‘ಸಂಪದ' ನಗೆ ಬುಗ್ಗೆ - ಭಾಗ ೪೯

‘ಸಂಪದ' ನಗೆ ಬುಗ್ಗೆ - ಭಾಗ ೪೯

ದರ್ಬಾರು

ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ :

ಲವ್ ಮಾಡುವಾಗ ನನ್ನದೇ "ದರ್ಬಾರು"

ಲವ್ ಮಾಡಿದಾಗಲೂ ನನ್ನದೇ "ಕಾರುಬಾರು"

ಆದ್ರೆ ಲವ್ ಕಟ್ ಆಯ್ತು ನೋಡಿ

ಅವಳದು "ಕಾರು", ನಂದು "ಬಾರು".

***

ಜನಗಣಮನ

ಅದೊಂದು ಪ್ರಾಥಮಿಕ ಪಾಠಶಾಲೆ, ತನಿಖೆ ಮಾಡಲು ಇನ್ಸ್ ಪೆಕ್ಟರ್ ಬಂದರು.

ಇನ್ಸ್‌ಪೆಕ್ಟರ್ : ಮಕ್ಕಳೇ... ನಿಮಗಿಷ್ಟವಾದ ಹಾಡು ಯಾವುದೆಂದು ಹೇಳಬಲ್ಲಿರಾ?

ಮರಿ ಗಾಂಪ : ಜನಗಣಮನ ಸಾರ್!

ಇನ್ಸ್‌ಪೆಕ್ಟರ್ : (ಸಂತೋಷಗೊಂಡು) ಭೇಷ್! ಭೇಷ್! ನಿಮಗೆ ರಾಷ್ಟ್ರಗೀತೆಯು ಏಕೆ ಇಷ್ಟವೆಂದು ಹೇಳಿ ನೋಡೋಣ?

ಮರಿ ಗಾಂಪ : ಅದನ್ನು ಹಾಡಿದ ಕೂಡಲೇ ನಾವು ಮನೆಗಳಿಗೆ ಹೋಗಬಹುದು ಸಾರ್!!

***

ಸೋಮಾರಿ 

ಗಾಂಪ : ಸೂರಿ, ನಿನ್ನ ಸ್ನಾನ ಆಯ್ತಾ?

ಸೂರಿ : ನಾನು ನಿನ್ನಷ್ಟು ಸೋಮಾರಿ ಅಲ್ಲೋ? ಒಂದು ತಿಂಗಳ ಮುಂಚೇನೇ ಸ್ನಾನ ಮಾಡ್ಕೊಂಡ್ ಬಿಟ್ಟಿದ್ದೀನಿ!

***

ಜನಮೇಜಯ 

ಟೀಚರ್ : ಶ್ರೀಮತಿ,  ಜನಮೇಜಯ ಎಂದರೇನು?

ಶ್ರೀಮತಿ : ಮೇ ತಿಂಗಳ ಚುನಾವಣೆಯಲ್ಲಿ ಗೆದ್ದು ಬಂದ ಜನ ಮೇಡಂ !

***

ಸೀರೆ ಅಂಗಡಿ

ಜೀವನದಲ್ಲಿ ಸಹನಶೀಲತೆ ಮತ್ತು ಸಂಯಮ ಕಾಪಾಡುವುದನ್ನ ಕಲಿಯಲು

ಒಂದು ಸೀರೆ ಅಂಗಡಿ ತೆರೆದ್ ನೋಡಿ! 

***

ಸಂಭಾಷಣೆ

ಹುಚ್ಚ : ನಾನು ವಿಧಾನಸೌಧನ ಖರೀದಿಸ್ತೀನಿ.

ಮತ್ತೊಬ್ಬ ಹುಚ್ಚ : ಸಾರೀ ಕಣೋ, ನಾನು ಅದನ್ನ ಮಾರೋ ಮೂಡ್ನಲ್ಲಿ ಇಲ್ಲ !

***

ಖಂಡಿತಾ ಕುರುಡ

"ಅಲ್ಲಿ ನೋಡಿ....." ಶ್ರೀಮತಿ ಮನೆ ಒಳಗೆ ಕಾಲಿಡುತ್ತಲೇ ಒಂದು ಕೈ ಎಡಭಾಗಕ್ಕೆ ತೋರಿಸುತ್ತಾ ತನ್ನ ಪತಿ ಗಾಂಪನಿಗೆ ಹೇಳಿದಳು.

"ಏನೇ ಅದು, ಅವನು ಕುರುಡು ಬಿಕ್ಷುಕ ಅಲ್ಲೇ ತಾನೇ ಕೂತ್ಕೋಳ್ಳೊದು " ಎಂದ ಗಾಂಪ.

"ಅಲ್ಲಾರಿ ಅವನು ನನಗೆ ಕುರುಡ ಅಲ್ಲ ಅಂತ ಅನ್ಸುತ್ತೆ!"

"ಏಕೆ?"

"ನಾನು ಅವನ ಪಕ್ಕಕ್ಕೆ ಬಂದ ತಕ್ಷಣ ಅವನು ' ಹೇ ಸುಂದರಿ , ದೇವರ ಹೆಸರಿನಲ್ಲಿ ಈ ಕುರುಡನಿಗೆ ಭಿಕ್ಷೆ ಹಾಕು ಅಂತ ಕೇಳೋದೇ?" ಎಂದಳು ಶ್ರೀಮತಿ ಗಲ್ಲದ ಮೇಲೆ ಕೈ ಇಟ್ಕೊಂಡು.

"ಅಲ್ಲಾ ಕಣೇ ಅವನು ನಿನ್ನನ್ನು ಸುಂದರಿ ಅಂತ ಹೇಳಿದ್ಮೇಲೆ ಅವನು ಖಂಡಿತವಾಗ್ಲೂ ನಿಜವಾದ ಕುರುಡಾನೇ " ಎಂದು ಸಮರ್ಥನೆ  ಮಾಡಿದ ಪತಿರಾಯ ಗಾಂಪ.

***

ನಿದ್ರೆ ಬಂದುಬಿಟ್ಟಿರುತ್ತದೆ

ನೀನು ವಿಚಿತ್ರ ಮನುಷ್ಯ ಕಣಯ್ಯ, ನಿಂಗೇನ್ ದುಡ್ಡಿಗೆ ಅಂತಾ ತಾಪತ್ರಯ ಬಂದಿದ್ದು, ಹಗಲು ಹೊತ್ತಿನಲ್ಲೇ ಕಳ್ಳತನ ಮಾಡಲು ಹೊರಟಿದ್ದೆಯಲ್ಲ?" ಎಂದು ಹೇಳಿದ ಒಬ್ಬ . 

ಏನ್ ಮಾಡೋದು ಸರ್ ಈ ಹಾಳಾದು ರಾತ್ರಿ ನಿದ್ರೆ ಬರುತ್ತೆ ಸರ್!

***

ವಿನಂತಿ 

ಓರ್ವ ವ್ಯಕ್ತಿಯ ಪತ್ನಿ ಮನೆ ಬಿಟ್ಟು ಹೋದಳು ಕಾನ್ಸ್ಟೇಬಲ್ ವ್ಯಕ್ತಿಯ ರಿಪೋರ್ಟ್ ಬರೆದುಕೊಂಡ ಆದರೂ ಸಹ ವ್ಯಕ್ತಿ ಕಾನ್ಸ್ಟೇಬಲ್ ಮುಂದೆಯೇ ನಿಂತಿದ್ದ. ಅದನ್ನು ಕಂಡ ಕಾನ್ಸ್ಟೇಬಲ್ ,

" ಇನ್ನೂ ಯಾಕೆ ನಿಂತಿದ್ದೀರಾ, ಹೋಗಿ ಮನೆಗೆ ಹೋಗಿ, ನಾನು ನಿಮ್ಮ ಹೆಂಡತಿಯನ್ನು ಹುಡುಕಿ ಮನೆಗೆತಲುಪಿಸುತ್ತೇನೆ" ಎಂದ. 

"ಇಲ್ಲ ಪೋಲಿಸಪ್ಪ, ಹಾಗೆ ಮಾಡಬೇಡ, ನಾನು ಇದನ್ನು ಹೇಳುವುದಕ್ಕೆ ಇದುವರೆಗೆ ನಿಮ್ಮ ಹತ್ತಿರ ನಿಂತಿದ್ದೇನೆ" ಎಂದು ವಿನಂತಿಸಿಕೊಂಡ ಆತ.

***

ಅದಕ್ಕೇ  ವಾಪಾಸು ಕೊಡ್ತಾ ಇದ್ದೀನಿ 

ಕೆಲಸದಾಳು ಗಾಂಪ ತನ್ನ ಮಾಲೀಕನೊಂದಿಗೆ,

" ಯಜಮಾನ್ರೆ ನಿನ್ನೆ ಕಸದ ಬುಟ್ಟಿಯಲ್ಲಿ 500-500 ರೂಪಾಯಿಗಳ ನೋಟು ಸಿಕ್ಕಿತು "

'' ನಾನೇ ಬಿಸಾಕಿದ್ದೆ. ಅದು ನಿಜವಾದ ನೋಟುಗಳಲ್ಲ" ಎಂದ ಮಾಲೀಕ.

"ಅದಕ್ಕೋಸ್ಕರವೇ ನಾನು ಅದನ್ನು ವಾಪಸ್ಸು ಕೊಡ್ತಾ ಇದೀನಿ ಯಜಮಾನ್ರೇ " ಎಂದು ವಿನಯವಾಗಿ ಉತ್ತರಿಸಿದ ಗಾಂಪ. ***

ನೋಟ್ಸ್ ಓದಿ ಅಲ್ಲ

ಮೇಷ್ಟ್ರು ಗಾಂಪನನ್ನು ಮೇಲೆಬ್ಬಿಸಿ ನಿಲ್ಲಿಸುತ್ತ, 

"ಏನೋ ಗಾಂಪ, ಕನ್ನಡದಲ್ಲಿ ಫೇಲ್ ಆಗ್ಬಿಟ್ಟಿ ಏನೋ? ನೀನು ನಾನು ಬರೆದು ಪ್ರಿಂಟ್ ಮಾಡಿಸಿದ್ದ ನೋಟ್ಸ್ ಓದಿದ್ಯಾ ಎಂದು ಠೀವಿಯಿಂದ ಕೇಳಿದರು. 

"ನಿಮ್ಮ ಪ್ರಿಂಟೆಡ್ ನೋಟ್ಸ್ ಓದಿ ನಾನು ಫೇಲ್ ಆಗಿಲ್ಲ ಸಾರ್, ನಂಗೆ ಕಾಯಿಲೆ ಬಂದಿದ್ದರಿಂದ ನಾನು ಫೇಲ್ ಆಗ್ಬಿಟ್ಟೆ ಅಷ್ಟೇ ಸಾರ್" ಎಂದು ನುಡಿದ ಗಾಂಪ ವಿನಯವಾಗಿ!

***

ಮುದ್ದು ಪ್ರಶ್ನೆ

ಓರ್ವ ಚಿಕ್ಕ ಹುಡುಗಿಯ ದೃಷ್ಟಿ ಪಾರ್ಕ್ ನಲ್ಲಿ ಅಡ್ಡಾಡುತ್ತಿದ್ದ ಓರ್ವ ಗರ್ಭವತಿ ಮಹಿಳೆಯ ಮೇಲೆ ಬಿತ್ತು. ಆಕೆ ಗರ್ಭವತಿಯ ಹತ್ತಿರಕ್ಕೆ ಹೋಗಿ,

"ಆಂಟಿ, ಈ ಹೊಟ್ಟೆಯಲ್ಲಿ ಏನಿದೆ? " ಎಂದು ಕೇಳಿದಳು

"ಇದರಲ್ಲಿ ನನ್ನ ಪ್ರೀತಿಯ ಮಗು ಇದೆ ಮರಿ " ಎಂದಳು ಅವಳು.

ಒಂದು ವೇಳೆ ಇದು ನಿಮ್ಮ ಪ್ರೀತಿಯ ಮಗುವಾಗಿದ್ದರೆ ನೀವೇಕೆ ಅದನ್ನು ತಿಂದು ಬಿಟ್ಟಿರಿ ಆಂಟಿ?" ಎಂದು ಮುದ್ದುಮುದ್ದಾಗಿ ಕೇಳಿದರು ಹುಡುಗಿ.

***

ದುಬಾರಿ ಕಣ್ಣಿನ ಚಿಕಿತ್ಸೆ

 "ನಿನ್ನೆ ನನ್ನ ಹೆಂಡತಿ ಕಣ್ಣಿಗೆ ಒಂದು ಮರಳಿನ ಚೂರು ಬಿದ್ದು ಬಿಡ್ತು. ಅದನ್ನು ತೆಗೆಸೋಕೆ ೨೦೦ ರೂಪಾಯಿ ಖರ್ಚಾಯಿತು" ಎಂದ ಸೂರಿ ದುಃಖದಿಂದ.

ನೀನೇ ಪುಣ್ಯವಂತ ಕಣಯ್ಯಾ, ನಿನ್ನೆ ನನ್ನ ಹೆಂಡತಿ ಕಣ್ಣಿಗೆ ಒಂದು ರೇಷ್ಮೆ ಸೀರೆ ಬಿತ್ತು. ಅದನ್ನು ತೆಗೆದು ಕೊಡೋಕೆ ೨೦ ಸಾವಿರ ರೂಪಾಯಿ ಖರ್ಚಾಯಿತು " ಗಾಂಪ ಇನ್ನಷ್ಟು ದುಃಖದಿಂದ ನುಡಿದ.

***

ಪಾಪ ಯಾರಿಗೆ ? 

"ಏನ್ರೀ ಜಿರಳೆ ಸಾಯಿಸುವ ಔಷಧಿ ಇದೆಯೆ ?" 

"ಹೂಂ ಇದೆ "

 "ಜಿರಳೆ ಕೊಲ್ಲುವ ಪಾಪ ನಿನ್ನ ಮೇಲೆ ಬರುತ್ತೋ ಅಥವಾ ನನಗೆ ತಟ್ಟುತ್ತೋ ?"

"ಯಾರಿಗೂ ಪಾಪ ಬರೋಲ್ಲಾ " 

" ಏಕೆ ?"

"ಜಿರಳೆ ಸತ್ತರೆ ತಾನೇ ?" 

(ಸಂಗ್ರಹ) ಚಿತ್ರ ಕೃಪೆ: ಅಂತರ್ಜಾಲ ತಾಣ