‘ಸಂಪದ' ನಗೆ ಬುಗ್ಗೆ - ಭಾಗ ೨೩

‘ಸಂಪದ' ನಗೆ ಬುಗ್ಗೆ - ಭಾಗ ೨೩

ತಾಜ್ ಮಹಲ್

ಶಿಕ್ಷಕಿ : ಮಕ್ಕಳೆ ತಾಜ್ ಮಹಲ್ ಎಲ್ಲಿ ಇದೆ ಅಂತಾ ಹೇಳಿ ನೋಡೋಣ?

ಗಾಂಪ :  ಆಗ್ರಾ 

ಶಿಕ್ಷಕಿ : ತಪ್ಪು ಅದು ಹುಬ್ಬಳ್ಳಿಯಲ್ಲಿ ಇದೆ !

ಎಲ್ಲ ಹುಡುಗರು ಯೋಚಿಸೋಕ್ಕೆ ಶುರು ಮಾಡಿದರು. ಏನು ಅರ್ಥ ಆಗದೆ ಮನೆಗೆ ಹೋಗಿ ತಮ್ಮ ತಮ್ಮ ಪಾಲಕರಿಗೆ ಹೇಳಿದರು. ಮರುದಿನನೇ ಎಲ್ಲ ಪಾಲಕರು ಶಾಲೆಗೆ ಹೋಗಿ ಮುಖ್ಯೋಪಾಧ್ಯಾಯರ ಹತ್ತಿರ ದೂರು ಹೇಳಿದರು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ತಪ್ಪು ಪಾಠ ಹೇಳಿ ಕೊಡ್ತೀರಾ ಅಂತ !

ಮುಖ್ಯೋಪಾಧ್ಯಾಯರು : ಮೊದಲು ನೀವು ೯ ತಿಂಗಳ ಸ್ಕೂಲ್ ಫೀಸ್ ಕಟ್ಟಿರಿ, ಎಷ್ಟು ಸಾರಿ ಹೇಳಿ ಕಳುಹಿಸಿದರೂ ಶಾಲೆಯ ಕಡೆಗೆ ಬರೋದಿಲ್ಲ...ಎಲ್ಲಿಯವರೆಗೆ ಶಾಲಾ ಫೀಸ್ ಕಟ್ಟೋದಿಲ್ಲವೋ ಅಲ್ಲಿವರೆಗೂ ತಾಜ್ ಮಹಲ್ ಹುಬ್ಬಳ್ಳಿ ಅಲ್ಲೆ ಇರುತ್ತೆ. ! ....

***

ಬಾಗಿಲ ಶಬ್ಧ

ಮರೆಗುಳಿ ಪ್ರೊಫೆಸರ್ ಗಾಂಪ ಮತ್ತು ಅವರ ಮರೆಗುಳಿ ಶ್ರೀಮತಿ ಒಂದು ದಿನ ರಾತ್ರಿ ಊಟದ ಬಳಿಕ ವಿನೋದವಾಗಿ ಹರಟುತ್ತಾ ಮಲಗಿದ್ದರು. ಯಾವುದೋ ವಿಷಯವಾಗಿ ಚರ್ಚೆ ನಡೆಸುತ್ತಾ ಇರುವಾಗ ಬಾಗಿಲು ಬಡಿದ ಶಬ್ದವಾಯಿತು. ಗಾಬರಿಯಾದ ಪ್ರೊಫೆಸರ್ ಗಾಂಪಾ ಯಾರಿರಬಹುದು? ಎಂದರು ಶ್ರೀಮತಿಗೆ. ಶ್ರೀಮತಿಯೂ ಗಾಬರಿ ಬಿದ್ದು ನನ್ನ ಪತಿ ಬಂದಿರಬಹುದು ಎಂದರು. ಇದರಿಂದ ಇನ್ನಷ್ಟು ಗಾಬರಿಯಾದ ಗಾಂಪ ತನ್ನ ಕೋಟು, ಬೂಟು, ಕೊಡೆಗಳನ್ನೆಲ್ಲಾ ಹಿಡಿದುಕೊಂಡು ಹಿಂದಿನ ಬಾಗಿಲಿನತ್ತ ಓಡಿದರು.

***

ಯಾರಿಗೆ ಹೆದರಿಕೆ?

ಹಲ್ಲು ನೋವಿನಿಂದ ನರಳುತ್ತಿದ್ದ ಗಾಂಪ ವೈದ್ಯರ ಬಳಿ ಬಂದ. ಅವರು ಆ ಹಲ್ಲನ್ನು ಕೀಳಲು ಸಲಹೆ ನೀಡಿದರು. ಅದಕ್ಕೆ ಗಾಂಪ "ಅಯ್ಯೋ, ನನಗೆ ಹಲ್ಲು ತೆಗೆಸುವುದೆಂದರೆ ಹೆದರಿಕೆಯಾಗುತ್ತೆ ಡಾಕ್ಟ್ರೇ" ಎಂದ. ವೈದ್ಯರಿಗೆ ಎಲ್ಲಿ ಗಿರಾಕಿ ಕೈಬಿಟ್ಟು ಹೋಗುತ್ತದೋ ಎಂದು ಹೆದರಿ ಆತನಿಗೆ ಸ್ವಲ್ಪ ವಿಸ್ಕಿಯನ್ನು ಕುಡಿಸಿ, ಈಗ ಹೇಗಿದೆ? ಧೈರ್ಯ ಬಂತಾ?? ಎಂದರು. ಕುಡಿದು ಟೈಟಾದ ಗಾಂಪ "ಈಗ ಯಾರಾದ್ರೂ ನನ್ನ ಹಲ್ಲನ್ನು ಮುಟ್ಟಿದ್ರೆ ಅವರ ಹಲ್ಲನ್ನು ಉದುರಿಸಿ ಬಿಡುತ್ತೇನೆ" ಅನ್ನಬೇಕೇ...?

***

ರಕ್ಷೆ 

ಗಾಂಪ ತನ್ನ ಪಾದರಕ್ಷೆಗಳನ್ನು ಧರಿಸಿಕೊಂಡೇ ಪ್ರಾರ್ಥನೆ ಮಾಡುತ್ತಿದ್ದ. ಅವನ ಪಾದರಕ್ಷೆಗಳನ್ನು ಕದಿಯುವ ಅವಕಾಶಕ್ಕಾಗಿ ಕಾದುಕೊಂಡಿದ್ದ ಒಬ್ಬ ಕಳ್ಳ ಹೇಳಿದ "ಚಪ್ಪಲಿ ಹಾಕಿಕೊಂಡು ಹೇಳುವ ಪ್ರಾರ್ಥನೆ ಸ್ಥಿರವಾಗಿ ನಿಲ್ಲದು".

ಗಾಂಪ ಸಾವಧಾನದಿಂದ ಉತ್ತರಿಸಿದ "ಪ್ರಾರ್ಥನೆ ನಿಲ್ಲಲಿಕ್ಕಿಲ್ಲ. ಆದರೆ ಚಪ್ಪಲಿಯಾದರೂ ಸ್ಥಿರವಾಗಿ ಉಳಿಯಬಹುದಲ್ಲಾ!"

***

ಟಿವಿ ನೋಡ್ಲಾ?

ಗಾಂಪ: ಅಜ್ಜಿ, ನಿದ್ರೆ ಬರ್ತಾ ಇಲ್ಲ, ಟಿವಿ ನೋಡ್ಲಾ?

ಅಜ್ಜಿ: ಬೇಡ ಬಾರೋ ನನ್ನ ಜೊತೆ ಮಾತನಾಡುವಿಯಂತೆ.

ಗಾಂಪ: ನೀನು, ನಾನು, ಅಪ್ಪ, ಅಮ್ಮ, ಅಕ್ಕ ಮತ್ತು ಬೆಕ್ಕು ಸೇರಿ ಮನೆಯಲ್ಲಿ ಆರೇ ಜನ ಇರ್ತೀವಾ?

ಅಜ್ಜಿ: ಇಲ್ವೋ...ನೀನು ಮನೆಗೆ ನಾಯಿ ತರಬೇಕು ಅಂತಿದ್ದೆಯಲ್ಲ. ಅದು ಬಂದ್ರೆ ಏಳು ಆಗ್ತೀವಿ.

ಗಾಂಪ: ನಾಯಿ ತಂದರೆ ಬೆಕ್ಕನ್ನು ಕೊಂದು ಬಿಡುತ್ತೆ. ಆಮೇಲೆ ಮತ್ತೆ ಆರೇ ಆಗ್ತೀವಲ್ಲಾ?

ಅಜ್ಜಿ: ನೀನು ದೊಡ್ಡವನಾದ ಮೇಲೆ ಮದುವೆ ಆದಾಗ, ನಿನ್ನ ಹೆಂಡತಿ ಸಹ ಬರ್ತಾಳೆ. ಆಗ ಮತ್ತೆ ಏಳು ಆಗ್ತೀವಿ. 

ಗಾಂಪ: ಅಕ್ಕ ಮದುವೆಯಾಗಿ ಹೋಗ್ತಾಳೆ. ಆಗ ಮತ್ತೆ ಅಷ್ಟೇ ಇರ್ತೀವಲ್ವಾ?

ಅಜ್ಜಿ: ಇಲ್ಲಪ್ಪ... ನಿನಗೆ ಮಗು ಆಗುತ್ತಲ್ಲ. ಆಗ ಮತ್ತೆ ಏಳು ಆಗ್ತೀವಲ್ಲ.

ಗಾಂಪ: ಅಷ್ಟೊತ್ತಿಗೆ ನೀನು ಸತ್ತೋಗ್ತಿಯಲ್ಲ ಮತ್ತೆ ಆರೇ ಆಗೋದು.

ಅಜ್ಜಿ: ಅಯ್ಯೋ ಪಾಪಿ ಮುಂಡೇದೆ. ಹೋಗಿ ಟಿವಿ ನೋಡ್ಕೋ ಹೋಗು.

***

ಪ್ರತಿಕಾರ

ಶ್ರೀಮತಿ: ರೀ... ನಿಮ್ಮ ಗೆಳೆಯ ಮದುವೆ ಆಗ್ತಿರೋ ಹುಡುಗಿ ಸ್ವಲ್ಪಾನೂ ಚೆನ್ನಾಗಿಲ್ಲ. ನೀವಾದ್ರೂ ಹೇಳ್ಬಾರ್ದಾ?

ಗಾಂಪ: (ಸಿಟ್ಟಿನಿಂದ) ನಾನ್ಯಾಕೆ ಹೇಳಲಿ. ನಾನು ಮದುವೆ ಆಗುವಾಗ ಆ ಬಡ್ಡೀಮಗ ಏನಾದ್ರೂ ಹೇಳಿದ್ನಾ? ಸುಮ್ನೆ ಇದ್ನಲ್ಲಾ. ಈಗ ನಾನೂ ಸುಮ್ನೆ ಇರ್ತೀನಿ.

(ಸುಧಾ ಪತ್ರಿಕೆಯಿಂದ)

***

ಚಿತ್ರ ಕೃಪೆ: ಅಂತರ್ಜಾಲ ತಾಣ