‘ಸಂಪದ' ನಗೆ ಬುಗ್ಗೆ - ಭಾಗ ೭

‘ಸಂಪದ' ನಗೆ ಬುಗ್ಗೆ - ಭಾಗ ೭

ಉತ್ತಮ ಸಲಹೆ

ತಮ್ಮ ಊರಿನಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದ್ದರಿಂದ ಹೆದರಿದ ಗಾಂಪ, “ಭೂಕಂಪದ ಕಾರಣದಿಂದಾಗಿ ಕೆಲವು ದಿನಗಳ ಮಟ್ಟಿಗೆ ನನ್ನ ಮಗನನ್ನು ನಿನ್ನಲ್ಲಿಗೆ ಕಳುಹಿಸುತ್ತಿದ್ದೇನೆ" ಎಂಬ ಒಕ್ಕಣೆಯ ಪತ್ರದೊಂದಿಗೆ ತನ್ನ ಮಗನನ್ನು ಗೆಳೆಯನಾದ ಸೂರಿ ಹತ್ತಿರ ಕಳುಹಿಸಿದ.

ಒಂದು ವಾರದ ನಂತರ ಸೂರಿಯಿಂದ ಗಾಂಪನಿಗೆ ಟೆಲಿಗ್ರಾಂ ಬಂತು. “ನಿಮ್ಮ ಮಗನನ್ನು ಹಿಂದಕ್ಕೆ ಕಳಿಸುತ್ತಿದ್ದೇನೆ. ಬೇಕಾದರೆ ಭೂಕಂಪವನ್ನೇ ಇಲ್ಲಿಗೆ ಕಳಿಸು!”

***

ಹುಚ್ಚಾಸ್ಪತ್ರೆ

ಗಾಂಪನಿಗೆ ವಿದೇಶಿ ಮಿತ್ರನೊಬ್ಬ ಬಹುದಿನಗಳ ನಂತರ ಸಿಕ್ಕಿದ್ದ. ನಗರ ತೋರಿಸಲು ಅವನನ್ನು ದಾರಿಗುಂಟ ಕರೆದೊಯ್ದ ಗಾಂಪ. ದಾರಿಯಲ್ಲಿ ಸಿಕ್ಕಿದ ಭವ್ಯ ಕಟ್ಟಡವನ್ನು ತೋರಿಸಿದ ಗಾಂಪ, ಮಿತ್ರನನ್ನು ಕೇಳಿದ: “ಇದನ್ನು ನೋಡಿ ನಿಮಗೆ ಹೇಗನಿಸಿತು?”

“ನಮ್ಮ ದೇಶದ ಪ್ರತಿಯೊಂದು ನಗರದಲ್ಲೂ ಇಂಥ ಕಟ್ಟಡಗಳು ನೂರಾರಿವೆ. ಇದೇನು ಮಹಾ?” ಎಂದ ಮಿತ್ರ ತಾತ್ಸಾರ ಭಾವನೆಯಿಂದ.

“ನಿಮ್ಮ ದೇಶದ ತುಂಬಾ ಹುಚ್ಚರೇ ಇದ್ದಾರಾ? ಅಷ್ಟೊಂದು ಹುಚ್ಚಾಸ್ಪತ್ರೆಗಳಿರಲು!” ಎಂದು ಗಾಂಪ ಆಶ್ಚರ್ಯ ವ್ಯಕ್ತಪಡಿಸಿದ.

***

ಪತ್ರಿಕೆ

ಗಾಂಪ ಮತ್ತು ಸೂರಿ ಹರಟುತ್ತಾ ಕುಳಿತಿದ್ದರು.

ಗಾಂಪ: ನೋಡು ಸೂರಿ, ಈಗ ಟಿವಿ, ಇಂಟರ್ನೆಟ್ ಯುಗ. ಪತ್ರಿಕೆಗಳ ಸ್ಥಾನವನ್ನು ಟಿವಿ ಆಕ್ರಮಿಸಿಕೊಂಡು ಬಿಟ್ಟಿದೆ.

ಸೂರಿ: ಇಲ್ಲ ಇಲ್ಲ, ಪತ್ರಿಕೆಗಳ ಸ್ಥಾನವನ್ನು ಟಿವಿ ಆಕ್ರಮಿಸಲು ಸಾಧ್ಯವೇ ಇಲ್ಲ.

ಗಾಂಪ: ಏಕೆ ಸಾಧ್ಯವಿಲ್ಲ?

ಸೂರಿ: ಪತ್ರಿಕೆಗಳನ್ನು ವಡೆ, ಬೋಂಡಾ ಸುತ್ತಲು ಉಪಯೋಗಿಸಬಹುದು. ಆದರೆ ಟಿವಿಯನ್ನು ವಡೆ, ಬೋಡ ಸುತ್ತಲು ಯಾರಿಂದಲೂ ಬಳಸಲು ಸಾಧ್ಯವಾಗದು.

***

ಕಾರಣ

ಸಂಸ್ಕೃತ ಪಂಡಿತ ಗಾಂಪ ತಮ್ಮ ವಿದ್ಯಾರ್ಥಿಯೊಬ್ಬನಿಗೆ ಮನೆ ಪಾಠ ಮುಗಿಸಿ ಹೊರ ಬರುತ್ತಿರುವಾಗ ಹಣೆಯಿಂದ ರಕ್ತ ಒಸರುತ್ತಿತ್ತು. ಎದುರಿಗೆ ಸಿಕ್ಕ ಗೆಳೆಯ ಸೂರಿ “ಏನ್ ಮೇಷ್ಟ್ರೇ, ಏನಾಯ್ತು?” ಎಂದು ವಿಚಾರಿಸಿದರು.

“ಏನಿಲ್ಲಾರೀ, ಹುಡುಗನಿಗೆ ಶೃಂಗಾರ ರಸದ ಕವಿತೆಯನ್ನು ಅರ್ಥ ಮಾಡಿಸುತ್ತಿದ್ದೆ. ಅವನು ಹೂ ಎಸೆದ.”

“ಅದರೆ ರಕ್ತ ಬರುತ್ತಿದೆಯಲ್ಲಾ?”

“ಅದೇ ಹೂ ಎಸೆದಾಗ ಅದರ ಜೊತೆ ಹೂದಾನಿಯೂ ಬಂದಿತ್ತು.” ಗಾಂಪ ಪಂಡಿತರು ಗಂಭೀರವಾಗಿ ಉತ್ತರಿಸಿದರು.

 ***

ಪ್ರವಾಸ

ಹೆಂಡತಿ ಮಕ್ಕಳ ಜತೆ ಮೈಸೂರು ಪ್ರವಾಸ ಮುಗಿಸಿಕೊಂಡು ಬಂದಿದ್ದ ಗಾಂಪನನ್ನು ಗೆಳೆಯ ಸೂರಿ ಕೇಳಿದ: “ಒಂದೇ ದಿನದಲ್ಲಿ ನೀನು ಮೈಸೂರನ್ನು ನೋಡಿ ಬರಲು ಹೇಗೆ ಸಾಧ್ಯವಾಯಿತು?”

“ಮನೇಲಿ ಕೆಲಸ ಹಂಚಿಕೊಳ್ಳುವ ಹಾಗೆ ಇಲ್ಲೂ ನೋಡುವ ಸ್ಥಳಗಳನ್ನು ಹಂಚಿಕೊಂಡೆವು,”

“ನನ್ನ ಮಗ ಜೂ ನೋಡಲು ಹೋದ, ಮಗಳು ಕೆ ಆರ್ ಎಸ್ ಬೃಂದಾವನ ಗಾರ್ಡನ್ ನೋಡಲು ಹೋದಳು, ನಮ್ಮಾಕೆ ಚಾಮುಂಡಿ ಬೆಟ್ಟ, ಸೀರೆ ಅಂಗಡಿ ಮತ್ತೆ ನಾನು ಅರಮನೆ, ಹೋಟೇಲು ಮುಗಿಸಿದೆ. !” ಎಂದ ಬುದ್ಧಿವಂತ ಗಾಂಪ.

***

ಕಾಗದ

ಗಾಂಪ: ಯಾಕಿಷ್ಟು ಗಾಬರಿಯಾಗಿದ್ದೀಯಾ ಮಾರಾಯಾ?

ಸೂರಿ: ಯಾರೋ ಒಬ್ಬ ಕಾಗದ ಬರೆದು ಬೆದರಿಕೆ ಹಾಕಿದ್ದಾನೆ ಕಣೋ, ಏನು ಮಾಡಬೇಕೆಂದು ತೋಚ್ತಾ ಇಲ್ಲ.

ಗಾಂಪ: ಏನಂತ ಬೆದರಿಕೆ ಹಾಕ್ತಾನೆ?

ಸೂರಿ: ನೀನು ನನ್ನ ಹೆಂಡತಿಯ ಜೊತೆ ಸುತ್ತಾಡೋದನ್ನು ಇನ್ನೊಂದು ಸಾರಿ ನೋಡಿದರೆ ನಿಮ್ಮ ಕೊಲೆ ಮಾಡಿ ಬಿಡ್ತೇನೆ ಅಂತ ಬರೆದಿದ್ದಾನೆ.

ಗಾಂಪ: ಸರಿ. ಅದೇನು ಸಮಸ್ಯೆ? ಬಿಡು, ಅವನ ಹೆಂಡತಿ ಜೊತೆ ತಿರುಗಾಡೋದನ್ನ ನಿಲ್ಲಿಸಿ ಬಿಟ್ಟರಾಯಿತು. ಅಷ್ಟೇ.

ಸೂರಿ: ಆದರೆ ಆ ಕಾಗದ ಬರೆದ ಪುಣ್ಯಾತ್ಮ ತನ್ನ ಹೆಸರನ್ನೇ ಬರೆದಿಲ್ಲವಲ್ಲಾ, ನಾನು ಯಾರ ಹೆಂಡತಿಯ ಜೊತೆ ತಿರುಗಾಡೋದನ್ನ ನಿಲ್ಲಿಸಬೇಕು ಅಂತ ತಿಳಿಯೋದಾದರೂ ಹೇಗೆ?!

***

(ಕೃಪೆ: ‘ಗೆಳೆಯ ಗೆಳತಿಯರಲ್ಲಿ ಜೋಕುಗಳು’ ಪುಸ್ತಕ)