‘ಸಂಪದ' ನಗೆ ಬುಗ್ಗೆ - ಭಾಗ ೩೫

‘ಸಂಪದ' ನಗೆ ಬುಗ್ಗೆ - ಭಾಗ ೩೫

ಜಗಳ ಏಕೆ?

ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಹೆಂಡತಿ ನಿದ್ದೆ ಹೋಗಿದ್ದರು. ಆಗಲೇ ರಸ್ತೆಯಲ್ಲಿ ಯಾರೋ ಬೈದಾಡಿ ಕೊಳ್ಳುವುದು ಕೇಳಿಸಿತು. ಗಂಡ-ಹೆಂಡತಿ ಎಚ್ಚರಗೊಂಡರು. ಒಡನೆ ನಸ್ರುದ್ದೀನ್ ಎದ್ದು ಹೊರಗೆ ಹೋಗ ಬಯಸಿದ. ‘ನಾನು ರಸ್ತೆಯವರೆಗೆ ಹೋಗಿ ಬರುತ್ತೇನೆ. ಅಲ್ಲಿ ಯಾರು ಜಗಳಾಡುತ್ತಾರೆ? ಯಾಕೆ ಜಗಳಾಡುತ್ತಾರೆ? ನೋಡಿಕೊಂಡು ಬರುತ್ತೇನೆ' ಎಂದು ಅವನು ಹೆಂಡತಿಗೆ ಹೇಳಿದ.

‘ಬೇಡ, ನೀವು ಹೊರಗೆ ಹೋಗ ಬೇಡಿ. ಇನ್ನೊಬ್ಬರ ಉಸಾಬರಿ ನಮಗೆ ಏಕೆ ಬೇಕು? ಎನ್ನುತ್ತ ಅವಳು ಅವನನ್ನು ತಡೆದಳು. ಆದರೆ ಅವನು ಕೇಳಲಿಲ್ಲ. ತನ್ನ ಕಂಬಳಿ ಹೊದ್ದು ಕೊಂಡು, ಅವನು ಹೊರಗೆ ಬಂದ. ಜಗಳ ನಡೆವಲ್ಲಿಗೆ ಹೋಗಿ ನಿಂತ. ತತ್ ಕ್ಷಣ ಜಗಳಾಡುವವರು ಜಗಳ ನಿಲ್ಲಿಸಿದರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅವರು ನಸ್ರುದ್ದೀನ್ ನ ಕಂಬಳಿ ಎಳೆದುಕೊಂಡು ಕತ್ತಲಿನಲ್ಲಿ ಪರಾರಿಯಾದರು. ಕಾಲೆಳೆದುಕೊಂಡು ನಸ್ರುದ್ದೀನ್ ಮನೆಗೆ ಹಿಂದಿರುಗಿದ.

ಹೆಂದತಿ ಅವನಿಗಾಗಿ ಕಾದು ಕೊಂಡೇ ಇದ್ದಳು. ಅವನು ಕೋಣೆಗೆ ಬಂದೊಡನೆ ಅವಳು ಕೇಳಿದಳು. ‘ಅವರು ಏಕೆ ಜಗಳಾಡುತ್ತಿದ್ದರು?’ 

ಸಸ್ರುದ್ದೀನು ಉತ್ತರ ಕೊಟ್ಟ ‘ಅವರು ಜಗಳಾಡುತ್ತಿದ್ದುದು ನನ್ನ ಕಂಬಳಿಗಾಗಿ. ನಾನು ಅಲ್ಲಿ ಹೋಗಿ ನಿಂತೊಡನೆ, ಅವರ ಕಣ್ಣು ನನ್ನ ಕಂಬಳಿ ಮೇಲೆ ಬಿತ್ತು. ತತ್ ಕ್ಷಣ ಅವರ ಜಗಳ ನಿಂತಿತು. ನನ್ನ ಕಂಬಳಿ ಎಳೆದು ಅವರು ಕತ್ತಲಿನಲ್ಲಿ ಕಣ್ಮರೆಯಾದರು.’

***

ದೃಶ್ಯ

ಗಾಂಪ: ಏನೋ ನಿನ್ನ ಸ್ನೇಹಿತ ಆಸ್ಪತ್ರೆಯಲ್ಲಿದ್ದನಂತೆ.

ಸೂರಿ: ಅಲ್ಲಾ ಕಣೋ, ನಿನ್ನೆಯವರೆಗೆ ಚೆನ್ನಾಗಿದ್ದನಲ್ಲೋ, ನಿನ್ನೆ ಒಂದು ಹುಡುಗಿಯ ಜೊತೆ ಹೋಟೇಲಿನಲ್ಲಿ ಕುಳಿತ್ತಿದ್ದನ್ನು ನಾನೇ ನೋಡಿದ್ದೇನೆ.

ಗಾಂಪ: ನೀನು ನೋಡಿದ ಆ ದೃಶ್ಯವನ್ನು ಅವನ ಹೆಂಡ್ತಿಯೂ ನೋಡಿದ್ದಳಂತೆ !

***

ಕಾರಣ !

ಗಾಂಪ: ಏನೋ ಸೂರಿ, ಬಟ್ಟೆ ಹರಿದು ಹೋಗಿದೆಯಲ್ಲಾ, ಕಣ್ಣು ಊದಿಕೊಂಡಿದೆ ಮೇಲಾಗಿ ಕುಂಟುತ್ತಿದ್ದೀಯಾ? ಏನಾಯಿತೋ ನಿನಗೆ, ನಡಿ ಮನೆಗೆ ಬಿಟ್ಟು ಬರುತ್ತೇನೆ.

ಸೂರಿ: ಈಗ ತಾನೇ ಮನೆಯಿಂದ ಬರ್ತಿದ್ದೀನಿ ಕಣೋ!

***

ಸೀರೆ

ಶ್ರೀಮತಿ: ಅಲ್ರೀ, ಹತ್ತಿರದ ಮನಿಯ ನನ್ನ ಗೆಳತಿಗೆ ನೀವು ಮುತ್ತುಕೊಟ್ಟ ಮೇಲೆ ಎಷ್ಟು ರೊಕ್ಕ ಕೊಟ್ಟಿರಿ?

ಗಾಂಪ: ಏನೂ ಕೊಟ್ಟಿಲ್ಲ ಬಿಡೆ, ಒಂದು ಸೀರೆ ಕೊಡಿಸಿದೆ ಅಷ್ಟೇ.

ಶ್ರೀಮತಿ: ಹೌದಾ ! ಸೀರೆ ಯಾಕೆ ಕೊಡಸಾಕ ಹೋಗಿದ್ರಿ, ಆಕಿ ಗಂಡ ನನಗೆ ಏನೂ ಕೊಡಲಿಲ್ಲ. !

***

ನಶ್ಯ !

ಹಿರಿಯರೊಬ್ಬರು ಬಾಲಕ ಗಾಂಪ ಸಿಗರೇಟು ಸೇದೋದನ್ನ ನೋಡಿ ಹೇಳಿದ್ರು, ಏನಪ್ಪಾ, ಇಷ್ಟು ಚಿಕ್ಕ ವಯಸ್ಸಲ್ಲೇ ಸಿಗರೇಟು ಸೇದೋದು ತಪ್ಪು. ನೋಡು ನಾನು ಈವರೆಗೆ ಬೀಡಿ ಸಿಗರೇಟು ಬಿಡು, ಒಂದು ಚಿಟಕಿ ನಶ್ಯ ಕೂಡಾ ಏರಿಸಿಲ್ಲಾ’

ಗಾಂಪ: ಓ ! ನಶ್ಯ ಅಂದ ಕೂಡಲೇ ನೆನಪಾಯ್ತು ನೋಡಿ, ಸಿಗರೇಟು ಸೇದಿದ ಮೇಲೆ ನಶ್ಯ ಏರಿಸೋದನ್ನ ಮರ್ತಿದ್ದೆ.

***

ಜಗಳ

ಗಾಂಪ ಹೊಸದಾಗಿ ಮದುವೆಯಾದ ಹೆಂಡತಿಯೊಡನೆ ಒಂದಿಲ್ಲೊಂದು ಕಾರಣಕ್ಕೆ ಪ್ರತಿದಿನ ಜಗಳವಾಡುತ್ತಿದ್ದ. ಅದಕ್ಕೆ ಬೇಸತ್ತು ಜ್ಯೋತಿಷಿಯ ಬಳಿ ಹೋದ.

ಗಾಂಪ: ಹೆಂಡತಿ ಜತೆಗೆ ಸದಾ ಜಗಳ. ಇದಕ್ಕೆ ಪರಿಹಾರ ಹೇಳಿ ಸ್ವಾಮಿ.

ಜ್ಯೋತಿಷಿ: ಒಂದು ವರ್ಷ ಹೇಗೋ ತಡೆದು ಕೊಳ್ಳಿ

ಗಾಂಪ: ಆಮೇಲೆ ಸರಿ ಹೋಗುತ್ತಾ?

ಜ್ಯೋತಿಷಿ: ಇಲ್ಲ, ಅದೇ ರೂಢಿ ಆಗುತ್ತೆ !

***

(ಸಂಗ್ರಹ: ನೂತನ ಹಾಗೂ ಸುಧಾ ಪತ್ರಿಕೆ)

ಚಿತ್ರ ಕೃಪೆ: ಅಂತರ್ಜಾಲ ತಾಣ