‘ಸುವರ್ಣ ಸಂಪುಟ’ದಿಂದ ಆಯ್ದ ಕವನಗಳು (ಭಾಗ ೧)

‘ಸುವರ್ಣ ಸಂಪುಟ’ದಿಂದ ಆಯ್ದ ಕವನಗಳು (ಭಾಗ ೧)

ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ. 

ಇಲ್ಲಿರುವ ಕವಿಗಳ ಕವನಗಳು ಬೇರೆ ಬೇರೆಯಾಗಿ ಪ್ರತ್ಯೇಕ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆದರೆ ಖ್ಯಾತ ಕವಿಗಳ ಅಪರೂಪದ ಕವಿತೆಗಳು ಒಂದೆಡೆ ಓದುವ ಅಪರೂಪದ ಅವಕಾಶ ಈ ಪುಸ್ತಕ ಒದಗಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿ ಮಂಜೇಶ್ವರ ಗೋವಿಂದ ಪೈ, ಪಂಜೆ ಮಂಗೇಶ ರಾಯರಿಂದ ಹಿಡಿದು ಸಿದ್ದಯ್ಯ ಪುರಾಣಿಕರ ತನಕ ಸುಮಾರು ೧೨೦ ಕವಿಗಳ ಕವನಗಳ ಸಂಗ್ರಹವಿದೆ.

‘ಸಂಪದ' ಈ ಪುಸ್ತಕದಲ್ಲಿರುವ ಕವನಗಳಿಂದ ಕೆಲವು ಕವನಗಳನ್ನು ಆಯ್ದು ಪ್ರಕಟಿಸಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಈ ಸಾಧನೆಗೆ ನಾವು ಆಭಾರಿಯಾಗಿದ್ದೇವೆ. ಕೆಲವು ಕವನಗಳು ಸುದೀರ್ಘವಾಗಿದ್ದರೂ ಅದರಲ್ಲಿರುವ ಭಾವನೆಗಳು ಅತ್ಯಮೂಲ್ಯವಾಗಿದ್ದು, ಅರ್ಥಗರ್ಭಿತವಾಗಿದೆ. ಇವುಗಳನ್ನು ಶತಮಾನದ ಕವನಗಳು ಎಂದರೂ ತಪ್ಪಿಲ್ಲ. ಈ ಸಂಗ್ರಹಿತ ಬರಹಗಳು ಪ್ರತೀ ಬುಧವಾರ ‘ಸಂಪದ' ದಲ್ಲಿ ಪ್ರಕಟವಾಗಲಿವೆ. 

ಮೊದಲಿಗೆ ಮಂಜೇಶ್ವರ ಗೋವಿಂದ ಪೈ ಅವರ ‘ಕನ್ನಡಿಗರ ತಾಯಿ' ಎಂಬ ಕವನದಿಂದ ನಮ್ಮ ಪಯಣವನ್ನು ಪ್ರಾರಂಭಿಸುವ..

ಕನ್ನಡಿಗರ ತಾಯಿ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯ।

ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ।

ನಮ್ಮ ತಪ್ಪನೆನಿತೊ ತಾಳ್ವೆ,

ಅಕ್ಕರೆಯಿಂದೆಮ್ಮ ನಾಳ್ವೆ,

ನೀನೆ ಕಣಾ ನಮ್ಮ ಬಾಳ್ವೆ,

ನಿನ್ನ ಮರೆಯಲಮ್ಮೆವು…

ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮವು

 

ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,

ಅಲೆಯ ಮಲೆಯ ಗಾಳಿಯೊ,

ಖಗಮೃಗೋರಗಾಳಿಯೊ,

ನದಿನಗರ ನಗಾಳಿಯೊ!

ಇಲ್ಲಿಲ್ಲದುದುಳಿದುದೆ?---

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? ೧೪

 

ಬುಗರಿ ಈಯೆ ಶಬರಿ ಕಾಯೆ ರಾಮನಲ್ಲಿ ಬಂದನೆ ?

ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?

ಪಾಂಡವರಜ್ಞಾತವಿದ್ದ,

ವಲಲಂ ಕೀಚಕನ ಗೆದ್ದ,

ಕುರುಕುಲ ಮುಂಗದನಮೆದ್ದ

ನಾಡು ನೋಡಿದಲ್ಲವೆ?

ನಂದನಂದನನಿಲ್ಲಿಂದ ಸಂಧಿಗಯ್ದುದಲ್ಲವೆ? ೨೧

 

ಶಕವಿಚೇತನಮರ ಶಾತವಾಹನಾಖ್ಯನೀ ಶಕಂ

ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ।

ಚಳುಕ್ಯ ರಾಷ್ಟ್ರಕೂಟರೆಲ್ಲಿ,

ಗಂಗರಾ ಕದಂಬರೆಲ್ಲಿ,

ಹೊಯ್ಸಳ ಕಳಚುರ್ಯರೆಲ್ಲಿ,

ವಿಜಯನಗರ ಭೂಪರು

ಆಳ್ವರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು? ೨೮

 

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ

ಮಧ್ಯಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,

ಶರ್ವ ಪಂಪ ರನ್ನರ,

ಲಕ್ಷ್ಮೀಪತಿ ಜನ್ನರ,

ಷಡಕ್ಷರಿ ಮುದ್ದಣ್ಣರ,

ಪುರಂದರ ವರೇಣ್ಯರ,

ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ । ೩೫

 

ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ।

ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂದುರಂ।

ಇಲ್ಲಿಲ್ಲದ ಶಿಲ್ಪಮಿಲ್ಲ;

ನಿನ್ನ ಕಲ್ಲೆ ನುಡಿವುದಲ್ಲ!

ನೆಮ್ಮ ತೃಷೆಗೆ ದಕ್ಕಿಸು---

ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು! ೪೨

 

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!

ಕನ್ನಡ ಕಸ್ತೂರಿಯನ್ನ

ಹೊಸತುಸಿರಿಂ ತೀಡದನ್ನ

ಸುರಭಿ ಎಲ್ಲಿ ? ನೀನದನ್ನ

ನವಶಕ್ತಿಯಿನೆಬ್ಬಿಸು---

ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು ! ೪೯

 

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು ?

ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೊಟೆಯು!

ಸೋಲ ಗೆಲ್ಲವಾರಿಗಿಲ್ಲ ?

ಸೋತು ನೀನೆ ಗೆದ್ದಿಯಲ್ಲ ?

ನಿನ್ನ ನಳಿವು ತಟ್ಟಲೊಲ್ಲ !--

ತಾಳಿಕೋಟೆ ಸಾಸಿರಂ

ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ! ೫೬

 

ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರೆ ಟಿಕ್ಕೆಯಂ,

ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯ

ನಮ್ಮೆದೆಯಂ ತಾಯೆ ಬಲಿಸು,

ಎಲ್ಲರ ಬಾಯಲ್ಲಿ ನೆಲಸು,

ನಮ್ಮ ಮನಮನೊಂದೆ ಕಲಸು!

ಇದನೊಂದನೆ ಕೋರುವೆ ---

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆವಂಗೆ ತೋರುವೆ? ೬೩

-ಮಂಜೇಶ್ವರ ಗೋವಿಂದ ಪೈ

 

ಕವಿ ಪರಿಚಯ: ಮಂಜೇಶ್ವರ ಗೋವಿಂದ ಪೈ (೧೮೮೩-೧೯೬೩) ಕನ್ನಡದ ಹಿರಿಯ ಕವಿ, ಸಂಶೋಧಕ, ವಿಮರ್ಶಕರಲ್ಲಿ ಒಬ್ಬರು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಎಫ್. ಎ. ಪದವಿ ಪಡೆದರು. ೧೯೪೦ರಲ್ಲಿ ಮದರಾಸು ಸರಕಾರವು ‘ರಾಷ್ಟ್ರ ಕವಿ' ಬಿರುದನ್ನು ನೀಡಿತು. ೧೯೫೦ರಲ್ಲಿ ಮೂಮ್ಬಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮುಖ್ಯಕೃತಿಗಳು : ಗಿಳಿವಿಂಡು, ಗೊಲ್ಗೋಥಾ ಮತ್ತು ವೈಶಾಖಿ, ನಂದಾದೀಪ, ಹೃದಯರಂಗ, ಚಿತ್ರಭಾನು, ಸಂಶೋಧನಾ ಲೇಖನಗಳು, ಹೆಬ್ಬೆರಳು ಇತ್ಯಾದಿ