‘ಸಂಪದ' ನಗೆ ಬುಗ್ಗೆ - ಭಾಗ ೮೯

‘ಸಂಪದ' ನಗೆ ಬುಗ್ಗೆ - ಭಾಗ ೮೯

ಅದು ಹೇಗೆ ಬಿದ್ದಿಯೋ?

ಆಫೀಸಿನ ಅಟೆಂಡರ್ ಗಾಂಪ ಒಂಥಾರಾ ಉತ್ಸಾಹದ ಬುಗ್ಗೆ. ಯಾವುದೇ ಕೆಲಸ ಹೇಳಲಿ, ಫಟಾಫಟ್ ಮಾಡಿ ಮುಗಿಸುತ್ತಿದ್ದ. ಅಂದು ಸಾಹೇಬರು ೨೦ ದಿನ ರಜೆ ಹಾಕಿ ಉತ್ತರ ಭಾರತದ ಪ್ರವಾಸ ಹೋಗಿದ್ದರು. ಅದೇ ಸಮಯ ಗಾಂಪ ಯಾವುದೋ ಫೈಲ್ ಹಿಡಿದು ಬರುವಾಗ ಕಾಣದೇ ಟೇಬಲಿನ ಕಾಲನ್ನೆಡವಿ ಮುಗ್ಗರಿಸಿ ಆರಡಿ ಮುಂದೆ ಬಿದ್ದ. ಬಲಗೈ ಮೂಳೆ ಮುರಿತ, ಆಸ್ಪತ್ರೆ ವಾಸ, ಎಕ್ಸರೇ, ಸ್ಕ್ಯಾನಿಂಗ್, ಎರಡು ವಾರ ಚಂದದ ನರ್ಸ್ ಗಳ ಮುಖ ನೋಡುತ್ತಾ ಕಳೆದು ಗುಣಮುಖನಾಗಿ ಬಂದ. ಕೆಲ ದಿನಗಳ ವಿಶ್ರಾಂತಿಯ ನಂತರ ಆಫೀಸಿಗೆ ಕಾಲಿಟ್ಟ. ಅಷ್ಟರಾಗಲೇ ಬಂದಿದ್ದ ಸಾಹೇಬರು, “ಏನಯ್ಯಾ ಗಾಂಪ, ಬಿದ್ದು ಕೈ ಮುರಿದುಕೊಂಡೆಯಂತಲ್ಲ? ಅದು ಹೇಗೆ ಬಿದ್ದೆಯೋ?” ಎಂದು ವಿಚಾರಿಸಿದರು.

ಗಾಂಪ ಮತ್ತೆ ಅದೇ ಉತ್ಸಾಹದಲ್ಲಿ ಹೋಗ್ತಾ ಇದ್ದಾಗ ಹೀಗೆ ಬಿದ್ದೆ ಸರ್ ಎಂದು ತೋರಿಸುವ ಭರದಲ್ಲಿ ಮುಂದಿನ ಅದೇ ಟೇಬಲ್ ನ ಕಾಲನ್ನೆಡವಿ ಧೊಪ್ಪೆಂದು ಬಿದ್ದ ! ಮತ್ತೆ ಅದೇ ಆಸ್ಪತ್ರೆ, ಎಕ್ಸ್ ರೇ, ಸ್ಕ್ಯಾನಿಂಗ್, ಚಂದದ ನರ್ಸುಗಳು....!

***

ಕನ್ನಡ ಉಳಿಸಿ !

ಕನ್ನಡ ಚಳುವಳಿಗಾರರ ಅಭಿಯಾನ ನಡೆದಿತ್ತು. ನಾಯಕರ ಭೀಷಣ ಭಾಷಣ..ಸಾಗಿತ್ತು. “ಕನ್ನಡ ಉಳಿಸಿ ಬೆಳೆಸಿ... ನಾವು ಕನ್ನಡಿಗರು..ಕನ್ನಡದಲ್ಲಿಯೇ ಮಾತನಾಡಿ.."

ಅಷ್ಟರಲ್ಲಿ ಶಾಲು ಧರಿಸಿದವನೊಬ್ಬ ಕೈಯಲ್ಲಿ ಡಬ್ಬಿ ಹಿಡಿದು ಅಲ್ಲಾಡಿಸುತ್ತಾ ನೆರೆದವರೆಲ್ಲರ ಎದುರು ಚಂದಾ ಕೇಳಲು ಬಂದ. ೬೫ ವರ್ಷದ ಹಿರಿಯರೊಬ್ಬರ ಮುಂದೆ ನಿಂತು “ಸರ್, ನಿಮ್ಮ ಕಾಂಟ್ರಿಬೂಷನ್ ಪ್ಲೀಸ್" ಎಂದ ಆ ವೃದ್ಧರು ಆತನನ್ನೇ ಕೆಕ್ಕರಿಸಿ ನೋಡುತ್ತಾ ನೂರರ ನೋಟೊಂದನ್ನು ಹಾಕಿದರು. 

ಥ್ಯಾಂಕ್ಯೂ ಸಾರ್…

ಈಗ ಅವರಿಗೆ ತಡೆಯಲು ಆಗಲಿಲ್ಲ. ಅಲ್ಲಯ್ಯ ಕನ್ನಡ ಚಳುವಳಿಗಾರರಾಗಿ ಇಂಗ್ಲೀಷ್ ಮಾತಾಡ್ತಾ ಇದ್ದೀಯಲ್ಲಾ?

ಓ ಸಾರಿ ಸರ್...!

***

ಕಳ್ಳ ಬಂದ

ಶ್ರೀಮತಿ : (ಮಧ್ಯರಾತ್ರಿಯಲ್ಲಿ) ರೀ.. ಏನೋ ಶಬ್ಧ ಆಯ್ತು. ಕಳ್ಳ ಏನಾದ್ರೂ ಬಂದಿರಬಹುದಾ?

ಗಾಂಪ: ಕಳ್ಳ ಬಂದ್ರೆ ಶಬ್ದ ಯಾಕೆ ಮಾಡ್ತಾನೆ? ಸುಮ್ನೆ ಮಲ್ಕೊಳ್ಳೆ.

ಶ್ರೀಮತಿ: (ತುಸು ನಿಮಿಷದ ಬಳಿಕ) ರೀ... ಈಗ ಶಬ್ದಾನೆ ಬರ್ತಿಲ್ಲಾ? ಕಳ್ಳ ಬಂದಿರಬೇಕು. ಎದ್ದು ಹೋಗಿ ನೋಡ್ರಿ !

***

ನಂಬರ್ ಒನ್ ಮಾರ್ಕ್ !

ಗಾಂಪ: ಏನೋ...ಒಂದೇ ಒಂದು ಮಾರ್ಕ್ ತಗೊಂಡಿದ್ದೀಯಾ?

ಮರಿ ಗಾಂಪ: ಸುಮ್ನೆ ಇರಪ್ಪ ನಮ್ ಮೇಸ್ಟ್ರಿಗೆ ಅವಮಾನ ಮಾಡಬೇಡ.

ಗಾಂಪ: ಯಾಕೋ?

ಮರಿ ಗಾಂಪ: ಅವರು ಕೊಟ್ಟಿರೋದು ಒಂದೇ ಒಂದ್ ಮಾರ್ಕ್ ಅಲ್ಲ. ನಂಬರ್ ವನ್ ಮಾರ್ಕ್!

***

ಹವ್ಯಾಸ

ಮ್ಯಾನೇಜರ್: ಯಾಕೆ ನಿಮ್ಮ ಬಯೋಡೇಟಾದಲ್ಲಿ ಸ್ವಿಮ್ಮಿಂಗ್ ಅನ್ನು ನಿಮ್ಮ ಹವ್ಯಾಸ ಎಂದು ಬರೆದಿರುವಿರಿ?

ಗಾಂಪ: ಬೆಂಗಳೂರಿನಲ್ಲಿ ಮಳೆ ಬಿದ್ರೂ ನಾನು ಸ್ವಿಮ್ ಮಾಡ್ಕೊಂಡೇ ಆಫೀಸ್ ಗೆ ಬರಬಲ್ಲೆ ಸರ್.

ಮ್ಯಾನೇಜರ್: ನಾಳೆಯೇ ಕೆಲಸಕ್ಕೆ ಬನ್ನಿ !

***

ಚಪ್ಪಲಿ

ಗಾಂಪ: ನನ್ನ ಹೆಂಡತಿಗೆ ಒಂದು ಚಪ್ಪಲಿ ಬೇಕಾಗಿತ್ತು.

ಅಂಗಡಿಯಾತ: ಸೈಜ್ ಎಷ್ಟು? ಯಾವ ಥರದ್ದು ಆಗಬೇಕು?

ಗಾಂಪ: ನಂಬರ್ ೬ ಸೈಜ್. ಆದ್ರೆ ತುಂಬಾ ಮೆದುವಾಗಿರಬೇಕು. ಹೊಡೆದ್ರೂ ನೋವಾಗಲೇಬಾರದು. ಅಂಥದ್ದು ಇದ್ರೆ ಮಾತ್ರ ಕೊಡಿ. 

***

ವೈದ್ಯೋಪಚಾರ

ಗಾಂಪನಿಗೆ ಸುಸ್ತು ಅನಿಸಿತು. ಅನುಭವಿ ವೈದ್ಯರ ಬಳಿಗೆ ಬಂದ. ಅವರು ಅವನ ನಾಡಿ, ಹೃದಯ ಬಡಿತ ಮತ್ತು ಕಣ್ಣುಗಳನ್ನು ಪರೀಕ್ಷಿಸಿ,ಯಾವ ನೌಕರಿ ಮಾಡುತ್ತಿದ್ದಾನೆಂದು ಕೇಳಿ ತಿಳಿದುಕೊಂಡರು. ಬಳಿಕ, “ನಾಳೆಯಿಂದ ಖಾಲಿ ನೀರನ್ನು ಮಾತ್ರ ಸೇವಿಸಿರಿ. ಎರಡು ಹೊತ್ತು ಮಾತ್ರ ಕೇವಲ ಗಂಜಿ ಸೇವಿಸಿ. ಕಾಫಿ, ಟೀ, ಮದ್ಯ, ತರಕಾರಿ, ಮಾಂಸ ಎಲ್ಲವನ್ನೂ ವರ್ಜಿಸಿ. ಪತ್ರಿಕೆ ಓದಬೇಡಿ. ಟಿವಿ ನೋಡಬೇಡಿ. ಶಾಪಿಂಗ್ ಅಂತೂ ಬೇಡವೇ ಬೇಡ.”

ಗಾಂಪ ಭಯಭೀತನಾಗಿ, “ಡಾಕ್ಟರ್, ಇಷ್ಟೊಂದು ಪಥ್ಯ, ಕಂಡೀಶನ್ ಗಳನ್ನು ಮಾಡಬೇಕಿದ್ದರೆ ನನಗೆ ಬಂದಿರುವ ಕಾಯಿಲೆ ಮಾರಣಾಂತಿಕವಾಗಿಲ್ಲ ತಾನೇ?” ಕೇಳಿದ. “ಹಾಗೇನಿಲ್ಲ, ಕಾಯಿಲೆ ಸಣ್ಣದ್ದೇ. ನಿಮಗೆ ಬರ್ತಿರೋ ಸಂಬಳಕ್ಕೆ ನನ್ನ ಫೀಸು ಕೊಡಬೇಕಿದ್ರೆ ಇದನ್ನೆಲ್ಲಾ ಮಾಡಲೇಬೇಕಿದೆ" ಎಂದರು ವೈದ್ಯರು.

***

ನಮ್ಮ ಮಕ್ಕಳು

ಗಾಂಪನ ಹೆಂಡತಿ ಎರಡು ಮಕ್ಕಳಿಗೆ ತಾಯಿಯಾದ ಬಳಿಕ ತೀರಿಕೊಂಡಳು. ಗಾಂಪ ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬಳನ್ನು ಮರುಮದುವೆ ಮಾಡಿಕೊಂಡ. ಅವಳಿಗಿದ್ದ ಇಬ್ಬರು ಮಕ್ಕಳನ್ನೂ ತನ್ನ ಮನೆಗೆ ಕರೆಸಿಕೊಂಡ. ಕ್ರಮೇಣ ಗಾಂಪನಿಗೆ ಹೊಸ ಹೆಂಡತಿಯಲ್ಲಿ ಎರಡು ಮಕ್ಕಳಾದವು.

ಒಂದು ದಿನ ಮನೆಯಂಗಳದಿಂದ ಏನೋ ಗಲಾಟೆ, ಹೊಡೆಯುವ ಶಬ್ಧ ಕೇಳಿಸಿತು. ಗಾಂಪನ ಹೆಂಡತಿ ಹೊರಗೆ ಬಂದು, “ಬೇಗ ಬನ್ನೀಂದ್ರೆ, ನನ್ನ ಮಕ್ಕಳೂ ನಿಮ್ಮ ಮಕ್ಕಳೂ ಸೇರಿಕೊಂಡು ನಮ್ಮ ಮಕ್ಕಳನ್ನು ಹೇಗೆ ಹೊಡೀತಾ ಇದ್ದಾರೆ ನೋಡಿ" ಎಂದು ಕೂಗಿದಳು. !

***

ಕೊರೋನಾ !

ಗಾಂಪ ಸ್ನಾನ ಮಾಡಲು ಬಾತ್ ರೂಂಗೆ ತೆರಳಿದ್ದಾಗ ಆತನ ಮೊಬೈಲ್ ತಪಾಸಿಸಿದ ಶ್ರೀಮತಿ ಫೋನ್ ಲಿಸ್ಟ್ ನಲ್ಲಿ “ಕೊರೋನಾ” ಎಂಬ ಹೆಸರು ನೋಡಿ ಕುತೂಹಲ ತಾಳಲಾರದೆ ಅದಕ್ಕೆ ಫೋನಾಯಿಸಿದಳು.

ತಕ್ಷಣ ಅಡಿಗೆ ಮನೆಯಲ್ಲಿ ಫೋನ್ ರಿಂಗ್ ಆಗುವುದು ಕೇಳಿಸಿತು. ಓಡಿ ಹೋಗಿ ನೋಡಿದರೆ ಅವಳದ್ದೇ ಮೊಬೈಲ್ ನಲ್ಲಿ ಪತಿಯ ಹೆಸರು ಕಾಣಿಸಿ ಅಣಕಿಸುತ್ತಿತ್ತು.!

***

(ಸಂಗ್ರಹ) 

ಚಿತ್ರ ಕೃಪೆ: ಅಂತರ್ಜಾಲ ತಾಣ