‘ಸಂಪದ' ನಗೆ ಬುಗ್ಗೆ - ೨

‘ಸಂಪದ' ನಗೆ ಬುಗ್ಗೆ - ೨

ಒಂದೇ ದಿನದಲ್ಲಿ…

ವಿದೇಶಿ ಪ್ರವಾಸಿಯೊಬ್ಬ ಆಗ್ರಾದ ಕೆಂಪು ಕೋಟೆ ಬಳಿ ಬಂದು ‘ಆಹಾ, ಈ ಕೋಟೆ ತುಂಬಾ ಚೆನ್ನಾಗಿದೆ. ಇದನ್ನು ಕಟ್ಟೋಕೆ ಎಷ್ಟು ವರ್ಷ ತೆಗೆದುಕೊಂಡರು...?’

ಗೈಡ್- ಇಪ್ಪತ್ತು ವರ್ಷ

ವಿದೇಶಿ ಪ್ರವಾಸಿ - ಭಾರತೀಯರು ಸೋಮಾರಿಗಳು. ನಮ್ಮಲ್ಲಾಗಿದ್ದರೆ ಹತ್ತು ವರ್ಷದಲ್ಲಿ ಕಟ್ಟುತ್ತಿದ್ದರು.

ಹಾಗೆಯೇ ವಿದೇಸಿ ಪ್ರವಾಸಿ ತಾಜಮಹಲ್ ಬಳಿ ಬಂದು ‘ಈ ಸುಂದರವಾದ ಕಟ್ಟಡವನ್ನು ಕಟ್ಟಲು ಎಷ್ಟು ವರ್ಷ ತೆಗೆದುಕೊಂಡರು?’

ಗೈಡ್- ಹತ್ತು ವರ್ಷಗಳು ಸರ್

ವಿದೇಶಿ ಪ್ರವಾಸಿ- ತುಂಬಾ ಜಾಸ್ತಿ. ನಾವಾಗಿದ್ದರೆ ಎರಡು ವರ್ಷದಲ್ಲಿ ಕಟ್ತಾ ಇದ್ದೆವು.

ಗೈಡ್ - ಹೌದಾ!

ಹಾಗೆಯೇ ಅವರು ದೆಹಲಿಯ ಕುತುಬ್ ಮಿನಾರ್ ಬಳಿ ಬರುತ್ತಾರೆ.

“ಇದೇನು ಈ ಎತ್ತರದ ಗೋಪುರ?”

ಗೈಡ್ (ರೋಸಿ ಹೋಗಿ) - “ ಯಾವುದು ಸರ್?, ನಾನು ನಿನ್ನೆ ಸಾಯಂಕಾಲ ಇಲ್ಲಿಗೆ ಬಂದಾಗ ಈ ಗೋಪುರ ಇದ್ದ ಕಡೆ ಖಾಲಿ ಜಾಗ ಇತ್ತು!”

***

ಸಾಯುವ ಸಲುವಾಗಿ…

ಒಬ್ಬಾಗ ರೈಲ್ವೇ ಹಳಿ ಮೇಲೆ ಮಲಗಿಕೊಂಡಿದ್ದ. ಅವನ ಪಕ್ಕದಲ್ಲಿ ಮದ್ಯದ ಬಾಟಲು, ಕೋಳಿ ಮಾಂಸ, ಚಿಪ್ಸ್ ಎಲ್ಲಾ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ದಾರಿಹೋಕನೊಬ್ಬ “ಸ್ವಾಮಿ,ರೈಲ್ವೇ ಹಳಿ ಮೇಲೆ ಮಲಗಿದ್ದೀರಲ್ಲ ಯಾಕೆ?’

ಮಲಗಿದ್ದವ- “ನಾನು ಸಾಯಬೇಕೂಂತ ತೀರ್ಮಾನಿಸಿದ್ದೇನೆ.”

ದಾರಿಹೋಕ- “ಹಾಗಾದರೆ ಕೈಯಲ್ಲಿ ಮದ್ಯದ ಬಾಟಲು, ತಿನಸುಗಳು ಯಾಕೆ?”

ಮಲಗಿದ್ದವ- “ಯಾಕೆಂದರೆ ರೈಲುಗಳು ಸರಿಯಾದ ಸಮಯಕ್ಕೆ ಬದುವುದೇ ಇಲ್ಲ. ಅಲ್ಲಿವರೆಗೆ ಹಸಿದುಕೊಂಡಿದ್ದು ಸಾಯಲು ನನಗಿಷ್ಟವಿಲ್ಲ!”

***

ಕಿವುಡು ಕಪ್ಪೆ

ವಿಜ್ಞಾನಿಯೊಬ್ಬರು ಕಪ್ಪೆಯ ಮೇಲೆ ಪ್ರಯೋಗ ಮಾಡುತ್ತಿದ್ದರು. ‘ಎದ್ದೇಳು' ಎಂದು ಹೇಳುತ್ತಲೇ ಕಪ್ಪೆ ಜಿಗಿಯಿತು. ಅವರು ಕಪ್ಪೆಯ ಒಂದು ಕಾಲನ್ನು ಕತ್ತರಿಸಿದರು.

‘ಎದ್ದೇಳು' ಎಂದು ಅವರು ಮತ್ತೊಮ್ಮೆ ಹೇಳುತ್ತಲೇ ಕಪ್ಪೆಯು ಸ್ವಲ್ಪ ಕಡಿಮೆ ಜಿಗಿಯಿತು. ಅದರ ಎರಡನೇ ಕಾಲನ್ನೂ ಕತ್ತರಿಸಿದರು.

‘ಎದ್ದೇಳು' ಎಂದು ಅವರು ಮೂರನೇ ಬಾರಿ ಹೇಳಿದಾಗ ಕಪ್ಪೆ ಜಿಗಿಯಲಿಲ್ಲ. ಆಗ ಅವರು ತಮ್ಮ ಪ್ರಯೋಗ ಪುಸ್ತಕದಲ್ಲಿ ಹೀಗೆ ಬರೆದರು.

‘ಕಪ್ಪೆಯ ಎರಡೂ ಕಾಲುಗಳನ್ನು ಕತ್ತರಿಸಿದರೆ ಅದು ಕಿವುಡಾಗುತ್ತದೆ.”

***

ಮಣ್ಣು-ಮುಚ್ಚಲು

ಆಳವಾದ ಗೋರಿ ತೋಡಿಯಾದ ಮೇಲೆ ಅದನ್ನು ತೋಡುತ್ತಿದ್ದವರು ಸಂಜೆಯಾಗುತ್ತಲೇ ಕೆಲಸ ನಿಲ್ಲಿಸಿ ಮನೆಗೆ ಗುಂಡಿಯನ್ನು ಹಾಗೇ ಬಿಟ್ಟು ಹೋಗಿದ್ದರು. ರಾತ್ರಿ ಆ ದಾರಿಯಲ್ಲಿ ಬಂದ ವ್ಯಕ್ತಿಯೋರ್ವ ಅಕಸ್ಮಾತ್ ಆಗಿ ಗುಂಡಿಯೊಳಗೆ ಬಿದ್ದ. ಸಹಾಯಕ್ಕಾಗಿ ಅಂಗಲಾಚುತ್ತಿರುವ ಸಮಯದಲ್ಲಿ ಅಲ್ಲಿಗೆ ಬಂದ ಕುಡುಕ ಮಹಾಶಯನೊಬ್ಬ ಗುಂಡಿಯೊಳಗೆ ಇಣುಕಿ ನೋಡಿದ. ಕುಡುಕನ ಗಮನ ಸೆಳೆಯುವ ಉದ್ದೇಶದಿಂದ “ದಯವಿಟ್ಟು ನನ್ನನ್ನು ಹೊರಗೆ ಎಳೆಯಿರಿ, ಚಳಿಯಿಂದ ಸಾಯುತ್ತಿದ್ದೇನೆ" ಎಂದು ಗೋಗರೆದ.

ಅದಕ್ಕೆ ಕುಡುಕ “ಚಳಿಯಾಗದೇ ಇನ್ನೇನಾದೀತು? ಮೂರ್ಖರು ನಿನ್ನನ್ನು ಗುಂಡಿಯಲ್ಲಿ ಹಾಕಿದ ಮೇಲೆ ಮಣ್ಣು ಮುಚ್ಚಲು ಮರೆತುಬಿಟ್ಟಿದ್ದಾರೆ" ಎಂದು ಹೇಳಿ ಗೋರಿಗೆ ಮಣ್ಣು ತುಂಬಿಸಲು ಪ್ರಾರಂಭಿಸಿದ.

***

ಮೊದಲೇ ಹೇಳಿದ್ದರೆ…

ಬಸ್ ನಲ್ಲಿ ತುಂಬಾ ರಶ್ ಇದ್ದಾಗ ಹಳ್ಳಿಯ ಹೆಂಗಸೊಬ್ಬಳು ಬಸ್ಸಿನಲ್ಲಿ ಒಂದು ರೂಪಾಯಿ ನಾಣ್ಯ ಬೀಳಿಸಿಕೊಂಡು, ಬಗ್ಗಿ ತಡಕಾಡುತ್ತಾ ಹುಡುಕಾಡುತ್ತಿರುವಾಗ ಎಲ್ಲರಿಗೂ ತೊಂದರೆಯಾಯಿತು. ಅದನ್ನು ನೋಡಿದ ಒಬ್ಬ ಯುವಕ ಅವಳ ಮೇಲಿನ ಕರುಣೆಯಿಂದ ತನ್ನ ಜೇಬಿನಿಂದ ಒಂದು ರೂಪಾಯಿ ಅವಳಿಗೆ ಕೊಡುತ್ತಾ ಹೇಳಿದ “ಯಾಕಮ್ಮಾ ಅಷ್ಟೊಂದು ಹುಡುಕಾಡುತ್ತೀಯಾ? ತಗೋ ನಿನ್ನ ರೂಪಾಯಿ!”

ಅದಕ್ಕೆ ಹೆಂಗಸು - “ನೀನು ತಗೊಂಡಿದ್ದು ಅಂತ ಮೊದಲೇ ಹೇಳಿದ್ದರೆ ಇಷ್ಟೋಂದು ಯಾಕೆ ಹುಡುಕಬೇಕಿತ್ತು?”

***

(‘ನಗೆ ಗುಗ್ಗರಿ' ಕೃತಿಯಿಂದ ಸಂಗ್ರಹಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ