‘ಸಂಪದ' ನಗೆ ಬುಗ್ಗೆ - ೧
ಕಳೆದ ವಾರದವರೆಗೆ ನೀವೆಲ್ಲಾ ‘ಮಯೂರ' ಪತ್ರಿಕೆಯ ಹಳೆಯ ಸಂಚಿಕೆಗಳಿಂದ ಆಯ್ದ ನಿಜ ಜೀವನದ ಹಾಸ್ಯ ಪ್ರಕರಣಗಳನ್ನು ಓದಿ ಆನಂದಿಸಿದ್ದೀರಿ. ಈ ವಾರದಿಂದ ವಿವಿಧ ಹಾಸ್ಯ ಪುಸ್ತಕಗಳು ಹಾಗೂ ನಿಯತಕಾಲಿಕೆಗಳಿಂದ ಆಯ್ದ ಹಾಸ್ಯದ ತುಣುಕುಗಳನ್ನು ಸಂಗ್ರಹಿಸಿ ನಿಮಗಾಗಿ ತರುತ್ತಿದ್ದೇವೆ. ಈ ಹಾಸ್ಯ ಸರಣಿಗಳನ್ನು ತಪ್ಪದೇ ಓದಿ, ನಿಮ್ಮ ಪ್ರತಿಕ್ರಿಯೆಗಳನ್ನು ತಿಳಿಸಿ.
***
ಓಡಿದರು
ನಾಲ್ಕು ಮಂದಿ ಗೆಳೆಯರು ಒಂದು ಹೋಟೇಲ್ ಗೆ ಹೋಗಿ ಚೆನ್ನಾಗಿ ತಿಂದರು. ಸಪ್ಲಯರ್ ಬಿಲ್ ತಂದು ಕೊಟ್ಟ. ಬಿಲ್ಲನ್ನು ನಾನು ಕೊಡುತ್ತೇನೆ, ನಾನು ಕೊಡುತ್ತೇನೆ ಎಂದು ನಾಲ್ವರಲ್ಲೇ ವಾದ ಪ್ರಾರಂಭವಾಯಿತು. ಬಿಲ್ಲನ್ನು ಕೊಡುವುದರ ಬಗ್ಗೆಯೇ ಆ ನಾಲ್ಕು ಮಂದಿ ಗೆಳೆಯರು ಕಚ್ಚಾಡತೊಡಗಿದರು.
ಅವರಲ್ಲಿ ಒಬ್ಬ ಸಾಹುಕಾರರ ಹತ್ತಿರ ಬಂದು ಈ ರೀತಿ ಹೇಳಿದ - “ನಾವು ನಾಲ್ಕು ಮಂದಿ ನಿಮ್ಮ ಹೋಟೇಲ್ ನ ಒಂದು ಸುತ್ತ ಓಡಿ ಬರುತ್ತೇವೆ. ಯಾರು ಮೊದಲು ಬರುತ್ತಾರೋ ಅವರು ಬಿಲ್ಲನ್ನು ಕೊಡುತ್ತಾರೆ. ನೀವು ೧,೨,೩ ಎಂದು ಹೇಳಿ. ನಾವು ಓಡುತ್ತೇವೆ. “ ಎಂದ. ಹೇಗಾದರೂ ಇವರ ತೊಂದರೆ ತಪ್ಪಲಿ ಎಂದು ಹೋಟೇಲ್ ಮಾಲೀಕ ಒಂದು, ಎರಡು, ಮೂರು ಎಂದು ಕೂಗಿದನು. ನಾಲ್ವರು ಗೆಳೆಯರು ಓಡಿದರು. ಆದರೆ ಮತ್ತೆ ತಿರುಗಿ ಬರಲಿಲ್ಲ.
***
ಬಾವಿಗೆ ಬಿದ್ದರೂ ಬಗ್ಗಲಿಲ್ಲ
ಒಂದು ಊರಿನಲ್ಲಿ ಬಬ್ಬರಮಕ್ಕಿ ಮತ್ತು ಮಾವಿನಜಟ್ಟಿ ಎಂಬ ಕಳ್ಳರಿದ್ದರು. ಅವರು ಕಳ್ಳತನದಲ್ಲಿ ಭಾರೀ ನಿಪುಣರು, ಅವರು ಎಂದೂ ಸಿಕ್ಕಿಬಿದ್ದವರಲ.
ಒಂದು ದಿನ ಅವರು ಒಬ್ಬ ದೊಡ್ಡ ಶ್ರೀಮಂತನ ಮನೆಗೆ ರಾತ್ರಿ ಹೊತ್ತು ಕಳ್ಳತನಕ್ಕೆ ಹೊರಟರು. ಒಬ್ಬಾತ ಮನೆಯ ಒಳಗೆ ನುಗ್ಗಿದ. ಇನ್ನೊಬ್ಬ ಹಿತ್ತಲಿನಲ್ಲಿ ನಿಂತುಕೊಂಡ. ಆ ಮನೆಯಲ್ಲಿ ಒಳಗಡೆಯೇ ಬಾವಿ ಮಾಡಿಸಿದ್ದರು. ಕಳ್ಳನಿಗೆ ಬಾವಿ ಎಂದು ತಿಳಿಯದೇ ಅದರಲ್ಲಿ ಬಿದ್ದು ಬಿಟ್ಟ. ಮನೆಯಲ್ಲಿದ್ದವರೆಲ್ಲ ಎಚ್ಚೆತ್ತು ಬಾವಿಯ ಸುತ್ತ ಬಂದು ನಿಂತರು. ಅವನನ್ನು ಹಿಡಿಯಬೇಕೆಂದು ತೀರ್ಮಾನಿಸಿ ಬಾವಿಗೆ ಏಣಿ ಹಾಕಿದರು.
ಆದರೆ ಕಳ್ಳ ಏಣಿ ಹತ್ತಿ ಬರದೇ, “ ಏನು ನನ್ನನ್ನು ಅಷ್ಟು ಮೂರ್ಖನೆಂದು ತಿಳಿದಿದ್ದೀರಾ? ನಾನು ಇಲ್ಲಿ ಮುಳುಗಿದರೆ ನಿಮ್ಮ ಮನೆಯ ಹಿಂದುಗಡೆಯಿಂದ ಮೇಲೆ ಏಳುತ್ತೇನೆ" ಎಂದು ಗಟ್ಟಿಯಾಗಿ ಹೇಳಿ ತಕ್ಷಣ ಮುಳುಗಿದ.
ಈ ಮಾತನ್ನು ಕೇಳಿದ ಹೊರಗಿದ್ದ ಕಳ್ಳ “ಹಿಡಿಯಿರಿ ನನ್ನ" ಎಂದು ಗಟ್ಟಿಯಾಗಿ ಹೇಳಿ ಓಡಲು ಪ್ರಾರಂಭಿಸಿದ. ಮನೆಯವರೆಲ್ಲರೂ ಅವನನ್ನು ಹಿಡಿಯಲು ಓಡಿದರು. ಬಾವಿಯಲ್ಲಿದ್ದ ಕಳ್ಳ ಕೂಡಲೇ ಏಣಿಯಿಂದ ಮೇಲಕ್ಕೇರಿ ಮನೆಯಲ್ಲಿದ್ದ ಆಭರಣ, ಹಣವನ್ನು ದೋಚಿಕೊಂಡು ಪರಾರಿಯಾದ.
***
ಭಯವಿಲ್ಲದೆ ಮುಳುಗಿ
ಒಬ್ಬ ಭಕ್ತ ಮಹಾಶಯ ಒಮ್ಮೆ ತೀರ್ಥಯಾತ್ರೆಗೆ ಹೊರಟ. ಹಲವಾರು ಪವಿತ್ರ ಸ್ಥಳಗಳನ್ನು ನೋಡಿ ಕಾಶಿಗೆ ಬಂದ. ಅಲ್ಲಿಯಾದರೋ ಹೆಜ್ಜೆ ಹೆಜ್ಜೆಗೂ ತೀರ್ಥ ಸ್ಥಳಗಳೇ. ಹತ್ತಿರಲ್ಲೇ ಒಂದು ಕೊಳ ಕಾಣಿಸಿತು.
ಅಲ್ಲಿಯೇ ನಿಂತಿದ್ದ ಪಾಂಡೆ ಹೇಳಿದ. “ಇದು ಸತ್ಯ ಹರಿಶ್ಚಂದ್ರನ ಕಾಲದ ಕೊಳ. ಇದರಲ್ಲಿ ಒಮ್ಮೆ ಮುಳುಗಿದರೂ ಸಾಕು, ನಿಮ್ಮ ಪಾಪಗಳೆಲ್ಲಾ ಪರಿಹಾರವಾಗುತ್ತೆ. ಮನಸ್ಸೂ ನಿರ್ಮಲವಾಗುತ್ತೆ"
ಭಕ್ತ ಕೇಳಿದ “ಇದರಲ್ಲಿ ಆಮೆ, ಮೀನು, ಕಪ್ಪೆ ಏನೂ ಇಲ್ಲ ತಾನೇ? ನಮಗಂತೂ ಅವುಗಳನ್ನು ಕಂಡರೆ ತುಂಬಾ ಭಯವಾಗುತ್ತೆ"
ಪಾಂಡೆ ಭಕ್ತನ ಬೆನ್ನು ತಟ್ಟುತ್ತಾ ಧೈರ್ಯ ಹೇಳಿದ “ನೀವೇನೂ ಯೋಚನೆ ಮಾಡದೇ ನಿರ್ಭಯವಾಗಿ ಮುಳುಗಿ ಸ್ವಾಮಿ. ಇಲ್ಲಿ ಆಮೆಯೂ ಇಲ್ಲ, ಮೀನೂ ಇಲ್ಲ; ಇಲ್ಲಿರುವ ಒಂದು ಮೊಸಳೆ ಅವೆಲ್ಲವನ್ನೂ ತಿಂದು ಬಿಟ್ಟಿದೆ"!
***
ಸುಲಭದ ಕೆಲಸ !
ಇಸ್ರೇಲಿ ಸೇನಾ ಪಾಳಯದಲ್ಲಿ ಸೈನಿಕನೊಬ್ಬ ರಾತ್ರಿ ಹೊತ್ತು ‘ಹಾಜರಿ' ಕರೆದಾದ ನಂತರ ಬಂದ. ಅವನಿಗೆ ಭಾರವಾದ ಆಲೂಗೆಡ್ಡೆಯ ಮೂಟೆಗಳನ್ನು ಹೊತ್ತುಕೊಂಡು ಹೋಗುವ ಶಿಕ್ಷೆ ನೀಡಲಾಯಿತು. ಆತ ತನಗೆ ಬೆನ್ನು ನೋವು ಎಂದು ಹೇಳಿದ. ಅದಕ್ಕೆ ಸೈನ್ಯಾಧಿಕಾರಿ ಡಾಕ್ಟರ್ ಹತ್ತಿರ ಸರ್ಟಿಫಿಕೇಟ್ ತರಲು ತಿಳಿಸಿದ.
ಮಾರನೆಯ ದಿನ ಆತ ಡಾಕ್ಟರ್ ಸರ್ಟಿಫಿಕೇಟ್ ತಂದು ಕೊಟ್ಟ. ಭಾರವಾದುದೇನನ್ನೂ ಹೊರಿಸಬಾರದೆಂದು ಡಾಕ್ಟರ್ ತಿಳಿಸಿದ್ದರು.
ಅದಕ್ಕೆ ಸೈನ್ಯಾಧಿಕಾರಿ “ ನೀನು ಮೂಟೆಯನ್ನು ಹೋರುವುದು ಬೇಡ. ಒಂದೊಂದಾಗಿಯೇ ಆಲೂಗೆಡ್ಡೆಯನ್ನು ತೆಗೆದುಕೊಂಡು ಹೋಗು" ಎಂದು ಆಜ್ಞೆ ಮಾಡಿದ.
***
(ಸಂಗ್ರಹ) ‘ನಗೆ ಗುಗ್ಗರಿ’ ಪುಸ್ತಕ