‘ಸಂಪದ ‘ ನಗೆಬುಗ್ಗೆ - ಭಾಗ ೧೦೭

‘ಸಂಪದ ‘ ನಗೆಬುಗ್ಗೆ - ಭಾಗ ೧೦೭

ಯಾವ ಭಾಷಣ?

ಮಾರ್ಕ್ ಟ್ವೈನ್ ಭಾಷಣ ನೀಡಿ ಮನೆಗೆ ತೆರಳುತ್ತಿದ್ದರು. ಅವರ ಮಿತ್ರರೊಬ್ಬರು ಮಧ್ಯ ಬಂದು, ‘ಇಂದು ನೀವು ಕೊಟ್ಟ ಭಾಷಣ ಬಹಳ ಅದ್ಭುತವಾಗಿತ್ತು.’ ಎಂದನು.

ಅದಕ್ಕೆ ಟ್ವೈನ್ ‘ಯಾವ ಭಾಷಣ?’ ಎಂದು ಕೇಳಿದನು.

ಮಿತ್ರನಿಗೆ ತಲೆಕೆಟ್ಟು ಹೋಯಿತು. ಈಗಷ್ಟೇ ಇಷ್ಟೊಂದು ಸುದೀರ್ಘವಾಗಿ ಭಾಷಣ ಕೊಟ್ಟು ಯಾವ ಭಾಷಣ ಎಂದು ನನ್ನನ್ನೇ ಕೇಳುತ್ತಿದ್ದಾನಲ್ಲ, ಇವನಾವ ಪುಣ್ಯಾತ್ಮ ಎಂದು ಮನದಲ್ಲೇ ಶಪಿಸಿ,

‘ಅದೇಕೆ ಹಾಗೆ ಕೇಳುತ್ತೀರಿ? ಈಗಷ್ಟೇ ಕೊಟ್ಟಿರಲ್ಲ ಆ ಭಾಷಣ’ ಎಂದನು.

ಟ್ವೈನ್ ಸಾವಧಾನದಿಂದ ನುಡಿದರು ‘ನಾನು ಒಟ್ಟು ಮೂರು ಭಾಷಣಗಳನ್ನು ಕೊಟ್ಟೆ. ಒಂದು ನನ್ನ ಮನದಲ್ಲಿಯೇ ನಾನು ಇದನ್ನು ಹೇಳಬೇಕು ಎಂದುಕೊಂಡದ್ದು, ಎರಡು ನಾನು ಹೇಳಿದ್ದು, ಮೂರು ನಾನು ಇವೆಲ್ಲವನ್ನೂ ಹೇಳಬೇಕಿತ್ತು ಎಂದು ಈಗ ಯೋಚಿಸುತ್ತಿರುವುದು. ಈಗ ಹೇಳು, ನೀನು ಹೇಳುತ್ತಿರುವುದು ಯಾವ ಭಾಷಣದ ಬಗ್ಗೆ?’

***

ಸಂಗೀತದಲ್ಲಿ ತಲ್ಲೀನ

ಮಾಜಾರ್ಟ್ ಒಬ್ಬ ಅದ್ಭುತ ಸಂಗೀತಕಾರ. ಸ್ನೇಹಿತನೆದುರಿಗೆ ಸಂಗೀತ ನುಡಿಸುತ್ತಿದ್ದ. ಸ್ನೇಹಿತ ಮೊಜಾರ್ಟ್ ನ ಸಂಗೀತವನ್ನು ಕಣ್ಮುಚ್ಚಿ ತೂಗಾಡುತ್ತ ಆಸ್ವಾದಿಸುತ್ತಿದ್ದ. ಮೊಜಾರ್ಟ್ ನ ಸಂಗೀತ ಮುಗಿಯಿತು. ಆದರೆ ಸ್ನೇಹಿತ ತೂಗುವುದನ್ನು ಬಿಡಲಿಲ್ಲ. ಒಂದೆರಡು ನಿಮಿಷ ಕಾದ ಬಳಿಕ ಮೊಜಾರ್ಟ್ ತನ್ನ ಸ್ನೇಹಿತನ ಮೈ ಕುಲುಕಿ,

‘ಸಂಗೀತ ಆಗಲೇ ನಿಂತಿತು, ನೀನೇಕೆ ಇನ್ನೂ ತೂಗುತ್ತಿದ್ದೀಯಾ?’ ಎಂದು ಕೇಳಿದ.

ಅದಕ್ಕೆ ಸ್ನೇಹಿತನೆಂದ, ‘ನೀನು ಸಂಗೀತ ನುಡಿಸುವಾಗ ನನಗೆ ಅದರ ಧ್ವನಿಯಷ್ಟೇ ಕೇಳಿಸಿತು. ತದನಂತರ ಅದು ಮೆಲ್ಲಮೆಲ್ಲನೇ ಮಾಯವಾಯಿತು. ಈಗ ನಾನು ಅದರ ಶೂನ್ಯತೆಯನ್ನು ಅನುಭವಿಸುತ್ತಿದ್ದೇನೆ. ಅಂದರೆ ನಾನು ಈಗ ಸಂಗೀತದ ಕೇಂದ್ರದಲ್ಲಿ ತಲ್ಲೀನನಾಗಿದ್ದೇನೆ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು.’ 

***

ಪಾಸ್ ವರ್ಡ್ ಕಿರಿಕಿರಿ !

ಬ್ಯಾಂಕ್ ಸಿಬ್ಬಂದಿ: ನಿಮ್ಮ ಹೊಸ ಪಾಸ್ ವರ್ಡ್ ಟೈಪ್ ಮಾಡಿರಿ.

ಶ್ರೀಮತಿ: ಆಲೂಗಡ್ಡೆಗಳು

ಬ್ಯಾಂಕ್ ಸಿಬ್ಬಂದಿ: ಸಾರ್, ನಿಮ್ಮ ಪಾಸ್ ವರ್ಡ್ ನಲ್ಲಿ ಕನಿಷ್ಟ ಎಂಟು ಅಕ್ಷರವಿರಬೇಕು.

ಶ್ರೀಮತಿ: ಸರಿ, ಬೇಯಿಸಿದ ಆಲೂಗಡ್ಡೆಗಳು

ಬ್ಯಾಂಕ್ ಸಿಬ್ಬಂದಿ: ಕ್ಷಮಿಸಿ, ಪಾಸ್ ವರ್ಡ್ ನಲ್ಲಿ ಕನಿಷ್ಟ ಒಂದು ಅಂಕಿಯಾದರೂ ಇರಬೇಕು.

ಶ್ರೀಮತಿ: ೩ ಬೇಯಿಸಿದ ಆಲೂಗಡ್ಡೆಗಳು

ಬ್ಯಾಂಕ್ ಸಿಬ್ಬಂದಿ: ಸಾರ್, ಪಾಸ್ ವರ್ಡ್ ನಲ್ಲಿ ಖಾಲಿ ಜಾಗ ಇರಬಾರದು.

ಶ್ರೀಮತಿ: ೭೫ದೊಡ್ಡನುಗ್ಗೇಕಾಯಿ೩ಬೇಯಿಸಿದಕಡಲೆ

ಬ್ಯಾಂಕ್ ಸಿಬ್ಬಂದಿ: ಕ್ಷಮಿಸಿ ಒಟ್ಟಿಗೆ ಎರಡು ಅಂಕಿಗಳು ಇರಬಾರದು

ಶ್ರೀಮತಿ: ೯ದೊಡ್ಡನುಗ್ಗೇಕಾಯಿ೨ಬೇಯಿಸಿದಕಡಲೆ

ಬ್ಯಾಂಕ್ ಸಿಬ್ಬಂದಿ: ಕ್ಷಮಿಸಿ, ಈ ಪಾಸ್ ವರ್ಡ್ ಈಗಾಗಲೇ ಇದೆ. ಬೇರೆಯದನ್ನು ಪ್ರಯತ್ನಿಸಿ.

ಶ್ರೀಮತಿ: ನೀವೂ ಬೇಡ, ನಿಮ್ಮ ಬ್ಯಾಂಕೂ ಬೇಡ ಎಂದು ಕೋಪದಿಂದ ಲ್ಯಾಪ್ ಟಾಪ್ ಮುಚ್ಚಿ ಬುಸುಗುಟ್ಟುತ್ತಾ ಹೊರಬಂದು, ಒಂದು ಲೋಟಾ ತಣ್ಣನೆಯ ಮಜ್ಜಿಗೆಯನ್ನು ಗಟಾ ಗಟಾ ಕುಡಿದಳು.

***

ಮನೆ ಕೆಲಸ

ಸೂರಿ: ನಾನು ಮದುವೆಗೆ ಮುಂಚೆ ಪಾತ್ರೆ ತೊಳೀತಾ ಇದ್ದೆ.

ಗಾಂಪ: ಮತ್ತೆ ಈಗ?

ಸೂರಿ: ಮದುವೆ ಆದ ಮೇಲೆ ನನ್ನ ಹೆಂಡತಿ ಹತ್ರ ಒಂದು ವರ್ಷ ಚೆನ್ನಾಗಿ ಇಂಗ್ಲಿಷ್ ಕಲಿತೆ.

ಗಾಂಪ: ಆಮೇಲೆ?

ಸೂರಿ: ಇವಾಗ ನಾನು ಪಾತ್ರೆ ವಾಷ್ ಮಾಡ್ತಿದ್ದೀನಿ. !

***

ಹೋಂ ವರ್ಕ್

ಸೂರಿ ಹೋಂ ವರ್ಕ್ ಮಾಡದೇ ಶಾಲೆಗೆ ಹೋಗಿದ್ದರಿಂದ ಗಣಿತದ ಮೇಷ್ಟ್ರು ಸಿಕ್ಕಾಪಟ್ಟೆ ಹೊಡೆದರು. ಸಿಕ್ಕಾಪಟ್ಟೆ ಕೋಪದಿಂದ ಸೂರಿ, ಸೀದಾ ಮೇಷ್ಟ್ರ ಮನೆಗೆ ಹೋಗಿ ಬಾಗಿಲು ತಟ್ಟಿದ. ಮೇಷ್ಟ್ರ ಹೆಂಡತಿ ಬಾಗಿಲು ತೆಗೆದರು.

ಸೂರಿ: ಇದು ಮೇಷ್ಟ್ರ ಮನೆ ತಾನೇ?

ಮೇಷ್ಟ್ರ ಹೆಂಡತಿ: ಹೌದು

ಸೂರಿ: ನೀವ್ಯಾರು?

ಮೇಷ್ಟ್ರ ಹೆಂಡತಿ: ನಾನು ಅವರ ಹೆಂಡತಿ.

ಸೂರಿ: ಹೌದಾ? ಮತ್ತೆ ಶಾಲೆ ಮುಗಿದ ಮೇಲೆ ಮೇಷ್ಟ್ರ ಹತ್ರ ಬರೋ ಹೆಂಗಸು ಯಾರು?

ಅಲ್ಲಿಗೆ ಸೂರಿ ಮೇಷ್ಟ್ರ ಮೇಲೆ ಸೇಡು ತೀರಿಸಿಕೊಂಡ.

***

ನಾಟಕ

ಸೂರಿ: ಅಪ್ಪ, ನಾಳೆ ನಾನು ನಾಟಕದಲ್ಲಿ ಗಂಡನ ಪಾರ್ಟ್ ಮಾಡ್ತಾ ಇದ್ದೀನಿ.

ಅಪ್ಪ: ಯಾಕೋ ಗೂಬೆ, ಬೇರೆ ಪಾತ್ರ ಸಿಗಲಿಲ್ಲವೇನೋ?

ಸೂರಿ: ಅಪ್ಪಾ, ಇದೇ ತುಂಬಾ ಸುಲಭದ್ದು ನಂಗೆ, ಯಾವುದೇ ಡೈಲಾಗ್ ಹೇಳೋ ಅಗತ್ಯಾನೇ ಇಲ್ಲ, ಇದ್ರಲ್ಲಿ.

***

ಕಳ್ಳತನ

ಕಳ್ಳತನ ಮಾಡುವುದೇ ವೃತ್ತಿ ಮಾಡಿಕೊಂಡಿದ್ದ ಸೂರಿಗೆ ಅವ ಹೆಂಡತಿ ಶ್ರೀಮತಿ ಹೀಗೆ ಹೇಳಿದಳು 

‘ಬೀರುವಿನಲ್ಲಿದ್ದ ಚಿನ್ನದ ಬಳೆಗಳು, ಚಿನ್ನದ ಸರ, ಕಾಣ್ತಾ ಇಲ್ಲ. ನೀವೇನಾದ್ರೂ ‘ವರ್ಕ್ ಫ್ರಂ ಹೋಂ’ ಮಾಡಿದ್ರಾ?’

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ