‘ಸುವರ್ಣ ಸಂಪುಟ' - ಉಪಸಂಹಾರ

‘ಸುವರ್ಣ ಸಂಪುಟ' - ಉಪಸಂಹಾರ

‘ಸಂಪದ' ಪುಟಗಳಲ್ಲಿ ಕಳೆದ ೧೨೦ ವಾರಗಳಿಂದ ಪ್ರಕಟವಾಗುತ್ತಿದ್ದ ಲೇಖನ-ಕಾವ್ಯ ಮಾಲೆ ‘ಸುವರ್ಣ ಸಂಪುಟ' ದ ಕವಿಗಳ ಆಯ್ದ ಕವನಗಳು ಕಳೆದ ವಾರ ಮುಕ್ತಾಯವಾಗಿದೆ. ೧೨೦ ವಾರಗಳು, ೧೨೦ ಕವಿಗಳು, ಸುಮಾರು ೧೩೫ ಆಯ್ದ ಕವನಗಳು ಪ್ರಕಟವಾಗಿವೆ. ಎರಡು ವರ್ಷಗಳ ಹಿಂದೆ ನಾನು ಈ 'ಸುವರ್ಣ ಸಂಪುಟ' ಕೃತಿಯಿಂದ ಒಂದೊಂದೇ ಕವಿಗಳ ಕವನವನ್ನು ಪ್ರಕಟಿಸುವ ಮೊದಲು ಆ ಕವಿಗಳ ಬಗ್ಗೆಯೂ ಸ್ವಲ್ಪ ವಿವರಗಳನ್ನು ನೀಡಲು ಪ್ರಯತ್ನಿಸಿದೆ. ಖ್ಯಾತ ನಾಮ ಕವಿಗಳ ಬಗ್ಗೆ ಮಾಹಿತಿಗಳು ಸುಲಭವಾಗಿ ದೊರೆತವು. ಆದರೆ ಕೆಲವು ಅಪರೂಪದ, ಅಲ್ಪಾಯುಷಿ ಕವಿಗಳ ಮಾಹಿತಿಗಳು ಎಲ್ಲೂ ಸಿಗದೇ ಹೋದವು. ಕೆಲವರ ಮಾಹಿತಿ ಸಿಕ್ಕರೂ ಅವರದೊಂದು ಫೋಟೋ ಕೂಡಾ ಸಿಗಲಾರದೇ ಹೋಯಿತು. 

ಕನ್ನಡ ನಾಡು ಕಂಡ ಅಪರೂಪದ ಶ್ರೇಷ್ಟ ಕವಿಗಳ ಬಗ್ಗೆ ಓದುಗರಿಗೆ ಇನ್ನಷ್ಟು ತಿಳಿಸುವ ಅವಕಾಶ ತಪ್ಪಿ ಹೋದದ್ದಕ್ಕೆ ನನಗೆ ನೋವಿದೆ. ಈ ಸಂಪುಟದಲ್ಲಿದ್ದ ಕೆಲವು ಕವಿಗಳ ಕವನಗಳು ಅತೀ ದೀರ್ಘವಾಗಿರುವುದರಿಂದ ಅನಿವಾರ್ಯವಾಗಿ ಕೈಬಿಟ್ಟಿರುವೆ. ಒಂದಕ್ಕಿಂತ ಅಧಿಕ ಕವನಗಳಿದ್ದ ಕವಿಗಳ ಆಯ್ದ ಒಂದು ಅಥವಾ ಎರಡು ಕವನಗಳನ್ನು ಪ್ರಕಟಿಸುವ ಅನಿವಾರ್ಯತೆ ನನಗೆ ಎದುರಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ, ತಮ್ಮ ಜೀವಿತಾವಧಿಯ ಅರ್ಧಾಂಶವನ್ನು ಆ ಸಮಯದಲ್ಲೇ ಕಳೆದ ಕವಿಗಳ ಬಗ್ಗೆ ತಿಳಿದುಕೊಳ್ಳುವುದೇ ಒಂದು ಸೊಗಸು.

ಅಂದಿನ ಕವಿಗಳು ತಾವು ಬರೆಯಲಿರುವ ಕವನಗಳಿಗೆ ನೀಡುತ್ತಿದ್ದ ಮಹತ್ವ, ಅದರ ಕಾವ್ಯ ವಸ್ತು, ಸಂದೇಶ ಎಲ್ಲವೂ ಅನುಕರಣೀಯ ಎಂದರೆ ತಪ್ಪಾಗದು. ಈ ನಿಟ್ಟಿನಲ್ಲಿ ಈ ‘ಸುವರ್ಣ ಸಂಪುಟ' ಕೃತಿಯ ಸಂಪಾದಕರುಗಳಾದ ಪು ತಿ ನರಸಿಂಹಾಚಾರ್, ದೇ ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಮತ್ತು ಪ್ರಭುಶಂಕರ ಇವರ ಶ್ರಮ ಶ್ಲಾಘನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಪ್ರಕಟಿಸಿದ ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ಇಲಾಖೆಯೂ ಅಭಿನಂದನೀಯ. ೭೦ರ ದಶಕದಲ್ಲಿ ಬಿಡುಗಡೆಯಾದ ಈ ಕೃತಿ ಮರು ಮುದ್ರಣ ಕಂಡಿದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈಗಲೂ ಈ ಕೃತಿಯನ್ನು ಪರಿಷ್ಕೃತವಾಗಿಸಿ ಮುದ್ರಿಸಿದರೆ, ಅಂದರೆ ಇನ್ನಷ್ಟು ಹೊಸ ಕವಿಗಳ ಕವನಗಳನ್ನು ಸೇರಿಸಿ, ಲಭ್ಯ ಕವಿಗಳ ಪರಿಚಯ, ಭಾವಚಿತ್ರಗಳನ್ನು ಅಳವಡಿಸಿಕೊಂಡರೆ ಅದೊಂದು ಸಂಗ್ರಾಹ್ಯ ಕೃತಿಯಾಗಬಹುದು ಎನ್ನುವ ನಂಬಿಕೆ ನನಗಿದೆ.

ಮುಂದಿನ ವಾರದಿಂದ ೧೯೫೭ರಲ್ಲಿ ಮುದ್ರಣವಾದ ‘ಹೊಸಗನ್ನಡ ಕಾವ್ಯಶ್ರೀ’ ಎಂಬ ಪುಸ್ತಕದಲ್ಲಿರುವ ಕವಿಗಳ ಆಯ್ದ ಕವನಗಳನ್ನು ಪ್ರಕಟಿಸಲಿದ್ದೇನೆ. ಈ ಕೃತಿಯಲ್ಲಿನ ಕವನಗಳ ಸಂಗ್ರಾಹಕರು ವರ ಕವಿ ದ ರಾ ಬೇಂದ್ರೆ ಮತ್ತು ಎಂ ಮರಿಯಪ್ಪ ಭಟ್ ಇವರು. ಈ ಪುಸ್ತಕದ ಪ್ರಕಾಶಕರು ಶ್ರೀ ಕೃಷ್ಣಾ ಪ್ರೆಸ್, ಬೆಂಗಳೂರು. ಈ ಕೃತಿಯನ್ನು ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟ ಮಾಡಲಾಗಿದೆ. ಈ ಕೃತಿಯಲ್ಲಿರುವ ಅಪರೂಪದ ಕವನಗಳನ್ನು ಆಸ್ವಾದಿಸಲು ನೀವು ಮುಂದಿನ ವಾರದವರೆಗೆ ಕಾಯುವುದು ಅನಿವಾರ್ಯ. ಕಾಯುವಿರಲ್ಲವೇ...?