‘ಸಂಪದ' ನಗೆ ಬುಗ್ಗೆ - ಭಾಗ ೫೯

ಕೋಪ !
ಗಾಂಪ ಮತ್ತು ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ದ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬಯ್ದ. ಶ್ರೀಮತಿಯೂ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಗಾಂಪನಿಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಶ್ರೀಮತಿ ಸುಮ್ಮನಾದಳು. ಆದರೆ.. ಎಷ್ಟೊತ್ತಾದರೂ ಗಾಂಪ ವಾಪಾಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಶ್ರೀಮತಿಗೆ ಕೊಂಚ ಗಾಬರಿ ಆಯ್ತು. ಹಾಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆರಡು ಸಲ, ಗಾಂಪ ಕಾಲ್ ರಿಸೀವ್ ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೇಲೆ ಕಾಲ್ ತೆಗೆದು ಗಾಂಪ ಏನು? ಅಂದ. ಸದ್ಯ ಅಂತ ಸಮಾಧಾನ ಪಟ್ಟು ಕೊಂಡ ಶ್ರೀಮತಿ ಎಲ್ಲಿದ್ದೀರಾ? ಅಂತ ಕೇಳಿದಳು. ಅದಕ್ಕೆ ಗಾಂಪ ಸ್ವಲ್ಪ ಎಮೋಶನಲ್ ಆಗಿ ಮಾತನಾಡತೊಡಗಿದ. “ನಿಂಗೆ ನೆನಪಿದೆಯಾ? ಐದು ವರ್ಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯುವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ, ಅಲ್ಲಿ ನಿನಗೊಂದು ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು.” ಶ್ರೀಮತಿ ಕುತೂಹಲದಿಂದ ಹೌದು ಹೌದು ಅಂದಳು. ಗಾಂಪ ಮುಂದುವರೆಸಿದ, “ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ. ಮುಂದೊಂದು ದಿನ ಏನೇ ಆಗ್ಲಿ ಆ ನೆಕ್ಲೇಸ್ ನ ನಾನು ನಿನಗೆ ಕೊಡಿಸೇ ಕೊಡಿಸ್ತೇನೆ ಅಂತ ಹೇಳಿದ್ದೆ". ಶ್ರೀಮತಿ ಇನ್ನಷ್ಟು ಉತ್ಸಾಹದಿಂದ “ಹೌದು ಹೌದು, ನಿಜ ಕಣ್ರೀ, ತುಂಬಾ ಚೆನ್ನಾಗಿ ನೆನಪಿದೆ" ಅಂದಳು. ಮುಂದುವರೆಸಿದ ಗಾಂಪ ಹೇಳಿದ “ ಆ ಜ್ಯುವೆಲ್ಲರಿ ಮುಂದಿರೋ ವೀನೂ ಬಾರಲ್ಲಿ ಕುಳಿತು ಕುಡಿತಾ ಇದ್ದೇನೆ. ಏನ್ ಕಾಲ್ ಮಾಡಿದ್ದು?”!
***
ಅನಿರೀಕ್ಷಿತ
ಗಾಂಪ ಮತ್ತು ಸೂರಿ ತಿರುಗಾಡಲು ಹೊರಟಿದ್ದರು. ಅಷ್ಟರಲ್ಲಿಯೇ ಧುತ್ತನೇ ಮಳೆ ಸುರಿಯಲು ಪ್ರಾರಂಭವಾಯಿತು. ಸೂರಿ ಬಳಿ ಕೊಡೆ ಇತ್ತು. “ ಬಿಡಿಸು, ಬಿಡಿಸು ಬೇಗ ! ಇಲ್ಲದಿದ್ರೆ ಪೂರ್ತಿ ಒದ್ದೆ ಆಗಿ ಬಿಡುತ್ತೇವೆ" ಎಂದು ಅವಸರ ಮಾಡಿದ ಗಾಂಪ. ಸೂರಿ ಹೇಳಿದ “ಅದರಿಂದ ಏನೂ ಉಪಯೋಗ ಇಲ್ಲ. ಒದ್ದೆಯಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಆ ಕೊಡೆ ತುಂಬಾ ತೂತು ಇದೆ.”
“ಏನು? ಅಂಥಾ ಕೊಡೆ ಏಕೆ ತಂದೆ?”
“ನನಗೇನು ಗೊತ್ತಿತ್ತು ಮಳೆ ಇದೇ ಸಮಯ ಬರುತ್ತೇ ಅಂತ!”
***
ಕಾರಣ
“ನೀನು ವಿಚ್ಚೇದನ ಪಡೆದುಕೊಳ್ಳಲು ಕಾರಣವೇನು? ಎಂದು ವಕೀಲರು ಕೇಳಿದರು.
“ಧಾರ್ಮಿಕ ಕಾರಣ"
ಹೇಗೆ?
“ಅವಳು ದುಡ್ಡನ್ನು ಪೂಜೆ ಮಾಡ್ತಾಳೆ. ಆದ್ರೆ ಪೂಜೆ ಮಾಡಲು ಕೊಡುವಷ್ಟು ದುಡ್ಡು ನನ್ನ ಹತ್ತಿರ ಇಲ್ಲ “ ಎಂದ ಗಾಂಪ ಬೇಸರದಿಂದ.
***
ಚೀಟಿ
ಶ್ರೀಮತಿ : ಡಾಕ್ಟರೇ, ಈ ಬಾಟಲಿಗಳ ಮೇಲೆ ಚೀಟಿ ಅಂಟಿಸಿಕೊಡಿ.
ಡಾಕ್ಟರ್: ಏಕಮ್ಮ, ಅದರ ಅವಶ್ಯಕತೆ ಏನಿದೆ?
ಶ್ರೀಮತಿ: ಯಾವ ಬಾಟಲಿ ನನ್ನ ಪತಿಯ ಔಷಧಿಯದ್ದು ಮತ್ತು ಯಾವ ಬಾಟಲಿ ನನ್ನ ಸಾಕು ನಾಯಿ ಟಾಮಿಯದ್ದು ಎಂದು ತಿಳಿಯಲು ಅದರ ಅಗತ್ಯವಿದೆ ಡಾಕ್ಟರೇ, ಏಕೆಂದರೆ ಬಾಟಲಿ ಅದುಲು ಬದಲು ಆಗಿ ನನ್ನ ಟಾಮಿಗೇನಾದರೂ ಹೆಚ್ಚು ಕಮ್ಮಿಯಾಗಬಾರದು ನೋಡಿ !
***
ನೆಕ್ಸ್ಟ್ ನಿಂದೇ !
ಇನ್ನೂ ಮದುವೆಯಾಗದ ಇಪ್ಪತ್ತರ ಹುಡುಗಿ ಹೇಳಿದ ಮಾತಿದು: ಮದುವೆ ಮನೇಲಿ ಸಿಕ್ಕಿಹಾಕಿಕೊಂಡ್ರೆ ಎಲ್ಲಾ ಮುದುಕರು ಕೆನ್ನೆ ಚಿವುಟಿ, ನೆಕ್ಸ್ಟ್ ನಿಂದೇ ಅಂತಿದ್ರು. ನನಗೂ ಕೇಳಿ ಕೇಳಿ ಸಾಕಾಗಿತ್ತು.
ಅದಕ್ಕೇ ಮೊನ್ನೆ ತಿಥಿ ಕಾರ್ಯಕ್ರಮದಲ್ಲಿ ಎಲ್ಲಾ ಮುದುಕರ ಕೆನ್ನೆ ಚಿವುಟಿ ಹೇಳಿದೆ -ನೆಕ್ಸ್ಟ್ ನಿಮ್ಮದೇ ಎಂದು.
***
ಕನ್ನಡ ಕಡ್ಡಾಯ !
ಒಬ್ಬ ಎಲೆಕ್ಟ್ರಿಕಲ್ ಅಂಗಡಿಯವನು ತನ್ನ ಅಂಗಡಿ ಮುಂದೆ ಹೀಗೆ ಬೋರ್ಡ್ ಹಾಕಿ ಕೊಂಡಿದ್ದ “ಕನ್ನಡದಲ್ಲೇ ವ್ಯವಹರಿಸಿ"
ಗಾಂಪ: ‘ಒಂದು ಅಗೋಚರ ಚಿರಣವರಣ ಸ್ಪೂರಣ ದೊಂದಿ ಕೊಡಿ'
ಅಂಗಡಿಯವ ಕಕ್ಕಾಬಿಕ್ಕಿಯಾಗಿ: ಹಾಗೆಂದರೇನು?
ಗಾಂಪ: (ನಗುತ್ತಾ) ಗೊತ್ತಾಗಿಲ್ವಾ? ಒಂದು ಟ್ಯೂಬ್ ಲೈಟ್ ಕೊಡಿ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ