‘ಸಂಪದ' ನಗೆ ಬುಗ್ಗೆ - ಭಾಗ ೭೩

‘ಸಂಪದ' ನಗೆ ಬುಗ್ಗೆ - ಭಾಗ ೭೩

ರಕ್ತದಾನ

ದೊಡ್ಡ ಸಾಹುಕಾರನಾಗಿದ್ದ ಗಾಂಪನಿಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಮಾಡಿಕೊಂಡಿದ್ದರು. ಗಾಂಪ ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್ ಗೆ ಬೇಕಾದ ದುಡ್ಡನ್ನೆಲ್ಲಾ ಹೊಂದಿಸಿಕೊಂಡಿದ್ದ. ಆದರೆ ಒಂದು ಸಮಸ್ಯೆ ಎದುರಾಗಿತ್ತು. ಗಾಂಪನದ್ದು ಒಂದು ಅಪರೂಪದ ಬ್ಲಡ್ ಗ್ರೂಪ್ ಆಗಿತ್ತು. ಆಪರೇಶನ್ ಸಮಯದಲ್ಲಿ ಬ್ಲಡ್ ತುಂಬಾ ಹೋಗುತ್ತೆ. ಆ ಗ್ರೂಪ್ ಬ್ಲಡ್ ಸ್ಟಾಕ್ ಇರಬೇಕು ಅಂದ್ರು ಡಾಕ್ಟರ್. ಆದರೆ ದಾನಿಗಳು ಯಾರೂ ಸಿಗಲಿಲ್ಲ. ಕೊನೆಗೆ ಒಬ್ಬ ಸೇಟು ತಾನು ಬ್ಲಡ್ ಕೊಡ್ತೀನಿ ಅಂತ ಮುಂದೆ ಬಂದ. ಗಾಂಪನಿಗೆ ಸಮಾಧಾನ ಆಯ್ದು. ಆಗ ತನಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವ ಸೇಟುಗೆ ಏನಾದ್ರೂ ಕೊಡಬೇಕು ಅಂತ ಗಾಂಪ ಅವನಿಗೆ ಒಂದು ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ಅವನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ಕೊಟ್ಟ. ಆಪರೇಶನ್ ಆಯಿತು. ಗಾಂಪ ಸುಧಾರಿಸಿಕೊಂಡ. ಆದರೆ ಕೆಲವೇ ದಿನಗಳಲ್ಲಿ ಗಾಂಪನಿಗೆ ಮತ್ತೆ ಹುಷಾರು ತಪ್ಪಿ ಮತ್ತೆ ಆಪರೇಶನ್ ಮಾಡಬೇಕಾಯ್ತು. ಈ ಬಾರಿ ಕೂಡ ಸೇಟು ಬ್ಲಡ್ ಕೊಟ್ಟ. ಆಪರೇಶನ್ ನಂತರ ಗಾಂಪ ಸೇಟುಗೆ ಒಂದು ಥ್ಯಾಂಕ್ ಯೂ ಕಾರ್ಡ್ ಜೊತೆಗೆ ಒಂದು ಸಣ್ಣ ಚಾಕೋಲೇಟ್ ಬಾಕ್ಸ್ ಕಳುಹಿಸಿದ. ಸೇಟುಗೆ ಬೇಜಾರಾಯಿತು. ಅವನು ಗಾಂಪನಿಗೆ ಕಾಲ್ ಮಾಡಿ ಏನಿದು, ಕಳೆದ ಬಾರಿ ನೋಡಿದ್ರೆ ಬೆಂಜ್ ಕಾರ್, ೫೦ ಲಕ್ಷ ಕ್ಯಾಶ್, ನನ್ನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಕೊಟ್ಟಿದ್ರಿ, ಈ ಸಲ ಬರೀ ಕಾರ್ಡ್, ನಾಲಕ್ ಚಾಕಲೇಟ್ ಅಷ್ಟೇನಾ? ಅಂದ. ಅದಕ್ಕೆ ಗಾಂಪ ಹೇಳಿದ ಏನ್ ಮಾಡೋದು ಬ್ರದರ್, ಈಗ ನನ್ನ ಮೈಯಲ್ಲಿ ಹರೀತಿರೋದು ಸೇಟು ರಕ್ತ. !

***

ಚಿನ್ನದ ಮೊಟ್ಟೆ

“ಈ ಉಂಗುರ ನೋಡಯ್ಯಾ, ಎಷ್ಟು ಅದ್ಭುತವಾಗಿದೆ. ನಾನು ಇದನ್ನು ೫೦೦ ರೂಪಾಯಿಗೆ ಖರೀದಿಸಿದೆ" ಎನ್ನುತ್ತ ತನ್ನ ಬಳಿ ಇದ್ದ ಉಂಗುರವನ್ನು ಗಾಂಪನಿಗೆ ತೋರಿಸಿದ ಸೂರಿ.

“ತುಂಬಾ ಮೋಹಕವಾಗಿದೆ ಸೂರಿ. ನೀನು ಒಪ್ಪುವುದಾದರೆ ಈ ಉಂಗುರವನ್ನು ೬೦೦ ರೂಪಾಯಿಗೆ ಕೊಳ್ಳಲು ನಾನು ತಯಾರಿದ್ದೇನೆ" ಎಂದ ಗಾಂಪ. ಸುಲಭದಲ್ಲಿ ಬರುತ್ತಿರುವ ೧೦೦ ರೂಪಾಯಿ ಲಾಭವನ್ನು ಏಕೆ ವೃಥಾ ಕೈಬಿಡಬೇಕು? ವ್ಯವಹಾರ ಕುದುರಿಸೋಣ ಎನ್ನಿಸಿತು ಸೂರಿಗೆ. “ಸರಿ" ಎಂದು ಅದನ್ನು ೬೦೦ ರೂಪಾಯಿಗೆ ಮಾರಿಬಿಟ್ಟ. ಆದರೆ ಮರುದಿನ ಆತನಿಗೆ ಆ ಉಂಗುರವನ್ನು ವಾಪಾಸು ಪಡೆಯಬೇಕೆನ್ನಿಸಿತು. ಮತ್ತೆ ಗಾಂಪನ ಬಳಿ ಬಂದ. “ಕ್ಷಮಿಸು ಗೆಳೆಯ, ನನಗೆ ಆ ಉಂಗುರ ನನ್ನ ಬಳಿಯೇ ಇರಬೇಕು ಅನ್ನಿಸಿದೆ. ೭೦೦ ರೂಪಾಯಿ ಕೊಡ್ತೇನೆ. ಉಂಗುರ ಕೊಟ್ಟು ಬಿಡು.”ಎಂದು ಹೇಳಿ ೭೦೦ ರೂಪಾಯಿ ಕೊಟ್ಟು ಉಂಗುರ ಕೊಂಡ. ಅದಾಗಿ ಮರುದಿನ ಗಾಂಪ ಬಂದು ಸೂರಿ ಬಳಿ ಮತ್ತೆ ಉಂಗುರಕ್ಕೆ ಬೇಡಿಕೆ ಇಟ್ಟು ೮೦೦ ರೂಪಾಯಿ ಕೊಡ್ತೇನೆ ಎಂದು ಭರವಸೆ ಕೊಟ್ಟ. ಮತ್ತೆ ಉಂಗುರ ಕೈ ಬದಲಾಯಿತು. ಆದರೆ ಮರುದಿನ ಸೂರಿ ತನ್ನ ಗೆಳೆಯನ ಬಳಿ ಹೋಗಿ “ಕ್ಷಮಿಸು ಗಾಂಪ, ಆ ಉಂಗುರ ನನಗೇ ಬೇಕು. ೧೦೦೦ ರೂಪಾಯಿ ಕೊಡ್ತೇನೆ. ನನಗೇ ಮಾರಿಬಿಡು" ಎಂದು ಬೇಡಿಕೆ ಇಟ್ಟ.

“ಕ್ಷಮಿಸು ಸೂರಿ, ನಾನು ಆ ಉಂಗುರಾನ ನಿನ್ನೆ ಸಂಜೆಯೇ ಬೇರೊಬ್ಬರಿಗೆ ೧೧೦೦ ರೂಪಾಯಿಗೆ ಮಾರಿಬಿಟ್ಟಾಯಿತು" ಎಂದ ಗಾಂಪ.

“ಏನು? ನಿನಗೇನು ತಲೆ ಕೆಟ್ಟಿದ್ದೆಯಾ ಗಾಂಪ! ನಾವಿಬ್ಬರೂ ಆ ಉಂಗುರ ಇಟ್ಟುಕೊಂಡೇ ಪ್ರತೀ ದಿನ ೧೦೦ ರೂಪಾಯಿ ಲಾಭ ಮಾಡ್ತಿರಲಿಲ್ಲವಾ? ಸುಲಭದಲ್ಲಿ ಆಗ್ತಿದ್ದ ಲಾಭ ವ್ಯವಹಾರಕ್ಕೆ ಕೈಯಾರ ಕತ್ತರಿ ಹಾಕ್ಕೊಂಡೆಯಲ್ಲೋ!” ಎಂದು ಗೋಳಾಡಿದ ಸೂರಿ.

***

ಸಾಬೀತು ಪಡಿಸಿದರೆ....

ನಡುರಾತ್ರಿಯ ಪಾರ್ಟಿಯ ಬಳಿಕ ಗಾಂಪ ಮತ್ತು ಶ್ರೀಮತಿ ತಮ್ಮ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರನ್ನು ಪೋಲೀಸರು ತಡೆದು ಡ್ರೈವಿಂಗ್ ಲೈಸೆನ್ಸ್ ಮತ್ತಿತರ ಕಾಗದಪತ್ರ ಪರಿಶೀಲನೆ ಮಾಡಿದರು. 

ಪೋಲೀಸ್: ಜೊತೆಗಿರುವ ಮಹಿಳೆ ಯಾರು?

ಗಾಂಪ: ನನ್ನ ಪತ್ನಿ.

ಪೋಲೀಸ್: ಪುರಾವೆ ಏನಿದೆ?

ಗಾಂಪ (ಪೋಲೀಸ್ ನನ್ನು ಪಕ್ಕಕ್ಕೆ ಕರೆದು ಪಿಸುಮಾತಿನಲ್ಲಿ ನುಡಿದ): ನೀವು ಹೇಗಾದರೂ ಮಾಡಿ ಆಕೆ ನನ್ನ ಪತ್ನಿ ಅಲ್ಲವೆಂದು ಸಾಬೀತು ಪಡಿಸಿದರೆ ಬೊಮ್ಮಸಂದ್ರದಲ್ಲಿರುವ ಸೈಟು ನಿಮ್ಮದು.

***

ಆರೋಗ್ಯ

ಗಾಂಪ ಆಸ್ಪತ್ರೆಗೆ ದಾಖಲಾಗಿದ್ದ. ನರ್ಸ್ ಬಂದು ಸ್ಕೆತಾಸ್ಕೋಪ್ ಹಿಡಿದು ಆತನ ಎದೆ ಮೇಲಿರಿಸಿ ತಪಾಸಿಸುತ್ತಾ ಹೇಳಿದಳು.

ನರ್ಸ್: ದೀರ್ಘ ಶ್ವಾಸ ಎಳೆಯಿರಿ ಮತ್ತು ನಿಧಾನವಾಗಿ ಹೊರ ಬಿಡಿ…

ಗಾಂಪ: ಆಯ್ತು ಸಿಸ್ಟರ್

ನರ್ಸ್: ಈಗ ಹೇಗನ್ನಿಸುತ್ತದೆ?

ಗಾಂಪ: ತುಂಬಾ ಆಹ್ಲಾದಕರವಾಗಿದೆ. ನೀವು ಹಾಕಿರುವುದು ಯಾವ ಪರ್ಫ್ಯೂಮ್?

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ