‘ಸಂಪದ' ನಗೆ ಬುಗ್ಗೆ - ೩

‘ಸಂಪದ' ನಗೆ ಬುಗ್ಗೆ - ೩

ತಪ್ಪಾಗಲು ಸಾಧ್ಯವಿಲ್ಲ

ಗಾಂಪನಿಗೆ ಇದ್ದಕ್ಕಿದ್ದಂತೆ ಅಸೌಖ್ಯವಾಯಿತು. ಆಸ್ಪತ್ರೆಗೆ ಸೇರಿಸಲಾಯಿತು. ಒಂದು ಚಿಕ್ಕ ಆಪರೇಷನ್ ಅಗತ್ಯವೆಂದು ವೈದ್ಯರು ಹೇಳಿದರು. ಗಾಂಪ ಒಪ್ಪಿಕೊಂಡ.

ಒಂದು ನಿಗದಿತ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗೆ ಗಾಂಪನನ್ನು ಒಯ್ದರು. ಗಾಂಪ ಶಸ್ತ್ರಾಸ್ತ್ರಗಳನ್ನು ಹಿಡಿದು ತನ್ನೆದುರು ನಿಂತ ವೈದ್ಯರನ್ನು ನೋಡಿ,

“ಡಾಕ್ಟರೇ, ಏನೂ ಅಪಾಯವಿಲ್ಲ ತಾನೇ? ಕರುಳಿನ ಆಪರೇಷನ್ ಮಾಡಿಸಿಕೊಂಡ ವ್ಯಕ್ತಿ ಪಿತ್ತಕೋಶದ ಸೋಂಕಿನಿಂದ ಸತ್ತದ್ದಾಗಿ, ಶ್ವಾಸಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿ ಹೃದಯದ ಸೋಂಕಿನಿಂದ ಸತ್ತದ್ದಾಗಿ ಪೇಪರ್ ನಲ್ಲಿ ಆಗಾಗ ವರದಿಯಾಗುತ್ತಿದೆಯಲ್ಲ. ಅಂದಿನಿಂದ ನನಗೆ ಸ್ವಲ್ಪ ಹೆದರಿಕೆ" ಎಂದು ಹೇಳಿದ.

ವೈದ್ಯರು “ಗಾಂಪ, ನೀವೇನೂ ಹೆದರುವ ಪ್ರಮೇಯವಿಲ್ಲ. ನಾನೊಬ್ಬ ನುರಿತ ವೈದ್ಯ-ಬೇರೆ ವೈದ್ಯರ ಹಾಗಲ್ಲ. ನಾನು ಕರುಳಿನ ಶಸ್ತ್ರಚಿಕಿತ್ಸೆ ಮಾಡಿದರೆ ಆ ವ್ಯಕ್ತಿ ಕರುಳಿನ ಸೋಂಕಿನಿಂದಲೇ ಸಾಯುತ್ತಾನೆ. ನಾನು ಪಿತ್ತಕೋಶದ ಶಸ್ತ್ರ ಚಿಕಿತ್ಸೆ ಮಾಡಿದರೆ ಆತ ಪಿತ್ತಕೋಶದ ಸೋಂಕಿನಿಂದಲೇ ಸಾಯುತ್ತಾನೆ. ಹೃದಯದ ಶಸ್ತ್ರ ಚಿಕಿತ್ಸೆ ಮಾಡಿದರೆ..."

ಎಂದು ಹೇಳುವಷ್ಟರಲ್ಲಿ ಗಾಂಪ ಪ್ರಜ್ಞೆ ತಪ್ಪಿದ.!

***

ಈಗ ಆರಾಮ

ಗಾಂಪ ಪತ್ನಿಯ ಪಾಕ ಪ್ರಖರತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಬೆಳೆಗಳಿಗೆ ಬೀಳುವ ಹಾನಿಕರ ಕೀಟಗಳಿಗೆ ಅನಗತ್ಯವಾಗಿ ಯಾವ ಯಾವುದೋ ಕೀಟನಾಶಕಗಳನ್ನು ಸಿಂಪಡಿಸುವ ಬದಲು ತನ್ನ ಹೆಂಡತಿ ಮಾಡಿದ ಸಾರನ್ನು ಸಿಂಪಡಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆಂದು ಗಾಂಪ ಹೇಳುತ್ತಿರುತ್ತಾನೆ. ಆದರೆ ಅವನ ಮಾತನ್ನು ಕೇಳುವವರು ಯಾರೂ ಇಲ್ಲ.

ಮೊನ್ನೆ ಒಬ್ಬ ಭಿಕ್ಷುಕ ಗಾಂಪನ ಮನೆಯ ಮುಂದೆ ನಿಂತು, “ಅಮ್ಮಾ ಭಿಕ್ಷೆ ನೀಡಿ ತಾಯೇ” - ಎಂದು ಕೂಗು ಹಾಕಿದ.

ಗಾಂಪನ ಪತ್ನಿ ಹೊರ ಬಂದು ಕೇಳಿದಳು “ ಏನಪ್ಪ, ಹೋದವಾರ ನಿನಗೆ ಅನ್ನ ಸಾಂಬಾರ್ ಪಲ್ಯ ಕೊಟ್ಟಿದ್ದೆನಲ್ಲ.."

“ಹೌದು ತಾಯೀ ಅದನ್ನು ತಿಂದು ಒಂದು ವಾರ ಅನಾರೋಗ್ಯದಿಂದ ಮಲಗಿದ್ದೆ. ಈಗ ಅಡ್ಡಿಯಿಲ್ಲ-ಸೌಖ್ಯವಾಗಿದ್ದೇನೆ. ಅದಕೇ ಬಂದೆ.”

***

ಬೆಲೆ ಬಾಳುವ ಬ್ರೈನ್

ಶ್ಯಾಮ ಗುಂಡು ಹಾಕಿ ತೂರಾಡುತ್ತಾ ಹೋಗುತ್ತಿರುವಾಗ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆದು ತಲೆಯ ಒಳಗಿದ್ದ ಮಿದುಳು ಹೊರ ಬಂದು ಬಿತ್ತು. ಗಾಂಪ ಶ್ಯಾಮನನ್ನು ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು “ಇವರಿಗೆ ಹೊಸ ಮಿದುಳನ್ನು ಜೋಡಿಸಬೇಕು"-ಎಂದು ಹೇಳಿದರು. ಗಾಜಿನ ಜಾಡಿಯಲ್ಲಿಟ್ಟಿದ್ದ ವಿಧವಿಧದ ಮಿದುಳುಗಳನ್ನು ತೋರಿಸುತ್ತ, ಅವುಗಳ ಬೆಲೆಯನ್ನು ವಿವರಿಸತೊಡಗಿದರು.

“ನೋಡಿ-ಇದು ಒಬ್ಬ ಶಾಲಾ ಅಧ್ಯಾಪಕನ ಮಿದುಳು. ಇದರ ಬೆಲೆ ಒಂದು ಲಕ್ಷ. ಇದು ಬಸ್ ಡ್ರೈವರ್ ಮಿದುಳು. ಇದರ ಬೆಲೆ ಐದು ಲಕ್ಷ. ಈ ಮಿದುಳು ಒಬ್ಬ ಉದ್ಯಮಿಯದ್ದು ಇದರ ಬೆಲೆ ಹತ್ತು ಲಕ್ಷ. ಇಗೋ ಇಲ್ಲಿದೆಯಲ್ಲ. ಈ ಮಿದುಳು ಒಬ್ಬ ರಾಜಕಾರಣಿಯದ್ದು. ಇದರ ಬೆಲೆ ಒಂದು ಕೋಟಿ ರೂಪಾಯಿ.

ಗಾಂಪ ಆಶ್ಚರ್ಯದಿಂದ “ಏನು ಡಾಕ್ಟರೇ, ರಾಜಕಾರಣಿಯ ಮಿದುಳಿಗೆ ಅಷ್ಟೇಕೆ ಬೆಲೆ?” ಎಂದು ಕೇಳಿದ.

ವೈದ್ಯರು “ನೋಡಿ ಗಾಂಪ, ಒಂದು ವಸ್ತು ಹೆಚ್ಚಾಗಿ ಬಳಕೆಯಾಗದಿದ್ದರೆ ಅದಕ್ಕೆ ಬೆಲೆ ಹೆಚ್ಚು ಎಂದು ನಿಮಗೆ ಗೊತ್ತಿಲ್ಲವೇ?” ಎಂದರು.

***

ಸಮುದ್ರದಲ್ಲಿ ಗಾಂಪ

ಗಾಂಪನಿಗೆ ದೈನಂದಿನ ಚಟುವಟಿಕೆಗಳಿಂದ ತೀರ ಬೇಸರವಾಯಿತೇನೋ, ತನ್ನ ಪತ್ನಿ ಶೈಲ ಮತ್ತು ಮಗ ಗುಂಡನನ್ನು ಕೂಡಿಕೊಂಡು ಪ್ರವಾಸಕ್ಕೆ ಹೊರಟ. ಕುಂದಾಪುರಕ್ಕೆ ಬಂದ ಗಾಂಪ, ಸಮೀಪದ ಮರವಂತೆಯ ಸುಂದರ ಬೀಚಿಗೆ ಭೇಟಿ ನೀಡಿದ.

ಪತ್ನಿ ಮತ್ತು ಮಗನನ್ನು ಒಂದೆಡೆ ಕೂರಿಸಿ, ತಾನು ಕಡಲ ಸ್ನಾನ ಮಾಡುತ್ತ ಆನಂದದಿಂದ ಇರುವಾಗ -ಗುಂಡ “ ಅಮ್ಮಾ, ನಾನೂ ಸಮುದ್ರದಲ್ಲಿ ಸ್ನಾನ ಮಾಡುತ್ತೇನೆ" ಎಂದು ಹಟ ಮಾಡತೊಡಗಿದ.

ಆಗ ಶೈಲ, “ ನೋಡು ಗುಂಡಾ ಸಮುದ್ರದಲ್ಲಿ ದೊಡ್ಡ ದೊಡ್ದ ಮೊಸಳೆ, ಶಾರ್ಕ್ ಗಳು ಇರುತ್ತವೆ. ಅವು ಕೆಲವು ಸಲ ಮನುಷ್ಯರನ್ನು ಹಿಡಿದು ತಿನ್ನುತ್ತವೆ. ಅಲ್ಲದೆ ಅಲೆಗಳೂ ಬಹಳ ದೊಡ್ಡದಾಗಿವೆ. ಆಕಸ್ಮಾತ್ ಒಂದು ಅಲೆ ಏನಾದರೂ ಎಳೆದುಕೊಂಡು ಹೋದರೆ ಮತ್ತೆ ಜೀವ ಸಹಿತ ಪಾರಾಗುವುದು ಬಹಳ ಕಷ್ಟ" ಎಂದು ವಿವರಿಸಿದಳು.

ಆಗ ಗುಂಡ “ ಮತ್ತೆ ಅಪ್ಪ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದರಲ್ಲಾ ಅಮ್ಮ" ಎಂದು ಕೇಳಿದ.

ಆಗ ಶೈಲ ಹೇಳಿದಳು - “ ನೋಡು ಗುಂಡಾ, ನಿನ್ನ ತಂದೆ ಜೀವ ವಿಮೆ ಮಾಡಿಸಿದ್ದಾರೆ. ಆದ್ದರಿಂದ ಅಡ್ಡಿ ಇಲ್ಲ"

***

ಪುರಾವೆ

ಒಮ್ಮೆ ಗಾಂಪ ಸಿನೆಮಾ ನೋಡಲು ಹೋದ ಸ್ವಲ್ಪ ಸಮಯದ ನಂತರ ಟಾಯ್ಲೆಟ್ಟಿಗೆ ಎದ್ದು ಹೊರ ನಡೆದ. ಮರಳಿ ಬಂದು ನೋಡಿದರೆ ತಾನು ಕೂತಿದ್ದ ಸೀಟಿನಲ್ಲಿ ಒಬ್ಬ ದಢೂತಿ ಹೆಂಗಸು ಕೂತಿದ್ದಳು. ಗಾಂಪ ಸೌಮ್ಯವಾಗಿಯೇ ಹೇಳಿದ “ನೋಡಿ, ನೀವು ನನ್ನ ಸೀಟಿನಲ್ಲಿ ಕುಳಿತಿದ್ದೀರಿ"

ದಢೂತಿ ಹೆಂಗಸು “ಇಲ್ಲಿ ನೀವು ಕುಳಿತಿದ್ದೀರಿ ಎನ್ನುವುದಕ್ಕೆ ಪುರಾವೆ ಏನಾದರೂ ಇದೆಯೇ?”

ಗಾಂಪ “ ನಾನು ಹೋಗುವ ಮುನ್ನ ಸೀಟಿನ ಮೇಲೆ ಐಸ್ ಕ್ರೀಂನ್ನು ಇಟ್ಟಿದ್ದೆ.”

***

(ಸಂಗ್ರಹ ಮೂಲ: ಬಾಯಿ ತುಂಬಾ ನಕ್ಕು ಬಿಡಿ )

ಚಿತ್ರ ಕೃಪೆ: ಅಂತರ್ಜಾಲ ತಾಣ