‘ಸಂಪದ' ನಗೆ ಬುಗ್ಗೆ - ಭಾಗ ೯೯

ಕೈ ಗಡಿಯಾರ
ಮೈಸೂರಿಗೆ ಹೊರಟ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರು ಪಕ್ಕಪಕ್ಕದ ಸೀಟುಗಳಲ್ಲಿ ಕೂತಿದ್ದರು. ಮಾತನಾಡುತ್ತಾ ಬೇಜಾರು ಕಳೆಯೋಣವೆಂದು ಅವರಲ್ಲೊಬ್ಬ ತರುಣ ಗಾಂಪ, ಪಕ್ಕದಲ್ಲಿದ್ದ ವೃದ್ಧವಯಸ್ಕರನ್ನು,
“ಟೈಮೆಷ್ಟು ಸ್ವಾಮೀ?” ಅಂತ ಕೇಳಿದ.
ಸಹಪ್ರಯಾಣಿಕ “ ಹೋಗ್ರಿ ಹೋಗ್ರಿ, ಟೈಂ ತಿಳಕೊಂಡು ನಿಮಗೇನಾಗ್ಬೇಕಾಗಿದೆ?” ಅಂತ ಒರಟಾಗಿ ಉತ್ತರಿಸಿದ.
ಗಾಂಪ ಸುಮ್ಮನಾಗಲಿಲ್ಲ. “ ಅಲ್ಲ ಸ್ವಾಮಿ, ಇದೆಂಥ ಅಸಭ್ಯತೆ? ಟೈಂ ಕೇಳಿದರೆ ಈ ಅನಾಗರಿಕ ಉತ್ತರ ಬರುತ್ತೇಂತ ನಾನಂದುಕೊಂಡಿರಲಿಲ್ಲ" ಅಂತ ಅಸಮಾಧಾನ ಸೂಚಿಸಿದ.
ಮಧ್ಯ ವಯಸ್ಕ ಹೇಳಿದ “ ಅದಕ್ಕೆ ಕಾರಣ ಹೇಳ್ತೀನಿ ಕೇಳಿ. ಟೈಂ ಕೇಳಿ ನೀವು ನನ್ನ ಪರಿಚಯ ಮಾಡ್ಕೋತೀರಿ. ಹೆಸರು, ಉದ್ಯೋಗ, ವಿಳಾಸ ಎಲ್ಲಾನೂ ಕೇಳಿ ತಿಳಕೋತೀರಿ. ನೀವೂ ಮೈಸೂರಿನವರೇ ಅಂತ ಹೇಳಿಕೋತೀರಿ. ನಮ್ಮ ರಸ್ತೆಲಿರೋ ನಿಮ್ಮ ಸ್ನೇಹಿತರ ಮನೆಗೆ ಬರ್ತಿರ್ತೀನಿ ಅಂತೀರಿ. ಬಂದಾಗ ನಮ್ಮನೆಗೂ ಬನ್ನಿ ಅಂತ ನನ್ನ ಬಾಯಿಂದ ಹೇಳಿಸ್ತೀರಿ. ಉಪಚಾರಕ್ಕೆ ಹೇಳಿದ್ದನ್ನೇ ಆಹ್ವಾನ ಅಂತ ಅಂದುಕೊಂಡು ನೀವು ಮನೆಗೆ ಬರ್ತೀರಿ. ನನ್ನ ಮಗಳನ್ನ ನೋಡ್ತೀರಿ. ಮೋಹಿಸ್ತೀರಿ. ನೋಡೋಕೆ ನೀವೂ ಅಂದವಾಗಿದ್ದೀರಿ. ನಿಮ್ಮನ್ನ ನೋಡಿ ನನ್ನ ಮಗಳೂ ಮೋಹಿಸ್ತಾಳೆ. ನಿಮ್ಮಿಬ್ಬರ ಮದುವೆ ಮಾತು ಬರುತ್ತೆ... ಇಲ್ನೋಡಿ ಈಗಲೇ ಹೇಳಿ ಬಿಟ್ಟಿದ್ದೀನಿ. ಕೈಗೊಂದು ಗಡಿಯಾರ ಕಟ್ಟಿಕೊಳ್ಳೋಕೆ ಲಾಯಕ್ಕಿಲ್ಲದ ನಿಮ್ಮಂಥೋರಿಗೆ ಮಗಳ್ನ ಕೊಡೋಕೆ ನಾನು ಸಿದ್ಧವಾಗಿಲ್ಲ !”
***
ಕಂಬಳಿ
ಜಿಪುಣ ಗಾಂಪನ ಪತ್ನಿ ಶ್ರೀಮತಿ ತವರೂರಿಗೆ ಹೋಗಿದ್ದಳು. ಅಲ್ಲಿ ಕಂಬಳಿಗಳನ್ನು ತಯಾರಿಸುವ ಒಂದು ಕಾರ್ಖಾನೆಯಲ್ಲಿ ಶ್ರೀಮತಿಯ ಅಣ್ಣನಿಗೆ ಕೆಲಸ. ಅವನಿಗೆ ಕಂಬಳಿಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಒಂದು ಕಂಬಳಿಯನ್ನು ಅಗ್ಗವಾಗಿ ನೂರೈವತ್ತು ರೂಪಾಯಿಗೆ ಅವನು ಶ್ರೀಮತಿಗೆ ತಂದುಕೊಟ್ಟ. ಶ್ರೀಮತಿಗೆ ಅದನ್ನು ಗಂಡನಿಗೆ ಕಳುಹಿಸಿದರೆ, ತನಗಾಗಿ ಪ್ರಯಾಣದ ವೆಚ್ಚ ವಹಿಸಿ ತನ್ನನ್ನು ತವರೂರಿಗೆ ಕಳುಹಿಸಿದ ಅವನ ಮನಸ್ಸಿಗೆ ಬಹಳ ಸಮಾಧಾನವಾದೀತೆಂದುಕೊಂಡಳು. ಕಂಬಳಿಯ ಮೇಲೆ ಅಂಟಿಸಿದ್ದ ಬೆಲೆ ಚೀಟಿ ಮಾತ್ರ ಆಕೆಗೆ ದಿಗಿಲು ಮಾಡಿತು. ನೂರೈವತ್ತು ರೂಪಾಯಿಯಷ್ಟು ಬೆಲೆಬಾಳುವ ಕಂಬಳಿಯನ್ನು ಯಾಕೆ ಕೊಂಡುಕೊಂಡೆ ಅಂತ ಅವನು ತನ್ನನ್ನು ಬೈದಾನು ಎನ್ನುವ ಭಯದಿಂದ ಆಕೆ ಬೆಲೆ ಚೀಟಿಯ ಮೇಲಿದ್ದ ಅಂಕಿಯಲ್ಲಿ “೧” ನ್ನು ಅಳಿಸಿ “೫೦” ಅಂತ ಮಾತ್ರ ಉಳಿಸಿ ಕಂಬಳಿಯನ್ನು ಜಿಪುಣ ಗಾಂಪನಿಗೆ ಪಾರ್ಸೆಲ್ ಮಾಡಿದಳು.
ಮೂರೇ ದಿನಗಳಲ್ಲಿ ಜಿಪುಣ ಗಾಂಪನಿಂದ ಆಕೆಗೆ ಒಂದು ಕಾಗದ ಬಂತು. “ ನೀನು ಕಳುಹಿಸಿದ ಐವತ್ತು ರೂಪಾಯಿಯ ಕಂಬಳಿಯನ್ನು ಎಪ್ಪತ್ತೈದು ರೂಪಾಯಿಗೆ ಮಾರಿದೆ. ಇನ್ನೊಂದು ಹತ್ತು ಕಂಬಳಿಗಳನ್ನು ಕಳಿಸು" !
***
ಕನಸು
ಮರೆಗುಳಿ ಪ್ರೊಫೆಸರ್ ಗಾಂಪ ಒಂದು ದಿನ ಇನ್ನೊಬ್ಬ ಪ್ರೊಫೆಸರ್ ಕೋಣೆಯಲ್ಲಿ ಕೂತು ಕಾಫಿ ಕುಡಿಯುತ್ತಾ “ನಿನ್ನೆ ನನಗೊಂದು ಕನಸು ಬಿತ್ತು. ಭಯಾನಕವಾದ ಕನಸು" ಅಂದರು.
“ಏನು ಕನಸು ಅದು?”
“ನಾನು ತರಗತಿಯಲ್ಲಿ ಪಾಠ ಮಾಡ್ತಿರೋ ಹಾಗೆ, ವಿದ್ಯಾರ್ಥಿಗಳೆಲ್ಲಾ ಗೊರಕೆ ಹೊಡೀತಾ ತೂಕಡಿಸ್ತಿರೋ ಹಾಗೆ ಕನಸು. ಇದ್ದಕ್ಕಿದ್ದ ಹಾಗೆ ಎಚ್ಚರವಾಗಿ ಕಣ್ಣುಬಿಟ್ಟು ನೋಡ್ತೀನಿ, ನಿಜವಾಗಿ ನಾನು ತರಗತಿಯಲ್ಲಿ ಪಾಠ ಮಾಡ್ತಾ ಇದ್ದೀನಿ ! ವಿದ್ಯಾರ್ಥಿಗಳು ಗೊರಕೆ ಹೊಡೀತಾ ತೂಕಡಿಸ್ತಿದ್ದಾರೆ. !”
***
ಹಿಯರಿಂಗ್ ಏಡ್
ಶ್ರೀಮತಿ: ನನ್ನ ಕಿವಿಲಿರೋ ಹಿಯರಿಂಗ್ ಏಡ್ ನೋಡಿದಿರಾ? ಅಮೇರಿಕಾದಿಂದ ನನ್ನ ತಮ್ಮ ತಂದುಕೊಟ್ಟ. ಬಹಳ ಮಜಬೂತಾಗಿದೆ. ಬಹಳ ಬೆಲೆ ಬಾಳೋ ಉಪಕರಣ ಇದು ಗೊತ್ತೇ?”
ತಾರಾ: “ಹೌದೇನು? ಎಷ್ಟು ಕೊಟ್ಟನಂತೆ ಇದಕ್ಕೆ?”
ಶ್ರೀಮತಿ: “ಗಂಟೆ ಎಷ್ಟೊಂದಿರಾ? ಐದೂವರೆ"
***
ಬೇಗ ಎದ್ದರೆ…
ಗಿರಿಧಾಮ ಹೋಟೇಲೊಂದರಲ್ಲಿ ತಂಗಿದ್ದ ಪ್ರವಾಸಿ ಗಾಂಪನಿಗೆ ಹೋಟೇಲ್ ಮಾಲೀಕ “ ತಮ್ಮನ್ನು ಬೆಳಿಗ್ಗೆ ಎಬ್ಬಿಸಬೇಕಾದರೆ ಅಡಿಗೆಯವನಿಗೆ ಹೇಳ್ತೀನಿ" ಅನ್ನುವ ಆಶ್ವಾಸನೆ ಕೊಟ್ಟ.
ಗಾಂಪ “ಅದೇನೂ ಅವಶ್ಯಕವಿಲ್ಲ. ನಾನು ಬೆಳಿಗ್ಗೆ ಆರು ಗಂಟೆಗೆಲ್ಲ ತಪ್ಪದೆ ಏಳೋ ಅಭ್ಯಾಸ ಮಾಡಿಕೊಂಡಿದ್ದೀನಿ" ಅಂದ.
“ಹಾಗಾದ್ರೆ ನೀವು ಎದ್ದ ಮೇಲೆ ನಮ್ಮ ಅಡಿಗೆಯವನನ್ನ ಎಬ್ಬಿಸಿ ಬಿಡ್ತೀರಾ?”
***
ಮರ್ಡರ್ !
ಪೋಲೀಸ್ (ಫೋನಿನಲ್ಲಿ): ಸಾರ್, ಒಂದು ಮರ್ಡರ್ ಆಗಿದೆ. ಹೆಂಡತಿಯು ನೆಲ ಒರೆಸ್ತಿದ್ದಳಂತೆ. ನೀರು ಇನ್ನೂ ಆರಿರಲಿಲ್ಲ. ಆಗ ಗಂಡ ಅದರ ಮೇಲೆ ಗೊತ್ತಿಲ್ಲದೇ ನಡೆದುಬಿಟ್ಟ; ಹೆಂಡತಿಯು ಅವನನ್ನು ಶೂಟ್ ಮಾಡಿದ್ದಾಳೆ.
ಅಧಿಕಾರಿ: ಆಕೆಯನ್ನು ಅರೆಸ್ಟ್ ಮಾಡಿದ್ರಾ?
ಪೋಲೀಸ್: ಇನ್ನೂ ಇಲ್ಲ ಸಾರ್, ನೆಲದ ಮೇಲೆ ಇನ್ನೂ ನೀರಿನ ಅಂಶ ಇದೆ!
***
ತಲೆನೋವು
ಶ್ರೀಮತಿ: (ಫೋನಿನಲ್ಲಿ) ಡಾಕ್ಟ್ರೇ, ನನ್ನ ಗಂಡ ಈಗ ಆಕಸ್ಮಿಕವಾಗಿ ತಲೆನೋವಿನ ಮಾತ್ರೆ ತಿಂದು ಬಿಟ್ಟಿದ್ದಾರೆ. ಏನು ಮಾಡಲಿ?
ವೈದ್ಯರು: ಹೌದಾ, ಅವರಿಗೆ ಒಂದಷ್ಟು ತಲೆನೋವು ಬರುವಂತೆ ಮಾಡಿ. ಪಾಪ, ಮಾತ್ರೆ ವೇಸ್ಟ್ ಆಗಬಾರದಲ್ಲ. !
***
(ಸಂಗ್ರಹ)
ಚಿತ್ರ ಕೃಪೆ: ಹರಿಣಿ ವ್ಯಂಗ್ಯಚಿತ್ರ