‘ಸಂಪದ' ನಗೆ ಬುಗ್ಗೆ - ಭಾಗ ೨೯

‘ಸಂಪದ' ನಗೆ ಬುಗ್ಗೆ - ಭಾಗ ೨೯

ದೀಪ

ಗಾಂಪ ಮತ್ತು ಶ್ರೀಮತಿ ಮದುವೆ ಆಗಿ ಐದು ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್ ಗಳು, ಪಂಡಿತರು, ಎಲ್ಲ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂ ಮಾರ್ಕೆಟ್ ನಲ್ಲಿ ಹೋಗುತ್ತಿರುವಾಗ ಅಲ್ಲಿ ಶ್ರೀಮತಿಯ ತವರು ಮನೆಗೆ ಬರುತ್ತಿದ್ದ ಪೂಜಾರಿಯೊಬ್ಬ ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು. ಎಲ್ಲಾ ಸೌಖ್ಯವೇನಮ್ಮಾ ಎಂದು ಅವರು ಕೇಳಿದಾಗ ಶ್ರೀಮತಿ, ಜೀವನದಲ್ಲಿ ಎಲ್ಲಾ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲ ಎಂಬ ಕೊರಗನ್ನು ಹೇಳಿಕೊಂಡಳು. ಅದಕ್ಕೆ ಪೂಜಾರಿ, ಯೋಚನೆ ಮಾಡಬೇಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಧಿಯಲ್ಲಿ ನಿನ್ನ ಹೆಸರಿನಲ್ಲಿ ಒಂದು ದೀಪ ಹಚ್ತೀನಿ. ಎಲ್ಲಾ ಸರಿ ಹೋಗುತ್ತೆ ಎಂದ್ರು, ಅದಾಗಿ ಐದು ವರ್ಷ ಆಯ್ತು. ಒಂದು ದಿನ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದ ಹಾಗಾಯ್ತು. ಪೂಜಾರಿ ಎದ್ದು ಹೋಗಿ ಬಾಗಿಲು ತೆರೆದರೆ ಗಾಂಪ ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು. ಮಕ್ಕಳಾದ್ವಾ? ಅಂತ ಪೂಜಾರಿಯವರು ಕೇಳಿದ ತಕ್ಷಣ ಗಾಂಪ ಪೂಜಾರಿಯ ಕೈಯಲ್ಲಿ ೨೫ ಸಾವಿರ ಹಣ ಇಟ್ಟು, ದಯವಿಟ್ಟು ಇನ್ನೊಮ್ಮೆ ಕಾಶಿಗೆ ತಕ್ಷಣ ಹೋಗಿ ಬನ್ನಿ ಪೂಜಾರಿಯವರೇ ಅಂದ. ಯಾಕಪ್ಪಾ ಇನ್ನೂ ಮಕ್ಕಳಾಗಿಲ್ವಾ? ಅಂತ ಕೇಳಿದ್ದಕ್ಕೆ ಗಾಂಪ ಹೇಳಿದ ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ದಿನಾಲೂ ಎಣ್ಣೆ ಹಾಕ್ತಾ ಇದ್ದಾನೆ ಅನ್ಸುತ್ತೆ. ಶ್ರೀಮತಿ ಈಗಾಗಲೇ ೩ ಸಲ ಅವಳಿ ಜವಳಿ ಮಕ್ಕಳನ್ನ ಹೆತ್ತಿದ್ದಾಳೆ, ಇನ್ನು ನನ್ನ ಕೈಲಿ ತಡಕೊಳ್ಳೋಕಾಗಲ್ಲ, ಮೊದ್ಲು ಬೇಗ ಹೋಗಿ ಆ ದೀಪ ಆರಿಸಿ ಬನ್ನಿ !

('ವಿಶ್ವವಾಣಿ' ಪತ್ರಿಕೆಯಿಂದ)

***

ವಿಚ್ಛೇದನ

ನ್ಯಾಯಾಧೀಶ: ನಿಮಗೆ ವಿಚ್ಛೇದನ ಏಕೆ ಬೇಕು?

ಗಾಂಪ: ನನ್ನವಳು ಒಂದು ವರ್ಷದಿಂದ ನನ್ನೊಂದಿಗೆ ಮಾತೇ ಆಡುತ್ತಿಲ್ಲ !

ನ್ಯಾಯಾಧೀಶ: ಬಹಳ ಒಳ್ಳೆಯ ಹೆಂಡತಿ ಸಿಕ್ಕಿದ್ದಾಳೆ. ಇಂಥ ಹೆಂಡತಿ ಎಲ್ಲರಿಗೂ ಸಿಗಲ್ಲ, ನೀವು ಇನ್ನೊಮ್ಮೆ ಯೋಚನೆ ಮಾಡೋದು ಒಳ್ಳೆಯದು !

***

ಪೆನ್ಸಿಲ್

ಗಾಂಪ: ಸೂರಿ, ನೀನು ಬರೆಯುವ ಪ್ರೇಮ ಪತ್ರದಲ್ಲಿ ಹುಡುಗಿಯ ಹೆಸರನ್ನು ಮಾತ್ರ ಪೆನ್ಸಿಲ್ ನಲ್ಲಿ ಬರೆಯುತ್ತೀಯಲ್ಲಾ, ಏಕೆ?

ಸೂರಿ: ಒಂದು ವೇಳೆ ನನ್ನ ಪ್ರೇಮವನ್ನು ತಿರಸ್ಕರಿಸಿದರೆ ಆಕೆಯ ಹೆಸರನ್ನು ಅಳಿಸಿ ಹಾಕಿ ಬೇರೆಯವಳ ಹೆಸರು ಬರೆಯೋಕೆ.

***

ನಾಯಿ ಪ್ರದರ್ಶನ

ಶ್ರೀಮತಿ: ತಾರಾ, ನಿಮ್ಮ ಯಜಮಾನರ ಜೊತೆಯಲ್ಲಿ ಎಲ್ಲಿಗೋ ಹೊರಟಿರುವ ಹಾಗಿದೆ?

ತಾರಾ: ಹೌದು ಶ್ರೀಮತಿ, ಇಲ್ಲೆಲ್ಲೋ ನಾಯಿಗಳ ಪ್ರದರ್ಶನ ಏರ್ಪಡಿಸಿದ್ದರಂತಲ್ಲ, ಅಲ್ಲಿಗೆ ಕರ್ಕೊಂಡು ಹೋಗ್ತಾ ಇದ್ದೇನೆ. !

***

ಕಾರಣ !

ಮಗಳು: ಅಮ್ಮಾ, ನಮ್ಮ ಯಜಮಾನ್ರು ನಾನು ಹೇಳಿದ ತಕ್ಷಣ ಹೋಟೇಲ್ ಗೆ ಕರೆದುಕೊಂಡು ಹೋಗ್ತಾರೆ.

ಅಮ್ಮ: ನೀನೆಲ್ಲೊ ಬಲವಂತ ಮಾಡುತ್ತೀಯ ಅನ್ಸುತ್ತೆ.

ಮಗಳು: ಇಲ್ಲಮ್ಮ,'ರೀ... ಇವತ್ತು ಉಪ್ಪಿಟ್ಟು ಮಾಡ್ಲಾ' ಅಂದ ಕೂಡಲೇ ಹೋಟೇಲ್ ಗೆ ಕರೆದುಕೊಂಡು ಹೋಗ್ತಾರೆ!

***

(ಸುಧಾ ಪತ್ರಿಕೆಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ