಡಿ ಪಂಜಾಬಿ ಸಚಿವರು ಗಾಬರಿ ಬಿದ್ದರು. 'ಇದೇನ್ರೀ, ಎಲ್ಲೆಲ್ಲೂ ತೇಗ, ಮಾರ್ಬಲ್ಲು, ಹೊಳೆಯುವ ದೀಪಗಳು. ಮರ್ಸಿಡಿಸ್ ಕಾರು.. ಇಷ್ಟೊಂದು ಸಂಪತ್ತು ಹೇಗೆ ಬಂತು?'

ಕೇರಳ ಸಚಿವರು 'ನಾಳೆ ಹೇಳುತ್ತೇನೆ' ಅಂದರು.

ಮಾರನೇ ದಿನ ಕೇರಳ ಸಚಿವರು ಪಂಜಾಬಿ ಸಚಿವರನ್ನು ತನ್ನ ಮರ್ಸಿಡಿಸ್ ಕಾರಿನಲ್ಲಿ ಕರೆದುಕೊಂಡು ಪ್ರಯಾಣ ಹೊರಟರು. ಹಲವಾರು ಮೈಲಿ ಸಾಗಿದ ನಂತರ ಒಂದು ಕಣಿವೆಯ ಬಳಿ ಕಾರು ನಿಲ್ಲಿಸಿದರು. ಇಬ್ಬರೂ ಇಳಿದು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಿರಬೇಕಾದರೆ, ಕೇರಳ ಸಚಿವರು ಕೇಳಿದರು: 'ಅಲ್ಲಿ ಆ ಕಣಿವೆಗೆ ಅಡ್ಡಲಾಗಿರುವ ಸೇತುವೆ ಕಾಣಿಸುತ್ತಿದೆಯೇ?'

ಪಂಜಾಬಿ ಸಚಿವರು ಕಣ್ಣು ಹೊರಳಿಸಿ, ಹಣೆಗೆ ಕೈ ಅಡ್ಡ ಹಿಡಿದು, ತಲೆಯನ್ನು ಅತ್ತಿತ್ತ ತಿರುಗಿ 'ಎಲ್ಲಿ, ಕಾಣಿಸುತ್ತಲೇ ಇಲ್ಲವಲ್ಲ' ಅಂದರು. ಕೇರಳ ಸಚಿವರು ಅರ್ಥಗರ್ಭಿತವಾಗಿ ಮುಗುಳ್ನಕ್ಕು 'ಆ ಸೇತುವೆಯ ಪೂರ್ತಿ ದುಡ್ಡು ನನ್ನ ಜೇಬಿಗೆ ಬಂತು' ಅಂದರು ಸಚಿವರು.

ಪತ್ರಕರ್ತ, ಕತೆಗಾರ, ಕಾದಂಬರಿಕಾರ ಖುಷ್‌ವಂತ್ ಸಿಂಗ್ ಸುಮಾರು ಮೂರು ದಶಕಗಳ ಹಿಂದೆ ಬರೆದ ತಮಾಷೆ ಇದು. ಆಗ ಇದನ್ನು ಓದುವಾಗ ಇದು ಭಯಂಕರ ಉತ್ಪ್ರೇಕ್ಷೆ ಅನ್ನಿಸುತ್ತಿತ್ತು. ಇದನ್ನು ಓದಿ ನಕ್ಕು ಬಿಡಬಹುದಾಗಿತ್ತು. ಯಾವುದಾದರೂ ಸಭೆಯಲ್ಲಿ ತಮಾಷೆಯಾಗಿ ಹೇಳಬಹುದಿತ್ತು.

ನಲವತ್ತು ಪರ್ಸೆಂಟ್ ಕತೆ, ಒಂದೇ ಮಳೆಗೆ ಕುಸಿದು ಬಿದ್ದ ಸ್ಟೇಡಿಯಂ ಛಾವಣಿ, ಒಂದೇ ಅಲೆಗೆ ಚಿಂದಿಯಾದ ತೇಲುಸೇತುವೆಗಳನ್ನು ನೋಡಿದಾಗ ಈ ಕತೆ ನೆನಪಾಯಿತು. ಈ ಸೇತುವೆಗಳೂ ಸ್ಟೇಡಿಯಂಗಳೂ ಉರುಳಿದ ಕಟ್ಟಡಗಳೂ ಕೆಟ್ಟ ರಸ್ತೆಗಳೂ ಪೂರ್ತಿಯಾಗದ ಮೇಲುಸೇತುವೆಗಳೂ ಯಾವ ಸಚಿವರ ಜೇಬಿನಲ್ಲಿದೆ ಅಂತ ಹುಡುಕಬೇಕಾಗಿದೆ.

ಖುಷ್‌ವಂತ್ ಸಿಂಗ್‌ಗೆ ಎಂಥ ರಾಜಕೀಯ ದೂರದರ್ಶಿತ್ವ ಇತ್ತು ಅಂದರೆ ಅವರು ಇಂಥ ದೃಶ್ಯವನ್ನೂ ಮೂವತ್ತು ವರುಷದ ಹಿಂದೆಯೇ ಊಹಿಸಿಕೊಳ್ಳಬಲ್ಲವರಾಗಿದ್ದರು.

ಕೃಪೆ-ಜೋಗಿ

***

ಬ್ಯಾಲೆನ್ಸ್ ಮಾಡಿ !

ಒಂದು ದಿನ ಒಬ್ಬ ವ್ಯಕ್ತಿ ತುಂಬಾ ಫಾಸ್ಟಾಗಿ ಹೋಗ್ತಾ ಇದ್ದ. ಹೈವೇನಲ್ಲಿ ಟ್ರಾಫಿಕ್ ಪೋಲೀಸ್ ಹಿಡಿದ್ರು, ಯಾಕೆ ಓವರ್ ಸ್ಪೀಡಿಂಗ್ ಮಾಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ ಅದಕ್ಕೆ ಫಾಸ್ಟ್ ಆಗಿ ಹೋಗ್ತಾ ಇದ್ದೆ ಅಂದ. ಏನಂತ ಅರ್ಜೆಂಟ್ ಕೆಲ್ಸ ? ಎಲ್ಲಿ ಕೆಲ್ಸ ಮಾಡೋದು ನೀನು? ಏನು ನಿನ್ನ ಕೆಲ್ಸ? ಅಂತ ಕೇಳಿದ್ರು ಪೋಲೀಸ್. ಅದಕ್ಕೆ ಆ ವ್ಯಕ್ತಿ ‘ನಾನು ಸರ್ಕಸ್ ನಲ್ಲಿ ಕೆಲ್ಸ ಮಾಡೋದು, ಅಲ್ಲಿ ನಾನು ಬ್ಯಾಲೆನ್ಸಿಂಗ್ ಕೆಲ್ಸ ಮಾಡ್ತೀನಿ. ಒಂದ್ ಇಪ್ಪತ್ತು ರಿಂಗ್ ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ, ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡೋದು ನನ್ನ ಕೆಲಸ ಅಂದ. ಅದಕ್ಕೆ ಪೋಲೀಸ್ ಇನ್ಸ್ ಪೆಕ್ಟರ್ ನಿನ್ನ ನಂಬೋದು ಹೆಂಗೆ?, ಎಲ್ಲಿ, ಒಂದ್ಸಲ ಇಲ್ಲೇ ಮಾಡಿ ತೋರಿಸು ಅಂದ. ಪೋಲೀಸ್ ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಗಾಂಪ ಕಾರಿನಲ್ಲಿ ಬಂದ. ಗಾಂಪ ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ. ಪೋಲೀಸ್ ಅವನನ್ನು ನೋಡಿ, ಕೈ ತೋರಿಸಿ ಗಾಡಿ ನಿಲ್ಲಿಸಿ, ಇವ್ರದ್ದು ಮುಗಿದ ಮೇಲೆ ನಿಮ್ಮನ್ನು ಚೆಕ್ ಮಾಡ್ತೀನಿ, ಗಾಡಿ ಸೈಡಿಗೆ ಹಾಕಿ ಅಂತ ಹೇಳಿದ. ಸರಿ, ಇವರಿಬ್ಬರೂ ಮಾತಾಡ್ತಾ ಇರೋದನ್ನ ಮೊದಲೇ ಗಮನಿಸಿದ್ದ ಗಾಂಪ ಅಲ್ಲೇ ಸೈಡಲ್ಲಿ ನಿಂತುಕೊಂಡ. ಪೋಲೀಸ್ ಮತ್ತೆ ಆ ಮೊದಲನೇ ವ್ಯಕ್ತಿಯ ಬಳಿ ಹೋದ. ಆ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ಸರಿ ನನ್ನ ಕಾರಿನಲ್ಲಿ ಒಂದಷ್ಟು ರಿಂಗ್ ಇದ್ದಾವೆ, ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆನ್ಸ್ ಮಾಡಿ ತೋರಿಸು ಅಂದ ಪೋಲೀಸ್. ಆ ವ್ಯಕ್ತಿ ಒಪ್ಪಿಕೊಂಡು ಪೋಲೀಸ್ ತಂದುಕೊಟ್ಟ ಆ ರಿಂಗ್ ಗಳನ್ನು ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡಿ ತೋರಿಸಿದ. ಅದನ್ನು ನೋಡಿ ಪೋಲೀಸ್ ಗೆ ಅವನು ಸರ್ಕಸ್ ನಲ್ಲಿ ಕೆಲಸ ಮಾಡ್ತಾ ಇದ್ದಾನೆ ಅಂತ ನಂಬಿಕೆ ಬಂತು. ಸರಿ, ನೀನಿನ್ನು ಹೊರಡು ಅಂತ ಅವನನ್ನು ಕಳಿಸಿದ. ಇದನ್ನು ನೋಡಿದ ಗಾಂಪ, ತನ್ನ ಕಾರನ್ನು ಅಲ್ಲೇ ಬಿಟ್ಟು, ಸೀದಾ ಹೋಗಿ ಪೋಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ. ಪೋಲೀಸ್ ಗೆ ಆಶ್ಚರ್ಯ ಆಯ್ತು. ಯಾಕೇ ನೀನೇ ಬಂದು ಪೋಲೀಸ್ ಕಾರಿನಲ್ಲಿ ಕೂತೆ ಅಂತ ಕೇಳಿದ್ದಕ್ಕೆ ಗಾಂಪ ಹೇಳಿದ ಅಯ್ಯೋ, ಅಷ್ಟೆಲ್ಲಾ ರಿಂಗ್ ಎಸೆದು ಬ್ಯಾಲೆನ್ಸ್ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ. ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾಗಿದ್ದೀನಿ. ಅರೆಸ್ಟ್ ಮಾಡಿ ನನ್ನ.

(ವಿಶ್ವವಾಣಿ ಕೃಪೆ)

ಚಿತ್ರ ಕೃಪೆ: ಅಂತರ್ಜಾಲ ತಾಣ