‘ಸಂಪದ ನಗೆ ಬುಗ್ಗೆ - ಭಾಗ ೯೦

‘ಸಂಪದ ನಗೆ ಬುಗ್ಗೆ - ಭಾಗ ೯೦

ಸಮಸ್ಯೆ- ಪರಿಹಾರ

ಡಾಕ್ಟರ್ : ಏನು ಸಮಸ್ಯೆ?

ಗಾಂಪ : ಡಾಕ್ಟರ್, ಪ್ರತಿ ರಾತ್ರಿ ಮಲಗಿದಾಗ ನನ್ನ ಮಂಚದ ಕೆಳಗೆ ಯಾರೋ ಅಡಗಿ ಕುಳಿತಂತೆ ಭಾಸವಾಗಿ ಭಯವಾಗುತ್ತದೆ. ಆಗ ನಾನು ಪದೇ, ಪದೇ ಎದ್ದು ಮಂಚದ ಕೆಳಗೆ ಬಗ್ಗಿ ನೋಡುತ್ತೇನೆ. ಆಗ ಹೆದರಿಕೆ ಆಗಿ ನನಗೆ ನಿದ್ದೆ ಬರುತ್ತಿಲ್ಲ.. ಭಯವೂ ಆಗುತ್ತದೆ..

ಡಾಕ್ಟರ್  : ನೋಡಿ ಇದು ತುಂಬಾ ಗಂಭೀರ ಮಾನಸಿಕ ಕಾಯಿಲೆ. ಇದಕ್ಕಾಗಿ ನೀವು ಆರು ತಿಂಗಳವರೆಗೆ ನಿರಂತರವಾಗಿ, ಪ್ರತಿ ವಾರ ಬರಬೇಕು.

ಗಾಂಪ : ನಿಮ್ಮ ಒನ್ ಟೈಮ್ ಫೀ ಎಷ್ಟು ಆಗುತ್ತೆ ಡಾಕ್ಟರ್..!?

ಡಾಕ್ಟರ್  : ಐದು ಸಾವಿರ ರೂಪಾಯಿ ಆಗುತ್ತದೆ.

ಆರು ತಿಂಗಳ ನಂತರ ಡಾಕ್ಟರ್ ಗೆ ದಾರಿಯಲ್ಲಿ ಗಾಂಪ ಕಾಣಿಸುತ್ತಾನೆ.

ಡಾಕ್ಟರ್ : ಏನಾಯ್ತು ಗಾಂಪ? ನೀವು ಚಿಕಿತ್ಸೆಗೆ ಬರಲೇ ಇಲ್ಲ..  

ಗಾಂಪ : ಡಾಕ್ಟರ್ ಸರ್, ದಾವಣಗೆರೆಯ ನನ್ನ ಸ್ನೇಹಿತರೊಬ್ಬರು ನನಗೆ ಚಿಕಿತ್ಸೆ ನೀಡಿದರು ಮತ್ತು ನಿಮಗೆ ಕೊಡಬೇಕಾಗಿದ್ದ ನನ್ನ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾಯಿತು.

ಡಾಕ್ಟರ್: ಏನಾಯ್ತು? ಏನು ಚಿಕಿತ್ಸೆ ನೀಡಿ ನೀಡಿದರು ನಿಮ್ಮ ಸ್ನೇಹಿತರು? ಎಷ್ಟು ಹಣ ಖರ್ಚಾಯಿತು..!?

ಗಾಂಪ : ಏನೂ ಇಲ್ಲ. ಒಂದು ಪ್ಲೇಟ್ ಬೆಣ್ಣೆ ದೋಸೆ ಮತ್ತು ಒಂದು ಕಪ್ ಟೀ ಅಷ್ಟೇ..

ಡಾಕ್ಟರ್ (ಅಚ್ಚರಿಯಿಂದ) : ಹೌದಾ!! ಏನು ಚಿಕಿತ್ಸೆ ನೀಡಿದರು?!

ಗಾಂಪ : ಏನೂ ಇಲ್ಲ ಡಾಕ್ಟ್ರೇ. ನಾನು ಮಲಗುತ್ತಿದ್ದ ಮಂಚದ ಕಾಲುಗಳನ್ನು ಕತ್ತರಿಸಿ ತೆಗೆದು ಹಾಕಿ, ಅದರ ಮೇಲೆ ಹಾಸಿಗೆ ಹಾಸಿಕೊಂಡು ಮಲಗುವಂತೆ ಹೇಳಿದರು. ಈಗ ಕೇವಲ ಅದನ್ನೇ ಮಾಡುತ್ತಿದ್ದೇನೆ. ಚೆನ್ನಾಗಿ ನಿದ್ದೆಯೂ ಬರುತ್ತದೆ. ಭಯವೂ ಇಲ್ಲ!!*

***

ಏನಾದ್ರೂ ತಕೊಂಡು ಬನ್ರೀ...!

ಗಾಂಪ: ಹೋ.. ಮಾವಾ..ಅತ್ತೆ ಯಾವಾಗ ಬಂದ್ರಿ?

ಮಾವ: ಬೆಳಿಗ್ಗೆನೇ ಬಂದ್ವಿ.

ಗಾಂಪ: ಹಾಗಾದ್ರೆ ತಿಂಡಿ, ಊಟ ಎಲ್ಲಾ ಆಯ್ತು ಅನ್ನಿ.

ಅತ್ತೆ: ಎಲ್ಲಾ ಆಯ್ತು. ಬಿಸಿ ಬಿಸಿ ಹೋಳಿಗೆ, ಪಾಯಸ ಊಟಾನೂ ಆಯ್ತು ಅಳಿಯಂದ್ರೇ..

ಗಾಂಪ: ಬಹಳ ಒಳ್ಳೇದಾಯ್ತು. ಮತ್ತೇನು ಸಮಾಚಾರ?

ಶ್ರೀಮತಿ: ರೀ, ಅವರನ್ನು ಮಾತಲ್ಲೇ ಖುಷಿ ಪಡಿಸ್ತೀರಾ ಅಥವಾ ಹೊರಗಿನಿಂದ ಏನಾದ್ರೂ ತಕೊಂಡ್ ಬರ್ತೀರಾ?

ಗಾಂಪ: ಸರಿ ಆಯ್ತು ಕಣೇ, (ಮನೆ ಮುಂದೆ ಟ್ಯಾಕ್ಸಿ ತಂದು ನಿಲ್ಲಿಸಿ) ಟ್ಯಾಕ್ಸಿ ಬಂದಿದೆ ಕಣೆ ಬೇಗ ಕಳಿಸು. ರಾತ್ರಿ ಆದರೆ ಊರಿಗೆ ಹೋಗಲು ತಡ ಆಗುತ್ತೆ ! ಪಾಪ ವಯಸ್ಸಾದೋರು ಅಲ್ಲವೇ !

***

ಸೂಕ್ಷ್ಮದರ್ಶಕ

ಟೀಚರ್: ಗಾಂಪ, ಚಿತ್ರ ಬಿಡಿಸಿಲ್ವಾ?

ಗಾಂಪ: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ ಸರ್ !

ಟೀಚರ್: ಏನೂ ಕಾಣ್ತಾ ಇಲ್ವಲ್ಲೋ? ಬರೀ ಖಾಲಿ ಪೇಪರ್ ಮಾತ್ರ ಇದೆ.

ಗಾಂಪ: ಬ್ಯಾಕ್ಟೀರಿಯಾ ಬರಿ ಕಣ್ಣಿಗೆ ಕಾಣೋದಿಲ್ಲ ಸರ್. ಸೂಕ್ಷ್ಮದರ್ಶಕ ಉಪಯೋಗಿಸಿ !

ಟೀಚರ್: ಆಯ್ತಪ್ಪಾ... ನಿನ್ನ ಮಾರ್ಕ್ಸ್ ಕಾರ್ಡನ್ನೂ ನೀನು ಸೂಕ್ಷ್ಮ ದರ್ಶಕವನ್ನೇ ಬಳಸಿ ಮಾರ್ಕ್ಸ್ ನೋಡು !

***

ಬೇಗ ಕಂಡು ಹಿಡಿಯಬೇಕು !

ಟೀಚರ್: ಗಾಂಪ, ನಮ್ಮ ದೇಶದ ಜನಸಂಖ್ಯೆ ಎಷ್ಟು?

ಗಾಂಪ: ನೂರಾ ನಲವತ್ತು ಕೋಟಿ ಸಾರ್

ಟೀಚರ್: ಹೀಗೆ ನಮ್ಮ ದೇಶದಲ್ಲಿ ಜನಸಂಖ್ಯೆ ಬೆಳೆಯಲು ಕಾರಣವೇನು?

ಗಾಂಪ: ಅದನ್ನು ನೀವೇ ಹೇಳಬೇಕು.

ಟೀಚರ್: ನಮ್ಮ ದೇಶದಲ್ಲಿ ಪ್ರತಿ ಐದು ಸೆಕೆಂಡಿಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ. ಗೊತ್ತಾ? ಇದನ್ನು ತಡೆ ಹಿಡಿಯಲು ಏನು ಮಾಡಬೇಕು?

ಗಾಂಪ: ಹೌದಾ ಸರ್, ನನಗೆ ಗೊತ್ತೇ ಇರ್ಲಿಲ್ಲ. ಸರ್, ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡು ಹಿಡಿದು ಕನಿಷ್ಟ ತಾಸಿಗೊಂದು ಜನ್ಮ ನೀಡು ಎಂದು ಮನವಿ ಮಾಡಬೇಕು !

***

ನೋವು

ಗಾಂಪ: ಸೂರಿ, ಡಾಕ್ಟರ್ ನಿನ್ನ ಹಲ್ಲು ಕಿತ್ತಾಗ ನೋವಾಯ್ತಾ?

ಸೂರಿ: ಹಲ್ಲು ಕಿತ್ತಾಗ ನೋವಾಗಲಿಲ್ಲ.. ಆದರೆ…

ಗಾಂಪ: ಆದರೆ ಏನು? ಮತ್ತೆ ನೋವು ಪ್ರಾರಂಭವಾಯಿತಾ?

ಸೂರಿ: ಕಿತ್ತಾಗ ನೋವಾಗದಿದ್ದರೂ ಅವರು ಒಂದು ಸಾವಿರ ರೂಪಾಯಿ ಫೀಸ್ ಕೇಳಿದಾಗ ಮಾತ್ರ ತುಂಬಾ ನೋವಾಯ್ತು!

***

ಸುಳ್ಳು

ಗಾಂಪ: ಸೂರಿ, ಒಂದೊಂದು ಸಾರಿ ಸುಳ್ಳೇ ನಿಜವಾಗಿ ಬಿಡುತ್ತೆ ಕಣೋ

ಸೂರಿ: ಯಾಕೋ ಹೀಗೆಲ್ಲಾ ಮಾತಾಡ್ತೀ? ಏನಾಯ್ತು?

ಗಾಂಪ: ನೋಡು ಮತ್ತೆ, ನಿನ್ನೆ ನಮ್ಮತ್ತೆಗೆ ಹುಷಾರಿಲ್ಲ ಅಂತ ಸುಳ್ಳು ಹೇಳಿ ರಜೆ ತಕೊಂಡು ಮನೆಗೆ ಹೋದ್ರೆ, ಅಷ್ಟೊತ್ತಿಗಾಗಲೇ ಊರಿನಿಂದ ನಮ್ಮತ್ತೆ ಬಂದು ಕೂತಿದ್ರು.

***

ಜೀವ ವಿಮೆ

ಶ್ರೀಮತಿ: ತಾರಾ, ನನ್ನ ಗಂಡ ಒಂದು ಕೋಟಿ ರೂಪಾಯಿಯ ಜೀವ ವಿಮೆ ಮಾಡಿಸಿದ್ದಾರೆ

ತಾರಾ: ನೀವು ಪುಣ್ಯವಂತರು ಬಿಡಿ.

ಶ್ರೀಮತಿ: ಏನು ಪುಣ್ಯನೋ ಏನೋ? ಅದು ನನ್ನ ಕೈಗೆ ಯಾವಾಗ ಸಿಗುತ್ತೋ?

***

(ಸಂಗ್ರಹ)