‘ಸಂಪದ' ನಗೆ ಬುಗ್ಗೆ - ಭಾಗ ೮೬

‘ಸಂಪದ' ನಗೆ ಬುಗ್ಗೆ - ಭಾಗ ೮೬

ಇದೆಂಥ ಮದುವೆ !

ಮುದುಕ: ಇದೆಂಥ ಮದುವೆಯೋ ಮಾರಾಯ ?

ಗಾಂಪ: ಏಕೆ ಅಜ್ಜಾ ಏನಾಯಿತು? ಊಟ ಚೆನ್ನಾಗಿಲ್ವಾ?

ಮುದುಕ: ಚೆನ್ನಾಗಿದೆ ಮಾರಾಯ ! ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡು !

ಗಾಂಪ: ಹೆಂಗಿತ್ತು ಮತ್ತೆ?

ಮುದುಕ: ಊಟ ಮಾಡುವವರು ಒಂದೇ ಕಡೆ ಇರುತ್ತಿದ್ದರು ಮತ್ತು ಬಡಿಸುವವರು ಅತ್ತಿಂದಿತ್ತ ಅಲೆಯುತ್ತಿದ್ದರು. ಈಗ ನೋಡು ಬಡಿಸುವವರು ಒಂದು ಕಡೆ ನಿಂತಿರ್ತಾರೆ ಊಟ ಮಾಡುವವರು ಅತ್ತಿಂದಿತ್ತ ಅಲೆಯಬೇಕು...!

***

ಈಜು ಹುಡುಗಿಯರು

ಗಾಂಪ ಊರಿನ ಹೊರಭಾಗದಲ್ಲಿ ಒಂದು ಫಾರ್ಮ್ ಹೌಸ್ ತಗೊಂಡಿದ್ದ. ಅದರಲ್ಲಿ ವಿಶಾಲವಾದ ತೋಟದ ಮಧ್ಯೆ ಈಜಾಡಲು ಒಂದು ಹೊಂಡವನ್ನೂ ಮಾಡಿಸಿದ್ದ. ಆದರೆ ಅಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದ ಕಾರಣ ಯಾರ್ಯಾರೋ ಅಲ್ಲಿಗೆ ಬಂದು ಈಜಾಡಿ ಹೋಗುತ್ತಿದ್ದರು. ಇದು ಗಾಂಪನ ಗಮನಕ್ಕೆ ಬಂತು. ಹೊಂಡದ ಮುಂದೆ, ಇದು ಖಾಸಗಿ ಸ್ವತ್ತು. ಇಲ್ಲಿ ಯಾರೂ ಈಜಾಡಬಾರದು ಎಂದು ಬೋರ್ಡ್ ಹಾಕಿಸಿದ. ಪ್ರಯೋಜನ ಆಗಲಿಲ್ಲ. ಜನ ಬರ್ತಾನೆ ಇದ್ರು. ಹೀಗೇ ಒಂದು ದಿನ ಗಾಂಪ ತನ್ನ ಫಾರ್ಮ್ ಹೌಸಿಗೆ ಹೋದ. ಎಂದಿನಂತೆ ಅಲ್ಲಿ ಒಂದಿಷ್ಟು ಹುಡುಗಿಯರು ಬಿಂದಾಸ್ ಆಗಿ ನೀರಿಗಿಳಿದು ಈಜಾಡುತ್ತಿದ್ದರು. ಅದನ್ನು ನೋಡಿ ಗಾಂಪನಿಗೆ ಸಿಕ್ಕಾಪಟ್ಟೆ ಕೋಪ ಬಂತು. ತಕ್ಷಣ ಫಾರ್ಮ್ ಹೌಸ್ ಒಳಗೆ ಹೋಗಿ ಒಂದು ಚೀಲದಲ್ಲಿ ಏನೋ ತಂದ. ಅದನ್ನು ಹಿಡಿದುಕೊಂಡು ಹೊಂಡದ ಬಳಿ ಬಂದ. ಇವನನ್ನು ನೋಡಿ ಅವರಿಗೆಲ್ಲಾ ಗಾಬರಿ, ಜೊತೆಗೆ ನಾಚಿಕೆ. ಹಾಗಾಗಿ ಎಲ್ಲ ಹುಡುಗಿಯರೂ ನೀರೊಳಗೆ ಬಚ್ಚಿಟ್ಟುಕೊಂಡರು. ಅದನ್ನು ನೋಡಿದ ಗಾಂಪ “ನೀವು ಹೊರ ಬರುವವ ತನಕ ನಾನು ಇಲ್ಲಿಂದ ಹೋಗಲ್ಲ” ಅಂದ. ಅದಕ್ಕೆ ಅವರು, “ಹಲೋ, ನೀವು ಇಲ್ಲೇ ಇದ್ರೆ ನಾವು ಹೆಂಗೆ ಹೊರಗೆ ಬರೋಕಾಗುತ್ತೆ, ಮೊದ್ಲು ಹೋಗ್ರೀ ಇಲ್ಲಿಂದ” ಅಂತ ಗಾಂಪನನ್ನೇ ದಬಾಯಿಸಿದ್ರು. ಅದಕ್ಕೆ ಗಾಂಪ ಹೇಳಿದ ನಾನೇನೂ ನಿಮ್ಮನ್ನು ಇಲ್ಲಿಂದ ಹೊರಗೆ ಕಳಿಸಬೇಕು ಅಂತ ಬಂದಿಲ್ಲ. ಹೊಂಡದಲ್ಲಿರೋ ಮೊಸಳೆಗಳಿಗೆ ಊಟ ಹಾಕೋಕೆ ಬಂದಿದೀನಿ ಅಷ್ಟೇ. ಉಳಿದದ್ದು ನಿಮ್ಮಿಷ್ಟ ಅಷ್ಟೇ, ಎರಡು ನಿಮಿಷದಲ್ಲಿ ಹೊಂಡದಲ್ಲಿ ಒಬ್ಬ ಹುಡುಗೀನೂ ಇರಲಿಲ್ಲ. 

***

ಪೈಲಟ್ ಅಳಿಯ

ಗಾಂಪನಿಗೆ ಏರ್‌ಲೈನ್ಸಲ್ಲಿ ಕೆಲಸ. ಮಗಳ ಜೀವನ ಆಕಾಶದಲ್ಲಿ ತೇಲಾಡ್ತಾ ಇರ್ತದೆ ಅಂತ ಧಾಮ್ ಧೂಮ್ ಅಂತ ಮದುವೆ ಮಾಡ್ತಾರೆ. ಮದುವೆ ಎಲ್ಲಾ ಆದ್ಮೇಲೆ ಯಾರೋ ಬಂದು, ಗಾಂಪ ಏರ್‌ಲೈನ್ಸಲ್ಲಿ ಕೆಲಸ ಮಾಡೋಲ್ಲ, ಅವ ಲೋಕಲ್ ಅಂತ ಹೇಳ್ತಾರೆ. ಅತ್ತೆ ನೇರವಾಗಿ ಅಳಿಯನನ್ನೇ ವಿಚಾರಿಸ್ತಾರೆ:

ಅತ್ತೆ: ಅಳಿಯಂದ್ರೆ, ನೀವು ಏನ್ ಕೆಲಸ ಮಾಡ್ತೀರಿ?
ಗಾಂಪ: ನಾನು ಪೈಲಟ್ ಅಗಿದೀನಿ
ಅತ್ತೆ: ಯಾವ ಏರ್‌ಲೈನ್ಸಲ್ಲಿ ಪೈಲಟ್ ಆಗಿದೀರಿ?
ಗಾಂಪ: ಮದುವೆ ಮನೇಲಿ ಡ್ರೋನ್ ಹಾರಿಸೋ ಕೆಲಸ ಮಾಡ್ತೀನಿ ಅತ್ತೆ.
ಗಾಂಪನ ಮಾತು ಕೇಳಿ ಅತ್ತೆಗೆ ತಲೆ ಸುತ್ತು.

***

ಹೆಂಡತಿಯ ಛಮಕ್ 

ಗಾಂಪ ಮತ್ತು ಶ್ರೀಮತಿ ಮಧ್ಯೆ ಜೋರು ಜಗಳ ಆಗುತ್ತೆ. ಗಾಂಪನಿಗೆ ಸಿಟ್ಟು ಬರುತ್ತೆ. ಅದಕ್ಕೆ ಶ್ರೀಮತಿ ಕೊಟ್ಟ ಉತ್ತರ ಬಲು ಮಜಾ..! 

ಗಾಂಪ: ನಿನ್ನಂಥ ೫೦ ಜನ ನಂಗೆ ಸಿಕ್ತಾರೆ 

ಶ್ರೀಮತಿ ನಗುತ್ತಾ ಹೇಳ್ತಾಳೆ, "ನಿಮ್ಗೆ ಈಗ್ಲೂ ನನ್ನಂಥ ಹೆಂಡ್ತೀನೇ ಇಷ್ಟ ಪಡ್ತೀರಿ ಅಂತ ಆಯ್ತು". 

ಶ್ರೀಮತಿಯ ಉತ್ತರ ಕೇಳಿ ಗಾಂಪನಿಗೆ ಏನು ಹೇಳಬೇಕೋ ತೋಚದಂಗಾಯ್ತು.

***

ಚಿತ್ರಕ್ಕೆ ಹೆಸರು

ನಿರ್ಮಾಪಕ ಗಾಂಪ : ನಿರ್ದೇಶಕರೇ, ಚಿತ್ರಕ್ಕೆ ಒಳ್ಳೆ ಹೆಸರಿಡಿ. ಎಂಥಾ ಹೆಸರಿರಬೇಕೆಂದರೆ, ಚಿತ್ರದ ಹೆಸರು ಕೇಳಿ ವಿದ್ಯಾರ್ಥಿಗಳು ಗಡಗಡ ನಡುಗಬೇಕು.
ನಿರ್ದೇಶಕ ಸೂರಿ : ಯಾಕೆ ಹಾಗೆ?
ನಿರ್ಮಾಪಕ ಗಾಂಪ : ಜನ ಚೇಂಜ್ ಕೇಳ್ತಾರ್ರೀ..
ನಿರ್ದೇಶಕ ಸೂರಿ : ಹಾಗಾದ್ರೆ "ಇಂದು ಪರೀಕ್ಷೆ, ನಾಳೆ ರಿಸಲ್ಟ್" ಅಂತ ಹೆಸರಿಟ್ಟರೆ?

***

ಸವರ್ಣದೀರ್ಘ ಸಂಧಿ

ಟೀಚರ್: ಗಾಂಪ, ಸವರ್ಣ ದೀರ್ಘ ಸಂಧಿಗೆ ಉತ್ತಮ ಉದಾಹರಣೆ ನೀಡುವೆಯಾ?

ಗಾಂಪ: ನ್ಯಾಯಾಲಯ ಸರ್.

ಟೀಚರ್: ಅರ್ಥವಾಗುವಂತೆ ಸ್ವಲ್ಪ ಬಿಡಿಸಿ ಹೇಳ್ತೀಯಾ?

ಗಾಂಪ: ಯಾವುದೇ ದಾವೆ ಇರಲಿ, ನ್ಯಾಯಾಲಯಕ್ಕೆ ಹೋದ ಮೇಲೆ ತುಂಬಾ ದೀರ್ಘವಾಗಿ ವರ್ಷಾನುವರ್ಷ ಅಲ್ಲಿ ಎಳೆಯುತ್ತಾರೆ ಸರ್ ಅದಕ್ಕೆ. 

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ