‘ಸಂಪದ' ನಗೆ ಬುಗ್ಗೆ - ಭಾಗ ೯೬

‘ಸಂಪದ' ನಗೆ ಬುಗ್ಗೆ - ಭಾಗ ೯೬

ತಬಲಾ ಕೊಡ್ತೀರಾ?

ಗಾಂಪ: ಇವತ್ತೊಂದು ದಿನ ನಿಮ್ಮ ತಬಲಾ ಕೊಡ್ತೀರಾ?

ನೆರೆಮನೆಯಾತ: ಏಕೆ, ನೀವು ತಬಲಾ ಅಭ್ಯಾಸ ಮಾಡ್ತೀರಾ?

ಗಾಂಪ: ಇಲ್ಲ, ಇವತ್ತಾದರೂ ಚೆನ್ನಾಗಿ ನಿದ್ರೆ ಮಾಡೋಣ ಅಂತ. ನಾಳೆ ಆಫೀಸಿನಲ್ಲಿ ಮೀಟಿಂಗ್ ಇದೆ!

***

ಮಗಳ ಮದುವೆ

ಜಿಪುಣ ಗಾಂಪ, ತನ್ನ ಮಗಳ ಮದುವೆಗೆ ಆದಷ್ಟು ಕಡಿಮೆ ಮಂದಿಯನ್ನು ಆಹ್ವಾನಿಸಬೇಕೆಂದು ನಿರ್ಧರಿಸಿದ. ಇದಕ್ಕಾಗಿ ಸ್ವಾಮೀಜಿಯೊಬ್ಬರ ಬಳಿ ಸಲಹೆಯನ್ನೂ ಕೇಳಿದ. “ನಾನು ಎಲ್ಲರನ್ನೂ ಕರೆಯಬೇಕು. ಆದರೆ ಮದುವೆಗೆ ಕಡಿಮೆ ಜನ ಬರಬೇಕು. ಹಾಗೆ ಒಂದು ಉಪಾಯ ಹೇಳಿ" ಎಂದು. ಅದಕ್ಕೆ ಅವರು , “ನೋಡಿ, ಗಾಂಪಣ್ಣನವರೇ ನಿಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ, ವಿಶೇಷ ಸೂಚನೆಯೆಂಬಂತೆ ಮದುವೆಯಾಗಿ ಈವರೆಗೆ ಜಗಳ ಆಡದೇ ಸುಖ ಸಂತೋಷದಿಂದ ಇರುವವರು ಮಾತ್ರ ಬಂದು ಆಶೀರ್ವದಿಸಬೇಕಾಗಿ ವಿನಂತಿ ಎಂದು ಮುದ್ರಿಸಿ ಹಂಚಿ ಬಿಡಿ ಸಾಕು" ಎಂದರು. ಮದುವೆಯ ದಿನ ಮನೆಮಂದಿಯನ್ನು ಬಿಟ್ಟರೆ ಬೇರಾರೂ ಹಾಜರಾಗಿರಲಿಲ್ಲ!

***

ಕಿವಿ ಯಂತ್ರ

ಕಿವಿ ಸ್ವಲ್ಪ ಮಂದವಾಗಿ ಹೇಳುತ್ತಿದ್ದ ಹಳ್ಳಿಗನೊಬ್ಬ ಪಟ್ಟಣದಲ್ಲಿದ್ದ ಶ್ರವಣ ಆಸ್ಪತ್ರೆಗೆ ಬಂದ. “ಸರಿಯಾಗಿ ಕಿವಿ ಕೇಳುತ್ತಿಲ್ಲ. ಚೆಕ್ ಮಾಡಿ ಕಡಿಮೆ ರೇಟಿಂದು ಒಂದು ಮೆಷೀನು ಕೊಡಿ ಡಾಕ್ಟ್ರೇ” ಎಂದ. ಕಿವಿ ಮೆಷೀನು ಮೂರು ಸಾವಿರದಿಂದ ಆರಂಭವಾಗಿ ಲಕ್ಷದವರೆಗೂ ಇದ್ಯಾವೆ ಎಂದರು ವೈದ್ಯರು. “ಅಯ್ಯೋ, ಅಷ್ಟೆಲ್ಲಾ ರೇಟಿಂದು ಬ್ಯಾಡ, ಕಡಿಮೆ ಬೆಲೆದು ಇದ್ರೆ ಬರ್ಕೊಡಿ" ಎಂದ. ಅವರು, ಪುಟ್ಟ ಬಟನ್ ಥರ ಇರೋ ಒಂದು ವಸ್ತುವನ್ನು ಕೊಡುತ್ತ, “ಹಾಗಾದ್ರೆ ಇದನ್ನು ಬಳಸಿ" ಎಂದರು. “ಎಷ್ಟು ಇದಕ್ಕೆ?” ಎಂದ. “ನೂರು ರೂಪಾಯಿ" ಎಂದರು ವೈದ್ಯರು. ಅವನು ಖುಷಿಯಿಂದ “ಇದನ್ನು ಹಾಕ್ಕೊಂಡ್ರೆ ಕಿವಿ ಕೇಳಿಸುತ್ತಾ? “ ಎಂದು ಕೇಳಿದ. ಡಾಕ್ಟ್ರು “ಇಲ್ಲ, ಆದರೆ ಜನ ನೀನು ಇದನ್ನು ಹಾಕಿಕೊಂಡದ್ದು ನೋಡಿ ನಿನ್ನೊಡನೆ ಜೋರಾಗಿ ಮಾತಾಡ್ತಾರೆ. ಜೊತೆಗೆ ಕೈಸನ್ನೆಯನ್ನೂ ಮಾಡುತ್ತಾರೆ. ಆಗ ನೀನು ಎದುರಿನವರು ಏನು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು.” ಎಂದ.!

***

ಭಾಷಣ

ಗಾಂಪ: ನಿಮ್ಮ ಭಾಷಣ ಕೇಳೋಕೆ ಎಷ್ಟೇ ದೂರ ಆದ್ರೂ ನಾನು ಬರ್ತೀನಿ ಸರ್

ಭಾಷಣಕಾರ: ನನ್ನ ಭಾಷಣ ಅಂದ್ರೆ ಅಷ್ಟೊಂದು ಇಷ್ಟವೇ?

ಗಾಂಪ: ಹಾಗೇನಿಲ್ಲ. ಬೇರೆಯವರ ಭಾಷಣದಲ್ಲಿ ಕೂರೋಕೆ ಸ್ಥಳವೇ ಇರೋದಿಲ್ಲ. ನಿಮ್ಮ ಭಾಷಣದಲ್ಲಿ ಸ್ಥಳಾನೂ ಇರುತ್ತೆ, ಒಳ್ಳೇ ನಿದ್ರೆನೂ ಬರುತ್ತೆ !

***

ಭವಿಷ್ಯ

ಗಾಂಪ: ಯಾಕೋ ಸೂರಿ, ಹೋದ ವಾರ ವಾರಪತ್ರಿಕೆ ಹರಿದು ಹಾಕಿದ್ದೀಯಾ, ಇವತ್ತು ದಿನಪತ್ರಿಕೆ ಹರಿದು ಹಾಕಿದ್ದೀಯಾ?

ಸೂರಿ: ಇನ್ನೇನು ಮತ್ತೆ, ಹೋದ ವಾರದ ಭವಿಷ್ಯ ಕೂಡಾ ಚೆನ್ನಾಗಿರಲಿಲ್ಲ. ಈ ದಿನದ ಭವಿಷ್ಯ ಕೂಡಾ ಚೆನ್ನಾಗಿಲ್ಲ. ಭವಿಷ್ಯ ಬರೆದವನನ್ನು ಏನೂ ಮಾಡೋಕೆ ಆಗಲ್ಲ, ಅದಕ್ಕೆ ಪತ್ರಿಕೆಯನ್ನು ಹರಿದೆ. !

***

ಸಾವು

ಗಾಂಪ: ಒಂದು ವಾರದಿಂದ ಈ ಆಸ್ಪತ್ರೆಯಲ್ಲಿ ಒಬ್ಬರೂ ಸಾಯಲಿಲ್ಲ.

ಸೂರಿ: ಅದು ಹೇಗೆ ಸಾಧ್ಯ?

ಗಾಂಪ: ಡಾಕ್ಟರ್ ಗಳು ಮುಷ್ಕರ ಹೂಡಿದ್ದಾರೆ.

***

ಇಲ್ಲದೇ ಇರೋದು...!

ಶ್ರೀಮತಿ: ನಿನ್ನ ಹತ್ತಿರ ಇಲ್ಲ. ನನ್ನ ಹತ್ತಿರ ಇದೆ. ಅದೇನು ಅಂತ ಹೇಳು ನೋಡೋಣ?

ಗಾಂಪ: ನನಗೆ ಗೊತ್ತಿಲ್ಲ, ನೀನೇ ಹೇಳು

ಶ್ರೀಮತಿ: ನಿನ್ನ ಹತ್ತಿರ ಇಲ್ಲದೇ ಇರೋದು ನನ್ನ ಹತ್ತಿರ ಇರೋದು ‘ಮೇಕಪ್ ಕಿಟ್' !

***

ಉಳಿತಾಯ

ಗಾಂಪ: “ವೆಚ್ಚ ಉಳಿಸುವ ಬಗ್ಗೆ ಮಾತನಾಡಿ. ಐದು ಸಾವಿರ ಕೊಡ್ತೀವಿ" ಅಂತ ಹೇಳಿದ ನೀವು, ಈಗ ಮೂರು ಸಾವಿರ ಕೊಟ್ಟೀದೀರಲ್ಲಾ?

ಸಂಘಟಕರು: ಹೌದು ಹೇಳಿದ್ದೇನೋ ನಿಜ. “ಎಲ್ಲಿ ಉಳಿಸಬಹುದೋ, ಅಲ್ಲೆಲ್ಲಾ ಖರ್ಚು ಉಳಿಸುವುದನ್ನು ಮರೆಯಬೇಡಿ! ಅಂತ ನೀವೇ ಹೇಳಿದ್ರಿ ಅಲ್ವಾ? ಅದರ ಪ್ರಭಾವನೇ ಇದು !

***

ಡಬಲ್ ಚಾರ್ಜ್

ಒಮ್ಮೆ ಗಾಂಪನಿಗೆ ತಾನೂ ಚಂದ್ರಲೋಕಕ್ಕೆ ಹೋಗಬೇಕು ಅನ್ನೋ ಮಹದಾಸೆ ಉಂಟಾಯಿತು. ಎದುರಿಗೆ ಸಿಕ್ಕ ಆಟೋ ಚಾಲಕನಿಗೆ ಕೇಳಿದ “ಚಂದ್ರಲೋಕಕ್ಕೆ ಬರುತ್ತೀಯೇನಪ್ಪಾ?” ಎಂದು. ಅವರು ಬರ್ತೀನಿ ಸರ್, ಆದರೆ ೧೨೦೦ ಕೋಟಿ ಆಗುತ್ತದೆ. ಎಂದ. ಹೌಹಾರಿದ ಗಾಂಪ, ಸಾವರಿಸಿಕೊಂಡು “ಏನಪ್ಪಾ ಇಸ್ರೋದವರೇ ೬೦೦ ಕೋಟಿ ವೆಚ್ಚ ಮಾಡಿದ್ದಾರೆ. ನೀನು ನೋಡಿದರೆ ಅದರ ಡಬಲ್ ಕೇಳುತ್ತೀಯಲ್ಲಾ !? ಎಂದು ಕೇಳಿದ. ಅದಕ್ಕೆ ಆಟೋ ಚಾಲಕ “ ಏನು ಮಾಡೋದು ಸರ್ ! ವಾಪಾಸ್ಸು ಬರುವಾಗ ಖಾಲಿ ಬರಬೇಕಾಗುತ್ತದೆಯಲ್ಲಾ ಅದಕ್ಕೇ” ಎಂದ !

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ