‘ಸಂಪದ' ನಗೆ ಬುಗ್ಗೆ - ಭಾಗ ೪೮

‘ಸಂಪದ' ನಗೆ ಬುಗ್ಗೆ - ಭಾಗ ೪೮

ಆರ್ಡರ್

ಗಾಂಪ ಮತ್ತು ಸೂರಿ ಫ್ಯಾಷನ್ ಮಾಲ್ ಒಂದರ ಕೆಟಲಾಗ್ ನೋಡ್ತಾ ಕೂತಿದ್ರು. ಅಲ್ಲಿ ಒಬ್ಬರಿಗಿಂತ ಒಬ್ಬರು ಸುಂದರವಾಗಿರೋ ಹುಡುಗೀರು ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಫೋಸ್ ಕೊಟ್ಟು ನಿಂತಿದ್ರು. ಪ್ರತಿ ಹುಡುಗಿಯ ಪಕ್ಕದಲ್ಲಿ ಆಯಾ ಬಟ್ಟೆಯ ದರ ಹಾಕಲಾಗಿತ್ತು. ಅದನ್ನು ಕಣ್ಣುತುಂಬಾ ನೋಡಿ ಖುಷಿ ಪಡುತ್ತಿದ್ದ ಗಾಂಪ ಮತ್ತು ಸೂರಿ ಮಾತಾಡಿಕೊಳ್ಳುತ್ತಿದ್ದರು.

ಗಾಂಪ: ಈ ಕೆಟಲಾಗ್ ನಲ್ಲಿರೋ ಹುಡುಗೀರು ಎಷ್ಟು ಚೆನ್ನಾಗಿದ್ದಾರಲ್ವಾ?

ಸೂರಿ: ಹೌದಲ್ಲಾ !

ಗಾಂಪ: ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕ್ಕೊಂಡು ಚಿಟ್ಟೆಗಳು ಎಷ್ಟು ಸೂಪರ್ ಆಗಿ ಕಾಣ್ತಾ ಇದ್ದಾರಲ್ವಾ?

ಸೂರಿ: ನೋಡ್ತಾ ಇದ್ರೆ ಒಂದೆರಡನ್ನು ಸೆಲೆಕ್ಟ್ ಮಾಡಿ ತಕೋ ಬೇಕು ಅಂತ ಮನಸ್ಸಾಗುತ್ತೆ... ರೇಟೂ ಕಮ್ಮಿನೇ ಇದೆಯಲ್ವಾ?

ಗಾಂಪ: ಹೌದು ಸೂರಿ, ನಾನು ಒಂದನ್ನು ತಕೋ ಬೇಕು ಅಂತಾ ನಿರ್ಧಾರ ಮಾಡಿದ್ದೇನೆ ಕಣೋ…

ಸೂರಿ: ಕೊಂಡ್ಕೋ. ನಿನ್ನ ಆರ್ಡರ್ ಬಂದ ಬಳಿಕ ಅದನ್ನು ನೋಡಿ ನಾನೂ ಆರ್ಡರ್ ಮಾಡ್ತೇನೆ.

ಸರಿ. ಗಾಂಪ ಆರ್ಡರ್ ಮಾಡಿದ ಮೂರು ವಾರಗಳ ಬಳಿಕ ನಂತರ ಮತ್ತೆ ಅವನ ಸೂರಿಯ ಭೇಟಿಯಾಯಿತು. 

ಸೂರಿ ಕೇಳಿದ “ಅಲ್ವೋ ಗಾಂಪ, ನೀನು ಆರ್ಡರ್ ಮಾಡಿದ ಹುಡುಗಿ ಬಂದಳೋ?” ಅದಕ್ಕೆ ಗಾಂಪ ಉತ್ತರಿಸಿದ “ಹುಡುಗಿ ಇನ್ನೂ ಬಂದಿಲ್ಲ. ಆದ್ರೆ ಇಷ್ಟರಲ್ಲೇ ಬರ್ತಾಳೆ ಅನಿಸುತ್ತೆ. ಏಕೆಂದರೆ ನಿನ್ನೆ ತಾನೇ ಅವಳ ಬಟ್ಟೆ ಇರೋ ಲಗೇಜ್ ಕಳಿಸಿದ್ದಾರೆ.“

***

ಹೆಸರು ಹೇಳು

ಉಪಾಧ್ಯಾಯರು: ಗುಂಡ, ರೈಟ್ ಸಹೋದರರು ವಿಮಾನ ಕಂಡುಹಿಡಿಯುವುದಕ್ಕೆ ಮುಂಚೆ ಹಲವಾರು ಮಂದಿ ವಿಮಾನವನ್ನು ಕಂಡುಹಿಡಿಯಲು ಪ್ರಯತ್ನಪಟ್ಟಿದ್ದರು. ಅವರ ಹೆಸರು ಹೇಳು.

ಗಾಂಪ: ರಾಂಗ್ ಸಹೋದರರು, ಸರ್.

*** 

ಅರ್ಥವಾಗದಿದ್ದರೆ...

ಸೂಪರ್‌ವೈಸರ್: ಯಾಕಮ್ಮಾ ಶ್ರೀಮತಿ, ಕಣ್ಣುಮುಚ್ಚಿಕೊಂಡು ಕುಳಿತಿದ್ದೀಯಾ?

ಶ್ರೀಮತಿ: ಪ್ರಶ್ನೆ ಅರ್ಥವಾಗದಿದ್ದರೆ ಪರೀಕ್ಷೆ ಹಾಲ್‌ನಲ್ಲಿ ಕಣ್‌ಕಣ್‌ಬಿಡುತ್ತ ಕೂರಬೇಡ ಎಂದು ನಮ್ಮಪ್ಪ ಹೇಳಿದ್ದರು, ಅದಕ್ಕೆ.

 ***

ಯಾರ ಹೆಸರಿಗೆ?

ಪೂಜಾರಿ: ಮಂಗಳಾರತಿ ಯಾರ ಹೆಸರಿಗೆ ಮಾಡಲಿ?

ಗಾಂಪ: ನನ್ನ ಹೆಂಡತಿಯ ಹೆಸರಿಗೆ ಮಾಡಿ.

ಪೂಜಾರಿ: ಯಾಕೆ ನಿಮ್ಮ ಹೆಸರಿಗೆ ಬೇಡವಾ, ಸರ್?

ಗಾಂಪ: ಬೇಡ, ಈಗಾಗಲೇ ಅದು ಮನೆಯಲ್ಲಿ ಆಗಿದೆ.

 ***

ಸದುಪಯೋಗ

ಶಿಕ್ಷಕಿ: ಲೋ ಗಾಂಪ, ಸ್ಕೂಲಿಗೆ ಯಾಕೆ ನಡೆದುಕೊಂಡೇ ಬರ್‍ತಾ ಇದ್ದೀಯ; ಸರ್ಕಾರ ಕೊಟ್ಟ ಸೈಕಲ್ ಏನಾಯ್ತು?

ಗಾಂಪ: ನಾಲ್ಕು ಜನರಿಗೆ ಉಪಯೋಗವಾಗಲಿ ಎಂದು ಬಾಡಿಗೆಗೆ ಬಿಟ್ಟಿದ್ದೇನೆ, ಮೇಡಂ.

 ***

ಗೊತ್ತಿಲ್ಲದ್ದು

ಸೂರಿ: ಏನಯ್ಯಾ ಗಾಂಪ, ಸಿಗರೇಟು ಸೇದಿದರೆ ಕ್ಯಾನ್ಸರ್ ಬರುತ್ತದಂತೆ, ಹೌದಾ?

ಗಾಂಪ: ಅದೇನೋ ನನಗೆ ಗೊತ್ತಿಲ್ಲಪ್ಪ; ನಾನು ಸಿಗರೇಟು ಸೇದುವಾಗಲೆಲ್ಲ ಬರಿ ಹೊಗೆಯಷ್ಟೆ ಬರುತ್ತದೆ.

***

ಕಾಯಿಲೆಗಳ ತವರುಮನೆ

ಆ ಸುಂದರಿ ಸಂದುನೋವಿನಿಂದ ನರಳುತ್ತಿದ್ದಳು. ವೈದ್ಯರು ಆಕೆಯನ್ನು ಪರೀಕ್ಷಿಸಿ – ಇದು ನಿಮ್ಮ ಹಲ್ಲುಗಳಿಂದಾಗಿದೆ ಎಂದರು.

ಅದು ಹೇಗೆ ಸಾಧ್ಯ? ನನ್ನ ಹಲ್ಲುಗಳಿಗೆ ಯಾವುದೇ ತೊಂದರೆಯಿಲ್ಲ. ಟೂತ್‌ಪೇಸ್ಟ್ ಕಂಪೆನಿಗಳು ಜಾಹಿರಾತಿಗಾಗಿ ನನ್ನನ್ನೇ ಆರಿಸಿಕೊಳ್ಳುತ್ತವೆ.

ನಿಮ್ಮ ಹಲ್ಲುಗಳು ಹೆಚ್ಚು ಹೆಚ್ಚು ಆಹಾರ ಜಗಿಯುತ್ತ ಹೋದಂತೆ ನಿಮ್ಮ ದೇಹದಲ್ಲಿ ಕೊಬ್ಬಿನ ಪದರ ದಪ್ಪವಾಗುತ್ತ ಹೋಗುವುದು. ನಿಮ್ಮ ಹೆಚ್ಚುತ್ತಿರುವ ಭಾರ ಇತರ ಕಾಯಿಲೆಗಳಿಗೆ ಆಮಂತ್ರಣ ನೀಡುತ್ತದೆ. ಇದೀಗ ಸಂದುನೋವು…..ಮುಂದೆ ಎದೆನೋವು…..

ಆ ಮಹಿಳೆ ಮುಗುಳ್ನಕ್ಕಳು. ಅವಳ ತುಟಿಗಳ ಮೇಲೆ ಅರಳಿದ ಮಂದಹಾಸ ಕಂಡು ವೈದ್ಯರಿಗೆ ತಮ್ಮ ಎದೆಬಡಿತ ವೃದ್ಧಿಸಿದಂತೆ ಭಾಸವಾಯಿತು. ಆಗ ಅವರು ಹೇಳಿದರು-

ನೋಡಿ ನಿಮ್ಮ ಹಲ್ಲು ಮತ್ತು ಈ ಮಂದಹಾಸ – ಎರಡೂ ಕಾಯಿಲೆಗಳ ತವರುಮನೆ. ಹಲ್ಲುಗಳಿಂದ ನೀವು ಕಾಯಿಲೆಬಿದ್ದರೆ, ಮಂದಹಾಸದಿಂದ ಇತರರು ಕಾಯಿಲೆಬೀಳುತ್ತಾರೆ.

***

ಗೆದ್ದರೆ

ಸೂರಿ: ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀಯಾ?

ಗಾಂಪ: ಗೆದ್ದರೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೇನೆ.

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ