‘ಸಂಪದ' ನಗೆ ಬುಗ್ಗೆ - ಭಾಗ ೬೧

‘ಸಂಪದ' ನಗೆ ಬುಗ್ಗೆ - ಭಾಗ ೬೧

ಸಂಸಾರದಲ್ಲಿ ರಾಶಿಗಳು

ನಿನ್ನೆ ಗಾಂಪ ಗುರುಗಳ ಹತ್ರ ಕೇಳಿದ....

"ಗುರುಗಳೇ.. ನನ್ನ ವೈವಾಹಿಕ ಜೀವನ ಹೇಗಿರುತ್ತೆ? ಗ್ರಹಗಳ ಸಂಚಾರ ಹೇಗಿರುತ್ತೆ?"

ಗುರುಗಳು ಗಾಂಪನ ಕಡೆ ಕರುಣೆಯಿಂದ ನೋಡಿ ಹೇಳಿದರು.‌ "ಗ್ರಹ ಸಂಚಾರ ಹಾಗಿರಲಿ‌, ಸಂಸಾರದಲ್ಲಿ ರಾಶಿಗಳು ಹೇಗಿರುತ್ತವೆ ಹೇಳ್ತೀನಿ ಕೇಳು" ಅಂದ್ರು.

ಗಾಂಪ ಮನದಲ್ಲಿ ಕಾಮನ ಬಿಲ್ಲನ್ನು ಮೂಡಿಸಿಕೊಂಡು ಅವರತ್ತ ನೋಡಿ

ಶಿಷ್ಯ...

ನಿನ್ನ ಜೀವನದಲ್ಲಿ “ಕನ್ಯಾ” ಪ್ರವೇಶ ಆದ ದಿನವೇ,  “ವೃಷಭ" ದ ತರಹ ಇರೋ ನೀನು‌ “ಮೇಷ” ದ ತರಹ ಆಗಿಬಿಡ್ತೀಯ.

ಅವಳೇನೇ ತಪ್ಪು ಮಾಡಿದರೂ....  ಅದು ನಿನ್ನಿಂದಲೇ ಘಟಿಸಿದ ತಪ್ಪು ಎಂದು ವಿನೀತನಾಗಿ‌ “ಧನಸ್ಸು" ತರಹ ಬಾಗಿ ಹೇಳು. 

ಇಲ್ಲವಾದರೆ, ಅವಳ ಮುಖ “ಕುಂಭ" ದ ರೀತಿ ಊದಿ “ಸಿಂಹ"ದ ರೀತಿ ವರ್ತಿಸಬಹುದು. ಅವಳನ್ನು ಸಮಾಧಾನ ಪಡಿಸಲು ಶಾಪಿಂಗ್ ‌ಮಾಡಿಸಿದ ಬಿಲ್‌ “ವೃಷ್ಚಿಕ” ದ ರೀತಿ ಕುಟುಕಬಹುದು! ಏನೇ ಮಾತನಾಡಿದರೂ “ತುಲಾ”  ದಂತೆ ತೂಕವಾಗಿ ಮಾತನಾಡು.

"ಕಟಕ" ದಂತೆ ತಪ್ಪಿಸಿಕೊಳ್ಳಲು ಓಡಾಡಿದರೆ. “ಮಕರ” ದ ರೀತಿಯಲ್ಲಿ ಹಿಡಿದುಕೊಳ್ಳುತ್ತಾಳೆ. "ಸಾಕು ಗುರುಗಳೇ" ಎಂದ ಗಾಂಪ. ಆತನ ಮನಸಿನಲ್ಲಿದ್ದ ಕಾಮನ ಬಿಲ್ಲು ಮಾಯವಾಗಿ ಕಾರ್ಮೋಡ ಆವರಿಸಿತ್ತು.

***

ದೀರ್ಘಾಯುಷ್ಯದ ಗುಟ್ಟು

ಗಾಂಪನಿಗೆ ನೂರು ವರ್ಷ ತುಂಬಿತು. ಸ್ಥಳೀಯ ಸುದ್ದಿ ಮಾಧ್ಯಮದವರು ವಿಶೇಷ ಸಂದರ್ಶನ ಮಾಡಲು ಗಾಂಪನ ಬಳಿ ಬಂದರು. ಈ ಸಂದರ್ಭದಲ್ಲಿ ಎಲ್ಲರೂ ಕೇಳುವ ಪ್ರಶ್ನೆಯನ್ನೇ ವರದಿಗಾರರೂ ಕೇಳಿದರು.

“ತಮ್ಮ ದೀರ್ಘಾಯುಷ್ಯದ ಗುಟ್ಟೇನು?

“ಈರುಳ್ಳಿ” ಎಂದು ಉತ್ತರ ಬಂತು.

“ಈರುಳ್ಳಿಯಾ ಅದು ಹೇಗೆ? ಸ್ವಲ್ಪ ವಿವರಿಸುತ್ತೀರಾ?” 

“ನಾನು ಬೆಳಿಗ್ಗೆ ಉಪಹಾರದ ಹೊತ್ತಿಗೆ ಮೂರು ಈರುಳ್ಳಿ ತಿನ್ನುತ್ತೇನೆ. ಮದ್ಯಾಹ್ನ ಊಟದ ಹೊತ್ತಿಗೆ ಐದು ಈರುಳ್ಳಿ ತಿನ್ನುತ್ತೇನೆ. ರಾತ್ರಿ ಊಟದ ಹೊತ್ತಿಗೆ ಮತ್ತೆ ಮೂರು ಈರುಳ್ಳಿ ತಿನ್ನುತ್ತೇನೆ. ಕೊನೆಗೆ ರಾತ್ರಿ ಮಲಗುವ ಹೊತ್ತಿಗೆ..."

“ಮತ್ತೆ ಈರುಳ್ಳಿ ತಿನ್ನುತ್ತೀರಾ? ವರದಿಗಾರ ಮಧ್ಯೆ ಬಾಯಿ ಹಾಕಿದ.

“ಇಲ್ಲ, ಇಲ್ಲ! ರಾತ್ರಿ ಮಲಗೋ ಹೊತ್ತಲ್ಲಿ ಯಮದೂತ ಬಂದು “ಗಾಂಪ, ಗಾಂಪ” ಎಂದು ಕರೀತಾನಲ್ಲಾ, ಆಗ ನಾನು ದೊಡ್ಡದಾಗಿ ಬಾಯಿ ಅಗಲಿಸಿ ಅವನ ಮುಖಕ್ಕೆ ಮುಕ ಇಟ್ಟು ಕೇಳ್ತೇನೆ “ಯಾರೂ...?” ಅಂತ.

***

ಮೊದಲ ಮಗು !

ಡಾಕ್ಟರ್ ಗಾಂಪ ಅವರ ಫೋನು ರಿಂಗಣಿಸಿತು. ಕರೆ ಸ್ವೀಕರಿಸಿದಾಗ ಅತ್ತಲಿಂದ ದನಿಯೊಂದು ಗಡಿಬಿಡಿಯಿಂದ ಬಡಬಡಿಸಿತು. “ಡಾಕ್ಟರ್, ಏನು ಮಾಡೋದು ತಿಳೀತಿಲ್ಲ. ನನ್ನ ಹೆಂಡತಿ ತುಂಬು ಗರ್ಭಿಣಿ. ಈಗ ಅವಳಿಗೆ ಹೆರಿಗೆ ನೋವು ಶುರುವಾಗಿದೆ. ತೀವ್ರವಾಗಿ ನರಳ್ತಿದ್ದಾಳೆ. ಪ್ರತಿ ಐದು ನಿಮಿಷಕ್ಕೊಮ್ಮೆ ನೋವು ಉಮ್ಮಳಿಸಿ ಉಮ್ಮಳಿಸಿ ಬರ್ತಿದೆ. ಏನು ಮಾಡ್ಬೇಕು ಹೇಳಿ ಬೇಗ !” ಎಂದಿತು ಆ ಧ್ವನಿ.

“ಇದು ಅವರ ಮೊದಲ ಮಗುವೇ?” ಕೇಳಿದರು ಡಾಕ್ಟರ್ ಗಾಂಪ.

“ಅಸಂಬದ್ಧ ಪ್ರಶ್ನೆ ಕೇಳ್ತೀರಲ್ಲ, ನಾನು ಅವಳ ಗಂಡ ಮಾತಾಡ್ತಿರೋದು" ಉತ್ತರ ಬಂತು.

***

ಅಡುಗೆ ಕಲಿಕೆ

ಗಾಂಪ: ಏನೋ ಸೂರಿ, ಎಲ್ಲೋ ಹೊರಟ ಹಾಗಿದೆ?

ಸೂರಿ: ಅಡುಗೆ ಮಾಡುವುದನ್ನು ಕಲಿಯಲು ಹೋಗುತ್ತಿದ್ದೇನೆ.

ಗಾಂಪ: ಅಂದರೆ ಹೊಸದಾಗಿ ಹೋಟೇಲ್ ತೆರೆಯುತ್ತಿದ್ದೀಯಾ?

ಸೂರಿ: ಇಲ್ಲಾ ಗಾಂಪ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ.

***

ಕಾರಣ !

ಟೀಚರ್: ನೋಡಿ ಗಂಡು ಮಕ್ಕಳೇ, ಇಲ್ಲಿರುವ ಎಲ್ಲಾ ಹೆಣ್ಣುಮಕ್ಕಳನ್ನು ನಿಮ್ಮ ಸಹೋದರಿಯರು ಎಂದು ತಿಳೀಬೇಕು. ಗೊತ್ತಾಯ್ತಾ?

ಗಾಂಪ: ಅಬ್ಬಾ, ನನಗೆ ಈಗ ಸಮಾಧಾನ ಆಯ್ತು ಮೇಡಂ.

ಟೀಚರ್: ಯಾಕೋ ಗಾಂಪ ಹಾಗೆ ಹೇಳ್ತಾ ಇದ್ದೀಯಾ?

ಗಾಂಪ: ಯಾಕಂದ್ರೆ ನನ್ನ ಲವರ್ ಪಕ್ಕದ ಕ್ಲಾಸಿನಲ್ಲಿದ್ದಾಳೆ ಅದಕ್ಕೆ ಮೇಡಂ!

***

ಮಂತ್ರದ ಪ್ರಭಾವ

ಸೂರಿ: ಗಾಂಪ, ನೀನು ದೊಡ್ಡ ಮಂತ್ರವಾದಿಯ ಬಳಿ ಮಂತ್ರವಿದ್ಯೆ ಕಲಿಯಲು ಹೋಗಿದ್ದೀಯಲ್ಲಾ? ಏನಾದರೂ ಕಲಿತು ಬಂದಿಯಾ?

ಗಾಂಪ: ಹೌದು, ಕಲಿತು ಬಂದೆ. ನಿನ್ನ ಮೇಲೆ ಪ್ರಯೋಗಿಸಲಾ?

ಸೂರಿ: ಸರಿ, ಪ್ರಯೋಗ ಮಾಡು ನೋಡೋಣ.

ಗಾಂಪ: ಘ್ರಾಂ, ಘ್ರೋಂ, ಫಟ್ ಫಟ್, ಛೂ ಮಂತರ್ ಫಟ್! ಏನಾದ್ರೂ ಆಯ್ತಾ?

ಸೂರಿ: ಏನೂ ಆಗಲೇ ಇಲ್ಲ.

ಗಾಂಪ: ಅಂದರೆ ಮಂತ್ರವಾದಿಯ ಮಾತು ನಿಜವಾಯ್ತು.

ಸೂರಿ: ಏನು?

ಗಾಂಪ: ಮಂಗಗಳ ಮೇಲೆ ಈ ಮಂತ್ರಗಳು ಪ್ರಭಾವ ಬೀರೋದಿಲ್ಲವಂತೆ. !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ