‘ಸಂಪದ ನಗೆ ಬುಗ್ಗೆ - ಭಾಗ ೯೪

‘ಸಂಪದ ನಗೆ ಬುಗ್ಗೆ - ಭಾಗ ೯೪

ಹಗ್ಗಕ್ಕಾಗಿ…

ಗಾಂಪನನ್ನು ಸೆಂಟ್ರಲ್ ಜೈಲಿನಲ್ಲಿ ಹಾಕಲಾಗಿತ್ತು. ಅವನ ಮಾಹಿತಿ ಸಂಗ್ರಹಿಸುವಾಗ ಅಲ್ಲಿನ ಜೈಲರ್ ಕೇಳಿದ “ಯಾವ ಅಪರಾಧಕ್ಕಾಗಿ ನಿನ್ನನ್ನು ಶಿಕ್ಷಿಸಲಾಗಿದೆ?” ಎಂದು. “ ಒಂದು ಹಗ್ಗವನ್ನು ಕದ್ದಿದ್ದಕ್ಕಾಗಿ" ಎಂದ ಗಾಂಪ. “ಒಂದು ಹಗ್ಗವನ್ನು ಕದ್ದಿದ್ದಕ್ಕಾಗಿ ಈ ಶಿಕ್ಷೆ ಕೊಡಲು ಸಾಧ್ಯವಿಲ್ಲವಲ್ಲ?” ಎಂದಾಗ ಗಾಂಪ ಹೇಳಿದ “ಹೌದು ಸರ್, ನಾನು ಹಗ್ಗವನ್ನಷ್ಟೇ ಕದ್ದಿದ್ದು, ಆದರೆ ನನ್ನ ಗ್ರಹಚಾರಕ್ಕೆ ಹಗ್ಗದ ಮತ್ತೊಂದು ತುದಿಯಲ್ಲಿ ಹಾಲು ಕೊಡುವ ದೊಡ್ಡ ಎಮ್ಮೆ ಇತ್ತು !”

***

ಸಾಲ ಮರುಪಾವತಿ

ಗಾಂಪ ಬ್ಯಾಂಕ್ ಮ್ಯಾನೇಜರ್ ಗೆ ಫೋನ್ ಮಾಡಿ “ಸಾರ್ ನಿಮ್ಮಲ್ಲಿ ನಾವು ಸಾಲ ಮಾಡಿ ಸಕಾಲದಲ್ಲಿ ಕಟ್ಟದಿದ್ದರೆ ನೀವು ಯಾವ ಕ್ರಮ ಕೈಗೊಳ್ಳುತೀರಿ? ಎಂದು ಕೇಳಿದ. ಅದಕ್ಕೆ ಮ್ಯಾನೇಜರ್ “ನಾವು ಯಾವುದಕ್ಕಾಗಿ ಸಾಲ ಕೊಟ್ಟಿದ್ದೇವೆಯೋ ಅದನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಕಾರಿಗೆ ಸಲ ಕೊಟ್ಟಿದ್ದರೆ ಕಾರು, ಮನೆಗೆ ಸಾಲ ಕೊಟ್ಟಿದ್ದರೆ ಮನೆ..." ಎಂದು ಸ್ಪಷ್ಟ ಪಡಿಸಿದರು.

ಅನಂತರ ಏನೋ ನೆನಪಾಗಿ “ಅಂದ ಹಾಗೆ ನೀವು ಯಾವುದಕ್ಕಾದರೂ ಸಾಲ ಮಾಡಿದ್ದೀರಾ?” ಎಂದಾಗ ಗಾಂಪ, “ನಾನು ಮದುವೆಗಾಗಿ ಸಾಲ ಮಾಡಿದ್ದೇನೆ ಸರ್" ಎಂದ !

***

ಸಾಕ್ಷಿ

ನ್ಯಾಯಾಧೀಶ: ನೀವು ಸಾಕ್ಷಿ ಹೇಳೋದಕ್ಕೆ ಬಂದಿದ್ದೀರಿ, ನಿಮಗೆ ಅದರ ಜವಾಬ್ದಾರಿ ಏನು ಗೊತ್ತಾ?

ಗಾಂಪ: ಗೊತ್ತು ಸ್ವಾಮಿ, ಈ ಮೊದಲು ಹೇಳಿದ ಸುಳ್ಳನ್ನು ಕಡೆಯವರೆಗೂ ಹೇಳ್ತಿರಬೇಕು..

***

ಬೇಕಾದ ಡ್ರೆಸ್

ಶ್ರೀಮತಿ: ತಾರಾ, ನನಗೆ ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಕಣೇ

ತಾರಾ: ಕಳೆದ ಸಾರಿ ಲಾಯರ್ ಆಗೋದಕ್ಕೆ ಇಷ್ಟ ಇಲ್ಲ ಅಂತ ಹೇಳಿದ್ದೆ

ಶ್ರೀಮತಿ: ಹೌದು, ಈ ಎರಡು ಉದ್ಯೋಗಗಳಲ್ಲಿ ಸದಾ ಬಿಳಿ ಕೋಟು, ಕರಿ ಕೋಟು ಹಾಕಿಕೊಂಡೇ ಇರಬೇಕು. ನಮಗೆ ಬೇಕಾದ ಡ್ರೆಸ್ ಧರಿಸೋಕೆ ಸಾಧ್ಯವೇ ಇಲ್ಲವಲ್ಲ.

***

ತಲೆಗೂದಲು

ಗಾಂಪ: ನಿಮ್ಮ ಜೊತೆಯಲ್ಲಿ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕೂ ಸಾರ್ಥಕವಾಯಿತು. ಎಲ್ಲರೂ ಹೊಗಳುವವರೇ. ಅದರಲ್ಲೂ ನಿಮ್ಮ ತಲೆಗೂದಲನ್ನು ಗುಣಗಾನ ಮಾಡುವವರೇ, ನನ್ನ ಆಸೆ, ಒಮ್ಮೆ ನಿಮ್ಮ ತಲೆಗೂದಲನ್ನು ನೇವರಿಸಬೇಕು ಅಂತ.

ಶ್ರೀಮತಿ: ಇಷ್ಟೇ ತಾನೇ, ಬೇಕಾದರೆ ಇಡೀ ದಿನ ಇಟ್ಟುಕೊಂಡು ನಾಳೆ ತಂದು ಕೊಡಿ. (ತಲೆಗೆ ಹಾಕಿದ್ದ ವಿಗ್ ಅನ್ನು ಗಾಂಪನ ಕೈಗೆ ಕೊಟ್ಟಳು)

***

ಅಯ್ಯೋ ಪಾಪ !

ಶ್ರೀಮತಿ: ನಿನಗೆ ನಿಮ್ಮ ಯಜಮಾನರನ್ನು ಕಂಡ್ರೆ ಯಾವಾಗಲಾದರೂ ಅಯ್ಯೋ ಪಾಪ ಅನ್ನಿಸಿದಿದೆಯಾ?

ತಾರಾ: ಒಂದೊಂದು ಸಾರಿ ಅನ್ನಿಸಿದೆ. ಮನೆಗೆ ಯಾರನ್ನಾದರೂ ಊಟಕ್ಕೆ ಕರೆದಾಗ ಆಫೀಸ್ ಮುಗಿಸಿಕೊಂಡು ಬಂದು ಅವರೇ ಅಡುಗೆ ಮಾಡಬೇಕಲ್ಲ ಆವಾಗ. !

***

ಉಪವಾಸ

ಗಾಂಪ: ಇವತ್ತು ಶಿವರಾತ್ರಿ. ನಿನ್ನ ಅಣ್ಣ ಅತ್ತಿಗೆಯನ್ನು ಮನೆಗೆ ಬರೋಕೆ ಹೇಳು.

ಶ್ರೀಮತಿ: ಯಾಕೆ?

ಗಾಂಪ: ಎಂತಿದ್ದರೂ ಉಪವಾಸ, ನಮ್ಮ ಜೊತೆ ಉಪವಾಸ ಆಚರಿಸಿ, ವಾಪಾಸ್ ಹೋಗಲಿ !

***
ರಹಸ್ಯ

ಗಾಂಪ: ಏನಯ್ಯಾ, ನೀನು ಎಷ್ಟೇ ಕುಡಿದರೂ ನಿನ್ನ ಹೆಂಡತಿ ನಿನ್ನನ್ನು ಪ್ರೀತಿಸುತ್ತಾಳಲ್ಲ, ಏನದು ರಹಸ್ಯ ನನಗೂ ಹೇಳು

ಸೂರಿ: ಏನಿಲ್ಲ ಕಣೋ, ಈಗ ಪಾರ್ಟಿ ಮುಗಿಸಿ ಮನೆ ಹತ್ತಿರ ಹೋಗುವಾಗ, ಹಂಗೇ ಚರಂಡಿಗೆ ಬಿದ್ದು ಬಿಡ್ತೇನೆ. ಆಗ ನನ್ನ ಹೆಂಡತಿ ನನ್ನನ್ನು ಕರೆದುಕೊಂಡು ಹೋಗೋದಿಕ್ಕೆ ಬರುತ್ತಾಳೆ. ಕೂಡಲೆ, ನಾನು ‘ಓಯ್, ನನಗೆ ಚಿನ್ನದಂತಹ ಹೆಂಡತಿ ಮನೆಯಲ್ಲಿದ್ದಾಳೆ. ನೀನು ಬೇರೆ ಯಾರನ್ನಾದರೂ ನೋಡಿಕೋ’ ಎಂದು ಹೇಳ್ತೀನಿ. ಇದೇ ನನ್ನ ರಹಸ್ಯ !

***
ಬೆಡ್ ಶೀಟ್ ತಕೊಂಡು ಹೋಗಿ

ಶ್ರೀಮತಿ: ಎಲ್ಲಿಗೆ ಹೊರಟಿತು ನಿಮ್ಮ ಸವಾರಿ?

ಗಾಂಪ: ನನ್ನ ಫ್ರೆಂಡ್ ಮನೆಗೆ ಬರೋದು ತಡ ಆಗುತ್ತೆ.

ಶ್ರೀಮತಿ: ಯಾಕೋ?

ಗಾಂಪ: ರಮ್ಮಿ ಆಟದ ಪಂದ್ಯ ಇದೆ. ಇಸ್ಪೀಟ್ ಎಲೆ ಕಟ್ಟು ಹಿಡ್ಕೊಂಡು ಹೋಗ್ತಿದೀನಿ, ಕಾಣ್ಸಾಕಿಲ್ವಾ?

ಶ್ರೀಮತಿ: ಸರಿ, ಹಾಗೇ ಬೆಡ್ ಶೀಟ್, ತಲೆದಿಂಬು ಸಹಾ ಹಿಡಿದುಕೊಂಡು ಹೋಗಿ. ರಾತ್ರಿ ಲೇಟ್ ಆಗಿ ಮನೆಗೆ ಬಂದರೆ, ಬಾಗಿಲ ಮುಂದೆನೇ ಮಲಗೋದಕ್ಕೆ ಆಗುತ್ತೆ.

***

ಸೂರ್ಯನ ಬೆಳಕು

ಶ್ರೀಮತಿ: ದಿನಾ ಬೆಳಿಗ್ಗೆ ಏಕೆ ಟೆರೆಸ್ ಮೇಲೆ ನಿಂತಿರ್ತೀರಾ?

ಗಾಂಪ: ಬೆಳಗಿನ ಬಿಸಿಲಿನಲ್ಲಿ ವಿಟಮಿನ್ ಡಿ ಜಾಸ್ತಿ. ಅದಕ್ಕೇ…

ಶ್ರೀಮತಿ: ನಾಳೆಯಿಂದ ವಿಟಮಿನ್ ಡಿ ಬರೋಲ್ಲ. ತಿಳ್ಕಳ್ಳಿ.

ಗಾಂಪ: ಆಂ ಯಾಕೆ, ಬಿಸಿಲು ಬಂದೇ ಬರುತ್ತಲ್ಲ.

ಶ್ರೀಮತಿ: ಬಿಸಿಲು ಬರುತ್ತೆ, ಆದರೆ ಎದುರು ಮನೆಯಾಕೆ ನಿನ್ನೆಯೇ ಮನೆ ಖಾಲಿ ಮಾಡಿ ಹೋಗಿದ್ದಾಳೆ !

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ