‘ಸಂಪದ' ನಗೆ ಬುಗ್ಗೆ - ಭಾಗ ೫೭

‘ಸಂಪದ' ನಗೆ ಬುಗ್ಗೆ - ಭಾಗ ೫೭

ಸೈಕಾಲಜಿ

ಸೈಕಾಲಜಿ ಕ್ಲಾಸ್ ನಡೆದಿತ್ತು. ಮೇಷ್ಟ್ರು ಏನೋ ಹೇಳೋಕೆ ಹೊರಟಿದ್ದರು. ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುವ ಹುಡುಗರಿಗೆ ಅರ್ಥ ಆಗೋಲ್ಲ ಅನ್ನುವ ವಿಷಯ ಅದು. ಜೀವನದಲ್ಲಿ ಬರೀ ಹುಡುಗಿಯರ ಹಿಂದೆ ಹೋಗೋದೇ ಮುಖ್ಯವಲ್ಲ. ಅವರ ಹಿಂದೆ ಹೋಗಿ ವಿದ್ಯಾಭ್ಯಾಸವನ್ನು ಹಾಳು ಮಾಡಬೇಡಿ ಅನ್ನೋ ಪಾಠವನ್ನು ಹುಡುಗರಿಗೆ ಕಲಿಸುವ ಉದ್ದೇಶ ಮೇಷ್ಟ್ರದ್ದು. ಹಾಗಾಗಿ ಒಂದು ಉದಾಹರಣೆ ಸಮೇತ ಹೇಳೋಣ ಅಂತ ಮೇಷ್ಟರು ಟೇಬಲ್ ಮೇಲೆ ಮಧ್ಯದಲ್ಲಿ ಗೂಡಿನಲ್ಲಿರುವ ಒಂದು ಗಂಡು ಇಲಿ ಇಟ್ಟರು. ಟೇಬಲ್ ನ ಈ ಬದಿಯಲ್ಲಿ ಒಂದು ಹೆಣ್ಣು ಇಲಿ ಇಟ್ಟರು. ಅದೇ ಟೇಬಲ್ ನ ಇನ್ನೊಂದು ಬದಿಯಲ್ಲಿ ಕಡಲೇ ಕಾಯಿ ಬೀಜಗಳನ್ನು ಇಟ್ಟರು. ಗೂಡಿನ ಬಾಗಿಲು ತೆಗೆದ ಕೂಡಲೇ ಗಂಡು ಇಲಿ ಕಡಲೇ ಬೀಜದ ಕಡೆಗೆ ಓಡಿತು. ಮೇಷ್ಟರು ಅದನ್ನೇ ನೋಡ್ತಾ ಇದ್ದ ಹುಡುಗರನ್ನು ಗಮನಿಸುತ್ತಿದ್ದರು. ನಂತರ ಕಡಲೇ ಬೀಜಗಳನ್ನು ತೆಗೆದು ಒಂದಿಷ್ಟು ಕಾಳುಗಳನ್ನು ಇರಿಸಿದರು. ಆಗಲೂ ಇಲಿ ಕಾಳುಗಳ ಕಡೆಗೇ ನುಗ್ಗಿತು. ಅನಂತರ ಅದನ್ನೂ ತೆಗೆದು ಸಣ್ಣ ಸಣ್ಣ ಮಾಂಸದ ಚೂರುಗಳನ್ನು ಇಟ್ಟರು. ಆಗಲೂ ಇಲಿ ಮಾಂಸದ ಕಡೆಗೇ ನುಗ್ಗಿತು. ಈ ಎಲ್ಲಾ ಪ್ರಯೋಗಗಳ ಬಳಿಕ ಮೇಷ್ಟರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ‘ನೋಡಿ, ಈಗಲಾದರೂ ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಗಂಡಸಿಗೆ ಹೆಣ್ಣಿಗಿಂತ ಹೊಟ್ಟೆ ಪಾಡು ಮುಖ್ಯ. ಆಹಾರ ಮುಖ್ಯ' ಎಲ್ಲಕ್ಕಿಂತ ಹಿಂದೆ ನಿಂತಿದ್ದ ಗಾಂಪ ಮೆಲ್ಲನೇ ಹೇಳಿದ. ‘ಸರ್, ಯಾವುದಕ್ಕೂ ಹೆಣ್ಣು ಇಲಿಯನ್ನು ತೆಗೆದು, ಬೇರೆ ಹೆಣ್ಣು ಇಲಿಯನ್ನು ಇಟ್ಟು ನೋಡಿ. ಯಾರಿಗೊತ್ತು? ನೀವಿಟ್ಟಿರೋ ಆ ಹೆಣ್ಣು ಇಲಿ ಆ ಗಂಡು ಇಲಿಯ ಹೆಂಡತಿ ಇದ್ದರೂ ಇರಬಹುದು !’

***

ಕಾಯಿಲೆ

ಗಾಂಪ ವೈದ್ಯರ ಕ್ಲಿನಿಕ್ ಗೆ ಹೋದ. “ಡಾಕ್ಟರ್, ನನಗೊಂದು ವಿಚಿತ್ರ ಕಾಯಿಲೆ ಬಂದಿದೆ. ನನಗೆ ನಾನು ಒಂದು ಚಿಟ್ಟೆ ಅನ್ನುವ ಭಾವನೆ ಬರುತ್ತಿದೆ.” ಎಂದು ತನ್ನ ಸಮಸ್ಯೆ ಹೇಳಿಕೊಂಡ.

ಡಾಕ್ಟರ್ ಮುಖವನ್ನು ತುಸು ಬಾಗಿಸಿ ಕನ್ನಡಕದೊಳಗಿಂದ ತನ್ನ ದೃಷ್ಟಿಯನ್ನು ತೂರಿ ಹೇಳಿದರು “ ಗಾಂಪ, ನಿನಗೆ ಸದ್ಯ ಬೇಕಿರುವುದು ಮಾನಸಿಕ ಆರೋಗ್ಯ ತಜ್ಞರು. ನನ್ನಂಥ ಮೂಳೆ ತಜ್ಞರಲ್ಲ.”

“ಗೊತ್ತು ಡಾಕ್ಟರ್" ಎಂದ ಗಾಂಪ.

“ಮತ್ತೆ ಇಲ್ಲಿಗೆ ಏಕೆ ಬಂದೆ?” ಡಾಕ್ಟರ್ ಪ್ರಶ್ನೆ

" ನಿಮ್ಮ ಕ್ಲಿನಿಕ್ ನಲ್ಲಿ ಟ್ಯೂಬ್ ಲೈಟ್ ಉರೀತಿತ್ತಲ್ಲ !” ಗಾಂಪ ನಿಧಾನವಾಗಿ ಉತ್ತರಿಸಿದ.

***

ಕಾರಣ

ಗಾಂಪ: ನಿನಗೆ ಬೇರೆ ಕೆಲಸ ಇಲ್ಲವೇ? ಬೆಳಿಗ್ಗೆ ಬೆಳಿಗ್ಗೆನೇ ಅಲಂಕಾರ ಮಾಡಿಕೊಂಡಿದ್ದೀಯಲ್ಲಾ?

ಶ್ರೀಮತಿ: ರೀ, ಸುಮ್ಮನಿರಿ, ನನ್ನ ಫೋನ್ ಲಾಕ್ ಓಪನ್ ಮಾಡಬೇಕು. ಅದು ನನ್ನ ಮುಖದ ಗುರುತು ಹಿಡಿಯುತ್ತಿಲ್ಲ.

***

ಮಾನಸಿಕ ಸ್ಥಿತಿ

ಗಾಂಪ: ಈ ಮಾನಸಿಕ ಆಸ್ಪತ್ರೆಯಲ್ಲಿ ಎಲ್ಲಾ ರೋಗಿಗಳು ನಮಸ್ಕರಿಸಿದರು. ಒಬ್ಬ ಮಾತ್ರ ನಮಸ್ಕಾರ ಮಾಡಲಿಲ್ಲ. ಏಕೆ ಡಾಕ್ಟ್ರೇ?

ಡಾಕ್ಟರ್: ಈಗ ಅವನ ಮಾನಸಿಕ ಪರಿಸ್ಥಿತಿ ಸರಿಯಾಗಿದೆ ಸರ್!

***

ಅದೃಷ್ಟ

ಶ್ರೀಮತಿ: ಜ್ಯೋತಿಷಿಗಳೇ, ನನ್ನ ಅದೃಷ್ಟ ಹೇಗಿದೆ? 

ಜ್ಯೋತಿಷಿ: ನಿನ್ನ ಅದೃಷ್ಟ ಚೆನ್ನಾಗಿದೆಯಮ್ಮಾ, ನೀನು ಗಾಂಪನನ್ನು ಮದುವೆಯಾದರೆ ಸೂರಿ ಅದೃಷ್ಟವಂತನಾಗುತ್ತಾನೆ. ಸೂರಿಯನ್ನು ಮದುವೆಯಾದರೆ ಗಾಂಪ ಅದೃಷ್ಟವಂತನಾಗುತ್ತಾನೆ. !

***

ತಬಲಾ

ಮರಿ ಗಾಂಪ: ಅಪ್ಪ, ತಬಲ ತಂದು ಕೊಡಿ ಅಂದ್ರೂ ಏಕೆ ತಂದು ಕೊಡ್ತಾ ಇಲ್ಲ?

ಗಾಂಪ: ತಬಲದ ಶಬ್ಧ ನನಗಾಗುವುದಿಲ್ಲ. ಕಿರಿಕಿರಿಯಾಗುತ್ತೆ

ಮರಿ ಗಾಂಪ: ಅಪ್ಪಾ,, ನಿನಗೆ ಇದರಿಂದ ಏನೂ ತೊಂದರೆ ಆಗೋದಿಲ್ಲ. ನೀನು ಮಲಗಿದ ಮೇಲೆ ಬಾರಿಸ್ತೀನಿ !

***

ತಂಗಿ ಜೊತೆ !

ಗಾಂಪ: ಶ್ರೀಮತಿ, ನಾನೇನಾದರೂ ಸತ್ತು ಹೋದರೆ ಮುಂದೇನು ಮಾಡ್ತೀಯಾ?

ಶ್ರೀಮತಿ: ಹಾಗೇನಾದ್ರೂ ಆದರೆ ನಾನು ನನ್ನ ತಂಗಿ ಜೊತೆ ಇರುತ್ತೇನೆ. ಅದಿರಲಿ, ನಾನು ನಿಮಗಿಂತ ಮುಂಚೆ ಸತ್ತರೆ ನೀವು ಏನು ಮಾಡ್ತೀರಿ?

ಗಾಂಪ: ನಾನೂ ನಿನ್ನ ತಂಗಿ ಜೊತೆ ಇರುತ್ತೇನೆ. !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ