‘ಸಂಪದ ನಗೆ ಬುಗ್ಗೆ - ಭಾಗ ೮೩
ಜಾಮೂನು ಪ್ರಸಂಗ
ಗಾಂಪ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಹೊರಟಿದ್ದ. ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ತನ್ನ ಮಗುವಿಗೆ ಜಾಮೂನು ತಿನ್ನಿಸಲು ಹರಸಾಹಸ ಪಡುತ್ತಿದ್ದರೂ ಮಗು ತಿನ್ನುತ್ತಿರಲಿಲ್ಲ. “ನೋಡು ಪಾಪು, ನೀ ಜಾಮೂನು ತಿನ್ನದಿದ್ರೆ ಅಂಕಲ್ ಗೆ ತಿನ್ನಿಸುತ್ತೇನೆ" ಅಂತ ಗಾಂಪನ ಕಡೆ ತೋರಿಸ್ತಿದ್ಲು. ಬಸ್ಸು ಮೈಸೂರಿನಿಂದ ಶ್ರೀರಂಗಪಟ್ಟಣ, ಮಂಡ್ಯ ದಾಟಿ ಮದ್ದೂರಿಗೆ ಬಂತು. ಆಗಲೂ ಆಕೆ “ನೋಡು ತಿನ್ನೋದಾದ್ರೆ ತಿನ್ನು, ಇಲ್ಲಾಂದರೆ ಅಂಕಲ್ ತಿಂದೇ ಬಿಡ್ತಾರೆ.." ಎಂದಳು. ಗಾಂಪನಿಗೆ ಸಿಟ್ಟು ಉಕ್ಕಿಬಂತು. ಅವ ಹೇಳೇ ಬಿಟ್ಟ “ತಿನ್ನಿಸುದಾದ್ರೆ ತಿನ್ಸಿ ಬಿಡಿ. ಸುಮ್ ಸುಮ್ನೇ ಹೇಳಬಿಡಿ. ನಾ ಜಾಮೂನು ತಿನ್ನೋ ಆಸೆಯಿಂದ ಶ್ರೀರಂಗಪಟ್ಟಣದಲ್ಲಿ ಇಳಿಯಬೇಕಾದೋನು ಮಂಡ್ಯ ಬಿಟ್ಟು ಮದ್ದೂರಿನವರೆಗೂ ಬಂದಿದೀನಿ..." ಎಂದ.
***
ಜೀವವಿಮಾ ಏಜೆಂಟ್
ಗಾಂಪ: ನಮ್ಮ ಮನೆಯಲ್ಲಿ ಯಾವಾಗಲೂ ನೆಂಟರ್ ಕಾಟ ಕಣಯ್ಯಾ... ಏನಾದರೂ ಪರಿಹಾರ ಹೇಳು.
ಸೂರಿ: ನೀನು ಇನ್ಶುರೆನ್ಸ್ ಏಜೆಂಟನಾಗಿ ಬಿಡು
ಗಾಂಪ: ಅದರಿಂದ ಏನು ಪ್ರಯೋಜನ?
ಸೂರಿ: ಬಂದ ನೆಂಟರನ್ನೆಲ್ಲಾ ಇನ್ಶುರೆನ್ಸ್ ಪಾಲಿಸಿ ಖರೀದಿಸಲು ಒಮ್ಮೆ ಒತ್ತಾಯಿಸಿದರೆ ಸಾಕು. ನಂತರ ನಿನ್ನ ಮನೆಯತ್ತ ಅವರು ತಿರುಗಿಯೂ ನೋಡೋದಿಲ್ಲ !
***
ಉತ್ತರ ಎಲ್ಲಿ?
ಟೀಚರ್: ಎಲ್ಲರಿಗೂ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ನೀಡುತ್ತೇನೆ, ಪರೀಕ್ಷೆಯನ್ನು ಚೆನ್ನಾಗಿ ಮಾಡಿರಿ. ನಿಮಗೆ ಏನಾದರೂ ಸಂದೇಹವಿದ್ದರೆ ಅಥವಾ ತಿಳಿಯದ ವಿಷಯವಿದ್ದರೆ ಈಗಲೇ ಸಂಕೋಚ ಮಾಡದೇ ಕೇಳಬಹುದು.
ಗಾಂಪ: ಸರ್, ನನಗೆ ಒಂದು ಸಣ್ಣ ಸಂದೇಹ. ಕೇಳ ಬಹುದಾ?
ಟೀಚರ್: ನೋಡ್ರಯ್ಯಾ, ಈ ಗಾಂಪನನ್ನು ನೋಡಿ ಕಲಿಯಿರಿ. ಹೇಗೆ ಆತ ಪ್ರಶ್ನೆ ಕೇಳಲು ಧೈರ್ಯ ಮಾಡಿದ್ದಾರೆ. ನೀ ಕೇಳಪ್ಪಾ ಗಾಂಪ…
ಗಾಂಪ: ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ನೀಡಿದ್ದೀರಿ. ಆದರೆ ಉತ್ತರ ಪತ್ರಿಕೆಯಲ್ಲಿ ಏಕೆ ಉತ್ತರಗಳನ್ನು ನೀಡಿಲ್ಲ ಸರ್?
***
ಜೀವ ಉಳಿಸಿದ್ದೀರಾ?
ಟೀಚರ್: ಯಾರಾದರೂ ನಿಮ್ಮ ಜೀವನದಲ್ಲಿ ಯಾವುದಾದರೂ ಜೀವ ಉಳಿಸಿದ್ದೀರಾ?
ಗಾಂಪ: ಹೌದು ಟೀಚರ್, ನಾನು ಉಳಿಸಿದ್ದೇನೆ…
ಟೀಚರ್: ಹೌದಾ ವೆರಿ ಗುಡ್, ಯಾವ ಜೀವ ಉಳಿಸಿದ್ದೀ? ಹೇಗೆ? ಹೇಳುತ್ತೀಯಾ?
ಗಾಂಪ: ಟೀಚರ್, ಮೊನ್ನೆ ನಾನು ಕೆರೆಯಲ್ಲಿ ಜಾರಿ ಬಿದ್ದೆ. ಇನ್ನೇನು ಮುಳುಗುತ್ತೇನೆ ಅಂತ ಆಗುವಾಗ ಕೈಗೆ ಒಂದು ಮೀನು ಸಿಕ್ಕಿತು. ನಾನಂತೂ ಮುಳುಗಿ ಸಾಯುತ್ತೇನೆ, ನೀನಾದರೂ ಬದುಕು ಅಂತ ಆ ಮೀನನ್ನು ಕೆರೆಯಿಂದ ಹೊರಗೆ ಬಿಸಾಕಿ ಬಿಟ್ಟು ಆ ಮೀನಿನ ಜೀವ ಉಳಿಸಿದೆ...!
***
ಮೊದಲ ಕೆಲಸ
ನ್ಯಾಯಾಧೀಶ: ಇದು ನಿನ್ನ ಮೊದಲ ಕಳ್ಳತನವಾ?
ಕಳ್ಳ ಗಾಂಪ: ಹೌದು ಮಹಾ ಸ್ವಾಮಿ, ಇದೇ ಮೊದಲ ಬಾರಿ ಕದ್ದಿರೋದು.
ನ್ಯಾಯಾಧೀಶ: ಹೋಗಿ ಹೋಗಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೀಯಲ್ಲಾ ಯಾಕೆ? ಬೇರೆ ಮನೆಗಳು ಸಿಗಲಿಲ್ಲವಾ?
ಕಳ್ಳ ಗಾಂಪ: ಹಂಗಲ್ಲ ಸ್ವಾಮಿ, ಯಾವುದೇ ಕೆಲಸ ಶುರು ಮಾಡಬೇಕಾದ್ರೆ ದೇವರಿಂದಲೇ ತಾನೇ ಮಾಡಬೇಕು !?
***
ಹಳೆಯ ಪ್ರಾಣಿ
ಟೀಚರ್: ನಿನ್ನೆ ಹೇಳಿದ ಪಾಠ ಓದಿಕೊಂಡು ಬಂದಿರುವಿರಾ?
ಮಕ್ಕಳು: ಹೌದು ಸರ್, ಬೇಕಾದ್ರೆ ಪ್ರಶ್ನೆ ಕೇಳಿ..
ಟೀಚರ್: ನಮ್ಮ ಜಗತ್ತಿನಲ್ಲಿ ಅತ್ಯಂತ ಹಳೆಯ ಪ್ರಾಣಿ ಯಾವುದು?
ಗಾಂಪ: ಝೀಬ್ರಾ ಎಂಬ ಪ್ರಾಣಿ ಟೀಚರ್
ಟೀಚರ್: ಗಾಂಪ, ಅದೇಗೆ ಹೇಳುತ್ತೀ? ಝೀಬ್ರಾ ಹಳೆಯ ಪ್ರಾಣಿ ಎಂದು?
ಗಾಂಪ: ಟೀಚರ್, ಅದು ಇನ್ನೂ ಕಪ್ಪು-ಬಿಳುಪು ಮೈ ಬಣ್ಣವನ್ನು ಹೊಂದಿದೆ. ಹಾಗೆ ಅದು ಅತ್ಯಂತ ಹಳೆಯ ಪ್ರಾಣಿ ಎಂದು ನನ್ನ ಅಂದಾಜು..!
***
ಲಾಭಗಳು
ಗಾಂಪ: ಅತಿಥಿಗಳಿಗೆ ಗ್ರೀನ್ ಟೀ ಕುಡಿಸುವುದರಿಂದ ಆಗುವ ಲಾಭಗಳೇನು?
ಸೂರಿ: ೧. ಟೀಯೊಂದಿಗೆ ಬಿಸ್ಕಿಟ್ ಕೊಡುವುದು ತಪ್ಪುತ್ತದೆ. ೨. ಅತಿಥಿ ಇನ್ನೊಂದು ಕಪ್ ಗ್ರೀನ್ ಟೀ ಕೊಡಿ ಅಂತ ಕೇಳೋದು ತಪ್ಪುತ್ತೆ. ೩. ಹಾಲಿನ ವೆಚ್ಚ ಉಳಿಯುತ್ತೆ. ೪. ಬಹುಷಃ ನಿಮ್ಮ ಮನೆಗೆ ಮತ್ತೊಮ್ಮೆ ಅವರು ಬರುವುದೂ ತಪ್ಪುತ್ತದೆ.
***
ಕಾರಣ
ಗಾಂಪ: ಮದುವೆಯಾಗಿರುವ ಗಂಡಸರನ್ನೇ ನೀನು ಯಾಕೆ ಕೆಲಸಕ್ಕೆ ತೆಗೆದುಕೊಳ್ಳುತ್ತೀ?
ಸೂರಿ: ಅವಮಾನವನ್ನು ಹೇಗೆ ಸಹಿಸಿಕೊಳ್ಳಬೇಕು ಎಂಬುದು ಮದುವೆಯಾದ ನಂತರ ಗಂಡಸರಿಗೆ ಚೆನ್ನಾಗಿ ಗೊತ್ತಿರುತ್ತದೆ. ಜೊತೆಗೆ ಮನೆಗೆ ಬೇಗ ಹೋಗಬೇಕೆನ್ನುವ ಧಾವಂತವೂ ಅವರಿಗೆ ಇರುವುದಿಲ್ಲ.
***
ಕೊನೆಯ ಮಾತು !
ವಕೀಲ: ನಿಮ್ಮ ಪತಿ ಹತ್ಯೆಯಾಗುವ ಮೊದಲು, ಅವರು ನಿಮ್ಮೊಂದಿಗೆ ಆಡಿದ ಕೊನೆಯ ಮಾತೇನು?
ಮಹಿಳೆ: ‘ನನ್ನ ಕನ್ನಡಕ ಎಲ್ಲಿದೆ ಸಂಗೀತಾ?’ ಅಂತ ಕೇಳಿದ್ದರು.
ವಕೀಲ: ಅವರಾಡಿದ ಕೊನೆಯ ಮಾತಿನಲ್ಲಿ ಹತ್ಯೆ ಮಾಡುವಂತಹ ವಿಷಯ ಏನಿರಲಿಲ್ಲವಲ್ಲ?
ಮಹಿಳೆ: ನನ್ನ ಹೆಸರು ಸಂಗೀತ ಅಲ್ಲ, ಶ್ರೀಮತಿ !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ