‘ಸಂಪದ' ನಗೆ ಬುಗ್ಗೆ - ಭಾಗ ೩೪

‘ಸಂಪದ' ನಗೆ ಬುಗ್ಗೆ - ಭಾಗ ೩೪

ವಿಷದ ಲೆಕ್ಕ

ಗಾಂಪ ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದ. ಇಳುವರಿಯ ಸಮಯ. ಎಷ್ಟು ಕಷ್ಟ ಪಟ್ಟು ಕಾದರೂ ಹಣ್ಣುಗಳು ಕಳವಾಗುತ್ತಿದ್ದವು. ಏನು ಮಾಡುವುದೆಂದು ಯೋಚಿಸಿ ಕೊನೆಗೊಂದು ಯೋಚನೆ ಮಾಡಿದ ಗಾಂಪ ‘ಕಲ್ಲಂಗಡಿಗಳಲ್ಲಿ ಒಂದಕ್ಕೆ ವಿಷವನ್ನು ಚುಚ್ಚಿದ್ದೇನೆ. ತಿಂದವರು ಪ್ರಾಣ ಕಳೆದುಕೊಳ್ಳುತ್ತೀರಿ' ಎಂದು ಬೋರ್ಡ್ ಬರೆಯಿಸಿ ಹಾಕಿದ. ಅದಾಗಿ ಎರಡು ದಿನಗಳು ಕಳೆದವು. ಆ ಬೋರ್ಡಿನ ಕೆಳಗೆ ಇನ್ನೊಂದು ಚಿಕ್ಕ ಬೋರ್ಡ್ ಕಾಣಿಸಿಕೊಂಡಿತು. ಅದರಲ್ಲಿ ‘ವಿಷ ಇರುವ ಹಣ್ಣು ಒಂದಲ್ಲ ಎರಡು' ಎಂದಿತ್ತು. !

***

ದೂರ

ಗಾಂಪ: ಇಲ್ಲಿಂದ ರೈಲ್ವೇ ಸ್ಟೇಷನ್ ಗೆ ನಡೆದುಕೊಂಡು ಹೋಗಲು ಎಷ್ಟು ಸಮಯ ಬೇಕು?

ಸೂರಿ: ಸಾಮಾನ್ಯವಾಗಿ ಅರ್ಧ ಗಂಟೆ ಹಿಡಿಯುತ್ತದೆ. ಆದರೆ ನಮ್ಮ ನಾಯಿ ನಿಮ್ಮನ್ನು ನೋಡಿ ಬಿಟ್ಟರೆ ನೀವು ಹತ್ತೇ ನಿಮಿಷದಲ್ಲಿ ಸ್ಟೇಷನ್ ಗೆ ಹೋಗಿ ಬಿಡುತ್ತೀರಿ.

***

ಹೊಡೆತ

ಸೂರಿ: ನನ್ನ ತಂದೆ ಬಹಳ ಕೋಪಿಷ್ಟ.

ಗಾಂಪ: ನನ್ನ ಮಾವ ಬಹಳ ಸಿಟ್ಟಿನವರು

ಸೂರಿ: ನಿನ್ನ ಮಾವ ನಿನ್ನನ್ನು ಹೊಡೆದಿದ್ದಾರಾ?

ಗಾಂಪ: ಊಂ, ಒಮ್ಮೆ ಕೋಪದಿಂದ ಹೊಡೆಯಲು ಬೆಲ್ಟ್ ಬಿಚ್ಚಿದರು. 

ಸೂರಿ: ಹಾಂ, ಹೊಡೆದರೇ?

ಗಾಂಪ: ಇಲ್ಲ... ಅವರು ಬೆಲ್ಟ್ ಬಿಚ್ಚಿದೊಡನೆಯೇ ಅವರ ಪ್ಯಾಂಟ್ ಕೆಳಗೆ ಬಿತ್ತು !

***

ಬೆಲೆ ಇಲ್ಲ !

ಗಾಂಪ: ಡಾಕ್ಟ್ರೇ, ನನ್ನ ಮಗ ಹತ್ತು ಪೈಸೆ ನಾಣ್ಯ ನುಂಗಿ ಬಿಟ್ಟಿದ್ದಾನೆ. ದಯವಿಟ್ಟು ಏನಾದ್ರೂ ಮಾಡಿ.

ಡಾಕ್ಟರ್: ನೀವೇನೂ ಚಿಂತಿಸಬೇಡಿ, ಈಗಿನ ಕಾಲದಲ್ಲಿ ಹತ್ತು ಪೈಸೆ ನಾಣ್ಯಕ್ಕೆ ಬೆಲೆಯೇ ಇಲ್ಲ !

***

ಕದ್ದು ತಂದದ್ದು !

ಶ್ರೀಮತಿ: ಕೆಲಸದವಳು ನಮ್ಮನೆ ಹೊಸ ಟವಲ್ ಗಳನ್ನು ಕದ್ದಿರಬಹುದೆಂದು ನಮಗೆ ಅನುಮಾನ.

ಗಾಂಪ: ಯಾವುದು ಆ ಹೊಸ ಟವಲ್?

ಶ್ರೀಮತಿ: ಅದೇ, ನಾವು ಮೊನ್ನೆ ಟೂರ್ ಹೋದಾಗ ಸಂಗಮ್ ಹೋಟೇಲ್ ನಿಂದ ಕದ್ದು ತಂದಿದ್ದೇವಲ್ಲಾ!

***

ನಿಜ ಸಂಗತಿ !

ಕಬ್ಬಿಣದ ಅದಿರು ಸಿಗುವ ಬಳ್ಳಾರಿಯಲ್ಲಿ ಅಕ್ಷಯ ತೃತೀಯದ ದಿನ ನೆಲ ಅಗೆದರೆ ಅಲ್ಲಿ ಸಿಗುವ ಕಬ್ಬಿಣದ ಅದಿರು ಬಂಗಾರದ ಅದಿರಾಗುತ್ತದೆ ಎಂಬುದು ಗಾಂಪ ಮತ್ತು ಸೂರಿಯ ನಂಬಿಕೆ. ಹಾಗಾಗಿ ಹಿಂದಿನ ದಿನ ರಾತ್ರಿನೇ ಹೋಗಿ ಮೈನಿಂಗ್ ಏರಿಯಾದಲ್ಲಿ ಬೀಡು ಬಿಟ್ಟು ರಾತ್ರಿ ೧೨ ಗಂಟೆಯಿಂದ ನೆಲ ಅಗೆದು ಒಂದಿಷ್ಟು ಅದಿರನ್ನು ಶೇಖರಿಸಿ, ಬೆಳಿಗ್ಗೆ ಅದನ್ನು ಬೆಂಗಳೂರಿಗೆ ಸಾಗಿಸಲು ಕಾದು ಕುಳಿತಿದ್ದರು ಗಾಂಪ ಮತ್ತು ಸೂರಿ. ಬೆಳಿಗ್ಗೆ ಅಲ್ಲೇ ಲೋಕಲ್ ಹೆಲಿಕಾಪ್ಟರ್ ಒಂದನ್ನು ತರಿಸಿ, ಅದಿರನ್ನು ಅದಕ್ಕೆ ಲೋಡ್ ಮಾಡಲು ಪ್ರಾರಂಭಿಸಿದರು. ಹೆಲಿಕಾಪ್ಟರ್ ಪೈಲೆಟ್ ‘ಸರ್, ಇಷ್ಟೊಂದ್ ಭಾರ ಹಾಕಿದರೆ ನಮ್ ಹೆಲಿಕಾಪ್ಟರ್ ತಡ್ಕೊಳ್ಳೋದಿಲ್ಲ’ ಅಂದ. ಅದಕ್ಕೆ ಗಾಂಪ ನೀನ್ ನಾವು ಹೇಳಿದಷ್ಟು ಮಾಡು ಸಾಕು, ಲಾಸ್ಟ್ ಇಯರ್ ನಾವು ಇಂಥದ್ದೇ ಹೆಲಿಕಾಪ್ಟರ್ ನಲ್ಲಿ ಇಷ್ಟೇ ಅದಿರು ಸಾಗಿಸಿದ್ವಿ ಗೊತ್ತಾ? ಆ ಪೈಲೆಟ್ಟೂ ಹಿಂಗೇ ಹೇಳಿದ ನಿಮ್ಗೆಲ್ಲಾ ಏನೂ ಗೊತ್ತಾಗಲ್ಲ. ಎಂದು ದಬಾಯಿಸಿದ. ಸರಿ ಅಂತ ಪೈಲೆಟ್ ಸುಮ್ಮನಾದ. ಸರಿ, ಎಲ್ಲ ಹೇರಿಕೊಂಡು ಹೆಲಿಕಾಪ್ಟರ್ ಹೊರಟಿತು. ಆದರೆ ಒಂದೆರಡು ನಿಮಿಷಗಳಲ್ಲೇ ಹೆಲಿಕಾಪ್ಟರ್ ಕ್ರಾಷ್ ಆಗಿ ಜನ ನಿಬಿಡ ಜಾಗವೊಂದರಲ್ಲಿ ಅಪ್ಪಳಿಸಿತು. ಆದರೆ ಅದೃಷ್ಟವಶಾತ್ ಮೂರೂ ಜನ ಬದುಕಿಕೊಂಡರು. ಬಿದ್ದ ಜಾಗದಿಂದ ಸೂರಿ ಮೈಕೊಡವಿಕೊಂಡು ಮೆಲ್ಲನೆ ಏಳುತ್ತಾ ಕೊಂಚ ಗಾಬರಿಯಿಂದ ಕೇಳಿದ ‘ನಾವೆಲ್ಲಿದ್ದೇವೆ?’ ಅದಕ್ಕೆ ಗಾಂಪ ಹೇಳಿದ ‘ಗಾಬರಿ ಆಗ್ಬೇಡ, ಈ ಜಾಗ ನಂಗೆ ಎಲ್ಲೋ ನೋಡಿದಂಗೆ ಅನ್ನಿಸ್ತಿದೆ. ಹೋದ್ ವರ್ಷ ಆ ಪೈಲೆಟ್ ಬ್ಯಾಡ ಬ್ಯಾಡ ಅಂತ ಎಷ್ಟ್ ಹೇಳಿದ್ರೂ ಕೇಳದೇ ಇಷ್ಟೇ ಲೋಡ್ ಹಾಕ್ಕೊಂಡ್ ಹೋಗುವಾಗ ಕ್ರಾಷ್ ಆಗಿ ಬಿದ್ದಿದ್ವಲ್ಲ, ಮೋಸ್ಟ್ಲೀ ಅದೇ ಜಾಗದ ಹತ್ರಾನೇ ಎಲ್ಲೋ ಇದ್ದೀವಿ ಅನ್ಸುತ್ತೆ. !

(ಕೃಪೆ: ನೂತನ ಮತ್ತು ವಿಶ್ವವಾಣಿ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ