‘ಸಂಪದ' ನಗೆ ಬುಗ್ಗೆ - ಭಾಗ ೫೩

‘ಸಂಪದ' ನಗೆ ಬುಗ್ಗೆ - ಭಾಗ ೫೩

ಪ್ರಾಮಾಣಿಕತೆ !

ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಗಾಂಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”

ಮಗ “ಪ್ರಾಮಾಣಿಕತೆ ಎಂದರೆ?”

ಗಾಂಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು”

ಮಗ “ಹಾಗಾದರೆ ವಿವೇಚನೆ ಎಂದರೇನು?”

ಗಾಂಪ “ಮಾತು ಕೊಡದೇ ಇರೋದು”

***

ರೋಗ

ಗಾಂಪನ ಹೆಂಡತಿ ಶ್ರೀಮತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.

“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ”

“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ”

“ಏತಕ್ಕೆ?”

“ಉಸಿರಾಡಲಿಕ್ಕೆ”

***

ಜಗಳ

ಗಾಂಪ ಮತ್ತು ಆತನ ಹೆಂಡತಿ ಶ್ರೀಮತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಸೂರಿ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಸೂರಿ ಜಗಳವಾಡುತ್ತಿದ್ದ ಗಾಂಪನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?”

“ಅವಳು ನನ್ನೆದುರು ಮೊಣಕಾಲೂರಿದಳು”

“ಅದು ಹೇಗೆ ಸಾಧ್ಯವಾಯಿತೋ ಮಹರಾಯ?”

“ನಾನು ಮಂಚದ ಕೆಳಗೆ ನುಸುಳಿದ್ದೆ”

***

ನೀವು ಯಾರು?

ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿ ಗಾಂಪ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್‌ಗೃಹಸ್ಥ”. “ಸರಿಯಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ.

***

ಸೋಪು

ಶ್ರೀಮತಿ “ರೀ ಒಂದು ಸೋಪು ಕೊಡಿ.”

ಸೂರಿ “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.”

ಶ್ರೀಮತಿ “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?”

***

ಗ್ಯಾರಂಟಿ !

ಶ್ರೀಮತಿ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.

ಶ್ರೀಮತಿ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನಾಗಿ ಬರುತ್ತೆ.”

ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”

ಶ್ರೀಮತಿ “ತತ್‌ಕ್ಷಣ ಬನ್ನಿ, ಗ್ಯಾರಂಟಿ ಇದೆ, ಬದಲಾಯಿಸಿ ಕೊಡ್ತೀವಿ.”

***

ಜನಸಂಖ್ಯೆ

ಮೇಷ್ಟ್ರು: ಗಾಂಪ, ಭಾರತ ದೇಶದ ಜನಸಂಖ್ಯೆ ಎಷ್ಟೋ?

ಗಾಂಪ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು… ಎರಡು… ಮೂರು…ನಾಲ್ಕು.

ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು… ಎರಡು…ಸರಿಯಗಿ ಹೇಳೋ?

ಗಾಂಪ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್!

***

ಪ್ರಧಾನ ಮಂತ್ರಿ

ಹುಚ್ಚರಿಬ್ಬರು ಮಾತನಾಡುತ್ತಿದ್ದರು.

ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ.

ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.

ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?

ಎರಡನೇ ಹುಚ್ಚ : ನಾನು ಆ ಸ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ.

***

ಮಾರಾಟದ ಅನುಭವ 

“ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?” ಎಂದು ಸೇಲ್ಸ್‌ಮ್ಯಾನ್ ಕೆಲಸಕ್ಕೆ ಸಂದರ್ಶನಕ್ಕೆ ಬಂದ ಗಾಂಪನನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು.

“ಓಹೋ… ಸಾಕಷ್ಟು ಇದೆ ಸಾರ್ … ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ. ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ…” ಎಂದು ಪ್ರಾಮಾಣಿಕವಾಗಿ ಉತ್ತರ ನೀಡಿದ ಗಾಂಪ !

***

ಸಾಧ್ಯವೇ ಇಲ್ಲ !

ಗಾಂಪ: ಡಾಕ್ಟರ್ ಬಿದ್ದಿದ್ದೇನೆ, ಗಾಯವಾಗಿದೆ ನೋಡಿ

ಡಾಕ್ಟರ್: ಒಳಪೆಟ್ಟು ಆಗಿದೆ. ಒಂದು ಔಷಧ ಕೊಡುವೆ. ಏಟು ಬಿದ್ದ ಜಾಗದಲ್ಲಿ ಹಚ್ಚು. 

ಗಾಂಪ: ಏನ್ ಡಾಕ್ಟರ್ ಹೇಳುತ್ತೀರಿ ನೀವು? ಅದು ಸಾಧ್ಯನೇ ಇಲ್ಲ.

ಡಾಕ್ಟರ್: ಏಕೆ? ಏನಾಯ್ತು?

ಗಾಂಪ: ನಾನು ಬಿದ್ದ ಸ್ಥಳ ಇಲ್ಲಿಂದ ತುಂಬಾ ದೂರವಿದೆ. ಮತ್ತೆ ಅಲ್ಲಿ ಹೋಗಿ ಔಷಧಿ ಹಚ್ಚೋಕೆ ಆಗಲ್ಲ. 

***

ಹೇಡಿಗಳ ಕೆಲಸ !

ಗಾಂಪ: ನನ್ನಜ್ಜ ಯುದ್ಧದಲ್ಲಿ ಸಾವಿರ ಜನರ ಕಾಲು ಕಡಿದಿದ್ದಾರೆ ಗೊತ್ತಾ?

ಸೂರಿ: ಹೌದಾ, ತಲೆಯನ್ನು ಯಾಕೆ ಕಡಿಯಲಿಲ್ಲ?

ಗಾಂಪ: ಹೇಡಿಗಳು ಯಾರೋ ತಲೆಯನ್ನು ಮೊದಲೇ ಕಡಿದುಬಿಟ್ಟಿದ್ದರು.

***

(ಸಂಗ್ರಹ) 

ಚಿತ್ರ ಕೃಪೆ: ಅಂತರ್ಜಾಲ ತಾಣ