‘ಸಂಪದ' ನಗೆ ಬುಗ್ಗೆ - ಭಾಗ ೫೬
ತಪ್ಪು ಕೀ!
ಆ ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು. ಗಾಂಪ ಮತ್ತು ಸೂರಿ. ಅದರಲ್ಲಿ ಗಾಂಪನನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ ತಾನೇ ಮದುವೆ ಆಗಿದ್ದ ಗಾಂಪ ಅನಿವಾರ್ಯವಾಗಿ ಯುದ್ಧಕ್ಕೆ ಹೋಗಬೇಕಾಗಿ ಬಂತು. ಮಹಾರಾಜ ಕೂಡ ದೇಶ ಮುಖ್ಯ. ಮೊದಲು ನೀನು ಯುದ್ಧ ಭೂಮಿಗೆ ಹೋಗಿ ನೀನು ಹೊಸ ರಾಜ ಅನ್ನೋದನ್ನ ಸಾಬೀತು ಪಡಿಸಿಕೊಂಡು ಬಾ ಅಂದ. ಸರಿ ಅಂತ ಗಾಂಪ ಹೊರಟ. ಆದರೆ ಅವನಿಗೆ ಹೊಸದಾಗಿ ಮದುವೆಯಾದ ಹೆಂಡತಿಯನ್ನು ಬಿಟ್ಟು ಹೋಗೋಕೆ ಮನಸ್ಸಿರಲಿಲ್ಲ. ಆದರೆ ಏನ್ ಮಾಡೋದು, ರಾಜ್ಯದ ನೀತಿ ನಿಯಮದ ಪ್ರಕಾರ ಮಹಾರಾಜರ ಆಜ್ಞೆ ಪಾಲಿಸಬೇಕಿತ್ತು. ಅದರ ಪ್ರಕಾರ ಸೂರಿಯನ್ನು ಕರೆದು ಹೇಳಿದ “ನೋಡು ಸೂರಿ, ನಾನೀಗ ಯುದ್ಧಭೂಮಿಗೆ ಹೋಗ್ತಾ ಇದ್ದೇನೆ. ನಾನು ಗೆದ್ದು ಬಂದರೆ ಸಂತೋಷ. ಅಕಸ್ಮಾತ್ ನಾನು ಸತ್ತು ಹೋದರೆ, ಮುಂದೆ ನೀನೇ ರಾಜ್ಯ ಆಳಬೇಕು. ಅಲ್ಲದೆ, ನಾನು ಮದುವೆ ಆಗಿರುವ ಹುಡುಗಿ ಕೂಡ ನಿನ್ನವಳಾಗುತ್ತಾಳೆ. ಹಾಗಾಗಿ ಆಕೆಯನ್ನು ನಾನು ನನ್ನ ಕೋಣೆಯಲ್ಲಿಟ್ಟು ಬೀಗ ಹಾಕಿದ್ದೇನೆ. ಅದರ ಕೀ ಇಲ್ಲಿದೆ. ನಾನು ವಾಪಾಸ್ಸು ಬರದೇ ಇದ್ದರೆ ಮಾತ್ರ ಕೀ ಬಳಸಿ, ಬೀಗ ತೆಗೆ. ಆಕೆ ನಿನ್ನವಳಾಗುತ್ತಾಳೆ" ಸರಿ, ಗಾಂಪ ಕೀ ಕೊಟ್ಟು ಹೊರಟ. ಆದರೆ ಕುದುರೆ ಹತ್ತಿ ಸ್ವಲ್ಪ ದೂರ ಹೋದ ಮೇಲೆ ಹಿಂದಿನಿಂದ ಯಾರೋ ಕೂಗಿದ ಹಾಗಾಯಿತು. ಕುದುರೆಯಿಂದ ಇಳಿದು, ಹಿಂದೆ ನೋಡಿದರೆ ಯಾರೋ ಧೂಳೆಬ್ಬಿಸಿಕೊಂಡು, ಇನ್ನೊಂದು ಕುದುರೆಯ ಮೇಲೆ ಬರ್ತಾ ಇದ್ದುದು ಕಾಣಿಸಿತು. ಸ್ವಲ್ಪ ಹೊತ್ತು ನಿಂತು ನೋಡಿದರೆ ಅಲ್ಲಿ ಬರ್ತಾ ಇದ್ದುದು, ಸೂರಿ. ಸೂರಿ ತೀರಾ ಅವಸರದಿಂದ ಕುದುರೆಯಿಂದ ಇಳಿದು ಗಾಂಪನ ಬಳಿಗೆ ಬಂದ. ಏನಾಯ್ತು ಸೂರಿ? ಅಂತ ಗಾಂಪ ಕೇಳಿದ್ದಕ್ಕೆ ಸೂರಿ ಹೇಳಿದ. “ಗಾಂಪ, ನೀನು ಯುದ್ಧಕ್ಕೆ ಹೊರಡುವ ಅವಸರದಲ್ಲಿ ತಪ್ಪು ಕೀ ಕೊಟ್ಟಿದ್ದೀಯಾ!”
***
ತಪ್ಪು
ಗಾಂಪ ತಪ್ಪು ಮಾಡುತ್ತಾನೆ. ಆಗ ಶ್ರೀಮತಿಗೆ ಕೆಟ್ಟ ಕೋಪ ಬರುತ್ತದೆ. ಆಗ ಗಾಂಪ ತಕ್ಷಣ ಹೇಳ್ತಾನೆ, “ಸಾರಿ!”
ಶ್ರೀಮತಿ ತಪ್ಪು ಮಾಡುತ್ತಾಳೆ. ಆಗ ಗಾಂಪನಿಗೆ ಕೆಟ್ಟ ಕೋಪ ಬರುತ್ತದೆ. ಇನ್ನೇನು? ಶ್ರೀಮತಿ ಗೊಳೋ ಎಂದು ಅಳುತ್ತಾಳೆ.
ಆಗ ಗಾಂಪ ತಕ್ಷಣ ಹೇಳ್ತಾನೆ, “ಸಾರಿ!”
***
ಶಿಕ್ಷೆ !
ಒಬ್ಬ ಮಹಿಳೆ ಮಾಲ್‌ಗೆ ಹೋಗಿ ಬಿಸ್ಕತ್ತಿನ ಪ್ಯಾಕೆಟ್ ಕದಿಯುವಾಗ ಸಿಕ್ಕಿಬಿದ್ದಳು. ವಿಚಾರಣೆಗಾಗಿ ಆಕೆಯನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಯಿತು.
ಜಡ್ಜ್ : ಏನಮ್ಮ, ನೀನು ಬಿಸ್ಕತ್ತು ಪ್ಯಾಕೆಟ್ ಕದ್ದಿದ್ದು ನಿಜ ತಾನೇ?
ಮಹಿಳೆ : ಹ್ಞೂಂ
ಜಡ್ಜ್ : ನೀನು ಕದ್ದ ಆ ಪ್ಯಾಕೆಟ್‌ನಲ್ಲಿ ಒಟ್ಟು ಹತ್ತು ಬಿಸ್ಕತ್ತುಗಳಿದ್ದವು. ಹೀಗಾಗಿ ನಿನಗೆ ಹತ್ತು ದಿನಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
ಅಷ್ಟರಲ್ಲಿ ಹಿಂದಿನ ಬೆಂಚಿನಿಂದ ಒಂದು ಗಂಡು ಧ್ವನಿ ಕೇಳಿಸಿತು, “ಅಷ್ಟು ಮಾತ್ರ ಅಲ್ಲ ಸ್ವಾಮಿ, ಅವಳು ಕಾಲು ಕೆ.ಜಿ. ಸಾಸಿವೆ ಪ್ಯಾಕೆಟ್ ಸಹ ಕದ್ದಿದ್ದಳು…” ಆ ಧ್ವನಿ ಯಾರದೆಂದು ಎಲ್ಲರೂ ತಿರುಗಿ ನೋಡಿದರೆ, ಅದು ಅವಳ ಗಂಡನಾಗಿರಬೇಕೇ?
***
ಮದುವೆಯ ಮೊದಲು-ನಂತರ
ಮದುವೆಗೆ ಮುಂಚೆ ಬಾಯ್‌ಫ್ರೆಂಡ್ ತನ್ನ ಗರ್ಲ್ ಫ್ರೆಂಡ್‌ಗೆ ಹೇಳುತ್ತಾನೆ, “ಚಿನ್ನ…. ರನ್ನ… ನೀನೇ ನನ್ನ ಪ್ರಾಣ!”
ಮದುವೆ ನಂತರ ಅದೇ ಬಾಯ್‌ಫ್ರೆಂಡ್ ಗಂಡ ಅಂತಾದಾಗ, ಹೆಂಡತಿಯಾಗಿರುವ ಹಳೇ ಗರ್ಲ್ ಫ್ರೆಂಡ್‌ಗೆ ಹೇಳುತ್ತಾನೆ, “ಚಿನ್ನ… ರನ್ನ…. ಅಂತ ತೆಗೀಬೇಡ ನನ್ನ ಪ್ರಾಣ!”
***
ಮೇಕಪ್
ಮದುವೆಗಳ ಸೀಝನ್ ಶುರುವಾಗಿತ್ತು…..ಗಾಂಪ ಲೇಡಿಸ್ ಪಾರ್ಲರ್ ಹೊರಗಿನ ಬೆಂಚಿನಲ್ಲಿ ಕುಳಿತು ಪೇಪರ್ ಓದುತ್ತಿದ್ದ. ಅಲ್ಲಿಂದ ನೇರ ಅವರು ರಿಸೆಪ್ಶನ್ ಹಾಲ್‌ಗೆ ಹೋಗಬೇಕಿತ್ತು. 2-3 ಗಂಟೆಗಳ ನಂತರ ಒಬ್ಬ ಮಹಿಳೆ ಒಳಗಿನಿಂದ ಹೊರಬಂದು, ಆತನ ಭುಜದ ಮೇಲೆ ಕೈ ಇರಿಸುತ್ತಾ, “ಬನ್ನಿ ಹೋಗೋಣ,” ಎಂದರು.
ಗಾಂಪ ಗಾಬರಿಯಿಂದ ಬೆವರಿ, “ಅಯ್ಯೋ! ನೀವು ಯಾರೋ ನನಗೆ ಗೊತ್ತಿಲ್ಲ… ನನಗೆ ಈಗಾಗಲೇ ಮದುವೆ ಆಗಿದೆ. ನನ್ನ ಹೆಂಡತಿ ಮೇಕಪ್‌ಗಾಗಿ ಒಳಗೆ ಹೋಗಿದ್ದಾಳೆ….”
ಆಗ ಆ ಮಹಿಳೆ ಹೇಳಿದಳು, “ನಾನೇ ಕಣ್ರೀ, ಸರಿಯಾಗಿ ನೋಡಿ!” ಎನ್ನುವುದೇ?
***
ಕಾರಣ
ಶ್ರೀಮತಿ : ಆಗಿನಿಂದ ಗಂಟೆಗಟ್ಟಲೆ ಬಡ್ಕೊಳ್ತಿದ್ದೀನಿ. ನೀನು ಕೇಳಿಸಿಕೊಳ್ಳದೆ ಆಕಳಿಸುತ್ತಿದ್ದಿ. ಏನು ಬಂದಿರೋದು ಕೇಡು?
ಗಾಂಪ : ಆಕಳಿಸೋದು ಏನು ಬಂತು? ನಿನ್ನ ಪ್ರಶ್ನೆಗೆ ಉತ್ತರ ಕೊಡಲು ಪ್ರಯತ್ನಿಸುತ್ತಿದ್ದೀನಿ, ನೀನು ನನ್ನನ್ನು ಮಾತನಾಡಲು ಬಿಟ್ಟರೆ ತಾನೇ?
***
ಹಲ್ಲು ಸೆಟ್
ತಾತಾ : ಲೋ ಗಾಂಪ ಮರಿ, ಒಳಗಡೆ ನನ್ನ ಹಲ್ಲು ಸೆಟ್ ಇದೆ, ಸ್ವಲ್ಪ ತೆಗೆದುಕೊಂಡು ಬಾ..
ಗಾಂಪ : ಏ ತಾತಾ, ಇನ್ನೂ ಅಡುಗೆ ಅಗಿಲ್ಲವಂತೆ. ಏನಿಷ್ಟು ಅರ್ಜೆಂಟು?
ತಾತಾ : ಅಡುಗೆ ಮನೆ ಹಾಳಾಯ್ತು. ಎದುರಿನ ಮನೆಗೆ ಸಿಂಗಲ್ ಅಜ್ಜಿ ಒಬ್ಬರು ಹೊಸದಾಗಿ ಬಾಡಿಗೆಗೆ ಬಂದಿದ್ದಾರಂತೆ, ಸ್ವಲ್ಪ ಮಾತನಾಡಿಸಿಕೊಂಡು ಬರ್ತೀನಿ…..
***
ಜೀನ್ಸ್ ಪ್ಯಾಂಟು
ಗಾಂಪ ನೋಡುತ್ತಾರೆ, ಮಗ ಹೊಲಿಗೆ ಯಂತ್ರದ ಮುಂದೆ ಕುಳಿತು ಜೀನ್ಸ್ ಪ್ಯಾಂಟ್ ಹೊಲಿದುಕೊಳ್ಳುತ್ತಿದ್ದ.
ಅದನ್ನು ಕಂಡು ಅವರು, “ಯಾಕಪ್ಪ, ನಾನು ನಿನಗೆ ಅಷ್ಟು ಖರ್ಚು ಮಾಡಿ ಮದುವೆ ಮಾಡಿಸಿದೆ, ಮನೆಗೆ ಸೊಸೆ ಬಂದಿದ್ದಾಳೆ. ಹಾಗಿದ್ದೂ ನೀನೇ ನಿನ್ನ ಪ್ಯಾಂಟ್ ಹೊಲಿದುಕೊಳ್ಳಬೇಕೇ?” ಎಂದು ರೇಗಿದರು.
“ಅಪ್ಪ, ನೀವು ತಪ್ಪು ಲೆಕ್ಕ ಹಾಕಿದ್ರಿ. ಈ ಜೀನ್ಸ್ ಪ್ಯಾಂಟ್ ಕೂಡ ಅವಳದೇ!” ಎಂದ ಮಗರಾಯ.
***
ಮೂಗು ತೂರಿಸೋದು !
ಒಂದು ಪಾರ್ಕಿನಲ್ಲಿ ಒಂದು ಸಣ್ಣ ಹುಡುಗಿ ಮೇಲಿಂದ ಮೇಲೆ ಚಾಕಲೇಟ್ ತಿನ್ನುತ್ತಲೇ ಇದ್ದಳು. ಅದನ್ನು ಗಮನಿಸಿದ ಒಬ್ಬ ಮಧ್ಯ ವಯಸ್ಸಿನ ಆಂಟಿ ಹೇಳಿದರು, “ಹೆಚ್ಚು ಸಿಹಿ ತಿನ್ನಬೇಡ. ಹಾಗೆ ಮಾಡುವವರು ಬೇಗನೆ ಸತ್ತುಹೋಗುತ್ತಾರಂತೆ. ಗೊತ್ತಾಯ್ತಾ?”
“ಆಂಟಿ, ನಮ್ಮ ಅಜ್ಜಿಗೆ ೧೦೬ ವರ್ಷ. ನಿಮಗೆ ಗೊತ್ತೆ?”
“ಓ…. ಅವರು ಸಿಹಿ ತಿನ್ನೋದಿಲ್ಲ ಅಂತ ಕಾಣ್ಸುತ್ತೆ. ಅದಕ್ಕೆ ದೀರ್ಘಾಯುಷಿ ಆಗಿದ್ದಾರೆ.”
“ಹಾಗಲ್ಲ, ಅವರು ಇನ್ನೊಬ್ಬರ ಕೆಲಸಗಳಲ್ಲಿ ಎಂದೂ ಮೂಗು ತೂರಿಸೋದಿಲ್ಲ. ಅದಕ್ಕೇ!”
***
ತಲೆ ನೋವು
ಸೊಸೆ : ಅತ್ತೆ, ಇವತ್ತು ನೀವೇ ಅಡುಗೆ ಮಾಡಿಬಿಡಿ. ನನಗೆ ಬಹಳ ತಲೆ ನೋವು.
ಅತ್ತೆ : ಅಡುಗೆ ಏನೋ ಮಾಡಬಹುದು, ಆದರೆ ಸುಳ್ಳು ಹೇಳು ನಿನ್ನ ಈ ಚಾಳಿ ನನಗೆ ಹಿಡಿಸಲ್ಲ ನೋಡು.
ಸೊಸೆ : ಆದರೆ… ನಾನು ಸುಳ್ಳು ಹೇಳ್ತಿದ್ದೀನಿ ಅಂತ ನಿಮಗೆ ಹೇಗೆ ಗೊತ್ತಾಯ್ತು…..?
ಅತ್ತೆ : ಒಂದು ಕಾಲದಲ್ಲಿ ನಾನೂ ಸೊಸೆ ಆಗಿದ್ದೆ…..
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ
—