‘ಸಂಪದ' ನಗೆ ಬುಗ್ಗೆ - ಭಾಗ ೧೮
ಮಳೆ ಬರಲು…
ಹಿಂದೆ ಮಳೆ ಬರದ ಆಫ್ರಿಕಾ ದೇಶದ ಒಂದು ಬುಡಕಟ್ಟಿನ ನಾಯಕ ತನ್ನ ಜನರಲ್ಲಿ ಬುದ್ಧಿವಂತ ಎಂದು ತೋರುತ್ತಿದ್ದವನನ್ನು ವಿದೇಶಗಳಿಗೆ ಕಳಿಸಿದ - ಉಳಿದ ದೇಶಗಳಲ್ಲಿ ಮಳೆ ಬರದಿದ್ದರೆ ಏನು ಮಾಡುತ್ತಾರೆ ಎಂದು ತಿಳಿದು ಬರಲು.
ಆ ಪ್ರಭೃತಿ ಅನೇಕ ದೇಶ ಸುತ್ತಿ ಕಡೆಗೆ ಇಂಗ್ಲೆಂಡಿಗೆ ಹೋಗಿ ಮರಳಿದ. ತನ್ನ ನಾಯಕನಿಗೆ ಹೇಳಿದ ಮಳೆ ಬರುವಂತೆ ಮಾಡುವ ವಿದ್ಯೆ ತನಗೆ ಅರ್ಥವಾಗಿದೆ ಎಂದ.
ಅವನು ಹೇಳಿದ ; ಮಳೆ ಬರದ ಕಡೆ ನಮ್ಮ ನಡುವಿನಷ್ಟು ಎತ್ತರಕ್ಕೆ ಬರುವ ಮೂರು ಕೋಲು ನೆಡಿ. ಸ್ವಲ್ಪ ದೂರದಲ್ಲೇ ಮತ್ತೆ ಅದೇ ರೀತಿ ಮೂರು ಕೋಲು. ಬಿಳಿಯ ಬಟ್ಟೆ ಹಾಕಿಕೊಂಡು ಒಂದು ಕಡೆಯ ಕೋಲುಗಳ ಹಿಂದೆ ಒಬ್ಬ ನಿಲ್ಲಲಿ. ಆ ಕಡೆಯ ಕೋಲುಗಳ ಮುಂದೆ ಒಬ್ಬ ನಿಂತು ಕೈಯಲ್ಲಿ ದೊಡ್ದ ಕೋಲು ಹಿಡಿಯಲಿ. ಈ ಕಡೆಯ ಕೋಲಿನತ್ತ ಒಬ್ಬ ಓಡಿ ಬರಲಿ, ಇಂಗ್ಲೆಂಡಿನಲ್ಲಿ ಹೀಗೆ ಮಾಡಿದಾಗಲೆಲ್ಲಾ ಮಳೆ ಬರುತ್ತಿತ್ತು. ನಮ್ಮಲ್ಲೂ ಟ್ರೈ ಮಾಡೋಣ ಎಂದ. ಅದು ಟಿವಿಗಳಿಲ್ಲದ ಕಾಲ. ಇಂಗ್ಲೆಂಡಿನಲ್ಲಿ ಕ್ರಿಕೆಟ್ ಮ್ಯಾಚ್ ಶುರು ಮಾಡಿದಾಗಲೆಲ್ಲಾ ಮಳೆ ಬಂದು ಆಟ ಕೆಡಿಸುತ್ತಿತ್ತು. ಅದನ್ನು ಬಾರಿ ಬಾರಿ ನೋಡುತ್ತಿದ್ದ ಈ ಆಫ್ರಿಕಾ ವ್ಯಕ್ತಿ ಮಳೆ ಬರಿಸುವ ‘ರಿಚುಯಲ್' ಇದು ಎಂದು ಭಾವಿಸಿ ತನ್ನವರಿಗೆ ಹೀಗೆ ವರದಿ ಮಾಡಿದನಂತೆ.
(ವೈಯೆನ್ಕೆ ಕೊನೆ ಸಿಡಿ ಪುಸ್ತಕದಿಂದ)
***
ಮಕ್ಕಳ ಸಾಧನೆ
ನಾಲ್ಕು ಜನ ವಯಸ್ಸಾದ ನಾಗರಿಕರು ಕ್ಲೋಸ್ ಫ್ರೆಂಡ್ ಗಳಾಗಿದ್ದು, ಒಂದೇ ಊರಿನವರಾಗಿದ್ದಕ್ಕೆ ಆಗಾಗ ಸಿಗುವ ಅಭ್ಯಾಸ ಇತ್ತು. ಸಿಕ್ಕಾಗ ಮಾತಾಡೋಕೆ ಮಾತುಗಳಿಗೇನೂ ಬರವಿರಲಿಲ್ಲ. ತಮ್ಮ ಹಳೆಯ ದಿನಗಳ ಬಗ್ಗೆ, ಜೀವನದಲ್ಲಿ ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ತಾ ಇದ್ರು. ಒಂದು ದಿನ ಹೀಗೇ ಮಾತನಾಡುವಾಗ ಮಕ್ಕಳ ವಿಷಯ ಬಂತು. ಮೊದಲ ಯಜಮಾನ್ರು ಹೇಳಿದ್ರು ಅಯ್ಯೋ ನನ್ನ ಮಗ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾನೆ. ಪ್ರತಿ ತಿಂಗಳು ನನಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿಯುತ್ತಾನೆ ಅನ್ಸುತ್ತೆ. ಇಲ್ಲಾಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಅಂತ ಒಂದ್ ಡೈಮಂಡ್ ನೆಕ್ಲೇಸ್ ಕೊಡ್ಸೋಕಾಗ್ತಿತ್ತಾ? ಅಂತ ಮಗನ ಬಗ್ಗೆ ಹೇಳಿಕೊಂಡರು. ಅದನ್ನು ಕೇಳಿ ಇನ್ನೊಬ್ಬ ಯಜಮಾನರಿಗೆ ಉತ್ಸಾಹ ಬಂತು. ಅಯ್ಯೋ, ನನ್ನ ಮಗನೂ ಬೆಂಗಳೂರಿನಲ್ಲಿ ಇದ್ದಾನೆ. ಚಾರ್ಟರ್ಡ್ ಅಕೌಂಟೆಂಟ್. ಪ್ರತೀ ತಿಂಗಳೂ ನನಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ. ಇಲ್ಲಾಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಅಂತ ಒಂದು ಕಾರ್ ಕೊಡ್ಸೋಕಾಗ್ತಿತ್ತಾ? ಅಂತ ಹೇಳಿಕೊಂಡರು. ಮೂರನೇಯ ಯಜಮಾನ್ರು ಶುರು ಮಾಡಿದ್ರು, ಅಯ್ಯೋ, ನನ್ ಮಗ ಬೆಂಗಳೂರಲ್ಲಿ ಡಾಕ್ಟರ್. ಪ್ರತಿ ತಿಂಗಳು ನಂಗೆ ದುಡ್ಡು ಕಳಿಸ್ತಾನೆ. ಸಿಕ್ಕಾಪಟ್ಟೆ ದುಡಿತಾನೆ ಅನ್ಸುತ್ತೆ. ಇಲ್ಲಾಂದ್ರೆ ಹೋದ್ ತಿಂಗಳು ಅವನ ಗರ್ಲ್ ಫ್ರೆಂಡ್ ಗೆ ಗಿಫ್ಟ್ ಅಂತ ಒಂದ್ ಫ್ಲಾಟ್ ಕೊಡ್ಸೋಕಾಗ್ತಿತ್ತಾ? ಅಂತ ಹೇಳಿಕೊಂಡರು. ಆಗ ಕೊನೆಯವರ ಸರದಿ, ಅವರೂ ಮೆಲ್ಲನೆ ಶುರು ಮಾಡಿಕೊಂಡ್ರು, ನನ್ ಮಗಳೂ ಬೆಂಗಳೂರಲ್ಲೇ ಇದ್ದಾಳೆ. ನಂಗೆ ಪ್ರತೀ ತಿಂಗಳು ದುಡ್ಡು ಕಳಿಸ್ತಾಳೆ. ಆದ್ರೆ ಏನ್ ಕೆಲಸ ಮಾಡ್ತಾಳೆ ಅಂತ ಗೊತ್ತಿಲ್ಲ. ಆದ್ರೂ, ಚೆನ್ನಾಗೇ ದುಡೀತಾ ಇದ್ದಾಳೆ. ತುಂಬಾ ಬುದ್ಧಿವಂತೆ ಅನ್ಸುತ್ತೆ. ಇಲ್ಲಾಂದ್ರೆ ಒಂದೇ ತಿಂಗಳಲ್ಲಿ ಅವಳಿಗೆ ಗಿಫ್ಟ್ ಅಂತ ಒಂದ್ ಕಾರು, ಒಂದು ಡೈಮಂಡ್ ನೆಕ್ಲೇಸ್, ಒಂದ್ ಫ್ಲಾಟ್ ಸಿಗ್ತಾ ಇತ್ತಾ?
(ವಿಶ್ವವಾಣಿ ಸಂಗ್ರಹ)
***
ಹೆಣ ವ್ಯವಹಾರ
ಒಬ್ಬ ಶ್ರೀಮಂತ ನೀರಿನಲ್ಲಿ ಮುಳುಗಿ ಹೋದ. ಅವನ ಹೆಣ ಯಾರಿಗೂ ಸಿಕ್ಕದೆ ಕೊನೆಗೊಬ್ಬ ಮೀನುಗಾರನಿಗೆ ಸಿಕ್ಕಿತು. ಶ್ರೀಮಂತನ ಕುಟುಂಬದವರು ಹೋಗಿ ಹೆಣ ಬಿಟ್ಟು ಕೊಡುವಂತೆ ಕೇಳಿದಾಗ ಅವನು ತುಂಬ ಚಿನ್ನ ಕೊಡುವಂತೆ ಕೇಳಿದ. ಏನು ಮಾಡಬೇಕೆಂದು ತಿಳಿಯದೆ ಅವರು ಡೆಂಗ್ ಕ್ಷಿ ಎಂಬ ಬುದ್ದಿವಂತನ ಬಳಿಗೆ ಹೋಗಿ ಸಲಹೆ ಕೇಳಿದರು.
ಡೆಂಗ್ ಹೇಳಿದ: “ಕಾದು ನೋಡಿ. ಆ ಹೆಣ ನಿಮಗಲ್ಲದೆ ಬೇರೆ ಯಾರಿಗೆ ಬೇಕು?”
ಶ್ರೀಮಂತನ ಕುಟುಂಬಸ್ಥರು ಹಾಗೇ ಮಾಡಿದರು. ಈಗ ಮೀನುಗಾರನಿಗೆ ಕಳವಳವಾಗತೊಡಗಿತು. ಅವನೂ ಡೆಂಗ್ ನ ಬಳಿ ಹೋಗಿ ಸಲಹೆ ಕೇಳಿದ.
ಡೆಂಗ್ ಹೇಳಿದ: “ಕಾದು ನೋಡು, ಅವರಿಗೆ ಆ ಹೆಣ ನಿನ್ನಲ್ಲಲ್ಲದೇ ಬೇರೆಲ್ಲಿ ಸಿಕ್ಕೀತು?”
***
ಬೆಕ್ಕನ್ನು ಬಿಡುವುದು
ಮನೆಯಲ್ಲಿ ಬೆಕ್ಕುಗಳ ಸಂಖ್ಯೆ ಹೆಚ್ಚಾಗುತ್ತದೆಂದು, ಒಬ್ಬ ಒಂದು ಬೆಕ್ಕನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ಅದನ್ನು ದೂರದಲ್ಲಿ ಬಿಟ್ಟು ಬಂದ. ಅವನು ಹಿಂದೆ ಬರುವುದರೊಳಗೆ ಬೆಕ್ಕು ಮನೆಗೆ ಹಿಂದಿರುಗಿ ಆಗಿತ್ತು. ಅವನು ಬೆಕ್ಕನ್ನು ಇನ್ನೂ ದೂರ ಬಿಟ್ಟು ಬಂದ. ಆಗಲೂ ಅದು ಹಿಂದಿರುಗಿತು.
ಕೊನೆಗೆ ಅವನು ಬೆಕ್ಕನ್ನು ತುಂಬ ದೂರಕ್ಕೆ ಕೊಂಡು ಹೋಗಿ, ಒಂದು ದಟ್ಟ ಕಾಡಿನ ನಟ್ಟನಡುವೆ ಬಿಟ್ಟುಬಿಟ್ಟ. ಆದರೆ ಈಗ ಮನೆಗೆ ಹಿಂದಿರುಗುವ ದಾರಿ ಅವನಿಗೇ ತಿಳಿಯದೆ ಕಂಗಾಲಾಗಿ ನಿಂತ. ಕೊನೆಗೆ ಬೆಕ್ಕಿನ ಹಿಂದೆಯೇ ನಡೆದು ಮನೆ ಸೇರಿದ.
(‘ತುಷಾರ’ ಮಾಸಿಕದಿಂದ ಸಂಗ್ರಹಿತ)
***
ಚಿತ್ರ ಕೃಪೆ: ಅಂತರ್ಜಾಲ ತಾಣ