‘ಸುವರ್ಣ ಸಂಪುಟ' (ಭಾಗ ೧೦೨) - ಕೆ ಪಿ ಪೂರ್ಣಚಂದ್ರ ತೇಜಸ್ವಿ

‘ಸುವರ್ಣ ಸಂಪುಟ' (ಭಾಗ ೧೦೨) - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ) ಅವರು ಕನ್ನಡದ ನವ್ಯ ಸಾಹಿತ್ಯದ ಕಾಲದ ಪ್ರಮುಖ ಸಾಹಿತಿ. ಇವರು ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ರಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಇವರ ತಂದೆ ಖ್ಯಾತ ಸಾಹಿತಿ, ರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿದ್ದ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ). ತಾಯಿ ಹೇಮಾವತಿ. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಪಡೆದು, ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ ಎ ಪದವಿಯನ್ನು ಗಳಿಸಿದರು. 

ಬಾಲ್ಯದಿಂದಲೇ ಸಾಹಿತ್ಯಕ ವಾತಾವರಣದಲ್ಲಿ ಬೆಳೆದ ತೇಜಸ್ವಿ ಅವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಕವನ, ಕಥೆ, ಕಾದಂಬರಿ, ಅನುವಾದ ಇವೆಲ್ಲವೂ ತೇಜಸ್ವಿಯವರ ಬರವಣಿಗೆಯ ವಿಧಗಳು. ಇವರು ಬರೆದ ಮೊದಲ ಕಥೆ ‘ಲಿಂಗ ಬಂದ'. ಈ ಕಥೆಗಾಗಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಒದಗಿ ಬಂತು. ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಉಳಿದವರಂತೆ ಅಧ್ಯಾಪನಾ ವೃತ್ತಿಯನ್ನು ಬಯಸದೇ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮೂಲಕ ಬದುಕಿನಲ್ಲಿ ನೆಮ್ಮದಿಯನ್ನು ಕಂಡುಕೊಂಡರು. ಇವರು ಉತ್ತಮ ಛಾಯಾಗ್ರಾಹಕರೂ ಹೌದು. ಇವರು ಕ್ಲಿಕ್ಕಿಸಿದ ವನ್ಯಜೀವಿಗಳ ಚಿತ್ರಗಳು ನೋಡುಗರ ಕಣ್ಮನ ಸೂರೆಗೊಳ್ಳುವುದು ಖಚಿತ.

ರೈತ ಚಳುವಳಿಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ತೇಜಸ್ವಿಯವರು ನಿಷ್ಟುರವಾದಿಗಳಾಗಿದ್ದರು. ನೇರ ಮಾತುಗಳಿಂದ ಹಲವಾರು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದರು, ಆದರೆ ಇವರ ಜ್ಞಾನ ಭಂಡಾರ ಅಪಾರ. ಕಾಡು, ಪ್ರಾಣಿ-ಪಕ್ಷಿ ಮತ್ತು ಪರಿಸರ ಬಗ್ಗೆ ಇವರ ಜ್ಞಾನ ಕೋಶ ಬಹುದೊಡ್ದದು.  ‘ಪೂಚಂತೇ’ ಇವರ ಕಾವ್ಯನಾಮ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಕರ್ವಾಲೋ’ ಎಂಬ ಕೃತಿಯಲ್ಲಿ ಇವರು ಬರೆದ ಹಾರುವ ಓತಿಕ್ಯಾತ ಬಗೆಗಿನ ವಿವರಗಳು ಅತ್ಯದ್ಭುತ. 

ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು -ಕವನ ಸಂಕಲನ, ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ಕಾಡು ಮತ್ತು ಕ್ರೌರ್ಯ ಇವರ ಕಾದಂಬರಿಗಳು, ಸ್ವರೂಪ, ನಿಗೂಢ ಮನುಷ್ಯರು -ನೀಳ್ಗತೆಗಳು, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್ ಆಫೀಸು- ಕಥಾ ಸಂಕಲನಗಳು, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಪ್ರವಾಸ ಕಥನ, ವ್ಯಕ್ತಿ ವಿಶಿಷ್ಟ ಸಿದ್ಧಾಂತ, ವಿಮರ್ಶೆಯ ವಿಮರ್ಶೆ, ಹೊಸ ವಿಚಾರಗಳು - ವಿಮರ್ಶಾ ಕೃತಿಗಳು.

ತೇಜಸ್ವಿ ಅವರಿಗೆ ಖ್ಯಾತಿಯನ್ನು ತಂದುಕೊಳ್ಳ ಕೃತಿಗಳೆಂದರೆ ವಿಜ್ಞಾನ ಮತ್ತು ಪರಿಸರಕ್ಕೆ ಸಂಬಂಧಿಸಿದ ಕೃತಿಗಳು. ಪರಿಸರದ ನಡುವೆ ಬಾಳಿ ಬದುಕಿದ ಇವರು ತಮ್ಮ ಬರಹಗಳಲ್ಲೂ ಅದೇ ಛಾಪನ್ನು ಮೂಡಿಸಿದ್ದಾರೆ. ಪರಿಸರದ ಕತೆ, ಮಿಸ್ಸಿಂಗ್ ಲಿಂಕ್, ಸಹಜ ಕೃಷಿ, ಏರೋಪ್ಲೇನ್ ಚಿಟ್ಟೆ ಮತ್ತು ಇತರೆ ಕಥೆಗಳು, ಹಕ್ಕಿಪುಕ್ಕ, ವಿಸ್ಮಯ ೧,೨,೩, ನಡೆಯುವ ಕಡ್ಡಿ ಹಾರುವ ಎಲೆ - ವಿಜ್ಞಾನ ಮತ್ತು ಪರಿಸರ ಸಂಬಂಧಿ ಕೃತಿಗಳು, ಇವರ ಮಿಲೇನಿಯಂ ಸರಣಿಯ ಸುಮಾರು ೧೭ ಬರಹಗಳು ಬಹಳ ಸೊಗಸಾಗಿವೆ. ಅವುಗಳಲ್ಲಿ ಹುಡುಕಾಟ, ಜೀವನ ಸಂಗ್ರಾಮ, ಫೆಸಿಫಿಕ್ ದ್ವೀಪಗಳು, ಚಂದ್ರನ ಚೂರು, ವಿಸ್ಮಯ ವಿಶ್ವ, ಮಹಾಪಲಾಯನ ಪ್ರಮುಖವಾದುವುಗಳು. ಆಂಗ್ಲ ಸಾಹಿತಿ ಕೆನತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹವನ್ನು ಕಾಡಿನ ಕಥೆಗಳು ಎಂಬ ಸರಣಿಗಳಲ್ಲಿ ಹೊರತಂದಿದ್ದಾರೆ. ಬೆಳ್ಳಂದೂರಿನ ನರಭಕ್ಷಕ, ಪೆದ್ದಚೆರುವಿನ ರಾಕ್ಷಸ, ಮುನಿಶಾಮಿ ಮತ್ತು ಮಾಗಡಿ ಚಿರತೆ ಇತ್ಯಾದಿ. ಜಿಮ್ ಕಾರ್ಬೆಟ್ ಅವರ ಕೃತಿಯನ್ನು ‘ರುದ್ರಪ್ರಯಾಗದ ಭಯಾನಕ ನರಭಕ್ಷಕ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ‘ಮಾಯೆಯ ಮುಖಗಳು' ಎಂಬ ಚಿತ್ರ ಸಂಕಲನವನ್ನೂ ಹೊರತಂದಿದ್ದಾರೆ.

ಇವರ ಬರಹಗಳಿಗೆ ಅಪಾರ ಅಭಿಮಾನಿಗಳಿದ್ದರು. ಅವರ ನಿಧನದ ಬಳಿಕವೂ ಅವರ ಪುಸ್ತಕಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ತೇಜಸ್ವಿಯವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಚಿದಂಬರ ರಹಸ್ಯ ಕೃತಿಗೆ ಉತ್ತಮ ಕೃತಿ ಬಹುಮಾನ, ೨೦೦೧ರಲ್ಲಿ ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಅಬಚೂರಿನ ಪೋಸ್ಟ್ ಆಫೀಸು ಹಾಗೂ ತಬರನ ಕಥೆ ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿವೆ. ‘ಕಿರಗೂರಿನ ಗಯ್ಯಾಳಿಗಳು’ ಕೃತಿಯೂ ಚಲನಚಿತ್ರವಾಗಿದೆ.  

ತೇಜಸ್ವಿ ಅವರ ಪತ್ನಿ ರಾಜೇಶ್ವರಿ, ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಇವರು ತಮ್ಮ ಮೂಡಿಗೆರೆಯ ಮನೆ ‘ನಿರುತ್ತರ' ದಲ್ಲಿ ಎಪ್ರಿಲ್ ೫, ೨೦೦೭ರಲ್ಲಿ ನಿಧನ ಹೊಂದಿದರು. ಇವರ ಒಂದು ಕವನ ‘ಸುವರ್ಣ ಸಂಪುಟ' ದಲ್ಲಿ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

ಬಚ್ಚಲ ಜಗತ್ತು

ಮಂಜಿಳಿವ ಚಳಿಗಾಲದಲ್ಲಿ

ನಮ್ಮೂರ ಬಚ್ಚಲ ಸ್ನಾನ ಎಂಥ ಸುಖ ಅಂತಿ-

ಆವಿ ಬಹ ಬಿಸಿನೀರ ವಾಸನೆಯಲ್ಲಿ

ಕೆಂಪು ತಾಮ್ರದ ಚಂದ್ರಮುಖ ಚೆಂಬು

ಹಲ್ಲ ಕಿರಿವುದುರಿವ ಬೆಂಕಿಕಡೆಗೆ.

ಹದನೀರ ಮೊಗೆಮೊಗೆದು ಸುರಿದಾಗ

ಬಾಳು ಸಾರ್ಥಕವೆನಿಸಿ

ಅಟ್ಟಕ್ಕು ಏರುವುದು ಬೋಧಿವೃಕ್ಷದ ಪಿತ್ಥ.

 

ನಸುಗತ್ತಲಲ್ಲಿ ಬಿಸಿನೀರ ಬಾಲೆ

ನನ್ನ ಬೆತ್ತಲು ಮೈಯ್ಯ ತಬ್ಬಿದರೋ;

ಕಾಣದಂತೆ ಹೊರಜಗ ಮುಸುಗಿದ್ದರೂ ಮಂಜು ;

ಮುತ್ತದಸ್ಪಷ್ಟ ಕೇವಲ ಜ್ಞಾನ

ಈ ಚೆಂಬು ಬಿಂದಿಗಿ ಹಂಡೆ ನಡುವೆ.

 

ಹೀಗಿದ್ದರೂ ಏನಾಯ್ತು ಒಮ್ಮೆ

ಈ ಬಚ್ಚಲ ಜಗತ್ತಿನಲ್ಲಿ

ತಲೆಗೇರಿದ್ದ ಸೋಪು

ಉಜ್ಜಿದಾಗುಕ್ಕಿ ಆವರಿಸಿತ್ತು ಕಣ್ಣ.

ನಾನಾದೆ ತಡವರಿಸಿ ಗೋಡೆ

ಮುಕ್ತಿ ಪತ್ತೆ ಹಚ್ಚುವ ಚಿಣ್ಣ.

ನನಗಾಗ ಎರಡೇ ಎರಡರಿವು.

ಮೇಲಾಕಾಶ ಕೆಳಗೀ ತಾಯಿ ಪೃಥಿವೀ.

ಇಕ್ಕಟ್ಟಿನಲ್ಲಿ ಚಾಚಿ ಕಯ್ಯ

ತಡವರಿಸಿದಾಗ ಸುಟ್ಟಿತ್ತು ಬಿಸಿ ಹಂಡೆ.

ಚೀಕು ಹೊಕ್ಕಿತ್ತೆಡಗೈಗೆ

ತಂಬಿಗಿ ಎಂದು ತಡವಿ ಕುಂಟೆ.

 

ಅವತಾರ ಪರಂಪರೆಯ ಮಂಪರಿನಲ್ಲಿ 

ನಾ ತಿಳಿದಿದ್ದೆ ಕ್ರಿಸ್ತ ಬುದ್ಧರ ಪಡೆ ಎಲ್ಲ

ಕ್ಯೂ ಹಚ್ಚಿ ಕಾದಿದ್ದಾರೆಂದು.

ಎತ್ತಲಿದ್ದಾನೆಂದು ಅಧಃ ಪಾತಾಳಕ್ಕೆ

ಧುಮುಕಬೇಕೇ?

 

‘ಅಯ್ಯ ಮಹರಾಯಾ,

ನೀ ಯಾವ ಕೋತಪ್ಪ ನಾಯ್ಕ?

ಬದಲು ಪ್ರೆಸೆಂಟೆನ್ನುವ ವಿದ್ಯಾ

ನಿಷ್ಣಾತ ಪ್ರಭೃತಿಗಳೋ

ಮುಕ್ಕಿದರು ಮಣ್ಣ,

ಇದು ಯಾವೂರ ಶಿಸ್ತೋ?

ನೀ ಹೆಳವನಾದುದಕ್ಕವ

ಕುಂಟಲಾರ ಕಣೋ’

ಓ ಇಲ್ಲೆಗೋ ಬಂದೆ.

ಆ ಮೇಲೆ ತಂಬಾಳಿಗೆ ತುಂಬ ನೀರ

ಸುರಿದು ತಲೆ ಮೇಲೆ ಬಿಡುಗಡೆಗೊಂಡೆ.

ಆ ಬದಿ ಆಕಾಶಕ್ಕೇರೇ ಇತ್ತು ಹೊಗೆ.

ತಿಳಿಹಸುರು ಕೆಸುವಿನೆಲೆ

ಥಂಡಿ ಕೊಚ್ಚೆಗೆ ಬಾಗೆ,

ಲೊಚ್ಚೆಂದ ಹಲ್ಲಿ ಸರಿದಿತ್ತು

ಮಾಡ ಮರೆಗೆ.

(‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವನ)