‘ಸುವರ್ಣ ಸಂಪುಟ’ (ಭಾಗ ೩) - ಸ.ಪ.ಗಾಂವಕರ
‘ಸುವರ್ಣ ಸಂಪುಟ' ಪುಸ್ತಕದಿಂದ ನಾವು ಈ ಬಾರಿ ಆಯ್ದುಕೊಂಡದ್ದು ಕವಿ ಸ.ಪ.ಗಾಂವಕರ ಅವರ ಕವನ ‘ಕವಿ'. ಈ ಕವನ ಬರೆದ ಕವಿಯ ಬಗ್ಗೆ ಬಹುತೇಕ ಮಂದಿಗೆ ತಿಳಿದಿರಲಾರದು. ಕವಿಯ ಬಗ್ಗೆ ಸಣ್ಣ ವಿವರವನ್ನು ಕವನದ ಕೊನೆಯಲ್ಲಿ ಕೊಡಲಾಗಿದೆ. ಈ ಸುವರ್ಣ ಸಂಪುಟದ ಮೂಲಕ ಖ್ಯಾತ ಕವಿಗಳಲ್ಲದೇ ಪ್ರತಿಭಾವಂತರಾಗಿದ್ದೂ ಎಲೆ ಮರೆಯ ಕಾಯಿ ಆಗಿ ಉಳಿದು ಹಾಗೆಯೇ ಮರೆಯಾಗಿ ಹೋದ ಕವಿಗಳೂ ಪರಿಚಯವಾಗಲಿದ್ದಾರೆ ಎಂಬುದು ಖುಷಿಯ ಸಂಗತಿ. ಎಂದಿನಂತೆ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ.
ಕವಿ ಪರಿಚಯ: ಸ.ಪ.ಗಾಂವಕರ ಅವರ ಪೂರ್ಣ ಹೆಸರು ಸಣ್ಣಪ್ಪ ಪರಮೇಶ್ವರ ಗಾಂವಕರ (೧೧, ಜನವರಿ ೧೮೮೫- ೧೯೭೨). ‘ಸಪ' ಎಂಬ ಹೆಸರಿನಲ್ಲೂ ಇವರು ಕವನಗಳನ್ನು ಬರೆದಿದ್ದಾರೆ. ಇವರು ಕವಿಯಾಗಿದ್ದರೂ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದರು. ಬ್ರಿಟೀಷ್ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿ ಜೈಲುವಾಸವನ್ನೂ ಅನುಭವಿಸಿದ್ದರು. ಅಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಜಿ.ಖೇರ್ ಇವರ ಸಂಪುಟದಲ್ಲಿ ಸಹಾಯಕ ಮಂತ್ರಿಯಾಗಿಯೂ (೧೯೪೬-೪೭) ಕಾರ್ಯ ನಿರ್ವಹಿಸಿದ್ದರು.
೧೮೮೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ತೊರ್ಕೆಯಲ್ಲಿ ಜನಿಸಿದವರು. ಇವರು ಬಿ.ಎ.ಪದವೀಧರರು. ತದಡಿಯ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾರಾಗಿದ್ದರು. ಹುಬ್ಬಳ್ಳಿಯ ನಗರಪಾಲಿಕೆಯಲ್ಲಿ ಆಫೀಸರ್ ಆಗಿಯೂ ಸೇವೆ ಸಲ್ಲಿಸಿದ್ದರು. ೧೯೪೨ರಲ್ಲಿ ತಮ್ಮ ನಿವೃತ್ತಿಯ ಬಳಿಕ ಸ.ಪ. ಅವರು 'ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿದರು. ೧೯೩೬ರಲ್ಲಿ ಉತ್ತರ ಕನ್ನಡದ ಗೋಕರ್ಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಗಾಂವಕರ್ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇವರು ಮುಗಿಲು, ಪ್ರಕೃತಿ-ಪ್ರೀತಿ, ಪ್ರೇರಣೆ-ಶೋಧನೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರು ಖ್ಯಾತ ಕವಿ ರವೀಂದ್ರನಾಥ ಠಾಗೋರ್ ಅವರ ನೋಬೆಲ್ ಪುರಸ್ಕೃತ ಕೃತಿ ‘ಗೀತಾಂಜಲಿ’ಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗಾವಂಕರನ್ನು ಎಲ್ಲರೂ ಸಜ್ಜನ ವ್ಯಕ್ತಿ ಎಂದು ಗೌರವಿಸುತ್ತಿದ್ದರು.
ಕವಿ
ಕವಿಯ ತಿಳಿಯಲು ಕವಿಗೆ ಹೊಳೆಯದು
ಹೊಳೆದುದಾರಿಗೆ ಕವಿಜನ
ಕವಿಗೆ ಹೊಳೆದುದು ಕವಿಗೆ ತಿಳಿಯದು
ತಿಳಿದುದಾರಿಗೆ ಕವಿಜನ
ಕವಿಯು ಕಾಣದ ಕವಿಯ ಕಂಡರು
ಭಲರೆ ಭಪ್ಪರೆ ಬಹುಜನ
ಕನಸು ನನಸಿನ ಕನಕ ಸೃಷ್ಟಿಯ
ಬೆನಕನಾಗಿಹೆ ಭವದಲಿ
ಘನತರದ ಸೌಂದರ್ಯಶಾಲಿನಿ-
ಗನುವುಗೊಂಡಿಹೆ ಜಗದಲಿ
ಚಣ ಚಣಕೆ ಕಣಿಗೊಂಬ ಕರುಳಿನ
ಖಣಿಯ ಖಣಿ ಖಟಿಲಾಗಿಹೆ
ಪದುಳದಲಿ ಪದ ಪದೆದು ನಾದದಿ
ವಿದಯ ಹೊಂದಿದೆ ಭಾವದಿ
ವಿದಿತ ವ್ಯಾಕರ್ಣಾದಿ ತೀರ್ಥರ
ವಿಧಿಬರಹ ಬದಿಗಿಟ್ಟಿಹೆ
ಮುದಿತ ಮಾತ್ರಾ ಮೈತ್ರಿ ಸಮುದಿತ
ಪದಗಳಾಗಿಹೆ ಹೃದಯದಿ
ಗುರುವು ಗತಿಗೊಡೆ ಪದಗಳೆಂಬವು
ಅರರೆ, ಬರುತಿವೆ ಭಾಗ್ಯದಿ
ಕರೆದು ಬರುತಿವೆ ಕವಿದು ಬರುತಿವೆ
ಮೊರೆದು ಬರುತಿವೆ ಮೋದದಿ
ಅರಿವಿಗರಿಯದ ಶಬ್ದ ಸೃಷ್ಟಿಯ
ಚಿತ್ರವನ ವೈಚಿತ್ರ್ಯದಿ
ಗುಡುಗಿನಾರ್ಭಟೆ ಸಿಡಿಲಿನಾರ್ಭಟೆ
ಕಡಲಿನಾರ್ಭಟೆಯಾಗಿಹೆ
ಪೊಡವಿ ಹರ್ಷೋತ್ಕರ್ಷ ವರ್ಷದ
ವಿಡಿವ ಮಾರ್ದನಿ ನಾನಿಹೆ
ಕಡೆಗೆ ಯೌಗಿಕ ಸಾಮ್ಯವಾದವ
ಬೆಡಗ ಗೆಡೆಗೊಂಡಾಗಿಹೆ
ಗಾನಗಂಗಾ ಮಂಗಳಾಂಗಿಯ
ದ್ವಾನವೆದ್ದಿದೆ ಧ್ಯಾನದಿ
ಸಾನುರಾಗ ಸನಾತನಾದಿಯ
ವಾಣಿವೀಣಾ ಕ್ವಣಿತದಿ
ಕಾಣಲಾರೆನು ಕಾಣಲಾರೆನು
ವೇಣುವೊಂದನು ವಾಣಿಗೆ
ಚಿಂತೆಗರಿಯದನಂತ ಸೃಷ್ಟಿಯ-
ನಂತ ನಾದ ನಿನಾದದಿ
ಸಂತೆಯಾಗಿದೆ ಚಿಂತೆಯಾಗಿದೆ
ಅಂತವಂತ ಶರೀರದಿ
ಅಂತು ಇಂತಿದೆ ಇಂತು ಅಂತಿದೆ
ಎಂತೋ ಮುತ್ತಿದೆ ಮೋಹದಿ
ಶಬ್ದ ಸೃಷ್ಟಿಯು ಸ್ತಬ್ಧವಾಗಿದೆ
ಅಬ್ದಿಗಳುಕದ ಹೃದಯದಿ
ಊರ್ವಿಯೂರ್ವಿಯ ಸಂಧಿ ಸಂಗರ
ವರ್ಮವಡಗಿದೆ ವಹಿಲದಿ
ಕರ್ಮಭೂಮಿಯ ಧರ್ಮ ಹರ್ಮ್ಯದ
ಮರ್ಮ ನೇಲೆಯೊಳಾಡಿದೆ
***
ಮಾಹಿತಿ ಕೃಪೆ: ಸುವರ್ಣ ಸಂಪುಟ