‘ಸಂಪದ' ನಗೆ ಬುಗ್ಗೆ - ಭಾಗ ೭೦

‘ಸಂಪದ' ನಗೆ ಬುಗ್ಗೆ - ಭಾಗ ೭೦

ಸಾಬೀತು

ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?” ಎಂದು ಕೇಳಿತು. ಕೋಣ, “ಅಯ್ಯೋ... ಓಡಿ ಓಡಿ... ಪೋಲೀಸರು ಆನೆ ಹಿಡಿಯಲು ಬರುತ್ತಿದ್ದಾರೆ" ಎಂದಾಗ ಇಲಿ ಬಿದ್ದೂ ಬಿದ್ದೂ ನಗಲಾರಂಭಿಸಿತು. ಕೋಣ, ‘ಅದಕ್ಕೆ ಯಾಕಯ್ಯಾ ಹೀಗೆ ನಗ್ತಿದ್ದೀ?” ಎಂದು ಕೇಳಿದಾಗ ಇಲಿ, ‘ಅವರು ಆನೆ ಹಿಡಿಯಲು ಬರುತ್ತಿದ್ದಾರೆ...ನೀನೇನು ಆನೇನಾ? ನೀ ಯಾಕೆ ಓಡ್ತಾ ಇದ್ದೀಯಾ? ಅಲ್ಲದೆ ನನಗೂ ಓಡಲು ಹೇಳ್ತಾ ಇದೀಯಲ್ಲ?’ ಎಂದು ಪ್ರಶ್ನಿಸಿತು. ಕೋಣ “ಅಯ್ಯೋ, ಮಿತ್ರಾ ಒಮ್ಮೆ ಅವರೇನಾದರೂ ಅಪ್ಪಿತಪ್ಪಿ ನನ್ನನ್ನು ಹಿಡಿದು ಜೈಲಿಗೆ ಹಾಕಿ ಬಿಟ್ಟರೆ, ಆಮೇಲೆ ನಾನು ಆನೆ ಅಲ್ಲ ಕೋಣ ಅಂತ ಸಾಬೀತು ಪಡಿಸಲು ಕನಿಷ್ಟ ಇಪ್ಪತ್ತು ವರ್ಷ ಹೋರಾಡಬೇಕಾಗುತ್ತದೆ. ನಿನ್ನ ಕಥೆಯೂ ಅಷ್ಟೇ. ‘ ಎಂದೆನ್ನುತ್ತ ಅಲ್ಲಿಂದ ಓಡಿ ಹೋಯಿತು.

***

ಪುಸ್ತಕ

ಶ್ರೀಮತಿ: "ನೂರು ವರ್ಷಗಳ ಕಾಲ ಬದುಕುವುದು ಹೇಗೆ?” ಎಂಬ ಪುಸ್ತಕ ಇತ್ತಲ್ಲಾ, ಎಲ್ಲಿ ಅದು?

ಗಾಂಪ: ಅದನ್ನು ಸುಟ್ಟು ಹಾಕಿಬಿಟ್ಟೆ. ಯಾಕೆಂದರೆ ನಾನು ಅಷ್ಟು ವರ್ಷಗಳ ಕಾಲ ಬದುಕುವುದಿಲ್ಲ ಎಂಬುದು ನನಗೆ ಖಾತ್ರಿಯಾಗಿದೆ.

***
ಲಾಟರಿ ಮತ್ತು ಮದುವೆ

ಗಾಂಪ: ಸೂರಿ, ನಿನಗೆ ಮದುವೆಯಲ್ಲಿ ನಂಬಿಕೆಯೋ ಅಥವಾ ಲಾಟರಿಯಲ್ಲಿ ನಂಬಿಕೆಯೋ?

ಸೂರಿ: ಲಾಟರಿಯಲ್ಲಿ ಗಾಂಪ.

ಗಾಂಪ: ಯಾಕೋ?

ಸೂರಿ: ಯಾಕೆಂದರೆ ಲಾಟರಿಯಲ್ಲಿ ಒಂದೆರಡು ಅವಕಾಶವಾದ್ರೂ ಇರುತ್ತದೆ. ಆದರೆ ಮದುವೆಯಲ್ಲಿ ಅವಕಾಶ ತುಂಬಾ ಕಡಿಮೆ.

***

ಆತ್ಮಹತ್ಯೆ

ಗಾಂಪ: ನೀನು ಹೀಗೆ ಹಠ ಮಾಡುತ್ತಿದ್ದರೆ ನಿನ್ನ ಈ ರೇಷ್ಮೆ ಸೀರೆಯಲ್ಲೇ ನೇಣು ಹಾಕಿಕೊಂಡು ಸತ್ತು ಹೋಗುತ್ತೇನೆ.

ಶ್ರೀಮತಿ: ಅಯ್ಯೋ, ಹಾಗೆಲ್ಲಾ ಮಾಡಬೇಡಿ.

ಗಾಂಪ: ಹಾಂ..ಹಾಗೆ ಬಾ ದಾರಿಗೆ. ಈಗ ಬುದ್ದಿ ಬಂತಾ?

ಶ್ರೀಮತಿ: ಎಂಥದು ಇಲ್ಲ. ಈ ಸೀರೆ ನನ್ನ ಫೇವರಿಟ್. ಅದಕ್ಕೆ ನಿಮ್ಮನ್ನು ತಡೆದೆ. ಬೇಕಾದರೆ ಬೇರೆ ಸೀರೆ ಕೊಡ್ತೀನಿ.

***

ನಂಬಿಕೆ

ಶ್ರೀಮತಿ: ಡಾಕ್ಟರೇ, ನೀವು ನನ್ನನ್ನು ಪರೀಕ್ಷಿಸುವಾಗ ನಿಮ್ಮ ನರ್ಸ್ ಅನ್ನು ಒಳಗೆ ಕರಿಯಿರಿ.

ಡಾಕ್ಟರ್: ಏಕಮ್ಮಾ, ನನ್ನ ಮೇಲೆ ನಂಬಿಕೆ ಇಲ್ಲವೇ?

ಶ್ರೀಮತಿ: ನಿಮ್ಮ ಮೇಲೆ ನಂಬಿಕೆ ಇದೆ. ಆದರೆ ಹೊರಗೆ ನಮ್ಮವರು ಇದ್ದಾರಲ್ಲಾ, ಅವರ ಮೇಲೆ ಇಲ್ಲ !

***

ಕುಣಿತ

ಗಾಂಪ: ಸೂರಿ, ನೀನು ನೃತ್ಯ ಕಲಿತವಳನ್ನು ಮದುವೆಯಾದೆಯಲ್ಲಾ, ಈಗ ಅವಳೇನು ಮಾಡ್ತಾ ಇದ್ದಾಳೆ?

ಸೂರಿ: ಸದ್ಯಕ್ಕೆ ಈಗ ಅವಳು ನನ್ನನ್ನೇ ಕುಣಿಸುತ್ತಾ ಇದ್ದಾಳೆ!

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ