‘ಸಂಪದ' ನಗೆ ಬುಗ್ಗೆ - ಭಾಗ ೭೬
ಕಿತ್ತಾಕುವ ಕೆಲಸ!
ಗಾಂಪ ಒಂದು ದಿನ ಸಂಜೆ ಮನೆಗೆ ಬಂದ. ಮನೆಯ ಹೊರಗೆ ಅಂಗಳದಲ್ಲಿ ರಾಶಿ ರಾಶಿ ಕಸ ಬಿದ್ದಿತ್ತು. ರಂಗೋಲಿ ಇರಲಿ, ಹೊಸ್ತಿಲನ್ನೂ ಕೂಡ ತೊಳೆದಿರಲಿಲ್ಲ. ಎಲ್ಲಾ ಧೂಳುಮಯ. ಮನೆಯೊಳಗೆ ಅಡಿ ಇಡುತ್ತಿದ್ದಂತೆ ಗಾಂಪನಿಗೆ ಮಕ್ಕಳು ಆಟವಾಡುವ ಸದ್ದು ಕೇಳಿಸಿ ಆ ಕಡೆ ತಿರುಗಿ ನೋಡಿದ. ಮಕ್ಕಳು ಮನೆಯ ಸಾಮಾನುಗಳನ್ನೆಲ್ಲಾ ಎಲ್ಲಂದ್ರಲ್ಲಿ ಹರಡಿ ಕಿತ್ತು ಹಾಕಿ ರಾಡಿ ಮಾಡಿಟ್ಟಿದ್ದರು. ಮೊದಲು ನೀರು ಕುಡಿಯೋಣ ಅಂತ ಅಡಿಗೆ ಮನೆಗೆ ಹೋದ ಗಾಂಪನಿಗೆ ಅಲ್ಲೂ ಶಾಕ್ ಕಾದಿತ್ತು. ಬೆಳಿಗ್ಗೆ ಮಾಡಿದ ತಿಂಡಿ ಪಾತ್ರೆಗಳು, ತಿಂಡಿ ತಿಂದ ಪ್ಲೇಟ್, ಕಾಫಿ ಗ್ಲಾಸ್ ಎಲ್ಲವೂ ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದವು. ಗಾಂಪನಿಗೆ ಏನಾಯ್ತು ಅಂತ ಒಂದು ಕ್ಷಣ ಗಾಬರಿ ಆಯ್ತು. ಬೆಡ್ ರೂಮಿಗೆ ಹೋಗಿ ನೋಡಿದರೆ ಅಲ್ಲಿ ಶ್ರೀಮತಿ ಇರಲಿಲ್ಲ. ಅದರ ಬದಲಾಗಿ ಇಡೀ ಬೆಡ್ ರೂಮ್ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಬಟ್ಟೆಗಳು ಬಿದ್ದಿದ್ದವು. ಹಾಸಿಗೆಯ ಮೇಲಿನ ದಿಂಬು, ಬೆಡ್ ಶೀಟ್ ಗಳು ಅಗಸರ ಅಂಗಡಿಯನ್ನು ನೆನಪಿಸುತ್ತಿದ್ದವು. ಹಾಲಿನಲ್ಲಿ ಹಾಕಿದ ಟಿವಿ ಹಾಗೇ ಇತ್ತು. ಯಾರೂ ನೋಡುತ್ತಿರಲಿಲ್ಲ. ದೇವರ ಮನೆಯ ದೀಪ ಹಚ್ಚಿರಲಿಲ್ಲ. ಬಚ್ಚಲು ಮನೆಯ ನಲ್ಲಿಯಿಂದ ನೀರು ಸೋರಿ ಹೋಗುತ್ತಿತ್ತು. ಆಫ್ ಮಾಡುವವರೇ ಇರಲಿಲ್ಲ. ಇದನ್ನೆಲ್ಲಾ ನೋಡಿದ ಗಾಂಪನಿಗೆ ಪಿತ್ತ ನೆತ್ತಿಗೇರಿತು. ಮನೆಯನ್ನು ಹೀಗೆ ಅಧ್ವಾನ ಮಾಡಿ ಶ್ರೀಮತಿ ಎಲ್ಲಿಗೆ ಹೋದಳು ಅಂತ ಹುಡುಕಿಕೊಂಡು ಹೊರಟ. ಆಗ ಹೆಂಡತಿ ಲಿವಿಂಗ್ ರೂಮ್ ನಲ್ಲಿ ಇದ್ದಾಳೆ ಅಂತ ಗೊತ್ತಾಯ್ತು. ಅಲ್ಲಿಗೆ ಹೋಗಿ ನೋಡಿದರೆ ಶ್ರೀಮತಿ ಯಾವುದೋ ಹಳೆಯ ನೈಟಿ ಹಾಕಿಕೊಂಡು ಒಂದು ಮ್ಯಾಗಜೀನ್ ಹಿಡಿದುಕೊಂಡು ಓದುತ್ತಾ ಅಡ್ಡಾದಿಡ್ಡಿ ಮಲಗಿದ್ದಳು. ಗಾಂಪನ ಸಿಟ್ಟು ಇನ್ನಷ್ಟು ಜಾಸ್ತಿಯಾಗಿ, ಏನಿದು, ಮನೆ ಹೀಗಿದೆ, ಏನಾಗಿದೆ ನಿನಗೆ? ಅಂತ ಜೋರು ದನಿಯಲ್ಲಿ ಅವಳನ್ನು ಕೇಳಿದ. ಅದಕ್ಕೆ ಶ್ರೀಮತಿ ಶಾಂತವಾಗಿ ಕೇಳಿದಳು, ಪ್ರತಿದಿನ ನೀನು ಆಫೀಸಿನಿಂದ ಮನೆಗೆ ಬಂದಾಗ, ನಂಗೆ ಆಫೀಸಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸಿಕ್ಕಾಪಟ್ಟೆ ಕೆಲಸ ಇರುತ್ತೆ ಗೊತ್ತಾ. ಎಷ್ಟು ಸುಸ್ತಾಗಿರ್ತೀನಿ, ನೀನೇನು ಇಡೀ ದಿನ ಮನೆಯಲ್ಲಿ ಕಡಿದು ಕಿತ್ತಾಕುವಂತಹ ಕೆಲಸ ಮಾಡ್ತೀಯಾ? ಅಂತ ಕೇಳ್ತಿಯಲ್ಲಾ ಅಂತ ಕೇಳಿದಳು. ಅದಕ್ಕೆ ಗಾಂಪ, ಹೌದು ಕೇಳ್ತೀನಿ ಅದಕ್ಕೇನೀಗ? ಅಂದ. ಅದಕ್ಕೆ ಶ್ರೀಮತಿ ಹೇಳಿದಳು ಇವತ್ತು ಮನೇಲಿದ್ಕೊಂಡು ನಾನು ಏನೂ ಕಡಿದು ಕಿತ್ತಾಕಲಿಲ್ಲ. !
***
ಜ್ಞಾನ ಮೂಲ
ಗಾಂಪ ಬಹುದೊಡ್ಡ ಆಧ್ಯಾತ್ಮಿಕ ಪ್ರವಚನಗಾರನಾಗಿದ್ದ. ಪಕ್ಕದ ಊರಿಗೆ ಉಪನ್ಯಾಸ ಮಾಡಲು ಹೋಗಿ ತನ್ನ ಊರಿಗೆ ವಾಪಾಸ್ಸು ಬರುತ್ತಿದ್ದ. ಹಾಗೆ ದಾರಿಯಲ್ಲಿ ನಡೆದು ಬರುತ್ತಿದ್ದಾಗ ಎತ್ತಿನ ಗಾಡಿ ಹೊಡೆದುಕೊಂಡು ಬರುತ್ತಿದ್ದ ಓರ್ವ ರೈತನಿಗೆ ಕಾಣಲು ಸಿಕ್ಕಿದ. ಗಾಂಪ ಎಂದರೆ ಊರಲ್ಲೆಲ್ಲ ವಿಶೇಷ ಮರ್ಯಾದೆ ಅಲ್ಲವೇ? ರೈತ ಕೂಡಲೇ ಗಾಡಿ ನಿಲ್ಲಿಸಿ ಗಾಂಪನನ್ನು ತನ್ನ ಗಾಡಿಗೆ ಹತ್ತಿಸಿದ. ಹುಲ್ಲು ತುಂಬಿದ್ದ ಗಾಡಿ. ಅದರಲ್ಲಿ ಹತ್ತಿ ಕೂತ. ಮೊದಲೇ ಬಳಲಿದ್ದ ಗಾಂಪನಿಗೆ ಗಾಡಿಯ ತೂಗಾಟಕ್ಕೆ ಒಳ್ಳೆಯ ನಿದ್ರೆ ಬಂತು. ಊರೊಳಗೆ ಬಂದ ಮೇಲೆ ಗಾಡಿಯಿಂದ ಇಳಿದು ಗಾಂಪ ತನ್ನ ಮನೆ ಸೇರಿಕೊಂಡ.
ಆದರೆ ಅಂದು ಸಂಭವಿಸಿದ ದೊಡ್ದದೊಂದು ಪ್ರಾಮಾದದ ಅಂದಾಜು ಅವನಿಗೆ ಹತ್ತಿದ್ದು ರಾತ್ರಿ ಉಂಡು ಮಲಗುವ ಸಮಯದಲ್ಲೇ. ಏನಾಗಿತ್ತೆಂದರೆ ಪಕ್ಕದೂರಿನಿಂದ ಮರಳುತ್ತಿದ್ದಾಗ ಗಾಂಪ ಕೈಯಲ್ಲಿ ಒಂದು ನೋಟ್ ಬುಕ್ ಇತ್ತು. ಅವನು ಉಪನ್ಯಾಸದಲ್ಲಿ ಹೇಳಲು ಬಳಸುತ್ತಿದ್ದ ಗಾದೆಗಳು, ದೃಷ್ಟಾಂತ ಕತೆಗಳು, ಹಾಸ್ಯ ಪ್ರಸಂಗಗಳು ಎಲ್ಲವನ್ನೂ ಆ ನೋಟ್ ಪುಸ್ತಕದಲ್ಲಿ ಬರೆದಿಟ್ಟುಕೊಂಡಿದ್ದ. ಆದರೆ, ಗಾಡಿಯಿಂದ ಇಳಿದು ಮನೆಯ ಕಡೆ ಹೋಗುವಷ್ಟರಲ್ಲಿ ಅವನಿಗೆ ಪುಸ್ತಕ ಮರೆತುಹೋಗಿತ್ತು. ಪುಸ್ತಕ ಹುಲ್ಲಿನ ಕಟ್ಟಿನೊಂದಿಗೆ ಹೋಗಿ ಬಿಟ್ಟಿತ್ತು !
ಆ ವಾರದ ಉಪನ್ಯಾಸದ ಸಮಯದಲ್ಲಿ ಗಾಂಪನಿಗೆ ಉತ್ಸಾಹವೇ ಇರಲಿಲ್ಲ. ನೆರೆದ ಜನಸಮೂಹವನ್ನು ಉದ್ದೇಶಿಸಿ ಆತ ಹೇಳಿದ: ಎಲ್ಲಾ ಧರ್ಮಾನುಯಾಯಿಗಳೇ, ನಾನು ಇಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದಿದ್ದ ಒಂದು ನೋಟ್ ಪುಸ್ತಕವನ್ನು ಕಳೆದ ವಾರ ಹುಲ್ಲಿನ ಮೆಳೆಯಲ್ಲಿ ಕಳೆದುಕೊಂಡೆ. ಅದನ್ನು ಬಹುಷಃ ಯಾವುದಾದರೂ ಹಸು, ಕತ್ತೆ, ಕುರಿ ತಿಂದಿರಲೂ ಬಹುದು. ಹಾಗಾಗಿ ಯಾವುದಾದರೂ ಹಸು, ಕತ್ತೆ ಈ ಊರಿಗೆ ಪ್ರವಚನ ಕೊಡಲು ಬಂದರೆ ದಯವಿಟ್ಟು ನಂಬಿ - ಆ ಪ್ರವಚನ ಅವರದ್ದಲ್ಲ, ನನ್ನದು!
***
ಹಲ್ಲಿನ ರೇಟ್
ಗಾಂಪ: ಡಾಕ್ಟರೇ, ನನ್ನ ಹಲ್ಲು ಬಹಳ ನೋಯುತ್ತಾ ಇದೆ.
ಡಾಕ್ಟರ್: (ಪರೀಕ್ಷಿಸಿ) ಅದನ್ನು ಕೀಳಬೇಕಾಗುತ್ತೆ.
ಗಾಂಪ: ಹಲ್ಲು ಕೀಳೋಕೆ ಎಷ್ಟು ದುಡ್ದಾಗುತ್ತೆ?
ಡಾಕ್ಟರ್: ಐದು ನೂರು ರೂಪಾಯಿಗಳು
ಗಾಂಪ: ಹಾಗಾದ್ರೆ ಕೀಳಿ..
ಡಾಕ್ಟರ್ (ಹಲ್ಲು ಕಿತ್ತ ಬಳಿಕ): ನಿಮ್ಮ ಹಲ್ಲು ಕಿತ್ತ ಚಾರ್ಜ್ ಒಂದುವರೆ ಸಾವಿರ ರೂಪಾಯಿ ಕೊಡಿ.
ಗಾಂಪ: ಯಾಕೆ ಡಾಕ್ಟರೇ, ಆಗ್ಲೇ ನೀವು ಐದು ನೂರು ರೂಪಾಯಿ ಅಂತ ಹೇಳಿದ್ರಿ?
ಡಾಕ್ಟರ್: ಹೌದು ಆಗ ಹೇಳಿದ್ದೆ. ಈಗಲೂ ನಿಮ್ಮ ಹಲ್ಲು ಕಿತ್ತದ್ದಕ್ಕೆ ಐದು ನೂರು ರೂಪಾಯಿಗಳೇ. ಆದರೆ ನಿಮ್ಮ ಹಲ್ಲು ಕೀಳುವಾಗ ನೀವು ಚೀರಿ, ಬೊಬ್ಬೆ ಹಾಕಿದ್ದರಿಂದ ಹೊರಗಿದ್ದ ಎರಡು ರೋಗಿಗಳೂ ಓಡಿ ಹೋದರು. ಅದಕ್ಕೆ ಒಟ್ಟಿಗೆ ಒಂದುವರೆ ಸಾವಿರ ರೂಪಾಯಿ ಕೊಡಬೇಕು !
***
ಚಕ್ಕುಲಿ ಅಂಗಡಿ
ಟೀಚರ್: ಏನೋ ಗಾಂಪ, ನಿನ್ನ ಎಸ್ ಎಸ್ ಎಲ್ ಸಿ ಮುಗಿದ ಬಳಿಕ ಭೇಟಿನೇ ಆಗಿಲ್ಲವಲ್ಲೋ?
ಗಾಂಪ: ಏನಿಲ್ಲ ಮಿಸ್, ನಾನು ಈಗ ಕೆಲಸದಲ್ಲಿ ತುಂಬಾ ಬಿಸಿ ಇರ್ತೀನಿ. ಅದಕ್ಕೆ ಭೇಟಿಯಾಗಿಲ್ಲ.
ಟೀಚರ್: ಏನು ಕೆಲಸ ಮಾಡ್ತಿದ್ದೀಯಾ?
ಗಾಂಪ: ಸಿ ಎ ಮಾಡ್ತಿದೀನಿ ಮಿಸ್
ಟೀಚರ್: ಓಹೋ, ಚಾರ್ಟಡ್ ಅಕೌಂಟೆನ್ಸಿಯಾ? ವೆರಿ ಗುಡ್ !
ಗಾಂಪ: ಅದೆಲ್ಲಾ ಅಲ್ಲ ಮಿಸ್, ಚಕ್ಕುಲಿ ಅಂಗಡಿ ಇಟ್ಟುಕೊಂಡಿದ್ದೀನಿ.
***
ಮಾರಾಟದ ಅನುಭವ
ಸೇಲ್ಸ್ ಮ್ಯಾನೇಜರ್: ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?
ಗಾಂಪ: ಸಾಕಷ್ಟು ಇದೆ ಸರ್, ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿ ವಿ ಮಾರಿದ್ದೇನೆ, ನನ್ನ ಹೆಂಡತಿಯ ಮೈಮೇಲಿನ ಎಲ್ಲಾ ಆಭರಣಗಳನ್ನು ಮಾರಿದ್ದೇನೆ.
ಸೇಲ್ಸ್ ಮ್ಯಾನೇಜರ್ ಮೂರ್ಛೆ ಹೋದರು.
***
ಮದ್ಯಪಾನದ ತೊಂದರೆ
ಗಾಂಪ: ಡಾಕ್ಟ್ರೇ, ನನ್ನ ಹೆಂಡತಿ ಮದ್ಯಪಾನದ ತೊಂದರೆಯಿಂದ ಬಳಲುತ್ತಿದ್ದಾಳೆ.
ಡಾಕ್ಟರ್: ಆಕೆ ಅಷ್ಟೊಂದು ಕುಡೀತಾರಾ?
ಗಾಂಪ: ಇಲ್ಲ ಡಾಕ್ಟ್ರೇ, ಕುಡಿಯೋದು ನಾನು, ತೊಂದರೆ ಮಾತ್ರ ಅವಳಿಗೆ !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ