‘ಸುವರ್ಣ ಸಂಪುಟ' (ಭಾಗ ೧೦೪) - ಗಿರಡ್ಡಿ ಗೋವಿಂದರಾಜ
ಕನ್ನಡದ ಶ್ರೇಷ್ಟ ವಿಮರ್ಶಕರಲ್ಲಿ ಓರ್ವರಾದ ಗಿರಡ್ಡಿ ಗೋವಿಂದರಾಜ ಇವರು ಜನಿಸಿದ್ದು ಸೆಪ್ಟೆಂಬರ್ ೨೩, ೧೯೩೯ರಲ್ಲಿ. ಇವರು ಹುಟ್ಟಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರ ಎಂಬ ಗ್ರಾಮದಲ್ಲಿ. ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣವು ಅವರ ಹುಟ್ಟೂರಾದ ಅಬ್ಬಿಗೇರಿಯಲ್ಲೇ ನಡೆಯಿತು. ಮಾಧ್ಯಮಿಕ ಶಿಕ್ಷಣವನ್ನು ರೋಣದಲ್ಲಿ ಪೂರೈಸಿದರು. ೧೯೬೧ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ ಎ ಪದವಿ ಹಾಗೂ ೧೯೬೩ರಲ್ಲಿ ಇಂಗ್ಲೀಷ್ ನಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡರು. ನಂತರ ೧೯೬೯ರಲ್ಲಿ ಕನ್ನಡದಲ್ಲೂ ಎಂ ಎ ಪದವಿಯನ್ನು ಪಡೆದುಕೊಂಡರು. ೧೯೮೩ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದಿಂದ ಶೈಲಿ ಶಾಸ್ತ್ರದಲ್ಲಿ ಪಿ ಹೆಚ್ ಡಿ ಯನ್ನು ಪಡೆದುಕೊಂಡರು.
೧೯೬೩ರಲ್ಲಿ ಗಿರಡ್ಡಿಯವರು ಹಾವೇರಿ ಜಿಲ್ಲೆಯ ಹನುಮನಮಟ್ಟಿಯಲ್ಲಿರುವ ಗ್ರಾಮೀಣ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜು, ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ೧೯೯೯ರಲ್ಲಿ ನಿವೃತ್ತರಾದರು.
ಗಿರಡ್ಡಿ ಗೋವಿಂದರಾಜರು ತಮ್ಮ ವಿಮರ್ಶಾತ್ಮಕ ಬರಹಗಳಿಂದ ಖ್ಯಾತರಾಗಿದ್ದರೂ ಸೃಜನಶೀಲ ಸಾಹಿತ್ಯದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇವರು ಕಾವ್ಯ, ಕಥಾ ಸಂಕಲನ, ಸಂಪಾದನೆ ಮುಂತಾದ ವಿಭಾಗಗಳಲ್ಲಿ ತಮ್ಮ ಬರಹಗಳನ್ನು ರೂಪಿಸಿಕೊಂಡಿದ್ದಾರೆ. ಇವರು ಶಾರದಾಲಹರಿ, ರಸವಂತಿ, ಮರ್ಲಿನ್ ಮನ್ರೋ ಮತ್ತು ಇತರ ಪದ್ಯಗಳು ಎಂಬ ಕವನ ಸಂಕಲನವನ್ನೂ, ಆ ಮುಖ-ಈ ಮುಖ, ಮಣ್ಣು, ಹಂಗು ಮತ್ತು ಇತರ ಕಥೆಗಳು, ಒಂದು ಬೇವಿನ ಮರದ ಕಥೆ ಮುಂತಾದ ಕಥಾ ಸಂಕಲನವನ್ನೂ ರಚಿಸಿದ್ದಾರೆ. ಇವರ ಆಯ್ದ ಕೆಲವು ಸಾಹಿತ್ಯ ವಿಮರ್ಶೆಗಳು - ಸಣ್ಣ ಕತೆಯ ಹೊಸ ಒಲವುಗಳು, ಜಾನಪದ ಕಾವ್ಯ, ನವ್ಯ ವಿಮರ್ಶೆ, ಕಾದಂಬರಿ ವಸ್ತು ಮತ್ತು ತಂತ್ತ, ಇಂಗ್ಲೆಂಡಿನ ರಂಗಭೂಮಿ, ವಚನ ವಿನ್ಯಾಸ ಇತ್ಯಾದಿ. ಸಂಪಾದನೆ - ಸಣ್ಣ ಕಥೆ, ಕನ್ನಡ ಕಥಾ ಸಂಕಲನ, ಮರೆಯಬಾರದ ಹಳೆಯ ಕಥೆಗಳು, ಯುವಕಾವ್ಯ ಇತ್ಯಾದಿ. ಗಿರಡ್ಡಿಯವರು ‘ಸಂಕ್ರಮಣ' ಎಂಬ ದ್ವೈ ಮಾಸಿಕದ ಸಂಪಾದಕರಾಗಿ ೧೯೬೪-೭೪ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಗಿರಡ್ಡಿಯವರು ಕರ್ನಾಟಕ ನಾಟಕ ಅಕಾಡೆಮಿ, ಮೈಸೂರಿನ ರಂಗಾಯಣ ರಂಗ ಸಮಾಜದ ಆಡಳಿತ ಮಂಡಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವುಗಳ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದರು. ಇವರು ಕಲಬುರ್ಗಿಯಲ್ಲಿ ‘ರಂಗ ಮಾಧ್ಯಮ’ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇವರು ಬರೆದ ‘ಹಂಗು' ಎಂಬ ಕಥೆಯನ್ನು ಪುಟ್ಟಣ್ಣ ಕಣಗಾಲರ ‘ಕಥಾ ಸಂಗಮ' ಚಲನ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಗಿರಡ್ಡಿಯವರು ಹಲವಾರು ನಾಟಕದಲ್ಲಿ ಅಭಿನಯ ಹಾಗೂ ನಿರ್ದೇಶನ ಮಾಡಿದ್ದಾರೆ.
ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್, ‘ನವ್ಯ ವಿಮರ್ಶೆ’ ಕೃತಿಗೆ ಪುರಸ್ಕಾರ, ‘ಸಾತತ್ಯ’ ಕೃತಿಗೆ ವಿ ಎಂ ಇನಾಮದಾರ ಹಾಗೂ ಸ ಸ ಮಾಳವಾಡ ಪ್ರಶಸ್ತಿಗಳು ದೊರೆತಿವೆ. ೨೦೦೧ರಲ್ಲಿ ಗಿರಡ್ಡಿಯವರಿಗೆ ‘ತಲಸ್ಪರ್ಶಿ' ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಇವರು ಮೇ ೧೧, ೨೦೧೮ರಲ್ಲಿ ಧಾರವಾಡದಲ್ಲಿ ನಿಧನ ಹೊಂದಿದರು.
‘ಸುವರ್ಣ ಸಂಪುಟ' ಕೃತಿಯಲ್ಲಿ ಗಿರಡ್ಡಿ ಗೋವಿಂದರಾಜ ಇವರ ಎರಡು ಕವನಗಳು ಪ್ರಕಟವಾಗಿವೆ. ಅರೆಬೈಲು ಘಟ್ಟಗಳಲ್ಲಿ ಮತ್ತು ‘ಪ್ರೀತಿ' ಅಂತೆನೇನೊ.. ಈ ಕವನಗಳಿಂದ ಒಂದು ಕವನವನ್ನು ಆಯ್ದು ಪ್ರಕಟಿಸಲಾಗಿದೆ.
ಅರೆಬೈಲು ಘಟ್ಟಗಳಲ್ಲಿ
ಗುಂಪು ಗುಂಪು ಬೆಳೆದ ಮರ
ಬಳಿಯೊಳಿರುವ ಘಟ್ಟವೇರಿ
ಎದುರು ಬದುರು ನಿಂತು ಮುಖ
ನೋಡಿಕೊಂಡವು.
ಆಳವಾದ ಕೊಳ್ಳಗಳನು
ಬಿದಿರು ಮೆಳೆಗಳಿಳಿದು ಹೋಗಿ
ಸುಳಿಯುತಿರುವ ಗಾಳಿಯಲ್ಲಿ
ಹಾಡಿಕೊಂಡವು.
ಉಂಗುರುಂಗುರಾದ ಕುರುಳಿ-
ನಂತೆ ಬೆಟ್ಟ ಕಡಲ ಬಳಸಿ
ಮಾಲೆ ಮಾಲೆಯಾಗಿ ಮೈಯ
ನೀಡಿಕೊಂಡವು.
ಹಿಂಡುಗಟ್ಟಿ ಬಂದ ಮೋಡ
ಮುಂದೆ ಹೋಗಲಾರೆವೆಂದು
ಬಾನ ತೊಟ್ಟಿಲಲ್ಲಿ ತಾವೆ
ತೂಗಿಕೊಂಡವು.
ಬೆಟ್ಟಗಳನು ದಾಟಿ ಬಂದು
ಹಸಿರು ನಾಡೊಳಾಡಿಕೊಂಡು
ತೊರೆಗಳಲ್ಲಿ ನುಗ್ಗಿ ದಾರಿ
ಮಾಡಿಕೊಂಡವು.
ಅಲ್ಲಿ, ಇಲ್ಲಿ ನಿಂತ ನೀರು
ಸೋಗಲಾಡಿ ಹೆಣ್ಣಿನಂತೆ
ತೆರೆಯ ನಿರಿಯ ಚಿಮ್ಮಿ ಮತ್ತೆ
ತೀಡಿಕೊಂಡವು.
ಹಕ್ಕಿ ಬಳಗ ರೆಕ್ಕೆ ಬಳಸಿ
ನಭವ ಸುತ್ತಿ, ಹಾಡಿ ಹಾಡಿ
ದಣಿದು ಬಂದು ಇವುಗಳೊಡನೆ
ಕೂಡಿಕೊಂಡವು.
ಆಚೆ, ಈಚೆ ಬಯಲಿನಲ್ಲಿ
ತಲೆಯ ತೂಗುತ್ತಿದ್ದ ಶಾಲಿ
ಎಲ್ಲ ಆಟ ನೋಡಿ ಪಿಸುಣ -
ನಾಡಿಕೊಂಡವು.
ದಿವ್ಯಲೋಕವೊಂದ ಕಟ್ಟಿ
ಸ್ವಪ್ನಮಾಯೆಯಿಂದ ಸುತ್ತಿ
ಕವಿಯ ಎದೆಯೊಳೇನೊ ಕನಸು
ಮೂಡಿಕೊಂಡವು.
('ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವನ)