‘ಸಂಪದ' ನಗೆ ಬುಗ್ಗೆ - ಭಾಗ ೫೫

‘ಸಂಪದ' ನಗೆ ಬುಗ್ಗೆ - ಭಾಗ ೫೫

ಇರುವುದೊಂದೇ ಹೃದಯ...!

ಗಾಂಪ ಸದಾ ಶ್ರೀಮತಿಯ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್‌ ಮಾಡಬೇಕೆಂಬುದು ಅವನ ಇರಾದೆ. ಶ್ರೀಮತಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ್ರಯತ್ನಗಳನ್ನು ಅವಳು ಮೌನವಾಗಿ ಗಮನಿಸುತ್ತಿದ್ದಳು.

ಆ ದಿನ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಕ್ಯಾಂಟೀನ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಹುಡುಗಿಯರ ಬಳಿ ಕುಳಿತಿದ್ದ ಶ್ರೀಮತಿಯನ್ನು ಹುಡುಕಿಕೊಂಡು ಬಂದ ಗಾಂಪ, ತನ್ನದೇ ಲಹರಿಯಲ್ಲಿ ಹಾಡತೊಡಗಿದ, `ಇರುವುದೊಂದು ಹೃದಯ…. ಯಾರಿಗೆಂದು ಕೊಡಲಿ… ನಾವು ಯಾರಿಗಂತ ಕೊಡಲಿ….’

ಎಲ್ಲರೂ ಉತ್ಸಾಹದಿಂದ ಗಾಂಪನನ್ನೇ ಗಮನಿಸತೊಡಗಿದರು. ರೊಮ್ಯಾಂಟಿಕ್‌ ಆಗಿ ಅವನು ಮುಂದೇನು ಹೇಳಲಿದ್ದಾನೋ ಎಂದು ಶ್ರೀಮತಿಯೂ ಸಹ ಅವನನ್ನೇ ನೋಡುತ್ತಿದ್ದಳು.

`ಇರುವುದೊಂದೇ ಹೃದಯ… ಯಾರಿಗೆಂದು ಕೊಡಲಿ… ನಾ ಯಾರಿಗೆಂದು ಕೊಡಲಿ….’ ಎಂದು ಬೇಕೆಂದೇ ಅವನು ರಾಗ ಎಳೆದಾಗ ಶ್ರೀಮತಿಗೆ ರೇಗಿತು, “ಯಾವಳಿಗಾದ್ರೂ ಕೊಟ್ಕೋ, ಅದನ್ನು ಕಟ್ಟಿಕೊಂಡು ನನಗೇನು?” ಎಂದು ಸಿಡುಕುತ್ತಾ ಎದ್ದುಹೋದಾಗ ಅಲ್ಲಿದ್ದ ಎಲ್ಲರೂ ಜೋರಾಗಿ ನಕ್ಕರು. ಹೆಚ್ಚಿನ ಸ್ಕೋಪ್‌ ತೆಗೆದುಕೊಳ್ಳಲು ಹೋಗಿ ಗಾಂಪ ಪೆದ್ದುಪೆದ್ದಾಗಿ ಜಾರಿಬಿದ್ದಿದ್ದ.

***

ಅಪಾಯ!

ಟೀಚರ್‌ : ಗಾಂಪ, ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?

ಗಾಂಪ : ಅದೂ…. ಅದೂ… ನನ್ನ ನಾಲಿಗೆ ಮೇಲೆ ಇದೆ. ಆದರೆ ಹೊರಗೆ ಬರುತ್ತಿಲ್ಲ….

ಟೀಚರ್‌ : ಸೋಡಿಯಂ ಕ್ಲೋರೈಡ್‌, ಹೆಚ್ಚು ಹೊತ್ತು ಉಪ್ಪನ್ನು ನಾಲಿಗೆ ಮೇಲೆ ಇಟ್ಟುಕೊಳ್ಳಬೇಡ…. ಜಿಪಿ ಜಾಸ್ತಿ ಆದೀತು !

***

ಜಿಪುಣ

ಹೊಸ ಹೋಟೆಲ್ ‌ಹೊಕ್ಕ ಜಿಪುಣ ಗಾಂಪ ಕೇಳಿದ, “ಏನಪ್ಪ… ಈ ಹೋಟೆಲ್‌ನಲ್ಲಿ ಎಲ್ಲಕ್ಕಿಂತ ಅಗ್ಗ ಯಾವುದು?”

ಅವನ ಮುಖವನ್ನೇ ಪೆಕರುಪೆಕರಾಗಿ ನೋಡುತ್ತಾ ಮಾಣಿ ಉತ್ತರಿಸಿದ, “ಅದೇ…. ನೀರು!”

“ಹಾಗಿದ್ದರೆ ೨ ಗ್ಲಾಸ್‌ ನೀರು ಕೊಡಪ್ಪ,” ಎಂದು ಜಿಪುಣಾಗ್ರೇಸ ಗಾಂಪ ತನ್ನ ಜೇಬು ಸವರಿಕೊಂಡ.

***

ದಂಡ

ಗಾಂಪ : ಅಪ್ಪ, ಐವತ್ತು ರೂಪಾಯಿ ಕೊಡು. ಇವತ್ತು ಶಾಲೆಗೆ ಹೋಗಲು ತಡವಾಯ್ತು ಅಂತ ದಂಡ ಹಾಕಿದ್ದಾರೆ.

ಅಪ್ಪ : ಪರವಾಗಿಲ್ಲ, ನಾಳೆ ಅರ್ಧ ಗಂಟೆ ಬೇಗನೆ ಶಾಲೆಗೆ ಹೋಗಿಬಿಡು, ಅವರೇ ನಿನಗೆ ಐವತ್ತು ರೂಪಾಯಿ ಕೊಡ್ತಾರೆ.

***

ಕಾಲೇಜಿನಲ್ಲಿ ಬಾಯ್‌ ಫ್ರೆಂಡ್‌ ಗರ್ಲ್ ಫ್ರೆಂಡ್‌ ಪ್ರಕರಣಗಳು ಸಾಮಾನ್ಯ. ಹೀಗಾಗಿ ಅಂಥವರು ಸದಾ ಗುಂಪಾಗಿ ಅಲ್ಲಿ ಇಲ್ಲಿ ಅಡ್ಡಾಡುತ್ತಿರುತ್ತಾರೆ. ಅಂಥವರಲ್ಲಿ ಗಾಂಪ ಫ್ಲರ್ಟಿಂಗ್‌ ಸ್ವಭಾವದ, ಉಡಾಳ ಪೋಕರಿ ಎನಿಸಿದ್ದ. ಹೊಸದಾಗಿ ಸೇರಿದ್ದ ಶ್ರೀಮತಿಯ ಮೇಲೆ ಅವನ ಕಣ್ಣು ಬಿತ್ತು. ಅವನ ಪುಂಡಾಟಿಕೆ ಗೊತ್ತಿದ್ದ ಶ್ರೀಮತಿ ಗಾಂಪನಿಗೆ ಎಂದೂ ಉತ್ತೇಜನ ಕೊಡಲಿಲ್ಲ. ಎಂದಿನಂತೆ ಆ ವರ್ಷ ವ್ಯಾಲೆಂಟೈನ್‌ ಡೇ ಬಂತು. ಯುವ ಜೋಡಿಗಳು ತಂತಮ್ಮ ಸಂಗಾತಿಗಳ ಕೈಹಿಡಿದು ಎಲ್ಲರ ಮುಂದೆ ಸ್ಟೈಲಾಗಿ ಪೋಸ್ ಕೊಡುತ್ತಾ, ಕ್ಲಾಸ್‌ ಬಂಕ್‌ ಮಾಡಿ ಹೊರಗೆ ಸುತ್ತಾಡಲು ಹೊರಟರು. ಆಗ ಫ್ರೀ ಪಿರಿಯಡ್‌ ಇದ್ದ ಕಾರಣ ಶ್ರೀಮತಿ (ತನ್ನ ಗೆಳತಿಯರಿಗಾಗಿ) ಕ್ಯಾಂಟಿನ್‌ನಲ್ಲಿ ಕಾಯುತ್ತಾ ಕುಳಿತಿದ್ದಳು.

ಅಲ್ಲಿಗೆ ಆಕಸ್ಮಿಕವಾಗಿ ಬಂದ ಗಾಂಪ, “ಶ್ರೀಮತಿ ಮೈ ಡಿಯರ್‌, ಇವತ್ತಾದರೂ ನೀನು ನನ್ನ ಪ್ರೇಮ ಅಂಗೀಕರಿಸಿ ನನ್ನೊಂದಿಗೆ ಹೊರಗೆ ಬರಬಾರದೇ?” ಎಂದು ವಿನಂತಿಸಿಕೊಂಡ.

ಶ್ರೀಮತಿ ಅದಕ್ಕೆ, “ಅದೆಲ್ಲ ನನಗೆ ಬೇಕಾಗಿಲ್ಲ. ನಾನು ಫ್ರೆಂಡ್ಸ್ ಗಾಗಿ ಕಾಯುತ್ತಿದ್ದೇನೆ” ಎಂದಳು. ಸ್ವಲ್ಪ ಹೊತ್ತಿಗೆ ಅವಳ ಫ್ರೆಂಡ್ಸ್ ಅಲ್ಲಿಗೆ ಬಂದರು. ಆದರೆ ಗಾಂಪ ಭಂಡನಂತೆ ಇನ್ನೂ ಅಲ್ಲೇ ನಿಂತಿದ್ದ. “ಶ್ರೀಮತಿ, ಇವತ್ತು ಪ್ರೇಮಿಗಳ ದಿನ. ಎಲ್ಲೆಲ್ಲೂ ವಾತಾವರಣದಲ್ಲಿ ಪ್ರೇಮ ತುಂಬಿದೆ, ಲವ್ ವೈರಸ್‌ ಹರಡಿದೆ. ನಿನ್ನನ್ನು ನೋಡಿದಾಗಿನಿಂದ ಬಹುಶಃ ನನ್ನನ್ನೂ ಅದೇ ವೈರಸ್‌ ಅಟ್ಯಾಕ್‌ ಮಾಡಿರಬೇಕು,” ಎಂದ. ಆ ಭಂಡನ ಪ್ರೇಮಾಲಾಪ ಕೇಳಲಾರದೆ ಶ್ರೀಮತಿ ಥಟ್ಟನೆ, “ಚಿಂತೆ ಮಾಡಬೇಡ. ನನ್ನ ಬಳಿ ಹೊಸ ಸ್ಯಾಂಡಲ್ಸ್ ಇವೆ, ಅವು ಆ್ಯಂಟಿ ವೈರಸ್‌ ಕೆಲಸ ಮಾಡುತ್ತವೆ,” ಎನ್ನುತ್ತಾ ಅವಳು ತನ್ನ ಸ್ಯಾಂಡಲ್ಸ್ ಕೈಗೆತ್ತಿಕೊಂಡಾಗ ಅವನು ತನ್ನ ಕಾಲಿಗೆ ಬುದ್ಧಿ ಹೇಳಿದ. ಅದನ್ನು ಕಂಡು ಅಲ್ಲಿದ್ದ ಗೆಳತಿಯರೆಲ್ಲ ಜೋರಾಗಿ ನಕ್ಕರು.

***

ದಂಡ

ನ್ಯಾಯಾಧೀಶರು : ಭಾಷಣ ಮಾಡುತ್ತಿದ್ದ ಒಬ್ಬ ರಾಜಕಾರಣಿಗೆ ನೀನು ನೇರವಾಗಿ ಚಪ್ಪಲಿ ಎಸೆದು ಎಲ್ಲರ ಮುಂದೆ ಅವಮಾನ ಮಾಡಿದ್ದಿ. ಹೀಗಾಗಿ ನಿನಗೆ ೧೦೦೦ ರೂ. ದಂಡ ವಿಧಿಸಲಾಗಿದೆ.

ಗಾಂಪ : ಸ್ವಾಮಿ, ನನ್ನ ಬಳಿ ಕೇವಲ ೨೦೦೦ ರೂ. ಒಂದೇ ನೋಟಿದೆ. ನೀವು ಹೂಂ ಅಂದ್ರೆ ಆತನಿಗೆ ಇನ್ನೊಂದು ಮೆಟ್ಟಿನ ಕಾಣಿಕೆ ಕೊಡಲೇ?

***

ಪರೀಕ್ಷೆ

ಗಾಂಪನ ಎದುರು ಬೆಂಚಿನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ ಸೂರಿಯ ಪೇಪರ್‌ ನೋಡಿ ನೋಡಿ ಕಾಪಿ ಮಾಡುತ್ತಿದ್ದ. ಇದನ್ನು ಗಮನಿಸಿದ ಪರೀಕ್ಷಕರು ಕೋಪದಿಂದ, “ಏನಪ್ಪ ಗಾಂಪ, ಲಕ್ಷಣವಾಗಿ ಸೂರಿಯ ಪಕ್ಕದಲ್ಲೇ ಕೂರುವುದು ತಾನೇ?” ಎಂದರು.

“ಥ್ಯಾಂಕ್ಸ್ ಸರ್‌, ನನಗೆ ಇಲ್ಲಿಂದಲೇ ಕಾಣುತ್ತೆ… ನೀವು ಸ್ವಲ್ಪ ಬದಿಗೆ ಸರಿದು ನಿಂತು ಕೊಳ್ಳಿ,” ಎನ್ನುವುದೇ?

***

ಮದುವೆ ಹೆಣ್ಣು

ಒಂದು ಹುಚ್ಚಾಸ್ಪತ್ರೆಯ ಒಳರೋಗಿಗಳಾಗಿದ್ದ ಕೆಲವು ಹೆಂಗಸರು ಹುಚ್ಚುಚ್ಚಾಗಿ ಕುಣಿಯುತ್ತಿದ್ದರು. ಅವರಲ್ಲಿ ಒಬ್ಬಾಕೆ ಮಾತ್ರ ಸೈಲೆಂಟ್‌ ಆಗಿ ಬದಿಯಲ್ಲಿ ಕುಳಿತಿದ್ದಳು. ಬಹುಶಃ ಆಕೆಗೆ ವಾಸಿ ಆಗಿರಬೇಕೆಂದು ಅಲ್ಲಿಗೆ ಬಂದ ಒಬ್ಬರು ಪ್ರಶ್ನಿಸಿದರು, “ಏನಮ್ಮ, ನೀವೇಕೆ ಅವರ ಜೊತೆ ಡ್ಯಾನ್ಸ್ ಮಾಡುತ್ತಿಲ್ಲ…?”

ಆಗ ಆಕೆ, “ಏ ಗುಗ್ಗು, ಅಷ್ಟೂ ಗೊತ್ತಾಗೊಲ್ವೆ? ನಾನು ಮದುವೆ ಹೆಣ್ಣು!” ಎನ್ನುವುದೇ?

***

ಸಲಹೆ

ಪತಿಪತ್ನಿಯರಲ್ಲಿ ಯದ್ವಾತದ್ವಾ ಜಗಳ ನಡೆಯುತ್ತಿತ್ತು.

ಪತ್ನಿ : ಛೇ….ಛೇ! ನಾನು ನಮ್ಮಮ್ಮನ ಮಾತು ಕೇಳಿದ್ದರೆ ಚೆನ್ನಾಗಿರುತ್ತಿತ್ತು, ನಿನ್ನನ್ನು ಮದುವೆ ಆಗುವ ಕರ್ಮ ಇರುತ್ತಿರಲಿಲ್ಲ.

ಪತಿ : ಅಂದರೆ…? ನಿಮ್ಮಮ್ಮ ನನ್ನನ್ನು ಮದುವೆ ಆಗಬೇಡ ಅಂತ ಹೇಳಿದ್ದರೆ?

ಪತ್ನಿ : ಹೌದು, ನೂರಲ್ಲ ಸಾವಿರ ಸಲ ಹೇಳಿದ್ದರು.

ಪತಿ : ಅಯ್ಯೋ (ಗೋಳಾಡುತ್ತಾ) ಎಂಥ ಕೆಲಸ ಆಗ್ಹೋಯ್ತು…. ಆ ಪುಣ್ಯಾತ್ಗಿತ್ತಿ ನನ್ನನ್ನು ಈ ನರಕದಿಂದ ಕಾಪಾಡಲು ಅಷ್ಟು ಒಳ್ಳೆಯ ಸಲಹೆ ಕೊಟ್ಟಿದ್ದರೆ? ಅನ್ಯಾಯವಾಗಿ ಅವರನ್ನು ಪಾಪಿಷ್ಟ ಹೆಂಗಸು ಅಂತ ಇಷ್ಟು ದಿನ ಬೈದುಕೊಳ್ಳುತ್ತಿದ್ದೆ.

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ