‘ಸಂಪದ' ನಗೆ ಬುಗ್ಗೆ - ಭಾಗ ೪೪
ತಬಲಾ ಕಲಿಕೆ !
ಗಾಂಪ: ಸೂರಿ, ನಾನು ತಬಲಾ ಕಲಿಯೋಕೆ ತಂಜಾವೂರಿಗೆ ಹೋಗ್ತಾ ಇದ್ದೇನೆ.
ಸೂರಿ: ಹೌದಾ ! ಅದು ತುಂಬಾ ದೂರವಿದೆಯಲ್ಲಾ? ಖರ್ಚು ತುಂಬಾ ಆಗುದಿಲ್ಲವಾ? ಅದಕ್ಕೇನು ಮಾಡ್ತೀಯಾ?
ಗಾಂಪ: ನಮ್ಮ ನೆರೆಮನೆಯವರೆಲ್ಲಾ ಸೇರಿ ದುಡ್ಡುಕೊಟ್ಟು ಈ ವ್ಯವಸ್ಥೆ ಮಾಡಿದ್ದಾರೆ. !
***
ಸ್ವರ್ಗ - ನರಕಗಳ ನಡುವಿನ ಗೋಡೆ
ಸ್ವರ್ಗ ಹಾಗೂ ನರಕಗಳ ನಡುವೆ ಒಂದು ಗೋಡೆ ಇತ್ತಂತೆ. ನಿಮಗೆ ಗೊತ್ತಿರುವಂತೆ ಅದು ಕೋಟ್ಯಾಂತರ ವರ್ಷಗಳಷ್ಟು ಹಳೆಯದ್ದು. ಮಳೆ, ಗಾಳಿ, ಬಿಸಿಲಿನ ಹೊಡೆತಕ್ಕೆ ಸಿಕ್ಕಿ ಅದು ಶಿಥಿಲವಾಗಿತ್ತು. ನರಕದ ಜನ ಸ್ವರ್ಗದ ಮೇಲಿನ ಆಕರ್ಷಣೆಯಿಂದ ಒಂದು ಬಾರಿಯಾದರೂ ಅಲ್ಲಿಗೆ ಹೋಗಬೇಕೆಂದು ಬಯಸುತ್ತಿದ್ದರು. ತುಸು ಧೈರ್ಯವಿದ್ದ ಜನ ಗೋಡೆ ಹಾರಿದರೆ ಹೇಗೆ? ಎಂದು ಯೋಚಿಸುತ್ತಿದ್ದರು. ಹಾಗಾಗಿ ನರಕದ ಗಡಿ ಭದ್ರತಾ ಸಿಬ್ಬಂದಿಗಳಿಗೆ ಕೆಲಸವೋ ಕೆಲಸ, ಮೈ ತುಂಬಾ ಕಣ್ಣು.
ಸ್ವರ್ಗದಲ್ಲಿ ಏನಿದೆ ಮಣ್ಣು? ಅದೇ ಮುದಿ ನರ್ತಕಿಯರು, ಅದೇ ಹಳೆಯ ಸೋಮರಸ. ಆದರೆ ನರಕದಲ್ಲಿ ಎಲ್ಲವೂ ಇದೆ. ಚಿತ್ರರಂಗದ ಮಾದಕ ನಟಿಯರು ಇವರೆಲ್ಲಾ ನರಕದಲ್ಲೇ ಇದ್ದುದರಿಂದ ನರಕದವರಿಗೆ ಸ್ವರ್ಗಕ್ಕೆ ಹೋಗಬೇಕೆಂದು ಅನಿಸುತ್ತಲೇ ಇರಲಿಲ್ಲ. ಆದರೆ ಪ್ರಪಂಚದ ಕಥೆ ಗೊತ್ತಲ್ಲ, ಪಕ್ಕದ ಮನೆಯವನ ಹೆಂಡತಿಯೇ ಚೆಲುವೆ !
ಒಂದು ದಿನ ಅಂದುಕೊಂಡಂತೆ ದುರದೃಷ್ಟಕ್ಕೆ ಸ್ವರ್ಗ-ನರಕದ ಗೋಡೆ ಕುಸಿಯಿತು. ಅಲ್ಲಿನ ಜನ ಇಲ್ಲಿಗೆ, ಇಲ್ಲಿಯ ಜನ ಅಲ್ಲಿಗೆ ಪರವಾನಗಿ ಇಲ್ಲದೆಯೇ ಓಡಾಡ ತೊಡಗಿದರು. ಇದರಿಂದ ದೇವರಾಜ ಇಂದ್ರನಿಗೂ, ಯಮರಾಜನಿಗೂ ತಲೆಬಿಸಿ ಶುರುವಾಯಿತು. ಸ್ವರ್ಗವೂ ಭೂಮಿಯಂತೆ ಆಗುತ್ತದೆ ಎನ್ನುವ ತಲೆಬಿಸಿಯಾಯಿತು. ಗೋಡೆ ಮತ್ತೆ ಕಟ್ಟುವ ಕೆಲಸವಾಗಬೇಕೆಂದು ನಿರ್ಧಾರವಾಯಿತು. ಆದರೆ ಕಟ್ಟುವವರು ಯಾರು, ಖರ್ಚು ವೆಚ್ಚ ಯಾರದ್ದು ಎನ್ನುವ ಬಗ್ಗೆ ನಿರ್ಧಾರ ಮಾಡಲು ಒಂದು ತುರ್ತು ಸಭೆ ಸೇರಲಾಯಿತು.
ಇಂದ್ರನೆಂದ -”ನಿಮ್ಮಲ್ಲಿರುವವರೇ ಕುತಂತ್ರ ಮಾಡಿ ಗೋಡೆಯನ್ನು ಕೆಡವಿರಬೇಕು. ಏಕೆಂದರೆ ನರಕದ ಜನರಿಗೆ ಸ್ವರ್ಗದ ಬಗ್ಗೆ ಯಾವಾಗಲೂ ಕುತೂಹಲ, ಆಕರ್ಷಣೆ. ಆದುದರಿಂದ ಗೋಡೆಯನ್ನು ನೀವೇ ಕಟ್ಟಿಕೊಡಬೇಕು”
“ಅದು ಹೇಗೆ ಸಾಧ್ಯ?” ಯಮರಾಜನೆಂದ. “ ಗೋಡೆ ಎಂದ ಮೇಲೆ ಇಬ್ಬರಿಗೂ ಸೇರಿದ್ದು. ಇಬ್ಬರೂ ವೆಚ್ಚವನ್ನು ಭರಿಸಬೇಕು. ನಾವು ಮಾತ್ರ ಮಾಡಬೇಕೆಂದರೆ ಹೇಗೆ?”
ವಾದ ವಿವಾದಗಳು ತಾರಕಕ್ಕೇರಿದವು. ಆದರೆ ಯಾರಿಗೂ ಒಂದು ಒಪ್ಪಂದಕ್ಕೆ ಬರಲು ಆಗಲಿಲ್ಲ. ಇಂದ್ರ ಮತ್ತೆ ತನ್ನ ವಾದವನ್ನು ಸಮರ್ಥಿಸಿಕೊಂಡ “ನಮ್ಮಲ್ಲಿ ಇರುವವರು ಸನ್ಯಾಸಿಗಳು, ಧಾರ್ಮಿಕ ಜನರು, ಜನಸೇವೆಗಾಗಿ ಪ್ರಾಣವನ್ನು ಅರ್ಪಿಸಿದವರು. ಇವರೆಲ್ಲಾ ಬಡವರು. ಆದರೆ ನಿಮ್ಮಲ್ಲಿಗೆ ಬರುವವರು ಧನಿಕರು, ಮೋಸದಿಂದ ಹಣ ಮಾಡಿದವರು, ಕಳ್ಳರು, ಸುಳ್ಳರು, ರಾಜಕಾರಣಿಗಳು. ಎಲ್ಲರೂ ಹಣವಂತರೇ, ಆದುದರಿಂದ ನೀವೇ ಈ ಗೋಡೆಯನ್ನು ಕಟ್ಟಬೇಕು"
ಯಮಧರ್ಮ ಸುಲಭಕ್ಕೆ ಒಪ್ಪಲಾರ. “ಆಗಲಿ, ಹೆಚ್ಚಿನ ಮಾತು ಬೇಡ. ನಾವು ಕೋರ್ಟಿಗೆ ಹೋಗುವ. ಅಲ್ಲೇ ವಿಚಾರಣೆ ನಡೆಯಲಿ. ಬಂದ ತೀರ್ಪನ್ನು ನಾವು ಒಪ್ಪಿಕೊಂಡರಾಯಿತು.” ಎಂದ.
ಇಂದ್ರ ಸ್ವಲ್ಪ ಯೋಚನೆ ಮಾಡಿದ. ಮತ್ತೆ ಹೇಳಿದ “ ಕೋರ್ಟಿಗೆ ಹೋಗುವುದು ಸರಿಯಾದ ನಿರ್ಧಾರವಲ್ಲ. ಏಕೆಂದರೆ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಒಬ್ಬರಾದರೂ ವಕೀಲರು ಸ್ವರ್ಗದಲ್ಲಿ ಸಿಗಬೇಕಲ್ಲವೇ? ಎಲ್ಲರೂ ನಿಮ್ಮಲ್ಲೇ ಇದ್ದಾರಲ್ಲಾ !” ಎಂದ.
***
ವಿಷಯಗಳು
ಶ್ರೀಮತಿ: ತಾರಾ, ರಾತ್ರಿ ಹರಿಕಥೆಯಲ್ಲಿ ಏನೆಲ್ಲಾ ಕೇಳಿದಿರಿ?
ತಾರಾ: ನೀನು ಬರಬೇಕಾಗಿತ್ತು ಶ್ರೀಮತಿ, ಬಹಳ ವಿಷಯಗಳು ಗೊತ್ತಾಗುತ್ತಿದ್ದವು. ಪಕ್ಕದ ಬೀದಿ ರಮೇಶ ಇನ್ನೊಂದು ಮದುವೆಯಾದನಂತೆ, ಮೊನ್ನೆ ರೇಷ್ಮ ಹೊಸ ಸೀರೆ ತೆಗೆದುಕೊಂಡಳಂತೆ, ಅಲ್ಲಿಗೆ ಬಂದಿದ್ದ ಕವಿತಾ ತಾನು ತೆಗೆದುಕೊಂಡಿರುವ ಚಿನ್ನದ ಸರ ತೋರಿಸಿಕೊಂಡು ಜಂಬ ಪಡುತ್ತಿದ್ದಳು. ಕಣ್ರೀ...!
***
ವರ್ತನೆ
ಗಾಂಪ: ಸೂರಿ, ನನ್ನ ಹೆಂಡತಿ ಕೋಪಗೊಂಡರೆ ನನ್ನ ಒಂದೂ ಮಾತೂ ಕೇಳುವುದಿಲ್ಲ.
ಸೂರಿ: ನನ್ನ ಹೆಂಡತಿ ಮೊದಲು ಹೀಗೇ ವರ್ತಿಸುತ್ತಿದ್ದಳು. ಆದರೆ ಈಗ ಆ ರೀತಿ ಇಲ್ಲ.
ಗಾಂಪ: ಈಗ ಇಲ್ಲ ಅಂತಿಯಲ್ಲ, ಹೇಗೆ?
ಸೂರಿ: ಗಾಂಪ, ಒಂದ್ಸಾರಿ ಅವಳು ಕೋಪಗೊಂಡಾಗ ನೋಡೇ, ನೀನು ಹೀಗೆ ಕೋಪಗೊಳ್ಳುವುದು ನಿನಗೆ ವೃದ್ಧಾಪ್ಯ ಹತ್ತಿರ ಬರುತ್ತಿರುವ ಸೂಚನೆ ಕಣೆ ಅದು. ಅಂದೆ ಅಷ್ಟೇ!
***
(ಸಂಗ್ರಹ) ಚಿತ್ರ ಕೃಪೆ: ಅಂತರ್ಜಾಲ ತಾಣ