‘ಸಂಪದ ನಗೆ ಬುಗ್ಗೆ' - ಭಾಗ ೮೦

‘ಸಂಪದ ನಗೆ ಬುಗ್ಗೆ' - ಭಾಗ ೮೦

ಥ್ಯಾಂಕ್ಯೂ

ಬೆಂಗಳೂರಿನ ಪ್ರವಾಸ ಮುಗಿಸಿ ಊರಿಗೆ ಹೊರಡುವ ತುರಾತುರಿಯಲ್ಲಿತ್ತು ಗಾಂಪನ ಕುಟುಂಬ. ಊರಿಗೆ ಹೋಗುವಾಗ ಸ್ವಲ್ಪ ಏನಾದ್ರೂ ಸಿಹಿ ತೆಗೆದುಕೊಂಡು ಹೋಗುವ ಸಲುವಾಗಿ ಗಾಂಪ ತನ್ನ ಮಗ ಮರಿ ಗಾಂಪನನ್ನು ಕರೆದುಕೊಂಡು ಬೇಕರಿಗೆ ಹೋದ. ಅಂಗಡಿಯಾತ ಗಾಂಪ ತೋರಿಸಿದ ಸಿಹಿತಿಂಡಿಗಳನ್ನು ರುಚಿ ನೋಡಲು ಮರಿ ಗಾಂಪನಿಗೆ ನೀಡಿದಾಗ ಆತ ಖುಷಿಯಿಂದ ತಿನ್ನುತ್ತಾ “ಚೆನ್ನಾಗಿದೆ" ಎಂದು ತಲೆ ಅಲ್ಲಾಡಿಸಿದ. ಖರೀದಿಸಿದ ಸ್ವೀಟ್ಸ್ ತೆಗೆದುಕೊಂಡು ಹೊರಟಾಗ ಮರಿ ಗಾಂಪ ಅಂಗಡಿಯ ಮಾಲೀಕರಿಗೆ “ಥ್ಯಾಂಕ್ಯೂ ರಾಜ್ಯಪಾಲರೇ” ಎಂದ. ಆಗ ಗಾಂಪ “ಹಾಗೆಲ್ಲಾ ದೊಡ್ದವರಿಗೆ ತಮಾಷೆ ಮಾಡಬಾರದು ಪುಟ್ಟಾ” ಎಂದ. ಮರಿ ಗಾಂಪ ಅಂಗಡಿಯಿಂದ ಹೊರಬಂದು ನಾಮಫಲಕ ತೋರಿಸಿದ. ಅದು “ರಾಜಭವನ್ ಸ್ವೀಟ್ಸ್" ಎಂದಿತ್ತು. “ರಾಜಭವನದಲ್ಲಿ ಇರುವುದು ರಾಜ್ಯಪಾಲರೇ ಅಲ್ವಾ?” ಎಂದು ನಮಗೇ ಪ್ರಶ್ನೆ ಹಾಕಿದ. ಅವನ ಮಾತನ್ನು ಕೇಳುತ್ತಿದ್ದ ಅಂಗಡಿಯ ಮಾಲೀಕರಿಗೂ ನಗುಬಂತು.

***

ಅದೆಲ್ಲಾ ನಿಮಗ್ಯಾಕೆ?

ನ್ಯಾಯಾಧೀಶರ ಮುಂದೆ ಸರಕಾರಿ ವಕೀಲರು ಕಳ್ಳ ಗಾಂಪನ ವಿಚಾರಣೆ ಮಾಡುತ್ತಾ, ಅಷ್ಟೊಂದು ಭದ್ರತಾ ವ್ಯವಸ್ಥೆಯಿದ್ದ ಚಿನ್ನದ ಅಂಗಡಿಗೆ ಲೀಲಾಜಾಲವಾಗಿ ನುಗ್ಗಿ ಬೆರಳಚ್ಚು ಮೂಡದ ಹಾಗೆ ಅಷ್ಟು ಚಿನ್ನಾಭರಣಗಳನ್ನು ಹೇಗೆ ಕದ್ದೆ? ಎಂದು ಪ್ರಶ್ನಿಸಿದರು. ಗಾಂಪ, ‘ಬೇಡ ಬಿಡಿ ಸರ್' ಎಂದ. ವಕೀಲರು ಪಟ್ಟು ಬಿಡದೇ ‘ಇಲ್ಲ, ಎಲ್ಲವನ್ನೂ ಸ್ಪಷ್ಟವಾಗಿ ಹೇಳು. ನಿನಗೆ ಶಿಕ್ಷೆ ಕಡಿಮೆಯಾಗುತ್ತದೆ. ಅಷ್ಟು ಗಟ್ಟಿಯಾದ ಗೋಡೆಗೆ ಕನ್ನ ಕೊರೆದದ್ದಾದರೂ ಹೇಗೆ? ನಮಗೆ ಗೊತ್ತಾಗಬೇಕು' ಎಂದು ಕೇಳಿದರು. ‘ಸರ್, ನಿಮಗೆ ಒಳ್ಳೆಯ ನೌಕರಿ ಇದೆ. ವೇತನವೂ ಇದೆ. ಸಮಾಜದಲ್ಲಿ ಗೌರವವೂ ಇದೆ. ವಯಸ್ಸೂ ಆಗಿದೆ. ಇಂಥದ್ದರಲ್ಲಿ ಇದನ್ನು ಕಲಿತುಕೊಂಡು ಏನು ಮಾಡ್ತೀರಾ? ಹೋಗಲಿ ಬಿಡಿ ಸರ್' ಅಂದ ಮಹಾ ಕಳ್ಳ ಗಾಂಪ.

***

ಸ್ನಾನದ ಸೌಲಭ್ಯ

ಗಾಂಪ ಹಂಪಿ ಪ್ರವಾಸಕ್ಕೆ ಹೊರಡಲು ನಿಶ್ಚಯಿಸಿ ಖಾಸಗಿ ಸಾರಿಗೆ ಸಂಸ್ಥೆಯೊಂದನ್ನು ಸಂಪರ್ಕಿಸಿದ. ಅವರು ‘ಹಂಪಿ, ಹೊಯ್ಸಳ ದೇವಾಲಯಗಳ ಮೂರು ದಿನಗಳ ಯಾತ್ರೆಗೆ ಮೂರು ಸಾವಿರ ರೂಪಾಯಿ. ಕಾಫಿ, ತಿಂಡಿ, ಊಟ, ವಸತಿ, ಬಿಸಿ ನೀರಿನ ಸ್ನಾನದ ಸೌಲಭ್ಯವೂ ಸೇರಿ' ಎಂದು ತಿಳಿಸಿದರು. ಗಾಂಪ ಚೌಕಾಶಿ ಮಾಡಿ, ‘ಸರ್, ದಯವಿಟ್ಟು ಸ್ವಲ್ಪ ಕಡಿಮೆ ಮಾಡಿ' ಎಂದ. ಮ್ಯಾನೇಜರ್ ‘ಅದೆಲ್ಲಾ ಆಗೊಲ್ಲಾರೀ. ಈಗಾಗಲೇ ಸಾಕಷ್ಟು ರಿಯಾಯಿತಿ ಕೊಟ್ಟಾಗಿದೆ. ಬೇಕಾದರೆ ಬನ್ನಿ, ಇಲ್ಲವಾದರೆ ಬಿಡಿ. ಒಂದು ರೂಪಾಯಿನೂ ಕಡಿಮೆ ಮಾಡಲ್ಲ' ಎಂದ. 

ಗಾಂಪ ‘ಸರ್, ನೀವು ಬಿಸಿ ನೀರಿನ ಸ್ನಾನ ಸಾವಿರ ರೂಪಾಯಿ ಅಂತ ಹೇಳಿದ್ರಿ ಅಲ್ವಾ? ನನಗೆ ಆ ಸೌಲಭ್ಯ ಬೇಡ ಸರ್, ನಾನು ವಾರಕ್ಕೆ ಒಂದೇ ಸಲ ಸ್ನಾನ ಮಾಡೋದು... ಒಂದು ಸಾವಿರ ಕಡಿಮೆ ಮಾಡ್ಕೊಳ್ಳಿ' ಎಂದ.

***
ಅಡುಗೆ ಮನೆ

ಗಾಂಪ: ಏನೋ ಸೂರಿ, ನಿಮ್ಮ ಹೆಂಡತಿ ಹೆಚ್ಚಾಗಿ ಅಡುಗೆ ಮನೆಯಲ್ಲೇ ಇರ್ತಾಳಲ್ಲಾ?

ಸೂರಿ: ಹೌದಯ್ಯಾ..

ಗಾಂಪ: ಹಾಗಾದ್ರೆ ಅಡುಗೆ ಮತ್ತು ಅಡುಗೆ ಮನೆ ಬಗ್ಗೆ ತುಂಬಾ ಆಸಕ್ತಿ ಇದೆ ಅಂತಾಯ್ರು ಅನ್ನು.

ಸೂರಿ: ಹಾಗೇನಿಲ್ಲ ಕಣಯ್ಯ! ನಮ್ಮ ಮನೆಯಲ್ಲಿ ಸರಿಯಾಗಿ ಮೊಬೈಲ್ ನೆಟ್ ವರ್ಕ್ ಸಿಗೋದು ಅಡುಗೆ ಮನೆಯಲ್ಲಿ ಮಾತ್ರ !

***

ಕಾರಣ

ಟೀಚರ್: ಲೋ ಗಾಂಪ, ನಿನ್ನೆ ಯಾಕೆ ಶಾಲೆಗೆ ಬರಲಿಲ್ಲ?

ಗಾಂಪ: ಏನಿಲ್ಲಾ ಟೀಚರ್, ಮೊನ್ನೆ ನಾನು ನಿಮ್ಮನ್ನು ಡಾಕ್ಟರ್ ಶಾಪಿನಲ್ಲಿ ನೋಡ್ದೆ. ಅದಕ್ಕೆ ನಿನ್ನೆ ನೀವು ಶಾಲೆಗೆ ಬರ್ತೀರೋ ಇಲ್ವೋ ಅನ್ನೋ ಅನುಮಾನದಿಂದ ನಾನೂ ಬರಲಿಲ್ಲ !

***

ಮದುವೆ

ಗಾಂಪ: ನಾನು ನಿನಗೆ ಸ್ಕೂಟರ್, ಕಾರು, ಮನೆ, ಚಿನ್ನ ಎಲ್ಲಾ ಕೊಡಿಸ್ತೇನೆ ಅಂತ ಹೇಳಿದರೂ ನೀನು ಯಾಕೆ ನನ್ನನ್ನು ಮದುವೆಯಾಗಲು ಒಪ್ತಾ ಇಲ್ಲ?

ಶ್ರೀಮತಿ: ನಮ್ ಮಾವನ ಮಗ ನೀನು ಕೊಡಿಸುವುದೆಲ್ಲರ ಜೊತೆಗೆ ಪ್ರತೀ ತಿಂಗಳು ಒಂದು ಲಕ್ಷ ರೂಪಾಯಿ ಕೊಡ್ತೀನಿ ಅಂತ ಹೇಳಿದ್ದಾನೆ!

***

ಮುತ್ತು ಕೊಟ್ಟದ್ದು !

ನ್ಯಾಯಾಧೀಶ: ನಿಮ್ಮ ಪಕ್ಕದ ಮನೆಯವನು ನಿಮಗೆ ಬಲವಂತವಾಗಿ ಮುತ್ತು ಕೊಟ್ಟನೆಂದು ಆರೋಪಿಸಿದ್ದೀರಿ,. ಹೌದಾ?

ಶ್ರೀಮತಿ: ಹೌದು

ನ್ಯಾಯಾಧೀಶ: ಆದರೆ ಅವನು ನಿಮಗಿಂತ ತುಂಬಾ ಕುಳ್ಳ. ಅದು ಹೇಗೆ ಅವನು ನಿಮಗೆ ಮುತ್ತುಕೊಡಲು ಸಾಧ್ಯ?

ಶ್ರೀಮತಿ: ನಾನೇ ಕೆಳಗೆ ಬಾಗಿದೆ ಸರ್ !

***

ನಂಬಿಕೆ

ವಕೀಲ: ನಾನು ಯಾರು ಏನೇ ಹೇಳಲಿ, ಅದನ್ನು ಕೇವಲ ಅರ್ಧದಷ್ಟು ಮಾತ್ರ ನಂಬುತ್ತೀನಿ. ಯಾಕೆಂದರೆ ನಾನು ವಕೀಲ.

ಅಧಿಕಾರಿ: ನಾನು ಜನ ಹೇಳುವುದರ ಎರಡರಷ್ಟು ನಂಬುತ್ತೇನೆ. ಯಾಕೆಂದರೆ ನಾನು ತೆರಿಗೆ ಅಧಿಕಾರಿ !

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ