‘ಸಂಪದ' ನಗೆ ಬುಗ್ಗೆ - ಭಾಗ ೭೨

ಅನಾಮಿಕ ಯೋಧ
ಒಂದು ಊರಿನಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಒಂದು ಸ್ಮಾರಕದ ಮೇಲೆ ಹಾಕಿದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ “ಗಾಂಪ, ಅನಾಮಿಕ ಯೋಧ” ಎಂದು ಬರೆಯಲಾಗಿತ್ತು.
ಸಭೆಯಲ್ಲಿ ಕೂತಿದ್ದ ಹೊರ ಊರಿನ ವ್ಯಕ್ತಿ ತನ್ನ ಪಕ್ಕದಲ್ಲಿದ್ದ ಸೂರಿಯಲ್ಲಿ “ಅದು ಹೇಗ್ರೀ ಆಗುತ್ತೆ? ಗಾಂಪ ಅಂತ ಹೆಸರು ಬರೆದಿದ್ದಾರೆ. ಅದಾಗಿ ಅನಾಮಿಕ ಯೋಧ ಅಂತ ಹಾಕಿದ್ದಾರೆ. ಅನಾಮಿಕರಿಗೆ ಮಾಡಿದ ಸ್ಮಾರಕ ಅಂದ ಮೇಲೆ ಯಾವ ಯೋಧರ ಹೆಸರು ಗೊತ್ತಿಲ್ಲವೋ ಅವರಿಗೆ ಅಂತ ಅರ್ಥ ಅಲ್ವಾ?” ಎಂದು ವಿಚಾರಿಸಿದ. ಸೂರಿ, “ಹೌದು ಸ್ವಾಮಿ, ನೀವು ಹೇಳುವುದು ಸರಿ. ಗಾಂಪ ಅವರು ಈ ಊರಿನ ಬಹಳ ಪ್ರಸಿದ್ಧ ವಕೀಲರು. ಪ್ರತಿಯೊಬ್ಬರಿಗೂ ಗೊತ್ತಿದ್ದವರು. ಆದರೆ ಸೈನಿಕನಾಗಿ ಅವರು ಯಾವಾಗ ಹೋರಾಡಿದರು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೇ ಅನಾಮಿಕ ಯೋಧ ಅಂತ ಹಾಕಿರೋದು" ಎಂದು ವಿವರಿಸಿದರು.
***
ವ್ಯಾಪಾರ
ರಾಜಸ್ಥಾನದ ಮರುಭೂಮಿಯಲ್ಲಿ ಒಬ್ಬ ಅಲೆದಲೆದು ಸುಸ್ತು ಹೊಡೆದಿದ್ದ. ಗಂಟಲಿನ ನೀರೆಲ್ಲಾ ಇಂಗಿ ಹೋಗಿತ್ತು. ಇನ್ನೇನು ಸ್ವಲ್ಪ ಹೊತ್ತಲ್ಲಿ ತಲೆ ಸುತ್ತಿ ಬಿದ್ದೇ ಬಿಡುತ್ತೇನೆ ಎಂಬ ಪರಿಸ್ಥಿತಿ ಬಂತು. ದೂರದಲ್ಯಾರೋ ಕೂತಿದ್ದಂತೆ ಕಂಡಿದ್ದರಿಂದ ಅತ್ತ ಕಾಲೆಳೆದುಕೊಂಡು ಹೋದ. ಅಲ್ಲಿ ಕೂತಿದ್ದವನು ಗಾಂಪ. ತನ್ನ ಸುತ್ತ ಹತ್ತಾರು ಬಣ್ಣ ಬಣ್ಣದ ಟೊಪ್ಪಿಗಳನ್ನು ಹರಡಿಕೊಂಡು ಕೂತಿದ್ದ ಗಾಂಪ.
“ಸ್ವಾಮಿ ಕುಡಿಯಲು ನೀರು ಸಿಗಬಹುದೇ? ಒಂದು ಬೊಗಸೆ ಸಿಕ್ಕಿದರೂ ಸಾಕು" ಎಂದು ಆ ವ್ಯಕ್ತಿ ಅಂಗಲಾಚುವ ದನಿಯಲ್ಲಿ ಕೇಳಿದ.
“ನನ್ನ ಬಳಿ ನೀರಿಲ್ಲ. ಬೇಕಾದರೆ ನಿಮಗೆ ಈ ಟೊಪ್ಪಿಯನ್ನು ಮಾರುತ್ತೇನೆ. ಒಳ್ಳೇ ಡಿಸ್ಕೌಂಟ್ ಕೊಡುತ್ತೇನೆ, ನೋಡಿ ಬೇಕಾದರೆ" ಎಂದ ಗಾಂಪ.
“ ನಿಮ್ಮ ವ್ಯಾಪಾರಕ್ಕೆ ಬೆಂಕಿ ಹಾಕ. ನಾನಿಲ್ಲಿ ನೀರಿಗಾಗಿ ಪರದಾಡುತ್ತಿದ್ದರೆ, ನೀನು ಟೊಪ್ಪಿ ಮಾರೋದಕ್ಕೆ ಬರ್ತೀಯಾ? “ ಎಂದು ಎಗರಾಡಿದ ಆ ವ್ಯಕ್ತಿ.
“ನೋಡಿ, ಹೆಚ್ಚು ಸಿಟ್ಟು ಮಾಡಿಕೊಳ್ಳಬೇಡಿ. ಟೊಪ್ಪಿ ಮಾರೋದು ನನ್ನ ವೃತ್ತಿ. ಹಾಗಾಗಿ ಹೇಳಿದೆ ಅಷ್ಟೇ. ನಾನೇನೂ ಮನುಷ್ಯತ್ವವಿಲ್ಲದವನಲ್ಲ. ನನ್ನನ್ನು ಬಯ್ದರೂ ನಾನು ನಿಮಗೆ ಸಹಾಯ ಮಾಡಬಲ್ಲೆ. ಓ ಅಲ್ಲಿನ ಗುಡ್ಡ ಇದೆಯಲ್ಲ, ಅದನ್ನು ಹತ್ತಿ ಹೋದರೆ ಆಚೆ ಬದಿಯಲ್ಲೊಂದು ಹೋಟೇಲಿದೆ. ಅಲ್ಲಿ ನಿಮಗೆ ನೀರು ಸಿಕ್ಕೀತು" ಎಂದು ಗಾಂಪ ಕೇಳಿದ.
“ತುಂಬಾ ಉಪಕಾರವಾಯಿತು" ಎಂದು ಆ ವ್ಯಕ್ತಿ ಅಲ್ಲಿಂದ ಹೊರಟ. ಕಾಲೆಳೆಯುತ್ತಾ ಬೆಟ್ಟ ಹತ್ತಿದ. ಸುಮಾರು ಒಂದು ಗಂಟೆಯ ನಂತರ ಅದೇ ಮನುಷ್ಯ ಮತ್ತೆ ಬೆಟ್ಟ ಇಳಿದು ತುಂಬಾ ಸುಸ್ತಾಗಿ ಕಾಲೆಳೆಯುತ್ತಾ ಬರುವುದು ಕಾಣಿಸಿತು.
“ಯಾಕೆ ಇನ್ನೂ ಎದುರುಸಿರು ಬಿಡುತ್ತಿದ್ದೀರಿ? ಹೋಟೇಲ್ ಸಿಗಲಿಲ್ಲವೇ?” ಎಂದು ಕೇಳಿದ ಗಾಂಪ ತುಂಬಾ ಕಾಳಜಿಯಿಂದ.
“ಆ ದರಿದ್ರ ಜನ, ಟೊಪ್ಪಿ ಹಾಕದವರನ್ನು ಒಳಗೆ ಬಿಡ್ತಾ ಇಲ್ಲ" ಎಂದು ಆ ವ್ಯಕ್ತಿ ಗಾಂಪನ ಮುಖ ನೋಡಿದ.
***
ಮದುವೆ
ಗಾಂಪ: ನಾನು ನೋಡಿದ ಆ ಹುಡುಗಿಗೆ ಅಡುಗೆ, ಸಂಗೀತ ಬರುತ್ತೆ. ನಾನು ಆಕೆಯನ್ನೇ ಮದುವೆಯಾಗ್ತೀನಮ್ಮ.
ತಾಯಿ: ಅವಳನ್ನು ನೀನು ಮದುವೆಯಾಗೋದು ಬೇಡ ಕಣೋ.
ಗಾಂಪ: ಏಕಮ್ಮಾ?
ತಾಯಿ: ಅವಳು ಕರಾಟೆನೂ ಕಲಿತಿದ್ದಾಳೆ.
***
ಪ್ರೀತಿ
ಗಾಂಪ: ಸೂರಿ, ಪ್ರೀತಿ ಅಂದರೆ ನಿನ್ನದು ಕಣೋ. ತವರೂರಿನಲ್ಲಿರುವ ನಿನ್ನ ಹೆಂಡತಿಗೆ ಒಂದು ದಿನವೂ ತಪ್ಪಿಸದೇ ಫೋನ್ ಮಾಡ್ತೀಯಲ್ಲಾ. ಭೇಷ್ ಕಣೋ.
ಸೂರಿ: ಹಾಗೇನಿಲ್ಲ ಗಾಂಪ, ನಿತ್ಯ ಫೋನ್ ಮಾಡದೇ ಇದ್ದರೆ ಮಾರನೇ ದಿನವೇ ನೀನಿದ್ದಲ್ಲಿಗೆ ಬಂದ್ಬಿಡ್ತೀನಿ ಅಂತ ಹೇಳಿದ್ದಾಳೆ. ಅದಕ್ಕೆ ದಿನಾ ಫೋನ್ ಮಾಡ್ತೀನಿ!
***
ಬ್ಲಾಕ್ ಮೇಲ್
ಶ್ರೀಮತಿ: ನನ್ನನ್ನು ಮದುವೆಯಾಗೋದಿಲ್ಲ ಅಂದ ಮೇಲೆ ನಾನು ನಿಮಗೆ ಬರೆದ ಪ್ರೇಮ ಪತ್ರಗಳನ್ನು ವಾಪಾಸು ಕೊಟ್ಟುಬಿಡಿ.
ಗಾಂಪ: ಏಕೆ? ನಾನು ಬ್ಲಾಕ್ ಮೇಲ್ ಮಾಡ್ತೀನಿ ಅಂತ ಭಯಾನಾ?
ಶ್ರೀಮತಿ: ಹಾಗೇನಿಲ್ಲ. ಈ ಪ್ರೇಮ ಪತ್ರಗಳನ್ನು ಹೊಸ ಪ್ರೇಮಿಗೆ ಕಳಿಸಿಕೊಡಬಹುದಲ್ಲ !
***
ಕಾರಣ
ಶ್ರೀಮತಿ: ರೀ.. ನೀವು ಮೊದಲು ಊಟ ಮಾಡುವಾಗ ನನಗೂ ತಿನ್ನಿಸ್ತಿದ್ರಿ. ಈಗ ಅದೆಲ್ಲವನ್ನೂ ಬಿಟ್ಟೇ ಬಿಟ್ಟೀದೀರಲ್ಲಾ?
ಗಾಂಪ: ಅದಾ... ಈಗ ನೀನು ಬಹಳ ರುಚಿಕರವಾಗಿ ಅಡುಗೆ ಮಡೋದನ್ನ ಕಲಿತಿದ್ದೀಯಾ. ಅದ್ಕೆ ತಿನ್ನಿಸೋದಿಲ್ಲ ಶ್ರೀಮತಿ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ