‘ಸಂಪದ' ನಗೆ ಬುಗ್ಗೆ - ಭಾಗ ೯

‘ಸಂಪದ' ನಗೆ ಬುಗ್ಗೆ - ಭಾಗ ೯

ಒಂದೇ ಪ್ರಶ್ನೆ

ಉಪಾಧ್ಯಾಯರು ತರಗತಿಯಲ್ಲಿ ಪ್ರಶ್ನೆಯೊಂದನ್ನು ಕೇಳಿದರು.

“ಮಕ್ಕಳೇ, ನೀವು ಸುಲಭವಾಗಿರುವ ಎರಡು ಪ್ರಶ್ನೆಗಳಿಗೆ ಉತ್ತರಿಸುವಿರೋ ಅಥವಾ ಕಠಿಣವಾದ ಒಂದು ಪ್ರಶ್ನೆಗೆ ಉತ್ತರಿಸುವಿರೋ?”

ಗಾಂಪ ಎದ್ದು ನಿಂತು “ಕಠಿಣವಾದ ಒಂದೇ ಪ್ರಶ್ನೆ ಕೇಳಿ ಸರ್" ಎಂದ.

“ಹಾಗಾದರೆ ಈ ಪ್ರಶ್ನೆಗೆ ಉತ್ತರ ಹೇಳು - ಈ ಪ್ರಪಂಚದಲ್ಲಿ ಮೊದಲನೆಯ ಮನುಷ್ಯ ಎಲ್ಲಿ ಹುಟ್ಟಿದ?”

“ಸರ್, ಆಸ್ಪತ್ರೆಯಲ್ಲಿ"

“ಅರೆ ! ಅದು ಹೇಗೆ?”

“ನೋಡಿ ಸರ್, ನೀವೀಗ ಎರಡನೇ ಪ್ರಶ್ನೆ ಕೇಳ್ತಾ ಇದ್ದೀರಿ!”

***

ಕಮ್ಮಿ ಇದೆ

ಗುರುಗಳು: ಗಾಂಪಾ, ದೇವರು ನಿನಗೆ ಪ್ರತ್ಯಕ್ಷವಾದರೆ ಏನು ಬೇಡ್ಕೋತೀಯಾ?

ಗಾಂಪ: ಒಂದು ಡಬ್ಬಾ ಚಾಕ್ಲೇಟು ಕೊಡು ಅಂತ ಬೇಡ್ಕೋತೀನಿ ಸರ್…

ಗುರುಗಳು: ಸೂರಿ, ನೀನು ಹೇಳಪ್ಪಾ?

ಸೂರಿ: ನಾನು ನನಗೆ ವಿದ್ಯಾ ಬುದ್ದಿ ಕೊಡು ಅಂತ ಬೇಡ್ಕೋತೀನಿ ಸಾರ್..

ಗುರುಗಳು: ವೆರಿ ಗುಡ್, ವೆರಿ ಗುಡ್! ನೋಡಿದೆಯಾ ಗಾಂಪಾ... ಸೂರಿ ಎಷ್ಟು ಜಾಣ ಅಂತ.

ಗಾಂಪ: ಹೌದು ಸರ್... ಅದು ಅವನ ಹತ್ತಿರ ಕಮ್ಮಿ ಇದೆ. ಅದಕ್ಕೇ ಅವನು ಅದನ್ನೇ ಕೊಡು ಅಂತ ಬೇಡ್ಕೋತ್ತಾನೆ !

***

ಪ್ರಕೃತಿಯ ಚಮತ್ಕಾರ

ಪ್ರಾಣಿ ಶಾಸ್ತ್ರದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರಕೃತಿಯ ಚಮತ್ಕಾರಗಳನ್ನು ತಿಳಿಯ ಹೇಳುತ್ತ, “ನೋಡಿ, ಪ್ರಕೃತಿ ತನ್ನ ಕೊರತೆಯನ್ನು ಯಾವಾಗಲೂ ತುಂಬಿಕೊಳ್ಳುತ್ತದೆ. ಒಂದು ಕಣ್ಣು ಕುರುಡಾದರೆ ಇನ್ನೊಂದು ಕಣ್ಣು ಇನ್ನೂ ಚೆನ್ನಾಗಿ ಕಾಣಿಸುತ್ತದೆ. ಒಂದು ಕಿವಿ ಕಿವುಡಾದರೆ ಮತ್ತೊಂದು ಕಿವಿ ಇನ್ನೂ ಚೆನ್ನಾಗಿ ಕೇಳಿಸುತ್ತದೆ. ಈ ಕುರಿತು ನೀವೊಂದು ಉದಾಹರಣೆ ಕೊಡಿ ನೋಡೋಣ” ಎಂದರು.

“ಒಂದು ಕಾಲು ತುಂಡಾದರೆ ಇನ್ನೊಂದು ಕಾಲು ಉದ್ದವಾಗುತ್ತದೆ “ ಎಂದ ತುಂಟ ಹುಡುಗ ಗಾಂಪ.

***

ಹಳೆಯ ಕಥೆ

ಒಬ್ಬ ಹಳೆಯ ವಿದ್ಯಾರ್ಥಿ ತಾವು ಇಳಿದುಕೊಂಡಿದ್ದ ಹಾಸ್ಟೆಲ್, ವ್ಯಾಸಂಗ ಮಾಡುವ ಸಮಯದಲ್ಲಿದ್ದ ಕೊಠಡಿ ಇತ್ಯಾದಿ ನೋಡಲು ಹೊರಟು, ರಾತ್ರಿ ೮ ಗಂಟೆಯ ಸಮಯ ಬಾಗಿಲು ತಟ್ಟಿದ. 

ಹೊಸ ವಿದ್ಯಾರ್ಥಿ(ಬಾಗಿಲು ತೆರೆಯುತ್ತಾ): ಯಾರದು?

ಹಳೆಯ ವಿದ್ಯಾರ್ಥಿ: ನಾನು... ಹದಿನೈದು ವರ್ಷಗಳ ಹಿಂದೆ ಇದೇ ರೂಮಿನಲ್ಲಿ ಮೂರು ವರ್ಷ ಇದ್ದೆ. ಎಷ್ಟು ಸಂತೋಷವಾಗುತ್ತೆ... ಅದೇ ಫರ್ನಿಚರ್, ಅದೇ ಮಂಚ, ಅದೇ ಹೂದಾನಿ, ಅದೇ ಕಿಟಕಿ, ಹೊರಗೆ ಕಾಣುವ ವಿಶಾಲ ದೃಶ್ಯ. ಎಷ್ಟು ಸೊಗಸು. ಯಾವುದೂ ಬದಲಾಯಿಸಿಲ್ಲ.

ಹಾಗೆಂದವನು ಗೋಡೆಗೆ ಜೋಡಿಸಿಯೇ ಸೇರಿಸಿದ್ದ ದೊಡ್ದ ವಾರ್ಡ್ ರೋಬ್ ಬಾಗಿಲನ್ನು ಸರ್ರನೇ ಎಳೆದ. ಅಲ್ಲಿ ಚಿಕ್ಕ ಪ್ರಾಯದ ಹುಡುಗಿ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಭಯಭೀತಳಾಗಿ ನಡಗುತ್ತ ನಿಂತಿದ್ದಳು. 

ಆಗ ಹೊಸ ವಿದ್ಯಾರ್ಥಿ ವ್ಯಾಖ್ಯಾನ ನೀಡಿದ: ಅವಳು ನನ್ನ ತಂಗಿ... ನಂಬಿ

ಹಳೆಯ ವಿದ್ಯಾರ್ಥಿ: ಹೌದಪ್ಪ ! ಅದೂ ಹಳೆಯ ಕಥೆ, ಈಗಲೂ ಬದಲಾಗಿಲ್ಲ !

***

ಅಷ್ಟು ದೂರ ಕಳಿಸಲ್ಲ!

ಆಕಾಶಕಾಯಗಳ ಕುರಿತಾಗಿ ಪ್ರತಿ ನಿತ್ಯ ಉಪನ್ಯಾಸಗಳ ಸರಣಿ ನಡೆಯುತ್ತಿತ್ತು. ಆದರೆ ಗಾಂಪ ಪ್ರತೀ ದಿನ ತಪ್ಪಿಸಿಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಉಪನ್ಯಾಸಕರು ಹೇಳಿದರು.

“ಗಾಂಪ, ಈವೊತ್ತು ಚಂದ್ರನ ಮೇಲೆ ಉಪನ್ಯಾಸ ನಡೆಯಲಿಕ್ಕಿದೆ. ನೀನು ಖಂಡಿತಾ ಹೋಗಬೇಕು" 

ಅದಕ್ಕೆ ಗಾಂಪ ಸಾವಕಾಶವಾಗಿ ಉತ್ತರ ನೀಡಿದ

“ನನ್ನ ತಾಯಿಗೆ ನಾನೊಬ್ಬನೇ ಮಗ ಸರ್, ಅವರು ನನ್ನನ್ನು ಅಷ್ಟು ದೂರ ಖಂಡಿತಾ ಕಳಿಸಲ್ಲ!”

***

ತಿರುಗು ಬಾಣ

ಉಪಾಧ್ಯಾಯ: ೫ ನೇ ಮಗ್ಗಿ ಹೇಳಪ್ಪ

ಗಾಂಪ: ಬರೋಲ್ಲ ಸರ್

ಉಪಾಧ್ಯಾಯ: ಹೋಗಲಿ, ೨ನೇ ಮಗ್ಗಿ ಹೇಳು

ಗಾಂಪ: ಅದೂ ಬರೋಲ್ಲ ಸರ್!

ಉಪಾಧ್ಯಾಯ: ಏನ್ ಹೇಳ್ತೀಯಾ? ನಾನು ನಿನ್ನ ಹಾಗೆ ತರಗತಿಯಲ್ಲಿರುವಾಗ ೧೨ರವರೆಗಿನ ಮಗ್ಗಿ ಚೆನ್ನಾಗಿ ಬರ್ತಾ ಇತ್ತು ಗೊತ್ತಾ?

ಗಾಂಪ: ಇರಬಹುದು ಸರ್, ನಿಮ್ಮ ಉಪಾಧ್ಯಾಯರು ಅಷ್ಟು ಚೆನ್ನಾಗಿ ಪಾಠ ಮಾಡುತ್ತಿರಬಹುದು ಎಂದು ಕಾಣಿಸುತ್ತೆ. !

***

(ಕೃಪೆ: ಶಾಲಾ ಕಾಲೇಜುಗಳಲ್ಲಿ ಜೋಕುಗಳು)

ಚಿತ್ರ ಕೃಪೆ: ಅಂತರ್ಜಾಲ ತಾಣ