‘ಸಂಪದ' ನಗೆ ಬುಗ್ಗೆ - ಭಾಗ ೧೬

‘ಸಂಪದ' ನಗೆ ಬುಗ್ಗೆ - ಭಾಗ ೧೬

ಪಾಸ್ ವರ್ಡ್ ಕುದುರೆ!

ಗಾಂಪ ಬಹಳ ದೊಡ್ದ ಸಾಹುಕಾರನಾಗಿದ್ದ. ಆತ ಒಮ್ಮೆ ಭಾರೀ ದುಡ್ಡು ಕೊಟ್ಟು ಒಂದು ಕುದುರೆ ಖರೀದಿಸಿದ. ಆದರೆ ಅದು ಎಲ್ಲಾ ಸಾಮಾನ್ಯ ಕುದುರೆಗಳಂತೆ ಇರಲಿಲ್ಲ. ಅದರ ಮಾಲೀಕ ಇವನಿಗೆ ಆ ಕುದುರೆ ಮಾರುವಾಗ ಹೇಳಿದ್ದ, ಇದು ಓಡಲು ಶುರು ಮಾಡಲು ಮತ್ತು ನಿಲ್ಲಲು ಎರಡು ಪಾಸ್ ವರ್ಡ್ ಗಳಿವೆ. ಅದರ ಮೇಲೆ ಕುಳಿತು, ಜೀನು ಹಿಡಿದು ‘ಥ್ಯಾಂಕ್ಸ್ ಗಾಡ್' ಎಂದರೆ ತಕ್ಷಣ ಗಂಟೆಗೆ ೧೦೦ ಕಿಮೀ ವೇಗದಲ್ಲಿ ನೆಗೆದು ಓಡುತ್ತದೆ. ಅದೇ ಜೀನು ಹಿಡಿದು ‘ಓ ಮೈ ಗಾಡ್' ಎಂದರೆ ತಕ್ಷಣ ನಿಲ್ಲುತ್ತದೆ. ಅಂತಹ ವಿಶೇಷ ಕುದುರೆ ಸಿಕ್ಕಿದ್ದಕ್ಕೆ ಖುಷಿಯಾದ ಸಾಹುಕಾರ ಗಾಂಪ ಅವನು ಕೇಳಿದಷ್ಟು ದುಡ್ಡು ಕೊಟ್ಟು ಕುದುರೆಯನ್ನು ತನ್ನ ಲಾರಿಯಲ್ಲಿ ಹೇರಿಕೊಂಡು ಮನೆಗೆ ತಂದ. ಮರುದಿನ ಈ ವಿಶೇಷ ಕುದುರೆಯನ್ನು ಪರೀಕ್ಷಿಸಬೇಕು ಎಂದು ಕೊಂಡು ಅದನ್ನು ಲಾರಿಯಿಂದ ಹೊರತೆಗೆದು ಮೇಲೆ ಹತ್ತಿ ಕುಳಿತು, ಜೀನು ಹಿಡಿದು ‘ಥ್ಯಾಂಕ್ಸ್ ಗಾಡ್' ಎಂದ ಕುದುರೆ ಓಡಲು ಶುರು ಮಾಡಿತು. ಕುದುರೆ ಎಷ್ಟು ವೇಗವಾಗಿ ಹೋಗುತ್ತಿತ್ತು ಎಂದರೆ ಸಾಹುಕಾರನಿಗೆ ಅದು ಓಡುತ್ತಿರುವುದೇ ಗೊತ್ತಾಗದೇ ಹಾಗೇ ನಿದ್ರೆ ಬಂದಂತೆ ಎನಿಸುತ್ತಿತ್ತು. ಹಾಗೇ ಮೈಮರೆತು ಕಣ್ಣು ಮುಚ್ಚಿಕೊಂಡಿದ್ದವನು ಇದ್ದಕ್ಕಿದ್ದಂತೆ ಕಣ್ಣು ತೆರೆದರೆ ಕುದುರೆ ಯಾವುದೋ ಅಪರಿಚಿತ ಕಾಡಿನ ಕಾಲು ದಾರಿಯಲ್ಲಿ ನುಗ್ಗುತ್ತಿತ್ತು. ಕೊಂಚ ಗಾಬರಿಯಾದವನು ಕುದುರೆಯನ್ನು ನಿಲ್ಲಿಸಬೇಕೆಂದುಕೊಂಡ. ಆದರೆ ಅವನಿಗೆ ನಿಲ್ಲಿಸುವ ಪಾಸ್ ವರ್ಡ್ ಮರೆತುಹೋಗಿತ್ತು. ಅಷ್ಟರಲ್ಲಿ ಕುದುರೆ ಪ್ರಪಾತವೊಂದರ ಸಮೀಪಕ್ಕೆ ಬಂದಿತ್ತು. ಇನ್ನೇನು ಕುದುರೆ ತೀರಾ ಪ್ರಪಾತದ ಹತ್ತಿರ ಬಂದಾಗ ಕೆಳಗೆ ಬಗ್ಗೆ ಅದರ ಆಳ ನೋಡಿದ ಗಾಂಪನ ಹೃದಯ ಒಮ್ಮೆ ಕಂಪಿಸಲಾರಂಭಿಸಿ, ಒಮ್ಮೆಲೇ ಗಾಬರಿಯಿಂದ ‘ಓ ಮೈ ಗಾಡ್' ಎಂದು ಕೂಗಿದ. ಅದು ಪಾಸ್ ವರ್ಡ್ ಗೆ ಮ್ಯಾಚ್ ಆದುದರಿಂದ ಕುದುರೆ ಪ್ರಪಾತದ ಅಂಚಿಗೆ ಬಂದು ಕೊನೇ ತುದಿಯಲ್ಲಿ ನಿಂತಿತು. ಇವನಿಗೆ ಹೋದ ಜೀವ ಬಂದಂತಾಗಿ ನಿಟ್ಟುಸಿರು ಬಿಟ್ಟು ಮೆಲ್ಲನೆ ತನ್ನಷ್ಟಕ್ಕೆ ತಾನು ಹೇಳಿಕೊಂಡ ‘ಥ್ಯಾಂಕ್ಸ್ ಗಾಡ್'. ಅಷ್ಟೇ ಈ ಕತೆ ಮತ್ತು ಸಾಹುಕಾರ ಗಾಂಪನ ಕತೆ ಎರಡೂ ಮುಗಿಯಿತು. !

***

ಉಡುಗೊರೆ

ತಂಗಿ: ಅಣ್ಣಾ, ಅಜ್ಜಿಯ ಹುಟ್ಟಿದ ಹಬ್ಬಕ್ಕೆ ಅವಳಿಗೆ ಏನು ಉಡುಗೊರೆ ಕೊಡುತ್ತೀಯಾ?

ಅಣ್ಣ ಗಾಂಪ: ಫುಟ್ ಬಾಲ್ ಕೊಡುತ್ತೇನೆ !

ತಂಗಿ: ಆದರೆ ಅಜ್ಜಿಗೆ ಫುಟ್ ಬಾಲ್ ಆಡೋಕೆ ಆಗಲ್ಲವಲ್ಲ?

ಗಾಂಪ: ಮತ್ತೆ ನನ್ನ ಹುಟ್ಟಿದ ಹಬ್ಬಕ್ಕೆ ‘ರಾಮ ಚರಿತ ಮಾನಸ' ಕೊಟ್ಟಿದ್ದರು ಗೊತ್ತಾ?

ತಂಗಿ: ಹಾಗಾದರೆ ನಾನೂ ಬಾಸ್ಕೆಟ್ ಬಾಲ್ ಕೊಡುತ್ತೇನೆ. ನನ್ನ ಹುಟ್ಟಿದ ಹಬ್ಬಕ್ಕೂ ಅವರು ‘ಕುರುಕ್ಷೇತ್ರ' ಪುಸ್ತಕ ಕೊಟ್ಟಿದ್ದರು.

***

ಶಾಲೆಗೆ ಚೆಕ್ಕರ್..

ಅಜ್ಜ: ಗಾಂಪ, ನಿನ್ನ ಶಾಲೆಯ ಟೀಚರ್ ಬರುತ್ತಿದ್ದಾರೆ. ಬಚ್ಚಿಟ್ಟುಕೊ !

ಗಾಂಪ : ಅಯ್ಯೋ ಅಜ್ಜಾ, ಮೊದಲು ನೀನು ಬಚ್ಚಿಟ್ಟು ಕೋ!

ಅಜ್ಜ: ಯಾಕೆ ನಾನು ಬಚ್ಚಿಟ್ಟು ಕೊಳ್ಳಬೇಕು? ನೀನಲ್ಲವೇ ಇವತ್ತು ಶಾಲೆಗೆ ಚೆಕ್ಕರ್ ಹಾಕಿದ್ದು?

ಗಾಂಪ: ಅಯ್ಯೋ ಅಜ್ಜ ! ನೀನು ಸತ್ತಿದ್ದೀಯಾ ಅಂತ ಟೀಚರ್ ಗೆ ಕಾರಣ ಹೇಳಿ ನಾನು ಶಾಲೆಗೆ ಚೆಕ್ಕರ್ ಹಾಕಿದ್ದೆ. !

***

ಫೋಟೋ...!

ಗಾಂಪ: ಸರ್, ಈ ಫೋಟೋಗಳು ಯಾರದ್ದು?

ಪೋಲೀಸ್: ತಪ್ಪಿಸಿಕೊಂಡ ಕಳ್ಳರದ್ದು ಮಾರಾಯ!

ಗಾಂಪ: ಮತ್ತೆ ಇಲ್ಲಿ ಏಕೆ ಅಂಟಿಸಿದ್ದೀರಾ?

ಪೋಲೀಸ್: ಅವರನ್ನು ಪತ್ತೆ ಮಾಡಿ ಸೆರೆ ಹಿಡಿಯಲು !

ಗಾಂಪ: ಅಲ್ಲಾ ಸರ್, ಅವರ ಫೋಟೋಗಳನ್ನು ತೆಗೆಯುವಾಗಲೇ ಏಕೆ ಸೆರೆ ಹಿಡಿಯಲಿಲ್ಲ?!

***

ಅಡ್ಮಿಟ್

ಸೂರಿ: ನಿನ್ನೆ ನಿನ್ನನ್ನು ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರಂತೆ. ಹೌದಾ? ಅಂಥದ್ದು ಏನಾಗಿತ್ತು ನಿಂಗೆ?

ಗಾಂಪ: ಏನೂ ಆಗಿರಲಿಲ್ಲ. ನನ್ನ ಫೋನ್ ನೆಟ್ ಬ್ಯಾಲೆನ್ಸ್ ಮುಗಿದಿತ್ತು. ಅದಕ್ಕೆ ರಾತ್ರಿ ಎಂಟಕ್ಕೆಲ್ಲ ಮಲ್ಕೊಂಡು ಚೆನ್ನಾಗಿ ನಿದ್ರೆ ಮಾಡ್ಬಿಟ್ಟೆ. ಅದರಿಂದ ಗಾಬರಿಗೊಂಡ ಮನೆಯವರು ಆರೋಗ್ಯ ಕೆಟ್ಟಿದೆ ಅಂತ ಅಂದ್ಕೊಂಡು ಆಸ್ಪತೆಗೆ ಅಡ್ಮಿಟ್ ಮಾಡಿದ್ರು.

***

(ಕೃಪೆ: ವಿಶ್ವವಾಣಿ, ಗುಬ್ಬಚ್ಚಿ ಗೂಡು ಮತ್ತು ಸುಧಾ ಪತ್ರಿಕೆಗಳು)